ADVERTISEMENT

‘ಭಾವುಕವಾಗಿ ಈ ಉದ್ಯಮಕ್ಕೆ ಬಂದೆ’

ಶಶಿಕುಮಾರ್ ಸಿ.
Published 23 ಜನವರಿ 2019, 19:45 IST
Last Updated 23 ಜನವರಿ 2019, 19:45 IST
ಪ್ರಿಯದರ್ಶಿನಿ ಗ್ರ್ಯಾಂಡ್ ಹೋಟೆಲ್ (ಒಳಚಿತ್ರದಲ್ಲಿ ರಾಕೇಶ್ ಅಲ್ಸೆ)
ಪ್ರಿಯದರ್ಶಿನಿ ಗ್ರ್ಯಾಂಡ್ ಹೋಟೆಲ್ (ಒಳಚಿತ್ರದಲ್ಲಿ ರಾಕೇಶ್ ಅಲ್ಸೆ)   

ಸಾಫ್ಟ್‌ವೇರ್ ಎಂಜಿನಿಯರ್ ಟು ಹೋಟೆಲ್ ಉದ್ಯಮಿ...ಬದಲಾವಣೆ ಹೇಗೆ?

ಹೋಟೆಲ್ ಉದ್ಯಮದಿಂದಲೇ ಸಾಗಿ ಬಂದ ಕುಟುಂಬ ನಮ್ಮದು. ಅಜ್ಜ ನಾಗಪ್ಪಯ್ಯ ಅಲ್ಸೆ ಹೋಟೆಲ್ ನಡೆಸುತ್ತಿದ್ದರು. ಅವರಾದ ಬಳಿಕ ತಂದೆ ಲಕ್ಷ್ಮಿನಾರಾಯಣ ಅಲ್ಸೆ ಸಹ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಪ್ರಿಯದರ್ಶಿನಿ ರೆಸ್ಟೋರಂಟ್ ಅನ್ನು ಅವರು ಮೆಜೆಸ್ಟಿಕ್ ಬಳಿ1980ರಿಂದನಡೆಸಿಕೊಂಡು ಬಂದಿದ್ದರು.ಅವರಿಗೀಗ ವಯಸ್ಸಾದ ಕಾರಣಕ್ಕೆ ಅನಿವಾರ್ಯವಾಗಿ ನಾನು ಈ ಕ್ಷೇತ್ರಕ್ಕೆ ಬರಬೇಕಾಯಿತು.

ಸಾಫ್ಟ್‌ವೇರ್ ಎಂಜಿನಿಯರ್ ಕೆಲಸ ಬೋರ್ ಹೊಡಿಸಿತೇ?

ADVERTISEMENT

ಇನ್‌ಫ್ಯಾಕ್ಟ್ ನಾನು ಹೋಟೆಲ್ ಉದ್ಯಮಕ್ಕೆ ಬರುತ್ತೇನೆ ಎಂದುಕೊಂಡಿರಲಿಲ್ಲ. ನಗರದ ಯುವಿಸಿಇ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವಿ ಪಡೆದೆ. ಇನ್ಫೋಸಿಸ್‌ನಲ್ಲಿ ಆರು ವರ್ಷಗಳವರೆಗೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದೆ. ಆ ಮೇಲೆ ವಿದೇಶದಲ್ಲೂ ಕೆಲಸ ಮಾಡಿದ್ದೇನೆ. ಸಾಫ್ಟ್‌ವೇರ್ ಎಂಜಿನಿಯರ್ ಕೆಲಸ ನನಗೆ ಯಾವತ್ತೂ ಬೋರ್ ಎನಿಸಿರಲಿಲ್ಲ. ತಂದೆಗೆ ವಯಸ್ಸಾಗಿತ್ತು. ಹೋಟೆಲ್ ಮುನ್ನಡೆಸಲು ಅವರಿಗೆ ಕಷ್ಟವಾಗಿತ್ತು. ಹೀಗಾಗಿ, ಎಮೋಷನಲಿ ಈ ಕ್ಷೇತ್ರಕ್ಕೆ ಬರಬೇಕಾಯಿತು.

ಸಾಫ್ಟ್‌ವೇರ್ ಎಂಜಿನಿಯರ್, ಹೋಟೆಲ್–ಖುಷಿ ಕೊಟ್ಟ ಕ್ಷೇತ್ರ ಯಾವುದು?

ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾಗ ನಾನು ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುತ್ತಿದ್ದೇನೆ ಎಂಬ ಸಣ್ಣ ಕೀಳಿರಿಮೆ ನನ್ನನ್ನು ಕಾಡುತ್ತಿತ್ತು. ಅದು ತಪ್ಪಲ್ಲ. ಸ್ವಂತವಾಗಿ ನೆಲೆಯೂರ ಬಯಸುವ ಯಾವುದೇ ವ್ಯಕ್ತಿಗೆ ಆ ರೀತಿ ಅನಿಸುವುದು ಸಹಜ. ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ಬಳಿಕ ಆ ಕೀಳರಿಮೆ ದೂರವಾಯಿತು. ಈಗ ಖುಷಿಯಾಗಿದ್ದೇನೆ. ಹಾಗಂತ ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆಯಲ್ಲಿ ಖುಷಿ ಸಿಕ್ಕಿಲ್ಲ ಅಂತೇನೂ ಅಲ್ಲ. ಆ ಕೆಲಸ ಸಾಕಷ್ಟು ಕಲಿಸಿದೆ. ಖುಷಿ ಹಾಗೂ ಹೊಸ ಹೊಸ ಅನುಭವಗಳನ್ನು ಕೊಟ್ಟಿದೆ. ಇನ್‌ಫ್ಯಾಕ್ಟ್‌ ನಾನು ಶಿಸ್ತು ಕಲಿತದ್ದೇ ಆ ಕೆಲಸದಿಂದ.

ಹೋಟೆಲ್ ಉದ್ಯಮದಲ್ಲಿ ನೀವು ಎದುರಿಸಿದ ಸವಾಲುಗಳೇನು ?

ಈ ಕ್ಷೇತ್ರದಲ್ಲಿಕಾರ್ಮಿಕರನ್ನು ಬ್ಯಾಲೆನ್ಸ್ ಮಾಡುವುದು ದೊಡ್ಡ ಸವಾಲು. ಹೋಟೆಲ್ ಉದ್ಯಮ ಹೊರತು ಪಡಿಸಿದಂತೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಕೆಲಸ ಇಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಆದರೆ, ನಮ್ಮ ಕ್ಷೇತ್ರದಲ್ಲಿ ಕೆಲಸ ಇದೇ ಬನ್ನಿ ಎಂದರೂ ಯಾರೂ ಬರುವುದಿಲ್ಲ. ಕೆಲಸಗಾರರ ನಿರ್ವಹಣೆ ಹಾಗೂ ಇರುವ ಕೆಲಸಗಾರರನ್ನು ಉಳಿಸಿಕೊಳ್ಳುವುದು ಸವಾಲಿನೆ ಕೆಲಸವೇ ಸರಿ.

ದೇಶದ ಬೇರೆ ಬೇರೆ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ ನಗರದ ರೆಸ್ಟೋರಂಟ್‌ಗಲ್ಲಿ ಆಹಾರದ ಬೆಲೆ ಕಡಿಮೆ ಇದೆ. ಇದಕ್ಕೆ ಕಾರಣ ಇಲ್ಲಿ ನಡೆಯುವ ಬೆಲೆ ಸಮರ (ಸ್ಪರ್ಧೆ). ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಿ ಉದ್ಯಮದಲ್ಲಿ ಅಸ್ತಿತ್ವ ಕಂಡುಕೊಳ್ಳುವುದೂ ಸವಾಲೇ.

ಕಾರ್ಮಿಕರ ನಿರ್ವಹಣೆ ಹಾಗೂದರ ಸ್ಪರ್ಧೆ ಸಮಸ್ಯೆಗೆ ನೀವು ಕಂಡುಕೊಂಡ ಪರಿಹಾರ?

ನಾನು ಸಾಫ್ಟ್‌ವೇರ್ ಎಂಜಿನಿಯರ್ ಕೆಲಸ ಮಾಡುತ್ತಿದ್ದಾಗ ನಮ್ಮ ಮೇಲಾಧಿಕಾರಿ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೆ. ಮೇಲಾಧಿಕಾರಿಗಳ ನಡವಳಿಕೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವಿತ್ತು. ಹೀಗಾಗಿ, ಕಾರ್ಮಿಕರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಅವರನ್ನು ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಅವರಿಗೆ ಉತ್ತಮ ಸೌಲಭ್ಯವನ್ನೇ ನಾನು ಕಲ್ಪಿಸಿದ್ದೇನೆ. ಇನ್ನು ದರ ಸ್ಪರ್ಧೆ ವಿಚಾರದಲ್ಲೂ ಅಷ್ಟೇ. ಆಹಾರದ ಗುಣಮಟ್ಟದಲ್ಲಿ ರಾಜಿಯಾಗದೇ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಗ್ರಾಹಕರಿಗೆ ರುಚಿಯಾದ ಆಹಾರ ನೀಡುತ್ತಿದ್ದೇವೆ.

ಗ್ರಾಹಕರ ಆರೋಗ್ಯದ ಕಾಳಜಿ ಉದ್ಯಮವಲ್ಲವೇ?

ಹೌದು. ನಮ್ಮನ್ನು ನಂಬಿ ಹೊಟ್ಟೆ ತುಂಬಿಸಿಕೊಳ್ಳಲು ಬರುವ ಗ್ರಾಹಕರ ಆರೋಗ್ಯದ ಕಾಳಜಿಯನ್ನು ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ವೈಯಕ್ತಿಕವಾಗಿ ನಾನು ಆ ವಿಚಾರದಲ್ಲಿ ಯಾವುದೇ ರಾಜಿಯಾಗಿಲ್ಲ.

ಹೋಟೆಲ್‌ನ ಅಡುಗೆ ಮನೆಗೆ ಹೋದಾಗ ಅಲ್ಲಿನ ವಾತಾವರಣದ ಬಗ್ಗೆ ನನಗೆ ಹೇಸಿಗೆ ಆಗಬಾರದು. ಗಿರಾಕಿಗೆ ಅಡುಗೆ ಮನೆ ಕಾಣದು. ಹಾಗಂತ, ಹೇಗೆ ಬೇಕಾದರೂ ಅಡುಗೆ ಮನೆ ಇಟ್ಟುಕೊಂಡು ಹೇಗೆ ಬೇಕಾದರೂ ಆಹಾರ ತಯಾರಿಸಬಹುದು ಅಂತಲ್ಲ. ಶುಚಿತ್ವ ಕಾಪಾಡಿಕೊಳ್ಳಬೇಕು. ಹೋಟೆಲ್‌ನಲ್ಲಿ ಆಹಾರ ಸವಿಯುವವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರ ತಯಾರಿಸುತ್ತೇವೆ. ಕೆಲವಡೆ ತಪ್ಪುಗಳಾಗುವುದು ಸಹಜ. ಅದನ್ನು ತಿದ್ದಿಕೊಳ್ಳಬೇಕು.

ಗ್ರಾಹಕರಿಗೆ ಏನು ಹೇಳ ಬಯಸುತ್ತೀರಿ ?

ಹೊರಗಡೆ ತಿನ್ನುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಎಲ್ಲಿ ಕಡಿಮೆ ದರಕ್ಕೆ ಆಹಾರ ಸಿಗುತ್ತದೆಯೋ ಅತ್ತ ಮುಖ ಮಾಡುವುದು ಜನರ ಸ್ವಭಾವ. ಕಡಿಮೆ ದರಕ್ಕೆ ಸಿಗುತ್ತದೆಂಬ ಒಂದೇ ಕಾರಣಕ್ಕೆ ಹೋಟೆಲ್‌ಗಳಿಗೆ ಹೋಗಬೇಡಿ. ಅಲ್ಲಿನ ಶುಚಿತ್ವ, ಆಹಾರದ ಗುಣಮಟ್ಟ ಹಾಗೂ ರುಚಿಗೆ ಆದ್ಯತೆ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.