ADVERTISEMENT

ಅಂತಃಕರಣದ ಶುಶ್ರೂಷೆ!

ಮಹಾಬಲೇಶ್ವರ ಕಾಟ್ರಹಳ್ಳಿ
Published 4 ಫೆಬ್ರುವರಿ 2011, 18:30 IST
Last Updated 4 ಫೆಬ್ರುವರಿ 2011, 18:30 IST

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಸೋಗಿ ಗ್ರಾಮದಲ್ಲಿರುವ ಇರ್ಲಿಂಗಮ್ಮನವರ ಚನ್ನಬಸಪ್ಪನಿಗೆ (54) ಹುಟ್ಟುತ್ತಲೇ ಸಖತ್ತಾಗಿದ್ದ ಆರೋಗ್ಯವಿತ್ತು. ಭೂಗರ್ಭಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿದ.  ಆ ಭಾಗದಲ್ಲಿ ಅಂತರ್ಜಲ ನೋಡಿ ಬಾವಿ ತೋಡಿಸಿ ನೀರಾವರಿ ಮಾಡಿಕೊಳ್ಳುತ್ತಿದ್ದ ರೈತಾಪಿ ವರ್ಗಕ್ಕೆ ಸಾಂಪ್ರದಾಯಿಕ ನೀರಿನ ಝರಿ ಗೊತ್ತುಪಡಿಸುತ್ತಿದ್ದವರ ಜತೆಗೆ ವೈಜ್ಞಾನಿಕವಾಗಿ ಗುರ್ತುಹಚ್ಚಿ ಜಲದರ್ಶಿಸುವ ರೀತಿಯಲ್ಲಿ ತೀವ್ರ ಆಸಕ್ತಿ ತೋರಿ 2-3 ವರ್ಷ ಹಳ್ಳಿಗಳ ಬರಡು ಹೊಲಮಾರು ತಿರುಗಾಡಿ ಅಂತರ್ಜಲ ಕಂಡುಕೊಟ್ಟಿದ್ದ. ಅದರಿಂದ ಒಂದೆರಡು ಎಕ್ರೆ ಹೊಲವಿದ್ದವರ ಹೊಲಗಳು ಹಸಿರು ಕಾಣುವಂತಾಯಿತು.

ಹೀಗೆ ತಿರುಗಾಡುತ್ತಿರುವಾಗಲೇ 1989ರಲ್ಲಿ ಚಿತ್ರದುರ್ಗದ ಕನ್ಯೆಯೊಂದಿಗೆ ಸಾಂಪ್ರದಾಯಿಕ ಮದುವೆಯೂ ಆಯಿತು. ಆನಂತರ ಚನ್ನಬಸಪ್ಪನಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಾದರು. ಆ ಸಂದರ್ಭದಲ್ಲೇ ಬಲಗೈ ನೋಯುತ್ತ ಷೇಕ್ ಆಗುತ್ತಿದ್ದು, ಹೇಗೋ ನೀರಿನ ಪಾಯಿಂಟ್ ನೋಡುವ ಕೆಲಸ ಮುಂದುವರೆಸಿದ್ದ. ನಡುಕ ಮುಂದುವರೆದಿತ್ತು.

 ಕ್ರಮೇಣ ಇಡೀ ದೇಹವೆಲ್ಲ ನರರೋಗದಿಂದ ತಲ್ಲಣವಾಗಿ ಕೆಲಸಕ್ಕೆ ಅವಕಾಶವಾಗಲೇ ಇಲ್ಲ.  ಹುಬ್ಬಳ್ಳಿ, ಉಡುಪಿ, ಮಣಿಪಾಲ ಅಲ್ಲದೆ ನಿಮ್ಹಾನ್ಸ್‌ದಲ್ಲಿ ವಿವಿಧ ಬಗೆ ಪರೀಕ್ಷೆ ಶುಶ್ರೂಷೆಯಾದರೂ ಗುಣಮುಖವಾಗಲಿಲ್ಲ. ಕೊನೆಗೆ ವೈದ್ಯರು ಇದು (motor neurosis disease) ಎಂದು ಹೇಳಿ ಗುಣಮುಖ ವಾಗುವುದು ಅಸಾಧ್ಯ ಎಂದು ಕೈಚೆಲ್ಲಿ ಕೂತರು. ಹಾಗೇನೇ ರೋಗೀನೂ ಗತ್ಯಂತರವಿಲ್ಲದೆ ಹಾಸಿಗೆ ಹಿಡಿದ, ಮೂಲೆಗುಂಪಾದ.

ಅಂದಿನಿಂದ ಇಂದಿನವರೆಗೆ ಅಂದರೆ, ಕಳೆದ ಹತ್ತು ವರ್ಷಗಳಿಂದಲೂ ಹಾಸಿಗೆ ಹಿಡಿದವರು ಎದ್ದು ಕೂತೇ ಇಲ್ಲ, ನಡೆದಾಡೇ ಇಲ್ಲ, ಗಂಟಲು ತೊಂದರೆಯಿಂದಾಗಿ ತಕ್ಷಣ ಮಾತಾಡಲೂ  ಬರುವುದಿಲ್ಲ. ಊಟ ತಿನ್ನಿಸುವುದರಿಂದ ಹಿಡಿದು ಸ್ನಾನ, ಶೌಚ ಎಲ್ಲವನ್ನೂ ಮಲಗಿಕೊಂಡೇ ಮಾಡಬೇಕು, ಅವನ ಹೆಂಡತಿ ಲೀಲಾವತಿಯಂತೂ ಈ ಎಲ್ಲ ಕಾರ್ಯ ಮಾಡುತ್ತಲೇ ಆತನನ್ನು ಎಬ್ಬಿಸಿ ಕೂಡಿಸುತ್ತಾಳೆ, ತೋಳು ಎತ್ತಿಕೊಂಡು ಶೌಚಕ್ಕೆ ಕೂಡಿಸುತ್ತಾಳೆ.
ಸ್ನಾನ ಮಾಡಿಸುತ್ತಾಳೆ, ಮುಖ ತೊಳೆಯುತ್ತಾಳೆ, ಮತ್ತೊಬ್ಬ ಮಗನೆಂದು ತುತ್ತುಮಾಡಿ ಉಣ್ಣಿಸುತ್ತಾಳೆ, ಉಂಡ ತಕ್ಷಣ ಹಾಸಿಗೆಗೆ ಒರಗಿಸುತ್ತಾಳೆ, ಬಟ್ಟೆ ಹಾಕುತ್ತಾಳೆ, ಶಾಲು ಹೊದಿಸುತ್ತಾಳೆ.

ತೊದಲು ಮಾತು ಕೇಳಿ ಮುಂದಿನ ಸೇವೆಗೆ ಸಿದ್ಧಳಾಗೇ ಮಗ್ಗುಲಲ್ಲಿರುತ್ತಾಳೆ. ಆಕೆ ಇಬ್ಬರು ಮಕ್ಕಳ ಹಡೆದು ಬೆಳೆಸಿದ್ದಾಳೆ. ಹೇಗೂ ಓದಿಸಿದ್ದಾಳೆ, ರೈತಾಪಿ ಕೆಲಸ ನೋಡಿಕೊಂಡಿದ್ದಾಳೆ. ಈ ಹತ್ತು ವರ್ಷ ಸುದೀರ್ಘ ಕಾಲದಲ್ಲಿ, ಮಗ ವೀರೇಶ ಬಿಬಿಎಂ ಮಾಡಿದ್ದಾನೆ, ಮಗಳು ಸೌಮ್ಯ ಚಿತ್ರದುರ್ಗದಲ್ಲಿ ಮ್ಯಾನೇಜ್‌ಮೆಂಟ್‌ಕೋರ್ಸ್ ಓದುತ್ತಿದ್ದಾಳೆ.

ಈ ಕರ್ತವ್ಯದಲ್ಲಿ ಸುಖ ಸಂತೋಷ ಕಂಡಿದ್ದೇನೆಂದು ಅಂತಃಕರಣದಿಂದ ಹೇಳುವ ಆಕೆಯ ಮಾತುಗಳು ವಿಸ್ಮಯ ಮೂಡಿಸುತ್ತದೆ. ಒಂದು ಅದ್ಭುತವಾದ ಸಂಸಾರದ ಮಾನವೀಯ ನಿಷ್ಠೆ ಅವಳನ್ನು ಕಟ್ಟಿಹಾಕಿದೆ, ಅದೂ ಈ ಕಾಲದಲ್ಲಿ ಅನ್ನಿಸಿ ದಿಗ್ಭ್ರಮೆ ಪಡಬಹುದು ಬೇರೆಯವರು. ಆದರೆ ಆಕೆಗೆ ಹಾಗೆ ಅನ್ನಿಸಿಯೇ ಇಲ್ಲ-ಹಾಗಾಗಿದ್ದರೆ ಆತ ಇಷ್ಟು ವರ್ಷ ಹಾಸಿಗೆ ಹಿಡಿದು ಬದುಕುತ್ತಿರಲಿಲ್ಲ ಅನ್ನಿಸೀತು.

 ಇದೊಂದು ವಿಲಕ್ಷಣ ಬಂಧನದ ಜೀವಂತ ನಿದರ್ಶನ, ಕೂಡಿ ಬದುಕುವ ಜೀವಂತ-ವಿಚಿತ್ರ, ದಾಂಪತ್ಯದ ಸಂಗಮಕ್ಕೆ ಮಾನವೀಯತೆಯ ಜ್ವಲಂತ ಉದಾಹರಣೆಯೇ.

ಹೇಳಿ ಕೇಳಿ ಈ ಪರಿಯ ನರರೋಗ ಲಕ್ಷದಲ್ಲಿ ಒಬ್ಬರಿಗೆ ಬಂದಿರುವ ಉದಾಹರಣೆಗಳಿರಬಹುದು. ಹೆಸರಾಂತ ಬ್ರಿಟನ್ ಖಭೌತಶಾಸ್ತ್ರಜ್ಞ ಸ್ಟಿಫನ್ ಹಾಕಿಂಗ್‌ಗೆ ಬಂದಿರುವ ನರರೋಗದಂತೆ, ಈತನಿಗೂ ಬಂದಿರಲು ಸಾಕು. ಹಾಗೇನೇ ಹೀಗೆ ಅಂಥ ನಿಶ್ಶಕ್ತ ಪತಿಯ ಜತೆ ಇಷ್ಟುವರ್ಷ ಇದ್ದೂ ಮುಂದೂ ಇರುವ ಛಾತಿಯ ಸಂಗಾತಿ ಇರುವುದಂತೂ ದೊಡ್ಡ ಅಚ್ಚರಿಯೇ? ಇಂಥ ದಂಪತಿಗಳ ಉದಾಹರಣೆಯೂ ಲಕ್ಷದಲ್ಲಿ ಒಂದಿರಬಹುದು. ಅವರಿಗೆ ಈಗಿನ ಫ್ಯಾಷನ್ ಆಗಿರುವ ಯಶಸ್ವೀ ದಂಪತಿ/ಜೋಡಿ ಉತ್ಸವಗಳು ಎಂದಾದರೂ ಗುರ್ತಿಸಿದ್ದಾವೆಯೇ, ಆಹ್ವಾನ ನೀಡಿದ್ದಾವೆಯೇ?
ಛೆ, ಇಲ್ಲ ಬಿಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.