ADVERTISEMENT

ಆರೋಗ್ಯಕ್ಕೆ ಸಿಹಿ ಈ ದ್ರಾಕ್ಷಿ

ಸುಧಾ ಎಚ್‌.ಎಸ್.
Published 8 ಮೇ 2015, 19:30 IST
Last Updated 8 ಮೇ 2015, 19:30 IST

ಈಗ ದ್ರಾಕ್ಷಿಹಣ್ಣಿನ ಕಾಲ ಆರಂಭವಾಗಿದೆ.  ಬಗೆಬಗೆ ದ್ರಾಕ್ಷಿ ಬಾಯಲ್ಲಿ ನೀರೂರಿಸುವಂತಿವೆ. ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಸಿರು, ಕಪ್ಪು, ಕೆಂಪು ದ್ರಾಕ್ಷಿ  ಜೊತೆಗೇ ಯಾವಾಗಲೂ ಸಿಗುವುದು ಒಣದ್ರಾಕ್ಷಿ. ಇವೆಲ್ಲ ಬಾಯಿಗೆ ರುಚಿ ನೀಡುವುದು ಮಾತ್ರವಲ್ಲದೇ ಆರೋಗ್ಯವರ್ಧಕವೂ ಆಗಿವೆ.

ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕುತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಇವರು ತಮ್ಮ ಪ್ರಯೋಗವನ್ನು ಇಲಿಯ ಮಾದರಿಗಳಲ್ಲಿ ಪ್ರಯೋಗಿಸಿ ಸಂಶೋಧನೆ ನಡೆಸಿದ್ದಾರೆ. ಇಂಥ ಬಹೂಪಯೋಗಿ ದ್ರಾಕ್ಷಿ ಏನೆಲ್ಲ ಪ್ರಯೋಜನಗಳನ್ನು ತಂದುಕೊಡಬಲ್ಲವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಕಪ್ಪು ದ್ರಾಕ್ಷಿ
* ಒಂದು ಬಟ್ಟಲು ಕಪ್ಪು ದ್ರಾಕ್ಷಿ ರಸದೊಂದಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನವೂ ಕುಡಿಯುತ್ತಿದ್ದರೆ ರಕ್ತವೃದ್ಧಿಯಾಗುವುದು.
* ಕಪ್ಪುದ್ರಾಕ್ಷಿಯನ್ನು ಸೇವಿಸುವುದರಿಂದ ಹುಳಿತೇಗು, ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆ ಹೋಗುವುದು.
* ಕಪ್ಪು ದ್ರಾಕ್ಷಿಯಲ್ಲಿರುವ ವಿಟಮಿನ್, ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ ಮತ್ತು ಸೆಲೆನಿಯಂ ಅಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸಿ ರಕ್ತಕ್ಕೆ ಕಬ್ಬಿಣಾಂಶ ನೀಡಿ ದೇಹಕ್ಕೆ ಯಾವುದೇ ಸೋಂಕು ತಗುಲದಂತೆ ತಡೆಯುತ್ತದೆ.
* ಈ ದ್ರಾಕ್ಷಿ ರಸದಲ್ಲಿ ಆ್ಯಂಟಿಯಾಕ್ಸಿಡೆಂಟ್‌ ಗುಣವಿದೆ. ಇದು ತ್ವಚೆಯಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಕಾರಿಯಾಗಿದೆ.
* ಈ ಹಣ್ಣಿನಲ್ಲಿನ ನೀಲಿ ಅಂಶ ದೇಹದಲ್ಲಿನ ಅನೇಕ ಬ್ಯಾಕ್ಟೀರಿಯಾಗಳ ಜೊತೆ ಹೋರಾಡಿ ದೇಹವನ್ನು ಆರೋಗ್ಯವಾಗಿಡುವುದಷ್ಟೇ ಅಲ್ಲ, ಬೇಗನೆ ಚರ್ಮಕ್ಕೆ ಸುಕ್ಕು ಬರುವುದನ್ನೂ ತಡೆಗಟ್ಟುತ್ತದೆ.
* ಮಧುಮೇಹ ರೋಗಿಗಳು ಕಪ್ಪುದ್ರಾಕ್ಷಿ ಹಣ್ಣಿನ ರಸ ಕುಡಿದರೆ ನರಗಳಲ್ಲಿ ಹೊಸ ಚೈತನ್ಯ ಉಂಟಾಗಿ ಸುಸ್ತು, ಆಲಸ್ಯ ದೂರವಾಗುತ್ತವೆ.
* ಈ ದ್ರಾಕ್ಷಿ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಹೃದಯಕ್ಕೆ ಅತಿ ಅವಶ್ಯಕ.
* ಕಪ್ಪು ದ್ರಾಕ್ಷಿ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಮಿಚಿಗನ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದಿಂದ ದೃಢಪಟ್ಟಿದೆ.
* ಕಪ್ಪುದ್ರಾಕ್ಷಿ ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಿ, ಮೂತ್ರ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದಲ್ಲದೆ ಸೋಂಕಿನಿಂದ ಉಂಟಾಗುವ ತುರಿಕೆ, ಉರಿಮೂತ್ರವನ್ನೂ ನಿಗ್ರಹಿಸುವಲ್ಲಿ ಪರಿಣಾಮಕಾರಿ.
* ದ್ರಾಕ್ಷಿ ಮಾಸ್ಕ್‌ ಮುಖಕ್ಕೆ ಹಾಕಿದರೆ ಇದು ಮುಖವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುತ್ತದೆ.

ಬಿಳಿ ದ್ರಾಕ್ಷಿ
ಬಿಳಿ  ದ್ರಾಕ್ಷಿ  ಹಣ್ಣು  ದೇಹಕ್ಕೆ  ತಂಪು. ಇದನ್ನು  ನಿತ್ಯವೂ  ಸೇವಿಸಿದರೆ   ಹೊಟ್ಟೆ ಉರಿ, ಕಣ್ಣು ಉರಿ  ಕಡಿಮೆ  ಆಗುತ್ತದೆ. ಹುಳಿ  ದ್ರಾಕ್ಷಿ  ಹಣ್ಣನ್ನು  ಸೇವಿಸಿದರೆ  ಅಜೀರ್ಣ ಗುಣವಾಗುತ್ತದೆ.

* ಅಜೀರ್ಣದ ಸಮಯದಲ್ಲಿ ಬಾಯಿ ವಾಸನೆ ಬರುತ್ತಿದ್ದರೆ ನಿಯಮಿತ ಪ್ರಮಾಣದಲ್ಲಿ ದ್ರಾಕ್ಷಿಯನ್ನು ಸೇವಿಸಿದರೆ ಬಾಯಿ ಶುದ್ಧವಾಗುತ್ತದೆ.
* ಬಿಳಿ  ದ್ರಾಕ್ಷಿ ಹಣ್ಣನ್ನು  ಕ್ರಮವಾಗಿ ಬಳಸುತ್ತಿದ್ದರೆ ಹೊಟ್ಟೆ ಹುಣ್ಣು, ಕ್ಷಯ, ಸಂಧಿವಾತ, ಹೆರಿಗೆ ಮುಂಚಿನ ಮತ್ತು ನಂತರ ಉಂಟಾಗಬಹುದಾದ ರಕ್ತಹೀನತೆ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.
* ಬಿಳಿ ದ್ರಾಕ್ಷಿ ಹಣ್ಣಿನ ರಸವನ್ನು ಜ್ವರ ಪೀಡಿತರಿಗೆ ಕುಡಿಸುವುದರಿಂದದ ಜ್ವರದ ತಾಪ ಕಡಿಮೆಯಾಗುವುದು.
* ಬಿಳಿ  ದ್ರಾಕ್ಷಿ ಹಣ್ಣಿನ ಪಾನಕವನ್ನು ಕುಡಿಯುವುದ ರಿಂದ ಮೂತ್ರ ವಿಸರ್ಜನೆ ಸರಾಗವಾಗಿ ಆಗುತ್ತದೆ.
* ದೇಹದಲ್ಲಿರುವ ವಿಷ ವಸ್ತುಗಳನ್ನು ಇದು ಹೊರಹಾಕುತ್ತದೆ.
* ದ್ರಾಕ್ಷಿ ರಸ ರಕ್ತದ ಹರವನ್ನು ಹೆಚ್ಚಿಸುತ್ತದೆ.
* ಇದರಲ್ಲಿರುವ ಕಬ್ಬಿಣದ ಅಂಶವು ಚರ್ಮಕ್ಕೆ ಅಗತ್ಯ ಇರುವಷ್ಟು ರಕ್ತವನ್ನು ಶುದ್ಧೀಕರಿಸುತ್ತದೆ.
* ಕಣ್ಣುಗಳ ಕೆಳಗೆ ಕಪ್ಪು ಕಲೆ ಇದ್ದರೆ ಬೀಜವಿಲ್ಲದ ದ್ರಾಕ್ಷಿಯನ್ನು ಕತ್ತರಿಸಿ ಕಣ್ಣಿನ ಸುತ್ತ ಸವರಿದರೆ ಉತ್ತಮ ಫಲಿತಾಂಶ ದೊರಕುತ್ತದೆ.
ಇವೆಲ್ಲವೂ ಸರಿ. ಆದರೆ ಒಂದು ಮಾತು ನೆನಪಿರಲಿ. ಬಹುಶಃ ದ್ರಾಕ್ಷಿ ಬೆಳೆಯುವಾಗ ಸಿಂಪಡಿಸುವಷ್ಟು ರಾಸಾಯನಿಕ ಕೀಟನಾಶಕ ಬೇರೆ ಯಾವ ಹಣ್ಣಿಗೂ ಸಿಂಪಡಿಸಲಾರರೇನೋ. ಆದ್ದರಿಂದ ಈ ಹಣ್ಣನ್ನು ಮಾರುಕಟ್ಟೆಯಿಂದ ಕೊಂಡು ತಂದ ಸಂದರ್ಭದಲ್ಲಿ ಬಿಸಿನೀರಿಗೆ ಉಪ್ಪು ಬೆರೆಸಿ ಹಣ್ಣನ್ನು ಅದರಲ್ಲಿ ಚೆನ್ನಾಗಿ ತೊಳೆದು ಆ ನಂತರವೇ ಸೇವನೆ ಮಾಡಬೇಕು. ಇಲ್ಲದಿದ್ದರೆ ಆರೋಗ್ಯವರ್ಧನೆ ಬದಲು ಹಾಸಿಗೆ ಹಿಡಿಯಬೇಕಾಗುತ್ತದೆ ಎನ್ನುವುದು ನೆನಪಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.