ADVERTISEMENT

ಅನ್‌ಲೆಡೆಡ್ ಪೆಟ್ರೋಲ್?

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ಇಂತಹದ್ದೊಂದು ಬರಹ ಸಾಮಾನ್ಯವಾಗಿ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲೂ ಕಾಣಸಿಗುತ್ತದೆ. ಸರ್ಕಾರ ಸಹ ಸೀಸ ರಹಿತ ಪೆಟ್ರೋಲ್ ಸರಬರಾಜು ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತದೆ. ಹಾಗಿದ್ದರೆ ಈಗ ಸರಬರಾಜಾಗುತ್ತಿರುವ ಪೆಟ್ರೋಲ್ ಸಂಪೂರ್ಣ ಸೀಸ ರಹಿತವೇ? ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದೇ?

ಮೊದಲು ಪೆಟ್ರೋಲ್‌ನಲ್ಲಿ ಸೀಸ ಮಿಶ್ರಣ ಮಾಡಲಾಗುತ್ತಿತ್ತು. ಇದರಿಂದ ನಗರ ಪ್ರದೇಶದ ಮಕ್ಕಳಲ್ಲಿ ಸೀಸದ ಅಂಶ ಹೆಚ್ಚಾಗುತ್ತಾ ಆರೋಗ್ಯ ಸಮಸ್ಯೆಗಳು ತಲೆದೋರಲಾರಂಭಿಸಿದವು. ಇಷ್ಟಾದರೂ ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿತ್ತು. ಆದರೆ ಈ ಬಗ್ಗೆ ತೀವ್ರ ಕಳಕಳಿ ಇದ್ದ ಸಂಘಟನೆಗಳು ವಿಶ್ವ ಬ್ಯಾಂಕ್ ಮೊರೆ ಹೋದವು. ಆಗ ವಿಶ್ವ ಬ್ಯಾಂಕ್, ಸೀಸರಹಿತ ಪೆಟ್ರೋಲ್ ಸರಬರಾಜಿಗೆ ಕ್ರಮ ಕೈಗೊಳ್ಳದಿದ್ದರೆ ಸಾಲ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿತು.

ಇದರಿಂದ ಅಂತರ ರಾಷ್ಟ್ರೀಯ ಒತ್ತಡ ಸೃಷ್ಟಿಯಾಗಿ ಸರ್ಕಾರ ಅನಿವಾರ್ಯವಾಗಿ 2000ದ ಮಾರ್ಚ್‌ನಿಂದ ಸೀಸರಹಿತ ಪೆಟ್ರೋಲ್ ಸರಬರಾಜಿಗೆ ಕ್ರಮ ಕೈಗೊಂಡಿದೆ. ಆದರೆ ಹಾಗೆಂದುಕೊಂಡು ನಾವು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ.

ವಿವಿಧ ಬಗೆಯ ಮಾಲಿನ್ಯಗಳಿಂದಾಗಿ ಭೂಗರ್ಭದ ಖನಿಜದಲ್ಲೇ ಸೀಸ ಸೇರಿಹೋಗುವುದರಿಂದ ಅದನ್ನು ಸಂಪೂರ್ಣವಾಗಿ ಪೆಟ್ರೋಲ್‌ನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಹೀಗಾಗಿ ಪೆಟ್ರೋಲ್‌ನ ಮಿತಬಳಕೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದೊಂದೇ ಈಗ ನಮ್ಮ ಮುಂದಿರುವ ದಾರಿ.

ಇದಕ್ಕಾಗಿ ಹೆಚ್ಚು ವಾಹನ ಸಂಚಾರ ಇರುವೆಡೆ ಶಾಲಾ ಕಾಲೇಜುಗಳು, ನಿವಾಸಗಳು ಇರದಂತೆ ನೋಡಿಕೊಳ್ಳಬೇಕು. ಖಾಸಗಿ ವಾಹನಗಳ ಬಳಕೆಯನ್ನು ಆದಷ್ಟೂ ಕಡಿವೆು ಮಾಡಿ ಬಸ್ಸು, ರೈಲಿನಂತಹ ಸಮೂಹ ಸಾರಿಗೆ ಬಳಸಲು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.