ADVERTISEMENT

`ಕ್ರೂಪ್'

ಎಂ.ಡಿ.ಸೂರ್ಯಕಾಂತ
Published 26 ಏಪ್ರಿಲ್ 2013, 19:59 IST
Last Updated 26 ಏಪ್ರಿಲ್ 2013, 19:59 IST

ಒಂದೆರಡು ದಿನ ಜ್ವರ, ನೆಗಡಿ, ಕೆಮ್ಮು- ಇವು ಎಳೆ ಮಗುವಿನ ಸಾಮಾನ್ಯ ತೊಂದರೆ. `ಜ್ವರದ ಔಷಧಿ, ಮೂಗಿಗೆ ವಿಕ್ಸ್ ಲೇಪಿಸಿ' ಎಂದು ಅಜ್ಜಿಯ ಸಲಹೆ. ಆದರೆ ಒಮ್ಮಿಂದೊಮ್ಮೆಲೇ ಮಧ್ಯರಾತ್ರಿ ಮಗುವಿಗೆ ಉಸಿರಾಡಲು ತೊಂದರೆ, ಧ್ವನಿ ಬದಲು, ಮಾತನಾಡಲು ಪ್ರಯಾಸ. ಎಲ್ಲರಿಗೂ ಗಾಬರಿ. ತಕ್ಷಣವೇ ಮಗು ಆಸ್ಪತ್ರೆಗೆ ದಾಖಲು. `ಮಗುವಿಗೆ `ಕ್ರೂಪ್' ಕಾಯಿಲೆ. ಬೇಗ ಮಗುವನ್ನು ಕರೆ ತಂದಿರಿ. ತಡವಾಗಿದ್ರೆ ಅಪಾಯವಿತ್ತು' ಎಂದು ವೈದ್ಯರ ಕಿವಿಮಾತು. ಹಾಗಾದರೆ ಏನಿದು ಕ್ರೂಪ್?

ಆರು ತಿಂಗಳಿನಿಂದ ಆರು ವರ್ಷದೊಳಗಿನ ಶೇ 3 ಗಂಡು ಮಕ್ಕಳಲ್ಲಿ ಸಾಮಾನ್ಯವಾದ ಇದು, ಶ್ವಾಸನಾಳ ಹಾಗೂ ಧ್ವನಿ ಸಂಪುಟಗಳ (ಲ್ಯಾರಿಕ್ಸ್ ಮತ್ತು ವೈಸ್ ಬಾಕ್ಸ್) ಸೋಂಕಿನ ಉರಿಯೂತ. ಇದಕ್ಕೆ ಮಕ್ಕಳ ಗಂಟಲು ರೋಗ, ಗಂಟಲೂರಿ, ಗಂಟಲಿನ ಉರಿಯೂತ ಎಂಬ ಹೆಸರುಗಳಿವೆ. ಶೇ 80ರಷ್ಟು ಸಂದರ್ಭಗಳಲ್ಲಿ `ಪ್ಯಾರಾ ಇನ್‌ಫ್ಲೂಯೆಂಜಾ' ಎಂಬ ರೋಗಾಣು ಇದಕ್ಕೆ ಕಾರಣ.

ಚಿಕಿತ್ಸೆ ಹೇಗೆ?
ಶೇ 60ರಷ್ಟು ಮಕ್ಕಳಲ್ಲಿ ವಿಶೇಷ ಚಿಕಿತ್ಸೆ ಇಲ್ಲದೆ 5-6 ದಿನಗಳಲ್ಲಿ ಪೂರ್ಣ ವಾಸಿ ಸಾಧ್ಯ. ಹೆಚ್ಚಿನ ಅಪಾಯ ತಡೆಯಲು ಆರಂಭಿಕ ಲಕ್ಷಣಗಳಿದ್ದಾಗ ಹೀಗೆ ಮಾಡಿ.

ವೇಗದ ಉಸಿರಾಟದಿಂದ ನಿರ್ಜಲೀಕರಣದ ಅಪಾಯ ಇರುವುದರಿಂದ ಇದನ್ನು ತಡೆಯಲು ಹೆಚ್ಚು ದ್ರವ ರೂಪದ ಆಹಾರ ನೀಡಿ.

ಉಸಿರಾಡಲು ತೊಂದರೆ ಅಥವಾ ಮೂಗು ಕಟ್ಟಿದ್ದರೆ ಮನೆಯಲ್ಲೇ ಸ್ಟೀಮ್ ಇನ್‌ಹಲೇಷನ್ (ನೀರಿನ ಆವಿ) ಕೊಡಿ.

ಅಳು ಅಥವಾ ಕಿರಿಕಿರಿಯಿಂದ ಗಂಟಲಿನ ಊತ ಉಲ್ಬಣಿಸುವ ಅಪಾಯ ಇರುತ್ತದೆ. ಆದ್ದರಿಂದ ಅಳದಿರುವಂತೆ ರಮಿಸಿ. ಮಗುವನ್ನು ಹೆಗಲ ಮೇಲಿಟ್ಟುಕೊಂಡು ಪ್ರೀತಿಯಿಂದ ಸಮಾಧಾನಪಡಿಸಿ.

ಹೆಚ್ಚು ಜ್ವರವಿದ್ದರೆ ಪ್ರತಿ 4ರಿಂದ 6 ಗಂಟೆಗೊಮ್ಮೆ ಜ್ವರದ ಔಷಧಿ ಕೊಡಿ.

ಎರಡು ವರ್ಷದೊಳಗಿನ ಮಕ್ಕಳ ಕೆಮ್ಮು ಹಾಗೂ ಮೂಗು ಸೋರುವಿಕೆ ತಡೆಯಲು ಔಷಧಿ (ಮೂಗಿಗೆ ಹನಿ) ಬಳಸಬೇಡಿ. ಏಕೆಂದರೆ ಇವು ನಿಷ್ಪ್ರಯೋಜಕ. ನಿದ್ರೆ ಬರಿಸುತ್ತವೆ. ಮಲಬದ್ಧತೆಯೂ ಬರಬಹುದು. ಉಸಿರಾಟದ ತೊಂದರೆಯನ್ನು ಹೆಚ್ಚಿಸುತ್ತವೆ.

ಗಂಭೀರವಾದ ಪ್ರಕರಣಗಳಲ್ಲಿ ಸ್ಟೀರಾಯ್ಡ ಮತ್ತು ನೆಬಿಲೈಸೇಷನ್ ಹೆಚ್ಚು ಪರಿಣಾಮಕಾರಿ. (ಈ ಔಷಧಿಗಳ ಹಬೆಯನ್ನು ವಿಶೇಷ ಉಪಕರಣದಿಂದ  ಮೂಗು ಮತ್ತು ಬಾಯಿಯ ಮೂಲಕ ಆಘ್ರಾಣಿಸುವಂತೆ ಮಾಡಬೇಕು. ಇದರಿಂದ ಗಂಟಲು, ಶ್ವಾಸಕೋಶದ ಊತ ಕಡಿಮೆಯಾಗುತ್ತದೆ)

ಹೀಗೆ ತಡೆಯಿರಿ: ವೈಯಕ್ತಿಕ ಶುಚಿತ್ವ ಅವಶ್ಯ. ನಿಮ್ಮ ಹಾಗೂ ಮಗುವಿನ ಕೈ ಸ್ವಚ್ಛವಾಗಿರಲಿ. ಮಗು ಓಡಾಡುವ ಸ್ಥಳ ಶುಭ್ರವಾಗಿರಲಿ. ದಡಾರ, ಮಂಗನ ಬಾವು, ಡಿ.ಪಿ.ಟಿ, ಹಿಬ್ಸ್, ಪೋಲಿಯೊ ಲಸಿಕೆಯನ್ನು ತಪ್ಪದೇ ಹಾಕಿಸಿ. ಮಗುವಿನ ಆರೈಕೆದಾರರಿಗೆ ಕೆಮ್ಮು, ನೆಗಡಿ ಇದ್ದರೆ ಅವರು ಕೆಮ್ಮುವಾಗ, ಸೀನುವಾಗ, ಬಾಯಿ, ಮೂಗಿನ ಮುಂದೆ ಟವೆಲ್ ಅಥವಾ ಕೈವಸ್ತ್ರ ಬಳಸಲಿ.

ಏನಿದು ಸ್ಟೀಮ್ ಇನ್‌ಹಲೇಷನ್?
ನೀರಿನ ಆವಿಯನ್ನು ಬಾಯಿ, ಮೂಗಿನ ಮೂಲಕ ಎಳೆದುಕೊಂಡರೆ ಶ್ವಾಸಕೋಶದ ಊತ ಕಡಿಮೆಯಾಗಿ ಸುಗಮ ಧ್ವನಿ ಮತ್ತು ಉಸಿರಾಟ ಸಾಧ್ಯ. ಮನೆಯಲ್ಲಿ ಮಾಡಬಹುದಾದ ಈ ಸರಳ ವಿಧಾನ ಮಗುವನ್ನು ಅಪಾಯದ ಹಂತ ತಲುಪದಂತೆ ತಡೆಯುತ್ತದೆ.

ಇದಕ್ಕಾಗಿ ಹೀಗೆ ಮಾಡಿ:
ಸುಮಾರು ಎರಡು ಲೀಟರ್ ಶುದ್ಧ ನೀರನ್ನು ಹಬೆ ಬರುವವರೆಗೆ ಕಾಯಿಸಿ. ಇದನ್ನು ಅಗಲ ಬಾಯಿ ಇರುವ ಪಾತ್ರೆಗೆ ವರ್ಗಾಯಿಸಿ. ಮಗುವನ್ನು ಎತ್ತಿಕೊಂಡು ಕುರ್ಚಿ ಮೇಲೆ ಕುಳಿತು ಆವಿ ಬರುವ ಕಡೆ ವಾಲಿರಿ. ಪಾತ್ರೆಯಿಂದ ಮಗುವಿನ ಮುಖ ಆರು ಅಂಗುಲ ಅಂತರದಲ್ಲಿ ಇರಲಿ. ಪಾತ್ರೆ, ಮಗು ಹಾಗೂ ತಾಯಿ ಒಂದೇ ಹೊದಿಕೆಯಲ್ಲಿ ಮುಚ್ಚಿಕೊಂಡು ಆವಿಯನ್ನು ಅಘ್ರಾಣಿಸಿದರೆ ಉತ್ತಮ. ಹೀಗೆ 10 ನಿಮಿಷ, ದಿನಕ್ಕೆ 3-4 ಬಾರಿ ಮಾಡಿ. ಮಗು ಸಹಕರಿಸದಿದ್ದರೆ ಈ ಪ್ರಯತ್ನ ಬೇಡ. ಬಿಸಿ ಆವಿ, ನೀರಿನಿಂದ ಮುಖ, ಮೈ ಸುಡುವ ಅಪಾಯವಿದೆ.

ಮಹಿಳೆಯರು ಮುಖದ ಸೌಂದರ್ಯಕ್ಕೆ ಉಪಯೋಗಿಸುವ ವಿದ್ಯುತ ಚಾಲಿತ ಸ್ಟೀಮರ್ ಉಪಕರಣವನ್ನು ಸಹ `ಸ್ಟೀಮ್ ಇನ್‌ಹಲೇಷನ್' ನೀಡಲು ಬಳಸಬಹುದು.

ಲಕ್ಷಣಗಳು
ಮೊದಲ ಎರಡು ದಿನ ಅತಿ ಜ್ವರ (100 ಡಿಗ್ರಿಗಿಂತ ಹೆಚ್ಚು) 3ನೇ ದಿನಕ್ಕೆ ನೆಗಡಿ, ಗೊರಗೊರ ಕೆಮ್ಮು
ಉಸಿರಾಡಲು ತೊಂದರೆ. ಮಾತನಾಡುವಾಗ ಹಾಗೂ ಉಸಿರು ಎಳೆದುಕೊಳ್ಳುವಾಗ ಕರ್ಕಶ ಶಬ್ದ
ಆಹಾರ ಸೇವಿಸಲು ತೊಂದರೆ
ಈ ತೊಂದರೆಗಳು ರಾತ್ರಿ ವೇಳೆ ಹೆಚ್ಚು
ಎಲ್ಲ ಲಕ್ಷಣಗಳೂ 6-7 ದಿನದಲ್ಲಿ ಕಡಿಮೆಯಾಗುತ್ತವೆ. ಕೆಲವು ಮಕ್ಕಳಲ್ಲಿ ಎರಡು ವಾರ ಇರುತ್ತದೆ

ವೈದ್ಯರನ್ನು ಸಂಪರ್ಕಿಸಿ
ಈ ಅಪಾಯಗಳಿದ್ದಾಗ ವೈದ್ಯರನ್ನು ಸಂಪರ್ಕಿಸಿ: ಹೆಚ್ಚಿದ ಉಸಿರಾಟದ ವೇಗ ಮತ್ತು ಹೃದಯ ಬಡಿತ, ಉಸಿರಾಡಲು ಅಸಾಧ್ಯವಾದ ಸ್ಥಿತಿ, ಚರ್ಮ ಹಾಗೂ ತುಟಿ ನೀಲಿಗಟ್ಟುವುದು ಅಥವಾ ಬಿಳಿಚಿಕೊಳ್ಳುವುದು, ಎದೆಯ ಒಳಸೆಳೆತ (ಉಸಿರಾಡುವಾಗ ಪಕ್ಕೆಲುಬು ಕಾಣಿಸುವುದು), ಪ್ರಜ್ಞಾಹೀನತೆ, ನಿದ್ರಾಹೀನತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT