ADVERTISEMENT

ಆಟಿಕೆಗಳಿಂದ ಆರೋಗ್ಯ...

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ಮಕ್ಕಳಿಗೆ ಆಟವಾಡಲು ಆಟಿಕೆಗಳನ್ನು ಕೊಟ್ಟಷ್ಟೂ ಅವರ ಶಾರೀರಿಕ ಚಟುವಟಿಕೆ ಹೆಚ್ಚಾಗುತ್ತದೆಯಂತೆ! ಅಲ್ಲದೇ ಆಟಿಕೆಗಳ ಸಂಖ್ಯೆ ಹೆಚ್ಚಿದಷ್ಟೂ ಮಕ್ಕಳು, ಅದರಲ್ಲಿಯೂ ಹೆಣ್ಣುಮಕ್ಕಳು ಆಟವಾಡುವ ಅವಧಿ ಕೂಡ ವಿಸ್ತರಿಸುತ್ತದೆ ಎನ್ನುತ್ತದೆ ನೂತನ ಸಂಶೋಧನೆ.

ಆಟಿಕೆಗಳ ಕುರಿತಂತೆ ಬಫೆಲೊ ವಿಶ್ವವಿದ್ಯಾಲಯದ ಡೆನಿಸ್ ಫೆಡಾ ನೇತೃತ್ವದ ಸಂಶೋಧಕರ ತಂಡವು ಅಧ್ಯಯನ ನಡೆಸಿತ್ತು. ಇದಕ್ಕೆ 8 ರಿಂದ 10 ವರ್ಷ ವಯೋಮಾನದ 36 ಮಕ್ಕಳನ್ನು ಬಳಸಿಕೊಳ್ಳಲಾಗಿತ್ತು. ಇವರಿಗೆಲ್ಲ ಮೂರು ವಿಭಿನ್ನ ಬಗೆಯ ಆಟಿಕೆಗಳನ್ನು ಕೊಡಲಾಗಿತ್ತು. ಈ ಮಕ್ಕಳಿಗೆ ಕೊಟ್ಟ ಆಟಿಕೆಗಳ ಸಂಖ್ಯೆಗೆ ಅನುಗುಣವಾಗಿ ಅವರ ನಡತೆ, ಹೃದಯ ಬಡಿತ ಹಾಗೂ ಚಟುವಟಿಕೆಗಳನ್ನು ಗಮನಿಸಲಾಯಿತು. ಮೂರು ಅಥವಾ 5 ಆಟಿಕೆಗಳನ್ನು ನೀಡಿದ ಮಕ್ಕಳ ಆಟದ ಸಮಯ ಶೇ 95 ರಷ್ಟು ಹೆಚ್ಚಾಗಿತ್ತು. ವಿಶೇಷವೆಂದರೆ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಲ್ಲಿ ಆಟದ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದದ್ದು ಕಂಡುಬಂತು.

ಈ ಪರೀಕ್ಷೆಯಲ್ಲಿ ಯಾವ ಬಗೆಯ ಆಟಿಕೆಗಳನ್ನು ನೀಡಲಾಗಿತ್ತು ಎನ್ನುವುದನ್ನು ಅಧ್ಯಯನವು ಬಹಿರಂಗಪಡಿಸಿಲ್ಲ.

ADVERTISEMENT

`ಮಕ್ಕಳು, ಹದಿಹರೆಯದವರು ನಿತ್ಯವೂ ಏನಿಲ್ಲವೆಂದರೂ ಕನಿಷ್ಠ ಪಕ್ಷ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು~ ಎನ್ನುತ್ತಾರೆ ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ (ಎಸಿಎಸ್‌ಎಂ) ಮತ್ತು ಫಿಸಿಕಲ್ ಆ್ಯಕ್ಟಿವಿಟಿ ಗೈಡ್‌ಲೈನ್ಸ್ ಫಾರ್ ಅಮೆರಿಕನ್ ಸಂಸ್ಥೆಯ ತಜ್ಞರು. `ಬಾಲ್ಯಾವಸ್ಥೆಯಲ್ಲಿ ಕಂಡುಬರುವ ಬೊಜ್ಜಿನ ಸಮಸ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ, ಈ ಅಧ್ಯಯನದ ಫಲಶ್ರುತಿ ಮಹತ್ವದ್ದಾಗಿದೆ~ ಎಂದು ಫೆಡಾ ನುಡಿಯುತ್ತಾರೆ. ಮಕ್ಕಳು ಚುರುಕಾಗಿ, ಚಟುವಟಿಕೆಯಿಂದ ಇರಬೇಕಾದರೆ ಅವರಿಗೆ ಸಾಕಷ್ಟು ಆಟಿಕೆಗಳನ್ನು ಕೊಡಿ. ಹೆಣ್ಣುಮಕ್ಕಳೂ ಗಂಡುಮಕ್ಕಳಷ್ಟೇ ದೈಹಿಕ ಚಟುವಟಿಕೆಯಲ್ಲಿ ತೊಡಗೊಕೊಳ್ಳಬೇಕು ಎಂದು ಹೇಳಲು ಮರೆಯುವುದಿಲ್ಲ ಫೆಡಾ.

ನಿಮಗೆ ಗೊತ್ತೆ?: ದೀರ್ಘಕಾಲದ ನಿದ್ರಾಹೀನತೆಯಿಂದ  ಶರೀರದಲ್ಲಿ ಹಾರ್ಮೋನುಗಳು ಹಾಗೂ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಹೃದಯಾಘಾತ, ಮಧುಮೇಹ ಹಾಗೂ ಬೊಜ್ಜಿನಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.