ADVERTISEMENT

ಉಪಶಮನವಿಲ್ಲದೆ ದಯಾಮರಣವೇ?

ಕೆ.ಸಿ.ರಘು
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಉಪಶಮನವಿಲ್ಲದೆ ದಯಾಮರಣವೇ?
ಉಪಶಮನವಿಲ್ಲದೆ ದಯಾಮರಣವೇ?   

ಎಲ್ಲ ಭಯಗಳಿಗಿಂತ ಗಾಢವಾದ ಭಯವೇ ಸಾವಿನಭಯ ಎನ್ನಬಹುದು. ತನ್ನನ್ನು ತಾನು ಕೊನೆಗೂ ಉಳಿಸಿಕೊಳ್ಳಲು ಸಮಯ–ಸಂದರ್ಭಗಳಲ್ಲಿ ತನ್ನವರನ್ನೇ ಬಲಿಕೊಟ್ಟಾದರೂ ಬದುಕುವ ಮಾರ್ಗ ಹುಡುಕುವುದುಂಟು. ತತ್ತ್ವಶಾಸ್ತ್ರಕ್ಕೆ, ಚಿಂತನೆಗೆ ಬದುಕಿನ ನಿಜವಾದ ಅರ್ಥವನ್ನು ಹುಡುಕುವ ಹಾದಿಗೆ ಹಚ್ಚಿಸುವುದು ಮನುಷ್ಯ ತಾನು ಶಾಶ್ವತವಲ್ಲ, ಇಂದಿಲ್ಲ ನಾಳೆ ಸಾಯುತ್ತೇನೆ ಎನ್ನುವುದಾಗಿದೆ. ಜೀವನ್ಮುಕ್ತನಾದವನಿಗೆ ಮಾತ್ರ ಈ ಭಯ ಕಾಡುವುದಿಲ್ಲ ಎನ್ನುತ್ತದೆ ಭಾರತೀಯ ತತ್ತ್ವಶಾಸ್ತ್ರ.

ರಮಣರು ಬದುಕಿರುವಾಗಲೇ ತನ್ನ ಬಗ್ಗೆಯೇ ಏನಾದರೂ ಹೇಳುವಾಗ, ‘ಅದು’, ‘ಇದು’ ಎನ್ನುತ್ತಿದ್ದರಂತೆ. ಹೆಸರಾಂತ ತತ್ತ್ವಶ್ರಾಸ್ತ್ರಜ್ಞ ಸಾಕ್ರೆಟೀಸ್‍ನನ್ನು ಅಥೆನ್ಸ್ ರಾಜ್ಯದಲ್ಲಿ ‘ರಾಜದ್ರೋಹ’ಕ್ಕಾಗಿ ಮರಣದಂಡನೆ ವಿಧಿಸಿತ್ತು. ಆತನ ಸಾವಿಗಾಗಿ ಅಂದು ಜೈಲಿನಲ್ಲಿ ಹೆಮ್ಲಾಕ್ ವಿಷವನ್ನು ಒಬ್ಬ ಅರೆಯುತ್ತಿದ್ದ. ಇತ್ತ ಸಾಕ್ರೆಟೀಸ್ ತನ್ನ ಶಿಷ್ಯ ಪ್ಲೇಟೋ ಮತ್ತಿತರರೊಂದಿಗೆ ನಿರಾಳವಾಗಿ ತತ್ತ್ವ‌ಶಾಸ್ತ್ರ ಜಿಜ್ಞಾಸೆಯಲ್ಲಿ ಮುಳುಗಿದ್ದನು. ವಿಷ ಅರೆಯುವಾತ ಸಾಕ್ರೆಟೀಸ್‍ನ ಶಿಷ್ಯಂದಿರಿಗೆ ‘ಆತನನ್ನು ಇನ್ನಾದರೂ ಬಿಟ್ಟುಬಿಡಿಯಪ್ಪ, ಆತನಿಗೆ ಇನ್ನೇನು ಸಾಯುವ ಕಾಲ ಹತ್ತಿರ ಬಂತು’ ಎನ್ನುತ್ತಾನೆ.

ಸಾಕ್ರೆಟೀಸ್, ‘ಅಪ್ಪಾ, ನೀನು ಮದ್ದನ್ನು ಚೆನ್ನಾಗಿ ಅರೆ. ವಿಷವು ಪ್ರಾಣವನ್ನು ನಿಶ್ಚಿತವಾಗಿ ತೆಗೆಯಬೇಕು... ಹಾಗಿರಲಿ’ ಎಂದು ಹೇಳುತ್ತಾ ನಿಶ್ಚಿಂತೆಯಿಂದ ತತ್ತ್ವಶಾಸ್ತ್ರದ ಆಳವಾದ ಪ್ರಶ್ನೆಗಳನ್ನು ಶಿಷ್ಯಂದಿರಿಗೆ ಹಾಕುತ್ತಲೇ ಮುಂದುವರಿಯುತ್ತಾನೆ. ನಮ್ಮಲ್ಲಿಯೂ ‘ತತ್ತ್ವಶಾಸ್ತ್ರದ ಪ್ರಯೋಜನವೇನು’ – ಎಂದಾಗ, ‘ಭಯ, ಮೋಹ, ಶೋಕಗಳ’ ನಿವಾರಣೆಯೇ ಎನ್ನುತ್ತಾರೆ.

ADVERTISEMENT

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ನಮ್ಮಲ್ಲಿ ದಯಾಮರಣಕ್ಕೆ ಅನುಮತಿ ನೀಡಿದೆ. ಈ ದಯಾಮರಣ ತಾನೇ ತನ್ನ ಸಾವನ್ನು ಒಂದು ರೀತಿಯಲ್ಲಿ ಆಹ್ವಾನಿಸುವ ರೀತಿಯದ್ದಾಗಿದೆ. ಇದನ್ನು ‘passive euthanasia’ ಎನ್ನುತ್ತಾರೆ. ಇದಕ್ಕೆ ವಿರುದ್ಧವಾದುದ್ದರಲ್ಲಿ ವೈದ್ಯರೇ ಚುಚ್ಚುಮದ್ದನ್ನು ನೀಡಿ, ಸಾವನ್ನು ಬರಿಸುವುದಾಗಿದೆ.

ನಮ್ಮ ದೇಶ ಜೀವನದ ಕೊನೆಯ ಹಂತದಲ್ಲಿ ಆರೋಗ್ಯದ ದುಃಸ್ಥಿತಿಯಲ್ಲಿ ವೈದ್ಯಕೀಯ ಉಪಶಮನ ಸೇವೆ ಅತ್ಯಂತ ಕಳಪೆ ಮಟ್ಟದ್ದು ಎನ್ನುವುದು ದುರಂತ. ‘ಉಪಶಮನ ಸೇವೆ’ಯು (palliative care) ಭಾರತದಲ್ಲಿ ಕೇವಲ ಶೇ 2ರಷ್ಟು ಇದೆ. ಜಗತ್ತಿನ ಸರಾಸರಿ ಶೇ 14ರಷ್ಟು ಇದ್ದರೆ, ಮುಂದುವರಿದ ರಾಷ್ಟ್ರಗಳಲ್ಲಿ ಈ ಪ್ರಮಾಣ ಶೇ 90ರಷ್ಟಿದೆ. ಎಕನಾಮಿಕ್ ಇಂಟಲಿಜೆನ್ಸ್ ಯೂನಿಟ್ ಸರ್ವೆ ಪ್ರಕಾರ ಜಗತ್ತಿನ 80 ರಾಷ್ಟ್ರಗಳ ಪಟ್ಟಿಯಲ್ಲಿ ‘ಸಾವಿನ ಗುಣಾಂಕ ಸೂಚ್ಯ’ದ (quality of death index) 67ನೇ ಸ್ಥಾನದಲ್ಲಿರುವುದು ಈ ಸಾಂಸ್ಕೃತಿಕ ರಾಷ್ಟ್ರಕ್ಕೆ ಹೆಮ್ಮೆಯನ್ನುಂಟುಮಾಡುವಂಥದ್ದಲ್ಲ.

ನಮ್ಮಲ್ಲಿ ಶೇ 10ರಷ್ಟು ಸಾವು ಮಾತ್ರ ಯಾವ ಕಾರಣಕ್ಕಾಗಿ ಸಾವು ಎಂಬುದು ತಿಳಿದು ದಾಖಲಿಸಲಾಗುತ್ತದೆ. ಈ ರೀತಿ ಆರೋಗ್ಯ ಸೇವೆಯಲ್ಲಿಯೇ ಅಗಾಧವಾದ ದೋಷಗಳನ್ನಿಟ್ಟುಕೊಂಡು, ರಾಷ್ಟ್ರ ಮತ್ತು ಸಮಾಜ ಅಪರಾಧಿಯ ಸ್ಥಾನದಲ್ಲಿತ್ತು. ಬೇಕಾದರೆ ನಿಮ್ಮ ಸಾವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎನ್ನುವುದು ವಿರೋಧಾಭಾಸವೇ ಸರಿ. ಹಸಿವು ಮತ್ತು ಅಪೌಷ್ಟಿಕತೆ ತಾಂಡವವಾಡುವಾಗ, ಡಯೆಟಿಂಗ್ ಮಾಡಿ, ಪಥ್ಯ ಮಾಡಿ ಎನ್ನುವಂತಿದೆ ಇದು. ಡೆನ್‍ಮಾರ್ಕ್, ಬೆಲ್ಜಿಯಂನಂತಹ ದೇಶಗಳಲ್ಲೂ ದಯಾಮರಣಕ್ಕೆ ಅವಕಾಶವಿದೆ.

ಆದರೆ ಅಲ್ಲಿ ಸಾರ್ವಜನಿಕ ಆರೋಗ್ಯಸೇವೆಯಿಂದ ಯಾರೂ ವಂಚಿತರಲ್ಲ. ನಮ್ಮಲ್ಲಿ ಬಡತನದ ರೇಖೆಗೆ ಕೆಳಗಿರುವವರು ಆರೋಗ್ಯಸೇವೆಯಿಂದ ವಂಚಿತರಾಗಿ, ದೇಶದ ಸರಾಸರಿ ವಯಸ್ಸಿಗಿಂತ ಸುಮಾರು ಹತ್ತು ವರ್ಷ ಮೊದಲೇ ಸಾವನ್ನಪ್ಪುತ್ತಿದ್ದಾರೆ. ಶಿಶು ಮತ್ತು ತಾಯಂದಿರ ಮರಣದ ವಿವರಗಳನ್ನು ಪರಿಶೀಲಿಸಿ ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ – ‘ಭಾರತದೇಶವು ಮಹಿಳೆ ಮತ್ತು ಮಕ್ಕಳ ಹುಟ್ಟಿಗೆ ಅಪಾಯಕಾರಿ ದೇಶ’ ಎಂದಿದೆ.

ಬೆರಳೆಣಿಕೆಯಷ್ಟು ಜನ ಯಾವುದೋ ಕ್ರೌರ್ಯ, ಅಪಘಾತಗಳಿಗೆ ತುತ್ತಾಗಿ ಕೋಮಾಸ್ಥಿತಿಗೆ ಹೋಗಬಹುದು. ಅಂತಹ ಸಮಯದಲ್ಲಿ ಜೀವನಪರ್ಯಂತ ಅದೇ ಪರಿಸ್ಥಿತಿಯಲ್ಲಿ ಮುಂದುವರೆಯುವ ಬದಲು ಅಂಥವರಿಗೆ ದಯಾಮರಣ ಸೂಕ್ತವಾಗಬಹುದೇನೋ? ಆದರೆ ಸಾವು ಸಹಜ ರೀತಿಯಲ್ಲಿ ಸಂಭವಿಸಬೇಕಾದದ್ದು ಎನ್ನುವುದನ್ನು ಮರೆಯುವಂತಿಲ್ಲ. ಉಪಶಮನ ಮತ್ತು ಸುತ್ತಲಿನ ಜನರ ಪ್ರೀತಿ–ಶುಶ್ರೂಷೆಗಳಿಂದ ದೂರ ಮಾಡಿ ಸಾವನ್ನು ಕೊಡಬೇಕು ಎಂಬುದು ದಯಾಮರಣದ ಉದ್ದೇಶವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.