ADVERTISEMENT

ಆಹಾ ಚಳಿಗಾಲ ಬೆಚ್ಚಗಿರಲು ಸಕಾಲ

ಮುರಲೀಧರ ಕುಲಕರ್ಣಿ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ಚಳಿಗಾಲದಲ್ಲಿ ಆರೋಗ್ಯದಿಂದ ಇರಲು ಪ್ರಕೃತಿಯೇ ನಮಗೆ ಕೆಲವು ಅನುಕೂಲಗಳನ್ನು ಮಾಡಿಕೊಟ್ಟಿದೆ

ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು' ಎಂದು ಹೇಳಲಾಗುತ್ತದೆ.

ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು.

ಇಲ್ಲಿವೆ ಆ ಸೂತ್ರಗಳು:
ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ ನಾವು ಆರೋಗ್ಯವಂತರಾಗಿರಲು ಹೆಚ್ಚಿನ ಭಾಗ ಪ್ರಕೃತಿಯೇ ನಮಗೆ ಸಹಾಯಕವಾಗಿದೆ. ಈ ಕಾಲದಲ್ಲಿ ಸೂರ್ಯನು ದಕ್ಷಿಣಾಯನದಲ್ಲಿ ಇರುವುದರಿಂದ ಹಗಲುಗಳು ಕಿರಿದಾಗಿದ್ದು, ರಾತ್ರಿಗಳು ದೀರ್ಘವಾಗಿರುತ್ತವೆ. ಇದರಿಂದ ದೇಹದ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುತ್ತದೆ. ಈ ಋತುವಿನಲ್ಲಿ ಜಠರಾಗ್ನಿಯೂ ಪ್ರಖರವಾಗಿ ಇರುವುದರಿಂದ ಸೇವಿಸಿದ ಆಹಾರ ಚೆನ್ನಾಗಿ ಪಚನವಾಗುತ್ತದೆ.

ನಮ್ಮ ದೇಶದಲ್ಲಿ ಚಳಿಗಾಲವು ಶರದ್ ಋತುವಿನಿಂದ ಆರಂಭವಾಗುತ್ತದೆ. ಆದ್ದರಿಂದ ಶರೀರವನ್ನು ಬೆಚ್ಚಗಿಡಲು ಉಣ್ಣೆ ಬಟ್ಟೆಗಳನ್ನು ಬಳಸುವುದರೊಂದಿಗೆ ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.

ಈ ಋತುವಿನಲ್ಲಿ ಹಸಿವು ಜಾಸ್ತಿಯಾಗುವುದರಿಂದ ಕಾಲಕಾಲಕ್ಕೆ ಶರೀರಕ್ಕೆ ಆಹಾರ ಪೂರೈಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಹಸಿವನ್ನು ತಡೆಯಲು ಪ್ರಯತ್ನಿಸುವುದು ದೇಹಕ್ಕೆ ಹಾನಿ ಉಂಟು ಮಾಡಬಹುದು. ಹಾಗೆ ಮಾಡುವುದರಿಂದ ಜಠರಾಗ್ನಿಯು ರಕ್ತ, ಮಾಂಸ, ಧಾತು ಹಾಗೂ ರಸಗಳನ್ನು ದಹಿಸಿ ಶರೀರ ಕೃಷವಾಗಬಹುದು ಮತ್ತು ವಾಯುಪ್ರಕೋಪ ಹೆಚ್ಚಬಹುದು.

ADVERTISEMENT

ಚಳಿಗಾಲದಲ್ಲಿ ವಾಯು ಪ್ರಕೋಪ ಮತ್ತು ಕಫ ಸಂಚಯ ಆಗುವುದರಿಂದ ಅವುಗಳನ್ನು ಹೆಚ್ಚಿಸುವ ಪದಾರ್ಥಗಳ ಸೇವನೆ ವರ್ಜಿಸಬೇಕು. ಸಿಹಿ, ಆಮ್ಲ ಮತ್ತು ಲವಣಯುಕ್ತ ಆಹಾರಗಳನ್ನು ಸೇವಿಸಬೇಕು. ಈ ಕಾಲದಲ್ಲಿ ಬಿಸಿಯಾದ ಪದಾರ್ಥಗಳನ್ನು ಸೇವಿಸುವುದು ಹೆಚ್ಚು ಹಿತ ಎನಿಸುತ್ತದೆ. ಆದ್ದರಿಂದ ಚಹಾ ಹಾಗೂ ಕಾಫಿಯನ್ನು ನಾವು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಹಾ, ಕಾಫಿಗಳ ಅತಿಯಾದ ಸೇವನೆ ವಾಯು ಪ್ರಕೋಪವನ್ನು ಹೆಚ್ಚಿಸುತ್ತದೆ. ಅದಕ್ಕೆ ಬದಲಾಗಿ ಬಿಸಿ ಸೂಪ್‌ಗಳನ್ನು ಕುಡಿಯಬಹುದು.

ಹೀಗಿರಲಿ ಆಹಾರ ಕ್ರಮ
ಚಳಿಗಾಲದಲ್ಲಿ ಗಜ್ಜರಿ (ಕ್ಯಾರೆಟ್), ಮೂಲಂಗಿ, ಗೆಣಸು ಮುಂತಾದ ಗೆಡ್ಡೆಗಳು, ಮೆಂತೆ ಪಲ್ಲೆ, ಬಸಳೆ ಸೊಪ್ಪು, ರಾಜಗಿರಿ ಸೊಪ್ಪು, ಪಾಲಕ್, ಸಬ್ಬಸಿಗೆ ಮುಂತಾದ ಸೊಪ್ಪುಗಳು, ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. ಈ ಋತುವಿನಲ್ಲಿ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆ ಆಗುವುದರಿಂದ ಜಿಡ್ಡನ್ನು ಪೂರೈಸುವ ಆಹಾರ ಪದಾರ್ಥ ಸೇವಿಸಬೇಕು. ಹಾಲು, ತುಪ್ಪ, ಬೆಣ್ಣೆ, ಕೆನೆ, ಗೋಡಂಬಿ, ಕಲ್ಲುಸಕ್ಕರೆ, ಬಾದಾಮಿ, ಗಜ್ಜರಿ ಹಲ್ವ, ಬಾಸುಂದಿ, ಒಣ ಕೊಬ್ಬರಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಸೇವಿಸಬೇಕು.

ಶರೀರದ ಉಷ್ಣತೆ ಕಾಪಾಡಿಕೊಳ್ಳಲು ಹೆಚ್ಚು ಕ್ಯಾಲೊರಿಗಳ ಅವಶ್ಯಕತೆ ಇರುವುದರಿಂದ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಹುದು. ಈ ಋತುವಿನಲ್ಲಿ ಬರುವ ಹಣ್ಣುಗಳಾದ ಸೀತಾಫಲ, ಪಪ್ಪಾಯಿ, ಕಿತ್ತಳೆ, ಪೇರು ಮುಂತಾದ ಹಣ್ಣುಗಳನ್ನು ಸೇವಿಸಬೇಕು. ತರಕಾರಿಗಳಲ್ಲಿ ಹೂಕೋಸು ವರ್ಜ್ಯ. ಏಕೆಂದರೆ ಅದು ಕೀಲುನೋವನ್ನು ಉಂಟುಮಾಡುತ್ತದೆ.

ರಾತ್ರಿ ತುಂಬಾ ತಡವಾಗಿ ಊಟಮಾಡುವುದು, ಮುಂಜಾನೆ ತಡಮಾಡಿ ಏಳುವುದು, ಉಪವಾಸ ಮಾಡುವುದು, ತಂಗಳು ಆಹಾರ ಸೇವನೆ ಈ ಋತುವಿಗೆ ತಕ್ಕುದಲ್ಲ. ಇವೆಲ್ಲ ವಾಯು ಪ್ರಕೋಪ ಹೆಚ್ಚಿಸುತ್ತವೆ.
ವಾತ ಹಾಗೂ ಪಿತ್ತ ಪ್ರಕೃತಿಯವರಿಗೆ ಈ ಋತು ಸರಿಯಾದುದಲ್ಲ. ಆದ್ದರಿಂದ ಕಫ ಪ್ರಕೃತಿಯವರು ಹುಳಿಯಾದ ಪದಾರ್ಥಗಳು, ಮೊಸರು, ಬಾಳೆಹಣ್ಣನ್ನು ಸೇವಿಸಬಾರದು.

ವಾತ ಪ್ರಕೃತಿಯವರು ಅದರಿಂದ ಪಾರಾಗಲು ಮತ್ತು ಶರೀರದಲ್ಲಿ ಸ್ಫೂರ್ತಿ ಹೊಂದಲು ಸಾಸಿವೆ ಎಣ್ಣೆಯಿಂದ ಶರೀರವನ್ನು ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಸಂಧಿವಾತ, ಕೀಲುನೋವುಗಳು ಗುಣವಾಗುತ್ತವೆ ಮತ್ತು ತ್ವಚೆಯೂ ಕೋಮಲವಾಗಿ ಇರುತ್ತದೆ. ಕಫ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಿಗಳಿಗೆ ಆಕಳ ತುಪ್ಪದಲ್ಲಿ ಸೈಂಧವ ಲವಣ, ಮೆಂತೆ ಮತ್ತು ಕರ್ಪೂರ ಬೆರೆಸಿ ಎದೆಗೆ ಚೆನ್ನಾಗಿ ಮಾಲೀಷು ಮಾಡಬೇಕು.

ವೃದ್ಧರಿಗೆ ಮತ್ತು ನ್ಯುಮೋನಿಯಾ ಪೀಡಿತ ಚಿಕ್ಕ ಮಕ್ಕಳಿಗೂ ಇದು ಉಪಯುಕ್ತ. ವಾತ ಪೀಡಿತ ರೋಗಿಗಳು ಗೋಧಿ ಹಿಟ್ಟಿನಲ್ಲಿ ಮೆಂತೆ ಸೊಪ್ಪು, ಓಂ ಕಾಳು, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಶುಂಠಿ ಬೆರೆಸಿ ತಯಾರಿಸಿದ ಪರಾಠಾ ಸೇವಿಸಬೇಕು. ನೆಲ್ಲಿಕಾಯಿಯ ಸೇವನೆ ಈ ಋತುವಿಗೆ ತುಂಬಾ ಉಪಯುಕ್ತ. ಆದ್ದರಿಂದ ಯಾವುದೇ ರೂಪದಲ್ಲಾಗಲೀ ನೆಲ್ಲಿಕಾಯಿಯ ಸೇವನೆ ಮಾಡಬೇಕು.

ಯಾವುದೇ ಔಷಧಿ ಸೇವಿಸಲು ಚಳಿಗಾಲ ಉತ್ತಮವಾದ ಕಾಲ. ಆದ್ದರಿಂದ ದೀರ್ಘ ಕಾಲದಿಂದ ಬಳಲುತ್ತಿರುವ ರೋಗಿಗಳಿಗೆ ಚಳಿಗಾಲದಲ್ಲಿ ಔಷಧ ಸೇವನೆ ಪ್ರಾರಂಭಿಸಬಹುದು. ಮಕ್ಕಳಿಗೆ ಹಾಲುಣಿಸುವ ತಾಯಂದಿರು ಪ್ರತಿನಿತ್ಯ ಒಂದು ಚಮಚ ಓಂ ಕಾಳನ್ನು ಸೇವಿಸಬೇಕು. ಇದರಿಂದ ಮಗುವಿಗೆ ಅಪಚನ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.