ADVERTISEMENT

ಅಮರನ ಸ್ಥಿತಿ ನಿಮಗೂ ಬರಬಹುದು...!

ಜಬೀವುಲ್ಲಾ ಖಾನ್
Published 18 ಜನವರಿ 2013, 19:59 IST
Last Updated 18 ಜನವರಿ 2013, 19:59 IST
ಅಮರನ ಸ್ಥಿತಿ ನಿಮಗೂ ಬರಬಹುದು...!
ಅಮರನ ಸ್ಥಿತಿ ನಿಮಗೂ ಬರಬಹುದು...!   

ಸರಿಯಾಗಿ ಬೆಳಿಗ್ಗೆ 6 ಗಂಟೆಗೆ ಅಲಾರಾಂ ಬಾರಿಸಿತು. ಅಮರ್‌ನಾಥ್ ಎಚ್ಚರಗೊಂಡ. ಕಣ್ಣಲ್ಲಿ ಇನ್ನೂ ನಿದ್ದೆ ಇದ್ದರೂ ಕೆಲಸಕ್ಕೆ ಹೋಗಲು ಬೇಗ ತಯಾರಾಗಲೇಬೇಕಿತ್ತು. ಹಾಸಿಗೆಯಿಂದ ಎದ್ದು ಸ್ನಾನ ಮುಗಿಸಿ, ಬಟ್ಟೆ ಧರಿಸಿಕೊಂಡು, ಘಮಘಮಿಸುವ ಸುಗಂಧ ಹಚ್ಚಿಕೊಂಡ.

ಬ್ರೆಡ್ ತಿಂದು, ಒಂದು ಲೋಟ ಬಿಸಿ ಹಾಲನ್ನು ಕುಡಿದು, ಸರಸರನೆ ಮೆಟ್ಟಿಲಿಳಿದು ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಸವಾರಿ ಹೊರಟ. ಕಚೇರಿ ಬಂತು. ಆದರೆ ಸೆಕ್ಯುರಿಟಿ ಅಮರನಿಗೆ ಕಚೇರಿಯ ಒಳಗೆ ಹೋಗಲು ಬಿಡಲೇ ಇಲ್ಲ. ಅವನ ಕೈಗೊಂದು ಪತ್ರ ಕೊಟ್ಟ. ಅದನ್ನು ತೆರೆದು ನೋಡಿದ ಅಮರನಿಗೆ ಕಾಲ ಕೆಳಗಿನ ಭೂಮಿಯೇ ಕುಸಿದಂತೆ ಆಯಿತು. `ನಿಮ್ಮನ್ನು ಟರ್ಮಿನೇಟ್ ಮಾಡಲಾಗಿದೆ' ಎಂಬ ಸಂದೇಶ ಅದರಲ್ಲಿ ಇತ್ತು.

ಅಮರನ ಬುದ್ಧಿಯೇ ಮಂಕಾಗಿ ಹೋಯಿತು. ಏನು ಮಾಡಬೇಕೆಂದು ತೋಚಲೇ ಇಲ್ಲ. ಫ್ಲಾಟ್ ಖರೀದಿಸಿರುವ ಸಾಲ ತೀರಿಸಬೇಕಿತ್ತು. ಹೊಸ ಬೈಕ್ ತೆಗೆದುಕೊಂಡಿರುವ ಸಾಲದ ಭಾರವೂ ತಲೆ ಮೇಲಿತ್ತು. ಬ್ಯಾಂಕ್ ಖಾತೆಯಲ್ಲಿ ಐದು ಪೈಸೆಯೂ ಇರಲಿಲ್ಲ. ಜೇಬಿನ ಖರ್ಚಿಗೂ ದುಡ್ಡಿರಲಿಲ್ಲ. ಕೆಲಸ ಹೋಯಿತಲ್ಲ ಎಂಬ ನೋವು, ಕಣ್ಣಲ್ಲಿ ನೀರು ಬರತೊಡಗಿತು. ಮನಸ್ಸು ಚಿಂತೆಯಲ್ಲಿ ಮುಳುಗಿತು. ಮಾನಸಿಕ ಖಿನ್ನತೆ ಆವರಿಸಿಕೊಂಡಿತು. ಅಮರನ ಪರಿಸ್ಥಿತಿ ನೀರಿನಿಂದ ಆಚೆ ಬಿಸಾಕಿದ ಮೀನಿನಂತೆ ಆಗಿತ್ತು.

ಇಂತಹ ಘಟನೆ ಇಂದು ಅಮರನಿಗೆ ನಡೆಯಿತು. ಆದರೆ ಅದು ನಾಳೆ ನಿಮ್ಮ ಜೊತೆಯೂ ನಡೆಯಬಹುದು. ಆಗ ಏನು ಮಾಡುವಿರಿ...? ಇದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಕೆಲವು ಅನಾಹುತಗಳು ಪ್ರಾಕೃತಿಕವಾಗಿರುತ್ತವೆ. ಅದರ ಮೇಲೆ ನಮ್ಮ ಹತೋಟಿ ಇರುವುದಿಲ್ಲ.

ಆದರೆ ಕೆಲವು ಕೆಟ್ಟ ಘಟನೆಗಳನ್ನು, ಸನ್ನಿವೇಶಗಳನ್ನು ನಮ್ಮ ಮುಂದಾಲೋಚನೆಯಿಂದ ನಾವು ತಪ್ಪಿಸಬಹುದು ಅಥವಾ ಅದರ ದುಷ್ಪರಿಣಾಮಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಮತ್ತು ಧೈರ್ಯವನ್ನು ಬೆಳೆಸಿಕೊಳ್ಳಬಹುದು. ಮಾನಸಿಕ ಒತ್ತಡದಿಂದ ಪಾರಾಗಬಹುದು.

ಉದಾಹರಣೆಗೆ - ಯಾರೋ ದಾರಿಯಲ್ಲಿ ಪಟಾಕಿ ಹತ್ತಿಸಿರುತ್ತಾರೆ. ಅದನ್ನು ಅರಿಯದೆ ನಿಮ್ಮಷ್ಟಕ್ಕೆ ನೀವು ಆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತೀರಿ ಎಂದುಕೊಳ್ಳೋಣ. ಪಟಾಕಿ ಸಿಡಿದಾಕ್ಷಣ ಏನಾಗುತ್ತದೆ? ನೀವು ಬೆಚ್ಚಿಬೀಳುತ್ತೀರಿ. ಇನ್ನೊಂದು ಸನ್ನಿವೇಶದಲ್ಲಿ- ನಿಮ್ಮ ಮುಂದೆ ಪಟಾಕಿ ಸಿಡಿಸಲಾಗುತ್ತಿದೆ. ನೀವು ಅದನ್ನು ನೋಡುತ್ತಿದ್ದೀರಿ. ಆಗ ನೀವು ಹೇಗೆ ವರ್ತಿಸುತ್ತೀರಿ?

ನೀವು ಬೆಚ್ಚಿ ಬೀಳುವುದಿಲ್ಲ. ಏಕೆ? ಪಟಾಕಿ ಶಬ್ದ ಕೇಳಲು ಆಗ ಮನಸ್ಸು ಸಿದ್ಧವಾಗಿತ್ತು.
ಯಾವ ಘಟನೆಯಿಂದ ನಿಮ್ಮ ಜೀವನ ಅಲ್ಲೋಲ ಕಲ್ಲೋಲ ಆಗಬಲ್ಲದು ಎಂದು ಮೊದಲೇ ಯೋಚಿಸಿ. ಅಕಸ್ಮಾತ್ ಹಾಗಾದರೆ ನೀವು ಏನು ಮಾಡಬಹುದು ಎಂದು ಚಿಂತಿಸಿ. ಉತ್ತರ ಸಿದ್ಧವಾದಾಕ್ಷಣ ನಿಮ್ಮ ಮನಸ್ಸಿಗೆ ತಿಳಿಸಿ. ಆಗ ಮನಸ್ಸು ಯಾವುದೇ ಸಮಸ್ಯೆಯನ್ನಾದರೂ ಧೈರ್ಯದಿಂದ ಎದುರಿಸಲು ಸಿದ್ಧವಾಗುತ್ತದೆ. ಹೀಗೆ ನೀವು ಒತ್ತಡದ ಹಿಡಿತದಿಂದ ಪಾರಾಗಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.