ADVERTISEMENT

ಮುದ್ದೆ ತಿಂದು, ಮಿಸ್ಟರ್ ಇಂಡಿಯಾ ಆದೆ

ಸೆಲೆಬ್ರಿಟಿ ಅಡುಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:45 IST
Last Updated 9 ಜನವರಿ 2019, 19:45 IST
ರವಿ
ರವಿ   

ನನ್ನ ದೇಹ ನೋಡಿದ ಯಾರೇ ಆದರೂ ಎಷ್ಟಪ್ಪಾ ತಿನ್ತಾನೆ ಇವ್ನು, ಹೀಂಗ್ ದೇಹ ಬೆಳೆಸವ್ನೆ ಅಂದುಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ, ಜನ ಅಂದುಕೊಳ್ಳುವಂತೆ ನಾನು ಜಾಸ್ತಿ ತಿನ್ನುವುದಿಲ್ಲ. ಅಷ್ಟಕ್ಕೂ, ಊಟಕ್ಕಿಂತ ನನಗೆ ವ್ಯಾಯಾಮ ಮಾಡುವುದೇ ಇಷ್ಟ. ವ್ಯಾಯಾಮ ಹಾಗೂ ನನ್ನ ಕೆಲಸ,ಕಾರ್ಯಗಳಲ್ಲಿ ಮುಳುಗುವ ನನಗೆ ಊಟ ಮಾಡಬೇಕು ಎನ್ನುವುದೇ ಮರೆತು ಹೋಗುತ್ತೇ.

ದೇಹವನ್ನು ಹುರಿಗೊಳಿಸಲು ಕೆ.ಜಿ ಗಟ್ಟಲೇ ಮಟನ್‌, ಚಿಕನ್‌ ತಿನ್ನಲ್ಲ. ಮೊಟ್ಟೆ ತಿನ್ನವುದು ಸಹ ತೀರಾ ಕಡಿಮೆ. ಎಲ್ಲರಂತೆಯೇ ನಾನೂ ಸಾಮಾನ್ಯವಾಗಿ ಊಟ ತಿನ್ನುವೆ. ನನಗೆ ಮಾಂಸಾಹಾರಕ್ಕಿಂತ ಸಸ್ಯಾಹಾರವೇ ಇಷ್ಟ. ಮಾಂಸಾಹಾರವನ್ನು ಶೇ 10 ರಷ್ಟು ಸೇವಿಸಿದರೆ ಸಸ್ಯಾಹಾರವನ್ನು ಶೇ 90ರಷ್ಟು ತಿನ್ನುತ್ತೇನೆ. ಸಸ್ಯಾಹಾರವೆಂದರೆ ನನಗೆ ಅಷ್ಟೊಂದು ಇಷ್ಟ. ಅದರಿಂದಲೇ ನಾನುನೈಸರ್ಗಿಕವಾಗಿ ಗಟ್ಟಿಮುಟ್ಟಾದ ದೇಹ ಬೆಳೆಸಿಕೊಂಡಿದ್ದೇನೆ.

ಬಿಗ್‌ಬಾಸ್‌ಗೆ ಹೋಗುವ ಮೊದಲು ಮಾಡಿದ ಸಂದರ್ಶನದಲ್ಲೂ ನನಗೆ ಊಟದ ಕುರಿತು ಪ್ರಶ್ನೆ ಕೇಳಿದ್ದರು. ಊಟ ಕಡಿಮೆಯಾದರೆ ಇರ್ತೀರಾ, ಪ್ರೋಟಿನ್‌ ಶೇಕ್‌ ಬೇಕಾಗಲ್ವಾ? ಅಂತ. ನಾನು ‘ಅದೆಲ್ಲಾ ತೊಗೊಳೋದಿಲ್ಲ. ಶೇ 90ರಷ್ಟು ಸಸ್ಯಹಾರಿ. ಉಳಿದಂತೆ ಶೇ 10ರಷ್ಟು ಮಾತ್ರ ಮಾಂಸ ತಿನ್ನುವುದನ್ನು ರೂಢಿಸಿಕೊಂಡಿದ್ದೀನಿ. ಪ್ರತಿದಿನ ರಾಗಿಮುದ್ದೆ ತಿನ್ನುತ್ತೇನೆ. ಇದೇ ನನ್ನ ಫಿಟ್‌ನೆಸ್‌ ಮಂತ್ರವಾಗಿದೆ’ ಎಂದು ಹೇಳಿದ್ದೆ. ಬಿಗ್‌ಬಾಸ್‌ನಲ್ಲಿ ಮುದ್ದೆ ಸಿಗುತ್ತಿರಲಿಲ್ಲ. ಅದರ ಬದಲಾಗಿ ಚಪಾತಿ ತಿನ್ನುತ್ತಿದ್ದೆ. ಚಪಾತಿಯೂ ಇಲ್ಲದಿದ್ದಾಗ ಉಪವಾಸವೇ ನನ್ನ ಪದ್ಧತಿ.

ADVERTISEMENT

ಸೀತಮ್ಮ ನನ್ನ ತಾಯಿ. ಅವರು ಮಾಡುತ್ತಿದ್ದ ರಾಗಿ ಮುದ್ದೆ ಬಸ್ಸಾರು ಅಂದ್ರೆ ನನಗೆ ಪಂಚಪ್ರಾಣ. ಈಗ ಪತ್ನಿ ಜ್ಯೋತಿ ಹಾಗೂ ಅಕ್ಕ ಅನಸೂಯಮ್ಮ ಮಾಡುವ ಎಲ್ಲ ಅಡುಗೆಗಳು ಇಷ್ಟ. ತುಂಬಾ ಚೆನ್ನಾಗಿ ಮಾಡುತ್ತಾರೆ. ಅವರಲ್ಲಿ ನನಗೆ ಇಷ್ಟವಾಗುವ ಗುಣವೆಂದರೆ, ನನಗೆ ಯಾವ ಸಮಯಕ್ಕೆ ಏನು ಬೇಕು ಎಂಬುದನ್ನು ಚೆನ್ನಾಗಿ ಅರಿತು ಸಮಯಕ್ಕೆ ಸರಿಯಾಗಿ ಅದನ್ನು ಪೂರೈಸುತ್ತಾರೆ. ಮುದ್ದೆ ಹಾಗೂ ರಾಗಿ ರೊಟ್ಟಿ ಹೊರತಾಗಿ ಬೇರೆ ಯಾವುದೇ ಅಡುಗೆ ಮಾಡಲು ನನಗೆ ಬರುವುದಿಲ್ಲ.

ಮುದ್ದೆಗಿಂತ ತಂಗ್ಲಿಟ್ಟು–ಮಜ್ಜಿಗೆ ಹೆಚ್ಚು ತಿನ್ನುತ್ತೇನೆ. ರಾತ್ರಿ ಮಾಡಿದ ಮುದ್ದೆಯನ್ನು ಹಾಗೇ ಇಟ್ಟು ಬೆಳಿಗ್ಗೆ ಅದಕ್ಕೆ ಮಜ್ಜಿಗೆ ಹಾಗೂ ಕೊಂಚ ಈರುಳ್ಳಿ ಹಾಕಿ ಮಿಶ್ರಣ ಮಾಡಿ ಕುಡಿಯುತ್ತೇನೆ. ‘ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ’ ಅನ್ನೊ ಮಾತಿನಂತೆ ನಾನಿಂದು ಮಿಸ್ಟರ್ ಇಂಡಿಯಾ ಆಗಿದ್ದರೆ ಅದಕ್ಕೆ ಕಾರಣ ಮುದ್ದೆ ಹಾಗೂ ತಂಗ್ಲಿಟ್ಟು. ಎಲ್ಲ ರೀತಿಯ ಕಾಳುಗಳನ್ನು ನೀರಿನಲ್ಲಿ ನೆನೆಸಿ ತಿನ್ನುತ್ತಿರುತ್ತೇನೆ. ಅದರ ಜೊತೆಗೆ ಹದವಾಗಿ ಬೇಯಿಸಿದ ತರಕಾರಿ ಹಾಗೂ ಸೊಪ್ಪು ಬಲು ಇಷ್ಟ.

ಮುದ್ದೆ ಈಗ ಟ್ರೆಂಡ್ ಆಗುತ್ತಿದೆ. ನಗರದ ಕೆಲ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಮುದ್ದೆ ಪರಿಚಯಿಸಲಾಗುತ್ತಿದೆ. ಪ್ರದರ್ಶನ ಹಾಗೂ ಕೆಲಸ ಕಾರ್ಯದ ನಿಮಿತ್ತ ನಾನು ಹಲವೆಡೆ ಸುತ್ತಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಮುದ್ದೆ ಸಿಗಲ್ಲ. ಆಗ ದೇಹಕ್ಕೆ ಒಗ್ಗುವಂತಹ ಆಹಾರವನ್ನು ಮಿತವಾಗಿ ತಿನ್ನುತ್ತೇನೆ. ಆದರೆ, ವಾಪಸ್ ಮನೆಗೆ ಬಂದಾಗ ಮಾತ್ರ ಮೂರು ಹೊತ್ತು ಮುದ್ದೆ ಇರಬೇಕು.

ಇನ್ನು ಡಯೆಟ್ ವಿಚಾರಕ್ಕೆ ಬರೋದಾದ್ರೆ, ನಿತ್ಯವೂ ವ್ಯಾಯಾಮ ಮಾಡುತ್ತೇನೆ. ಅದೊಂದು ರೀತಿ ನನ್ನ ಉಸಿರಾಗಿದೆ. ವ್ಯಾಯಾಮ ಮುಗಿದ ಬಳಿಕ ತಂಗ್ಲಿಟ್ಟು ಮಜ್ಜಿಗೆ ಅಥವಾ ಮುದ್ದೆ ಊಟ. ಮಧ್ಯಾಹ್ನ ಬೇಯಿಸಿದ ಎಲ್ಲ ರೀತಿಯ ತರಕಾರಿಗಳು ಹಾಗೂ ಮುಸುಕಿನ ಜೋಳ ಸ್ವಲ್ಪ ಇರಬೇಕು. ಇನ್ನು ರಾತ್ರಿಗೆ ಮುದ್ದೆ ಊಟ, ಒಂದು ಕಪ್ ರೈಸ್ ಅಷ್ಟೇ. ನಡು ನಡುವೆ ಹಣ್ಣುಗಳನ್ನು ತಿನ್ನುತ್ತೇನೆ.

ರವಿ ಹೇಳಿದ ರಾಗಿ ರೊಟ್ಟಿ ರೆಸಿಪಿ

ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು, ಈರುಳ್ಳಿ, ಕೊಬ್ಬರಿ, ಕೊತ್ತಂಬರಿ ಸೊಪ್ಪು, ತುಪ್ಪ ಅಥವಾ ಬೆಣ್ಣೆ.

ಮಾಡುವ ವಿಧಾನ: ರಾಗಿ ಹಿಟ್ಟನ್ನು ಸ್ವಲ್ಪ ನೀರಿನೊಂದಿಗೆ ಪಾತ್ರೆಯೊಂದರಲ್ಲಿ ಚೆನ್ನಾಗಿ ಕಲಿಸಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಕೊಬ್ಬರಿ ಹಾಗೂ ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಿಸಿ ಮಾಡಿ. ಹಿಟ್ಟು ಕೊಂಚ ಬಿಸಿ ಮಾಡಿ ತಣ್ಣಗಾಗಲು ಬಿಡಿ. ಬಳಿಕ ಹೆಂಚಿನ ಮೇಲೆ ಚಪಾತಿ ಆಕಾರದಲ್ಲಿ ಮಿಶ್ರಣ ಮಾಡಿದ ಹಿಟ್ಟನ್ನು ತಟ್ಟಿ ಚೆನ್ನಾಗಿ ಬೇಯಿಸಿ. ಬೆಂದ ರೊಟ್ಟಿಯನ್ನು ತಟ್ಟೆಗೆ ಹಾಕಿ ಮೇಲೊಂದಿಷ್ಟು ತುಪ್ಪ ಅಥವಾ ಬೆಣ್ಣೆ ಹಾಕಿ ಸವಿಯಿರಿ. ರೊಟ್ಟಿಯ ಜೊತೆಗೆ ಸಕ್ಕರೆ ಹಾಗೂ ಮೊಸರು ಸಹ ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.