ADVERTISEMENT

ನುಗ್ಗೆಸೊಪ್ಪಿಗೂ ಇದೆ ಬಗೆ ಬಗೆಯ ರುಚಿ!

ಕೆ.ಸಿ.ರತ್ನಶ್ರೀ ಶ್ರೀಧರ್‌
Published 21 ಸೆಪ್ಟೆಂಬರ್ 2018, 19:30 IST
Last Updated 21 ಸೆಪ್ಟೆಂಬರ್ 2018, 19:30 IST
ನುಗ್ಗೆಸೊಪ್ಪಿನ ಬಸ್ಸಾರು-ಪಲ್ಯ
ನುಗ್ಗೆಸೊಪ್ಪಿನ ಬಸ್ಸಾರು-ಪಲ್ಯ   

ನುಗ್ಗೆಸೊಪ್ಪಿನ ಬಸ್ಸಾರು-ಪಲ್ಯ
ಬೇಕಾಗುವ ಸಾಮಗ್ರಿಗಳು:
ನುಗ್ಗೆಸೊಪ್ಪು – 3ರಿಂದ 4ಬಟ್ಟಲು, ಅವರೆಬೇಳೆ – ½ಬಟ್ಟಲು, ತೊಗರಿಬೇಳೆ – ½ಬಟ್ಟಲು, ಕಾಯಿತುರಿ – 1ಬಟ್ಟಲು, ಎಣ್ಣೆ – ½ಬಟ್ಟಲು, ಈರುಳ್ಳಿ- 3, ಬೆಳ್ಳುಳ್ಳಿ – 1, ಜೀರಿಗೆ - 1½ಚಮಚ, ಸಾಸಿವೆ – 1ಚಮಚ, ಕರಿಬೇವು – 2ಎಸಳು, ಹುಣಸೆಹಣ್ಣು – ನಿಂಬೆಗಾತ್ರ, ತಿಳಿಸಾರಿನಪುಡಿ – 3ಚಮಚ, ಒಣಮೆಣಸಿನ ಕಾಯಿ – 2, ಹಸಿಮೆಣಸಿನ ಕಾಯಿ – 3

ತಯಾರಿಸುವ ವಿಧಾನ: ಮೊದಲು ತೊಗರಿಬೇಳೆ ಮತ್ತು ಅವರೆಬೇಳೆಗಳನ್ನು ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಬೇಕು. ನಂತರ ನುಗ್ಗೆಸೊಪ್ಪು ಮತ್ತು ಅರ್ಧ ಬಟ್ಟಲು ಕಾಯಿತುರಿ ಮತ್ತು ಉಪ್ಪನ್ನು ಬೆಂದಿರುವ ಬೇಳೆಯೊಂದಿಗೆ ಸೇರಿಸಿ ಬೇಯಿಸಿಕೊಂಡು, ಅದರ ರಸವನ್ನು ಬಸಿದುಕೊಳ್ಳಿ. ಒಂದು ಬಾಣಲೆಯಲ್ಲಿ 2 ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಜೀರಿಗೆಯನ್ನು ಹಾಕಿ ಹುರಿದುಕೊಂಡು, ಅದರೊಟ್ಟಿಗೆ ಅರ್ಧ ಬಟ್ಟಲು ಕಾಯಿತುರಿ, ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬೇರೆ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿಮಾಡಿಕೊಂಡು ಸಾಸಿವೆ, ಜೀರಿಗೆ, ಮುರಿದ ಒಣಮೆಣಸಿನ ಕಾಯಿ, ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ತಿಳಿ ಸಾರಿನಪುಡಿ, ರುಬ್ಬಿಕೊಂಡ ಮಸಾಲೆ, ಸ್ವಲ್ಪ ಉಪ್ಪು ಮತ್ತು ಬಸಿದಕೊಂಡ ರಸವನ್ನು ಸೇರಿಸಿ ಕುದಿಸಿದರೆ ಬಸ್ಸಾರು ತಯಾರಾಗುತ್ತದೆ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು, ಸಾಸಿವೆ, ಜೀರಿಗೆ, ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆಯನ್ನು ಮಾಡಿಕೊಂಡು, ಅದಕ್ಕೆ ಸೊಪ್ಪಿನ ಮಿಶ್ರಣವನ್ನು ಸೇರಿಸಿ ಬಿಸಿ ಮಾಡಿಕೊಂಡರೆ ರುಚಿಕರವಾದ ಪಲ್ಯ ತಯಾರಾಗುತ್ತದೆ.

*

ADVERTISEMENT


ನುಗ್ಗೆಸೊಪ್ಪಿನ ಹಸಿಚಟ್ನಿ
ಬೇಕಾಗುವ ಸಾಮಗ್ರಿಗಳು:
ನುಗ್ಗೆಸೊಪ್ಪು – 1ಬಟ್ಟಲು, ಹುರಿಗಡಲೆ – 2ಚಮಚ, ಕಾಯಿತುರಿ – 1ಬಟ್ಟಲು, ಹಸಿಮೆಣಸಿನಕಾಯಿ – 4, ಹುಣಸೆಹಣ್ಣು – ಗೋಲಿಗಾತ್ರ, ಎಣ್ಣೆ – 2ಚಮಚ, ಜೀರಿಗೆ – ½ಚಮಚ, ಬೆಳ್ಳುಳ್ಳಿ – 3ಎಸಳು, ಉಪ್ಪು – ರುಚಿಗೆ ತಕ್ಕಷ್ಟು, ಒಗ್ಗರಣೆ ಬೇಕಿದ್ದರೆ: ಎಣ್ಣೆ – 2ಚಮಚ,ಸಾಸಿವೆ – ½ಚಮಚ, ಜೀರಿಗೆ – ½ಚಮಚ,ಒಣ ಮೆಣಸಿನಕಾಯಿ – 2.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಅದರಲ್ಲಿ ಹಸಿಮೆಣಸಿನಕಾಯಿ ಹುರಿದು ತೆಗೆದಿಟ್ಟುಕೊಳ್ಳಿ. ನಂತರ, ಅದೇ ಬಾಣಲೆಯಲ್ಲಿ ತೊಳೆದ ನುಗ್ಗೆಸೊಪ್ಪನ್ನು ನೀರು ಇಂಗುವವರೆಗೆ ಬಾಡಿಸಿಕೊಂಡು, ನಂತರ ಎಣ್ಣೆ ಸೇರಿಸಿ ಹುರಿದುಕೊಳ್ಳಬೇಕು. ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇದನ್ನು ಹಾಗೆಯೇ ಉಪಯೋಗಿಸಬಹುದು ಅಥವಾ ಬೇಕಿದ್ದರೆ ಒಗ್ಗರಣೆ ಮಾಡಿಕೊಳ್ಳಬಹುದು. ನುಗ್ಗೆಸೊಪ್ಪಿನ ಹಸಿ ಚಟ್ನಿಯನ್ನು ದೋಸೆ, ಇಡ್ಲಿ, ಚಪಾತಿ, ರೊಟ್ಟಿಯೊಂದಿಗೆ ಸವಿಯಬಹುದು.

*


ನುಗ್ಗೆಸೊಪ್ಪಿನ ಒಣ ಚಟ್ನಿಪುಡಿ
ಬೇಕಾಗುವ ಸಾಮಗ್ರಿಗಳು:
ನುಗ್ಗೆಸೊಪ್ಪು – 2ಬಟ್ಟಲು, ಒಣ ಮೆಣಸಿನಕಾಯಿ – 7ರಿಂದ8, ಒಣಕೊಬ್ಬರಿ ತುರಿ – ½ಬಟ್ಟಲು, ಹುಣಸೆಹಣ್ಣು – ಗೋಲಿ ಗಾತ್ರ, ಜೀರಿಗೆ – 1ಚಮಚ, ಬೆಳ್ಳುಳ್ಳಿ – 4ಎಸಳು, ಕಡ್ಲೆಬೇಳೆ – 2ಚಮಚ, ಉದ್ದಿನಬೇಳೆ – 2ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲು ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಒಣ ಮೆಣಸಿನಕಾಯಿಯನ್ನು ಒಣದಾಗಿಯೇ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ತೊಳೆದ ನುಗ್ಗೆಸೊಪ್ಪನ್ನು ಬಾಣಲೆಯಲ್ಲಿ ನೀರು ಹೋಗುವವರೆಗೂ ಬಾಡಿಸಿಕೊಂಡು, ಎಣ್ಣೆಯನ್ನು ಹಾಕಿ ಸೊಪ್ಪು ಗರಿಗರಿಯಾಗುವವರೆಗೂ ಚೆನ್ನಾಗಿ ಹುರಿಯಬೇಕು. ನಂತರ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನೂ ಸೇರಿಸಿಕೊಂಡು ಮಿಕ್ಸಿಯಲ್ಲಿ ಒಣಪುಡಿ ಮಾಡಿಕೊಂಡರೆ ನುಗ್ಗೆಸೊಪ್ಪಿನ ಒಣ ಚಟ್ನಿಪುಡಿ ತಯಾರಾಗುತ್ತದೆ. ನುಗ್ಗೆಸೊಪ್ಪಿನ ಒಣ ಚಟ್ನಿಪುಡಿಯನ್ನು ಡಬ್ಬಿಯಲ್ಲಿ ಹಾಕಿ ಮುಚ್ಚಿಟ್ಟರೆ ತಿಂಗಳುಗಳ ಕಾಲ ಹಾಳಾಗುವುದಿಲ್ಲ. ಈ ಚಟ್ನಿಪುಡಿಯನ್ನು ಬಿಸಿಯಾದ ಅನ್ನದ ಜೊತೆ, ತುಪ್ಪವನ್ನು ಹಾಕಿ ಕಲಿಸಿಕೊಂಡು ತಿನ್ನಬಹುದು. ಅಲ್ಲದೇ ಇತರೆ ಚಟ್ನಿಪುಡಿಯಂತೆ ನಂಚಿಕೊಳ್ಳಲು ಉಪಯೋಗಿಸಬಹುದು.

*


ನುಗ್ಗೆಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿಗಳು:
ನುಗ್ಗೆಸೊಪ್ಪು – 2ಬಟ್ಟಲು, ಹಸಿಮೆಣಸಿನ ಕಾಯಿ – 4, ಕಾಯಿತುರಿ – ½ಬಟ್ಟಲು, ಮೊಸರು – 1ಬಟ್ಟಲು, ಬೆಳ್ಳುಳ್ಳಿ – 3ಎಸಳು, ಶುಂಠಿ – ½ಇಂಚು, ಒಗ್ಗರಣೆಗೆ ಸಾಸಿವೆ – 1ಚಮಚ, ಜೀರಿಗೆ – 1½ ಚಮಚ, ಒಣಮೆಣಸಿನಕಾಯಿ – 2, ಕರಿಬೇವು – 2ಎಸಳು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೊಳೆದ ನುಗ್ಗೆಸೊಪ್ಪನ್ನು ನೀರು ಇಂಗುವವರೆಗೆ ಬಾಡಿಸಿಕೊಂಡು, ನಂತರ ಎಣ್ಣೆ ಸೇರಿಸಿ ಹಸಿಮೆಣಸಿನಕಾಯಿ ಜೊತೆಗೆ ನುಗ್ಗೆಸೊಪ್ಪನ್ನು ಸೇರಿಸಿ ಹುರಿದುಕೊಳ್ಳಬೇಕು. ಇವುಗಳ ಜೊತೆಗೆ ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಕಾಯಿತುರಿ, ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಗ್ಗರಣೆ ಹಾಕಿಕೊಂಡು, ಮೊಸರು ಮತ್ತು ಹದಕ್ಕೆ ಬೇಕಾದಷ್ಟು ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಕಲಿಸಿಕೊಂಡರೆ, ನುಗ್ಗೆಸೊಪ್ಪಿನ ತಂಬುಳಿ ತಯಾರು. ಬಿಸಿಮುದ್ದೆ ಮತ್ತು ಅನ್ನದ ಜೊತೆ ನುಗ್ಗೆಸೊಪ್ಪಿನ ತಂಬುಳಿ ರುಚಿಕರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.