ADVERTISEMENT

ಚಳಿಗಾಳಿಗೆ ಹುಳಿಹುಳಿ ಪಾನಿಪುರಿ

ರಸಾಸ್ವಾದ

ಸುಮನಾ ಕೆ
Published 15 ಜನವರಿ 2017, 16:40 IST
Last Updated 15 ಜನವರಿ 2017, 16:40 IST
ಚಳಿಗಾಳಿಗೆ ಹುಳಿಹುಳಿ ಪಾನಿಪುರಿ
ಚಳಿಗಾಳಿಗೆ ಹುಳಿಹುಳಿ ಪಾನಿಪುರಿ   

ಬೆಂಗಳೂರಿನಲ್ಲಿ ಚಾಟ್ಸ್‌ ಅಂಗಡಿಗಳು ರಸ್ತೆಗೊಂದರಂತೆ ಇವೆ. ಸಂಜೆ ಕಚೇರಿ ಬಿಡುವ ಸಮಯಕ್ಕೆ, ವಾಕಿಂಗ್‌ ಹೋದವರಿಗೆ ಜುಮುರು ಮಳೆ, ತಂಗಾಳಿಯಲ್ಲಿ ಪಾನಿಪುರಿ,  ಮಸಾಲಪುರಿ ತಿನ್ನುವುದೇ ಖುಷಿ.  ಹನುಮಂತನಗರದ ರಾಜು ಅವರ ತಳ್ಳುಗಾಡಿಯ ತಿನಿಸುಗಳು ನಿಮ್ಮ ಚಂದದ ಸಂಜೆಯನ್ನು ಇನ್ನಷ್ಟು ರಸವತ್ತಾಗಿಸಬಲ್ಲದು.

ಹೊಸರುಚಿಯನ್ನು ಹುಡುಕಿಕೊಂಡು ಹೋಗಿ ತಿನ್ನುವುದರಲ್ಲಿಯೂ ಬೆಂಗಳೂರಿನವರು ಮುಂದೆ. ಅಂಥ ಆಹಾರಪ್ರಿಯರಿಗೆ ಹನುಮಂತನಗರದಲ್ಲೊಂದು ನೆಚ್ಚಿನ ತಾಣವಿದೆ.

ಸ್ವಾದಿಷ್ಟ ರುಚಿಯ ಪಾನಿಪುರಿ, ಮಸಾಲಪುರಿ ಸೇರಿದಂತೆ ವಿವಿಧ ಬಗೆಯ ಚಾಟ್ಸ್‌ ವ್ಯಾಪಾರವನ್ನು  ಹನುಮಂತನಗರದ ರಾಮಾಂಜನೇಯ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ  ರಾಜು ಅವರು ತಳ್ಳುಗಾಡಿಯಲ್ಲಿ ನಡೆಸುತ್ತಿದ್ದಾರೆ.

ನಾನು ರಾಜು ಅವರ ಅಂಗಡಿಯನ್ನು ಸಮೀಪಿಸಿದ ಸಮಯದಲ್ಲಿ ಪುಟಾಣಿಯೊಬ್ಬಳು ಅಪ್ಪನ ಕೈಹಿಡಿದೆಳೆದು ‘ನಂಗೆ ಇವತ್ತು ಪಾನಿ ಪುರಿನೇ ಕೊಡಿಸಬೇಕು’ ಎಂದು   ಜಗ್ಗುತ್ತಿದ್ದಳು. ಅವಳನ್ನು ಎತ್ತಿಕೊಂಡ ಅಪ್ಪ ‘ಅಷ್ಟು ದೊಡ್ಡ ಪುರಿ ನಿನ್ನ ಬಾಯೊಳಗೆ ಹೇಗೆ ಹೋಗುತ್ತೆ?’ ಎಂದಾಗ ‘ರಾಜು ಅಂಕಲ್, ಪಾನಿಪುರಿ’ ಎಂದು ಕೈಚಾಚಿದಳು.

ಬಟಾಣಿ, ಕ್ಯಾರೆಟ್‌ ತುರಿ, ಈರುಳ್ಳಿ, ಮಸಾಲ ತುಂಬಿದ್ದ ಪುರಿಯನ್ನು ಒಂದೊಂದಾಗಿ ಆಕೆಯ ಕೈಗಿಟ್ಟಾಗ ತಿನ್ನುವುದರಲ್ಲಿ ಮಗ್ನಳಾದಳು.
ರಾಜು ಅವರ ಅಂಗಡಿಯಲ್ಲಿ ಜಿಹ್ವಾಯಜ್ಞಕ್ಕೆ ಮೊದಲು ಸೇವ್‌ಪುರಿ ಕೊಡುವಂತೆ ಕೇಳಿದೆ.

ರಾಜು ಪ್ಲೇಟ್‌ನಲ್ಲಿ ಎಂಟು–ಒಂಬತ್ತು ಪುರಿಗಳನ್ನು ತೂತು ಮಾಡಿ ಅದಕ್ಕೆ ಬೇಯಿಸಿದ ಆಲೂ, ಹದವಾಗಿ ಬೇಯಿಸಿದ ಬಿಸಿ ಬಿಸಿ ಬಟಾಣಿ, ಕತ್ತರಿಸಿದ ಈರುಳ್ಳಿ, ಕ್ಯಾರೆಟ್‌ ತುರಿ, ಕೊತ್ತಂಬರಿ ಸೊಪ್ಪು ತುಂಬಿಸಿ, ಬಳಿಕ ಅದಕ್ಕೆ ಮೇಲಿನಿಂದ ಮಸಾಲ ಹಾಕಿದರು.

ಅದರ ಮೇಲೆ ಸುತ್ತ ಸೇವ್‌, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್‌ ತುರಿ ಚೆಲ್ಲಿದರು. ಈ ಸೇವ್‌ಪೂರಿ ತಿನ್ನುವುದರಲ್ಲಿಯಷ್ಟೇ ಖುಷಿ ಅದನ್ನು ತನ್ಮಯತೆಯಿಂದ ತಯಾರಿಸುವುದನ್ನು ಅಷ್ಟೇ ತನ್ಮಯತೆಯಿಂದ ನೋಡುವುದರಲ್ಲಿಯೂ ಇರುತ್ತದೆ.

ಆ ಖುಷಿಯ ಮುಂದುವರಿಕೆಯಂತೆ ಅವರು ಕೊಟ್ಟ ಸೇವ್‌ಪುರಿಯನ್ನು ಬಾಯಿಗಿಟ್ಟಾಗ ಸಿಹಿ, ಕಾರ, ಹುಳಿ ಮಿಶ್ರಣದ ವಿಶಿಷ್ಟ ಸ್ವಾದ ಬಾಯಲ್ಲಿ ಹರಡಿ ನನಗರಿವಿಲ್ಲದಂತೆಯೇ ಅರೆಕ್ಷಣ ಕಣ್ಮುಚ್ಚುವಂತಾಗಿತ್ತು. ಅರ್ಧ ಮುಗಿಸುತ್ತಿದ್ದಂತೆ  ರಾಜಣ್ಣ  ಸೇವ್‌ಪುರಿ ಮೇಲಿನಿಂದ ಮಸಾಲ ಸುರಿದರು.

ಮೊದಲು ಒಣ  ಒಣ ಸೇವ್‌ಪುರಿ ಇಷ್ಟವಾಗಿತ್ತು. ಆದರೆ ಮಸಾಲಾಭರಿತ ರುಚಿ ಇನ್ನೂ ಭಿನ್ನ. ಪುರಿಗಳನ್ನು ಮುರಿದ ಸಣ್ಣ ಹಾಗೂ ಮಧ್ಯಮ ಗಾತ್ರದ ಚೂರುಗಳು, ಬಟಾಣಿ ಹಾಗೂ ಮಸಾಲದ ಹದವಾದ  ಮಿಶ್ರಣದ ಮಸಾಲಪುರಿ  ತಿನ್ನಲು  ಹಿತವೆನಿಸುತ್ತದೆ.

ಸೇವ್‌ಪುರಿಯ ಆಸ್ವಾದನೆ ಮುಗಿದ ನಂತರ ಮನಸ್ಸು ಮಾಡಿದ್ದು ದಹಿಪುರಿಯತ್ತ. ಬಟಾಣಿ, ಈರುಳ್ಳಿ ಕ್ಯಾರೆಟ್‌ ತುರಿ ಹಾಗೂ ಅದಕ್ಕೆ ಮೊಸರು ಹಾಗೂ ಕಾರಕ್ಕೆ ಮೆಣಸಿನ ಪುಡಿ ಹಾಕಿದ ದಹಿಪುರಿ ರುಚಿಯೂ ಅದ್ಭುತವಾಗಿದೆ.

ಇಷ್ಟಾದಮೇಲೆ ಪಾನಿಪೂರಿಯನ್ನು ತಿನ್ನದೇ ಇರಲು ಮನಸ್ಸಾದರೂ ಹೇಗೆ ಬರುತ್ತದೆ ಹೇಳಿ? ಬಟಾಣಿ, ಮಸಾಲ ಹಾಗೂ ಪಾನಿಯಲ್ಲಿ ಮುಳುಗಿಸಿ ಕೊಡುವ ಪಾನಿಪೂರಿಯನ್ನು ಬಾಯಿಗಿಟ್ಟರೆ ಹುಳಿಸಿಹಿಯ ವಿಶಿಷ್ಟ ರುಚಿ ಮನಸ್ಸಿಗೂ ಇಳಿಯಿತು.

ಇಲ್ಲಿಯ ಪಾನಿಪುರಿ, ಮಸಾಲಪುರಿ, ಸೇವ್‌ಪುರಿಯ ರುಚಿ ಚಾಟ್ಸ್‌ಪ್ರಿಯರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಮೂಲತಃ ಕನಕಪುರದ ರಾಜು ಅವರು 15 ವರ್ಷಗಳಿಂದ ಈ ಸ್ಥಳದಲ್ಲಿಯೇ ವ್ಯಾಪಾರ ನಡೆಸುತ್ತಿದ್ದಾರೆ.

ಮೊದಲು ಅವರು ತಮ್ಮ ಚಿಕ್ಕಪ್ಪನ ಜೊತೆಯಲ್ಲಿ ಚಾಟ್ಸ್‌ ವ್ಯಾಪಾರದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಚಾಟ್ಸ್‌ ತಯಾರಿಕೆ ಬಗ್ಗೆ ಕಲಿತುಕೊಂಡ ಅವರು, ಎರಡು ವರ್ಷಗಳ ನಂತರ ಸ್ವತಂತ್ರವಾಗಿ ಚಾಟ್ಸ್‌ ವ್ಯಾಪಾರ ಆರಂಭಿಸಿದರು. ರಾಜು ಅವರು ಮನೆಯಲ್ಲಿಯೇ ಪುರಿ, ಮಸಾಲವನ್ನು ತಯಾರಿಸಿಕೊಳ್ಳುತ್ತಾರೆ. ಅವರಿಗೆ ಸಹಾಯಕರಾಗಿ ನಾಲ್ಕು ಜನರಿದ್ದಾರೆ.

ರಾಜು ಅವರನ್ನು ‘ಮಸಾಲದ  ರುಚಿಗುಟ್ಟೇನು?’ ಎಂದು ಪ್ರಶ್ನಿಸಿದರೆ, ‘ಚಕ್ಕೆ, ಲವಂಗ, ಶುಂಠಿ, ದನಿಯಾ, ಜಾಯಿಕಾಯಿ, ಗಸಗಸೆ ಹೀಗೆ 16 ಬಗೆಯ ಸಾಂಬಾರ ಪದಾರ್ಥಗಳನ್ನು ಹಾಕಿ ರುಬ್ಬಿಕೊಂಡಿರಬೇಕು.

ಇನ್ನೊಂದು ಕಡೆ ಚೆನ್ನಾಗಿ ತೊಳೆದು ಬಟಾಣಿ ಕಾಳನ್ನು ಬೇಯಿಸಬೇಕು. ಬಳಿಕ ಬಟಾಣಿಯನ್ನು ನೀರಿನಿಂದ ಬೇರೆ ಮಾಡಿ, ಬಸಿಯಬೇಕು. ಈ ನೀರಿಗೆ ಮೊದಲೇ ಸಿದ್ಧ ಮಾಡಿಕೊಂಡ 16 ಬಗೆಯ ಸಾಂಬಾರ ಮಿಶ್ರಣವನ್ನು ಹಾಕಿ ಕುದಿಸಬೇಕು.

ಬಟಾಣಿ ನೀರು ಮಂದವಾಗಿರುವುದರಿಂದ ಈ ಮಸಾಲವು ಮಂದವಾಗುತ್ತದೆ. ಇದು ಎಲ್ಲಾ ಬಗೆಯ ಚಾಟ್ಸ್‌ಗೂ ಹೊಂದಿಕೆಯಾಗುತ್ತದೆ’  ಎಂದು ಹೇಳಿದರು ರಾಜು.

ಇನ್ನು ಚಾಟ್ಸ್‌ ಜೊತೆ ಕೊಡುವ ಪಾನಿಯನ್ನು ಹುಣಸೆಹಣ್ಣು, ಪುದೀನಾ, ಜೀರಿಗೆ, ಮಸಾಲಗಳನ್ನು ಹಾಕಿ ಸಿದ್ಧಮಾಡುತ್ತಾರೆ. ಇದು ಹುಳಿ, ಖಾರ ಮಿಕ್ಸ್‌ ಒಗರು ಒಗರಾಗಿದ್ದು, ನಾಲಗೆಗೆ ಮೇಲೆ ಈ ರುಚಿ ಬಲು ಹೊತ್ತು ನಿಲ್ಲುತ್ತದೆ.

‘ರಾಜು ಅವರ ಅಂಗಡಿಯಲ್ಲಿ ಎಲ್ಲಾ ಬಗೆಯ ಚಾಟ್ಸ್‌ ಬೇಯಿಸಿದ ಬಟಾಣಿ ಹಾಗೂ ಮಸಾಲದಿಂದಾಗಿ ಅದ್ಭುತ ರುಚಿ ಪಡೆದಿದೆ’ ಎಂಬುದು ಅವರ ಕಾಯಂ ಗ್ರಾಹಕರ ಅಭಿಮತ.

ರಾಜು ಅಂಗಡಿಗೆ ಜಯನಗರ, ಬ್ಯಾಂಕ್‌ಕಾಲೋನಿ, ಶ್ರೀನಿವಾಸನಗರ, ಶ್ರೀನಗರದಿಂದಲೂ ಗ್ರಾಹಕರು ಬರುತ್ತಾರೆ. ಪಾನಿಪುರಿ, ಮಸಾಲಪುರಿ,  ಸೇವ್‌ ಪುರಿ, ಬೇಲ್‌ಪುರಿ, ದಹಿ ಪುರಿ, ಆಲೂ ಪುರಿ ಚಾಟ್ಸ್‌ ಇಲ್ಲಿ ಲಭ್ಯ. ಬೆಲೆ 1 ಪ್ಲೇಟ್‌ಗೆ ₹ 20. ಸಂಜೆ 5ರಿಂದ 9ಗಂಟೆವರೆಗೆ ಈ ಚಾಟ್ಸ್‌ ಅಂಗಡಿ ತೆರೆದಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT