ADVERTISEMENT

ನಡು ದಾರಿಯ ಊಟಕ್ಕೆ ‘ಮಿಡ್‌ವೇ’

ಆರ್.ಜಿತೇಂದ್ರ
Published 19 ಡಿಸೆಂಬರ್ 2018, 19:32 IST
Last Updated 19 ಡಿಸೆಂಬರ್ 2018, 19:32 IST
ಮಿಡ್‌ವೇ ಹೋಟೆಲ್‌ನ ಒಳಾಂಗಣ
ಮಿಡ್‌ವೇ ಹೋಟೆಲ್‌ನ ಒಳಾಂಗಣ   

ಬೆಂಗಳೂರು–ಮೈಸೂರು ನಡುವಿನ ಹಾದಿಯಲ್ಲಿ ಸಿಗುವ ‘ಮಿಡ್‌ವೇ ಮೈಸೂರು’ ಎಂಬ ಹೆಸರಿನ ಈ ಹೋಟೆಲ್‌ ಈ ಭಾಗದ ಪ್ರಯಾಣಿಕರಿಗೆ ಬಗೆಬಗೆಯ ಸ್ವಾದಿಷ್ಟ ತಿನಿಸುಗಳನ್ನು ಉಣಬಡಿಸುತ್ತಿದೆ. ಬರೋಬ್ಬರಿ 300ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯಾಹಾರ ಇಲ್ಲಿ ಲಭ್ಯವಿದೆ.

ಇಲ್ಲಿಯದ್ದೇ ಕೆಲವು ವಿಶೇಷ ತಿನಿಸುಗಳು ಗ್ರಾಹಕರ ಬಾಯಲ್ಲಿ ನೀರೂರಿಸುತ್ತವೆ. ಅದರಲ್ಲಿ ಕಾಶ್ಮೀರಿ ಪಲಾವ್‌ ಕೂಡ ಒಂದು. ಸಾಮಾನ್ಯ ಪಲಾವ್‌ಗಳಿಗಿಂತ ಇದು ತುಸು ಭಿನ್ನ. ಆಲೂಗಡ್ಡೆ, ಗೋಡಂಬಿ, ದ್ರಾಕ್ಷಿ ಜೊತೆಗೆ ಅಗತ್ಯವಾದ ಮಸಾಲೆಗಳನ್ನು ಸೇರಿಸಿ ಹದವಾಗಿ ಬೇಯಿಸಿದ ಅನ್ನವು ಘಮ್ಮೆನ್ನುತ್ತಿರುತ್ತದೆ. ಈ ಅನ್ನಕ್ಕೆ ಕಾಶ್ಮೀರಿ ಕೇಸರಿಯ ಬಣ್ಣ ಬೆರೆತು ಇನ್ನಷ್ಟು ಚೆಂದವಾಗುತ್ತದೆ. ಹೀಗೆ ಸಿದ್ಧಪಡಿಸಲಾದ ಪಲಾವ್‌ ಅನ್ನು ಹೃದಯದ ಆಕಾರಕ್ಕೆ ಹೊಂದಿಸಿ, ಅದರ ಮೇಲೆ ಸೇಬು, ಕಿತ್ತಳೆಯ ಅಲಂಕಾರ ಮಾಡಿ ಬಡಿಸಲಾಗುತ್ತದೆ.

ಪನ್ನೀರ್‌ ಶೇಂಗಾ ಎನ್ನುವ ವಿಶೇಷ ಖಾದ್ಯ ಇಲ್ಲಿನ ಇನ್ನೊಂದು ಆಕರ್ಷಣೆ. ಪನ್ನೀರ್‌ ಅನ್ನು ಎಣ್ಣೆಯಲ್ಲಿ ಕರಿದು ಅದನ್ನು ಶೇಂಗಾದ ಜೊತೆಗೆ ಬೆಲ್ಲ, ಗೋಡಂಬಿ ತುರಿ ಹಾಗೂ ಅಗತ್ಯ ಮಸಾಲೆಗಳನ್ನು ಲೇಪಿಸಿ ಹದವಾಗಿ ಜೋಡಿಸಿ ಬಡಿಸಲಾಗುತ್ತದೆ. ತುಸು ಖಾರ, ತುಸು ಸಿಹಿಯೂ ಆದ ಈ ಖಾದ್ಯ ಬಾಯಲ್ಲಿ ನೀರೂರಿಸುವಂತೆ ಇದೆ.

ADVERTISEMENT

ಮಿಡ್‌ವೇನಲ್ಲಿ ದಕ್ಷಿಣ, ಉತ್ತರ ಭಾರತೀಯ ಶೈಲಿಯ ಆಹಾರಗಳ ಜೊತೆಗೆ ಕಾಂಟಿನೆಂಟಲ್ ಮಾದರಿಯ ತಿನಿಸುಗಳೂ ಸಿಗುತ್ತವೆ. ಮುಂಜಾನೆ ಉಪಾಹಾರಕ್ಕೆ ಇಡ್ಲಿ, ವಿವಿಧ ಮಾದರಿಯ ದೋಸೆ, ಬಿಸಿಬೇಳೆ ಬಾತ್‌, ಘೀರೈಸ್, ಮಸಾಲಾ ಉಪ್ಪಿಟ್ಟು, ಕೇಸರಿಬಾತ್‌ ಸಹಿತ ನಾನಾ ಬಗೆಯ ತಿಂಡಿಗಳು ಸಿಗುತ್ತವೆ. ಸಂಜೆ ಪ್ರಯಾಣದಲ್ಲಿ ವಿರಾಮ ಪಡೆದು ಉಪಾಹಾರ ಸೇವಿಸುವವರಿಗೆ ಇಲ್ಲಿ ಬೋಂಡಾ ಸೂಪ್‌, ಮದ್ದೂರು ವಡೆ, ಮಸಾಲಾ ವಡೆ, ಮಂಗಳೂರು ಬಜ್ಜಿ, ಪಕೋಡಾ, ಮಸಾಲ ಉಪ್ಪಿಟ್ಟು ಹಾಗೂ ಶಾವಿಗೆ ಬಾತ್‌ ಬಿಸಿಯಾಗಿ ದೊರೆಯುತ್ತದೆ.

ಮಧ್ಯಾಹ್ನ ಹಾಗೂ ರಾತ್ರಿಯೂಟಕ್ಕೆ ದಕ್ಷಿಣ ಭಾರತದ ಥಾಲಿಯಿಂದ ಹಿಡಿದು ಉತ್ತರದ ರೋಟಿ, ಕುಲ್ಚಾ ನಾನ್‌ ಎಲ್ಲವೂ ಸಿಗುತ್ತದೆ. ಇಲ್ಲಿ ತಯಾರಾಗುವ ಬಿರಿಯಾನಿಯಲ್ಲೂ ವೈವಿಧ್ಯವಿದೆ. ಹೈದರಾಬಾದಿ, ಮೊಘಲ್‌, ಮಶ್ರೂಮ್‌, ವೆಜ್‌ ಕಡಾಯ್‌, ಕಾಶ್ಮೀರಿ ಬಿರಿಯಾನಿಗಳ ಜೊತೆಗೆ ದಾಲ್‌ ಖಿಚಡಿ, ಪಾಲಕ್ ಖಿಚಡಿಯೂ ಸಿಗುತ್ತದೆ.

ಆಕರ್ಷಕ ಒಳಾಂಗಣ

ಹೋಟೆಲ್‌ನ ಒಳ ಹಾಗೂ ಹೊರಾಂಗಣ ವಿನ್ಯಾಸವು ಆಕರ್ಷಕವಾಗಿದೆ. ಅಷ್ಟೇ ವಿಶಾಲವಾಗಿಯೂ ಇದೆ. ಏಕಕಾಲಕ್ಕೆ ನೂರಕ್ಕೂ ಹೆಚ್ಚು ಮಂದಿ ಭೋಜನ ಸವಿಯಲು ಸ್ಥಳಾವಕಾಶವಿದೆ. ಸುತ್ತಲಿನ ಪರಿಸರವೂ ಗ್ರಾಹಕರ ಸ್ನೇಹಿಯಾಗಿದೆ. ವಾಹನಗಳ ನಿಲುಗಡೆಗೆ ವಿಶಾಲವಾದ ಸ್ಥಳ, ಶೌಚಾಲಯದ ವ್ಯವಸ್ಥೆ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.