ADVERTISEMENT

ಚಟಕ್ಕೆ ಹೇಳಿ ಗುಡ್‌ಬೈ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ನಾವು ಚಟಕ್ಕೆ ದಾಸರಾಗುವುದು ಏಕೆ ಎಂಬುದನ್ನು ಮೊದಲು ಅರಿತುಕೊಳ್ಳೋಣ. ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರಣಗಳು ಇರುತ್ತವೆ. ಅಂಬಿಗೆ ತನ್ನ ತಂದೆ, ತಾಯಿ ತನ್ನನ್ನು ನಿರ್ಲಕ್ಷಿಸುತ್ತಾರೆ ಎಂಬ ಭಾವನೆಯಿದೆ. ಹಾಗಾಗಿ ಆಕೆ ತಿಂಡಿ, ತಿನಿಸಿನ ಚಟಕ್ಕೆ ದಾಸಳಾಗಿದ್ದಾಳೆ. ಊಟ, ತಿಂಡಿಯಿಂದಲೇ ತನಗೆ ಸಾಂತ್ವನ ದೊರೆಯುತ್ತದೆ ಎಂದು ಆಕೆ ಭಾವಿಸಿದ್ದಾಳೆ.

ರಾಜನ್ ಹತ್ತಾರು ಕೆಲಸಗಳಿಗೆ ಅರ್ಜಿ ಹಾಕುತ್ತಾನೆ. ಆದರೆ, ಯಾವುದೇ ಕೆಲಸ ಸಿಗುವುದಿಲ್ಲ. ಭವಿಷ್ಯದ ಬಗ್ಗೆ ಚಿಂತಿತನಾಗಿರುವ ಆತ ವಿಸ್ಕಿ ಹೊಟ್ಟೆ ಸೇರಿದ ತಕ್ಷಣ ಹುಲಿಯಾಗುತ್ತಾನೆ.

ತೆಳ್ಳಗಿನ ಗೆಳತಿಯರ ನಡುವೆ ದಪ್ಪನೆಯ ಮೀನಾ ಊದಿಕೊಂಡಂತೆ ಕಾಣುತ್ತಾಳೆ. ತನ್ನ ಬೊಜ್ಜಿನ ಕಾರಣದಿಂದಲೇ ಅನಾರೋಗ್ಯ ಅವಳಲ್ಲಿ ಮನೆ ಮಾಡಿದೆ. ದೈಹಿಕ ಸಮಸ್ಯೆಗಳನ್ನು ದೂರವಿಡಲು ಹಲವಾರು ಮಾತ್ರೆ ನುಂಗುತ್ತಾಳೆ. ಆ ಮಾತ್ರೆಗಳಿಂದಾಗಿ ಯಾವಾಗಲೂ ದಣಿವಾದಂತೆ, ತೂಕಡಿಸುವಂತೆ ಇರುತ್ತಾಳೆ.

ಪ್ರತಿ ಚಟದ ಹಿಂದೆಯೂ ಒಂದು ಕಾರಣ ಇರುತ್ತದೆ. ಅಭದ್ರತಾ ಭಾವ, ಸಿಟ್ಟು, ಭಯ, ಉದ್ವೇಗ, ಆತ್ಮಾಭಿಮಾನದ ಕೊರತೆ ಇವೆಲ್ಲ ಈ ಚಟಗಳಿಗೆ ಕಾರಣವಾಗಿರುತ್ತವೆ. ಆದರೆ, ಇವೆರಲ್ಲರ ಮನದಲ್ಲಿ ಸಂತಸ ಮಾತ್ರ ಇರುವುದಿಲ್ಲ.

ಮನಸ್ಸಿನಲ್ಲಿ ಸಂತಸ ಇಲ್ಲದಾಗ ಆ ಸಂತಸವನ್ನು ಬಾಟಲಿಯಲ್ಲಿ, ಸಿಗರೇಟ್‌ನಲ್ಲಿ, ತಿಂಡಿ, ತಿನಿಸಿನಲ್ಲಿ ಕಂಡುಕೊಳ್ಳುತ್ತಾರೆ. ಹೃದಯ, ಮನಸ್ಸು ಸಂತಸದಿಂದ ಇದ್ದಾಗ ಅದನ್ನು ಹೊರಗಿನ ವಸ್ತುವಿನಲ್ಲಿ ಹುಡುಕುವ ಅಗತ್ಯ ಇರುವುದಿಲ್ಲ.
***

ಈ ಕಥೆಯನ್ನು ಕೇಳಿ. ಬುದ್ಧಿವಂತ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಿಂತು ಹುಚ್ಚನಂತೆ ನಗುತ್ತಿದ್ದ. ಅದನ್ನು ನೋಡಿದ ದಾರಿಹೋಕ ಆತನ ನಗುವಿಗೆ ಕಾರಣ ಕೇಳಿದ. `ರಸ್ತೆ ಮಧ್ಯದಲ್ಲಿ ಇರುವ ಕಲ್ಲನ್ನು ನೋಡಿದೆಯಾ. ಅದರ ಕೆಳಗೆ ನಾನು ಚಿನ್ನದ ನಾಣ್ಯ ಇರಿಸಿದೆ. ಈ ದಾರಿಯಲ್ಲಿ ಹೋಗುವವರೆಲ್ಲ ಆ ಕಲ್ಲನ್ನು ನೋಡಿ, ಅದಕ್ಕೆ ಹಿಡಿಶಾಪ ಹಾಕುತ್ತಾ ಬಳಸಿಕೊಂಡು ಹೋಗುತ್ತಿದ್ದಾರೆಯೇ ವಿನಾ ಅದನ್ನು ಒಬ್ಬರೂ ಎತ್ತಿಡಲಿಲ್ಲ. ಹಾಗೆ ಮಾಡಿದ್ದಲ್ಲಿ ಅವರಿಗೆ ಚಿನ್ನದ ನಾಣ್ಯವೇ ಸಿಗುತ್ತಿತ್ತು' ಎಂದು ಬುದ್ಧಿವಂತ ವ್ಯಕ್ತಿ ಉತ್ತರಿಸಿದ.

ನಮ್ಮ ಜೀವನದಲ್ಲಿ ಇರುವ ಸಮಸ್ಯೆಗಳೆಂಬ ಕಲ್ಲಿಗೆ ಶಪಿಸುತ್ತ ಚಟಕ್ಕೆ ದಾಸರಾಗಿ ಸುತ್ತು ಬಳಸಿನ ದಾರಿಯಲ್ಲಿ ಹೋಗುತ್ತೇವೆ. ಸಮಸ್ಯೆ ಎಂಬ ಕಲ್ಲನ್ನು ಬದಿಗೆ ಸರಿಸಲು ಯತ್ನಿಸಿದ್ದಲ್ಲಿ ನಮಗೂ ಚಿನ್ನದ ನಾಣ್ಯವೇ ದೊರಕುತ್ತಿತ್ತು. ಪ್ರತಿ ಕ್ಷಣವೂ ಸಂತಸವನ್ನು ತುಂಬಿಕೊಳ್ಳಿ. ನಿಮ್ಮ ಯೋಚನಾ ಲಹರಿಯಲ್ಲಿ ಸಿಟ್ಟು, ನೋವು ತುಂಬಿಕೊಂಡಿದ್ದಲ್ಲಿ `ಇದು ಬೇಡ' ಎಂದು ಮನಸ್ಸಿಗೆ ದೃಢವಾಗಿ ಹೇಳಿ.

ಪ್ರತಿದಿನ ಬೆಳಿಗ್ಗೆ ಎದ್ದಾಗಲೂ ನನ್ನ ಜೀವನದ ಅತಿ ಸಂತಸ ತುಂಬಿದ ದಿನ ಇದಾಗಲಿದೆ ಎಂದುಕೊಳ್ಳಿ. ಬ್ರಷ್ ಮಾಡುವಾಗ `ಆಹಾ ಎಷ್ಟು ತಾಜಾತನ' ಎಂದು ಉದ್ಗರಿಸಿ. ಕನ್ನಡಿಯಲ್ಲಿ ನೋಡಿಕೊಳ್ಳುವಾಗ `ಚೆನ್ನಾಗಿ ಕಾಣುತ್ತೀಯಾ' ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಿ. ಬಸ್ ತಪ್ಪಿದಲ್ಲಿ `ಆಹಾ ಇಂದು ಸಾಕಷ್ಟು ಸಾಹಸಕ್ಕೆ ಅವಕಾಶವಿದೆ' ಎಂದು ಅಂದುಕೊಳ್ಳಿ. ಯಾರಾದರೂ ದೊಡ್ಡದಾಗಿ ಸಂಗೀತ ಹಾಕಿದ್ದಲ್ಲಿ ಕೋಪಗೊಳ್ಳದೇ `ನೈಸ್ ಬೀಟ್' ಎಂದು ಮೆಚ್ಚುಗೆ ವ್ಯಕ್ತಪಡಿಸಿ. ಅಸಹನೀಯ ಸನ್ನಿವೇಶಗಳು ಎದುರಾದಾಗ `ಇದರಿಂದ ಬೇಗನೇ ಹೊರಬರುತ್ತೇನೆ. ನಾನು ಸುರಕ್ಷಿತವಾಗಿದ್ದೇನೆ' ಎಂದು ಭಾವಿಸಿಕೊಳ್ಳಿ.

ಸಂತಸದಲ್ಲಿ ಮುಳುಗೇಳುತ್ತಿರುವಾಗಲೂ `ಇದೇನು ಎಲ್ಲವೂ ಒಳ್ಳೆಯದಾಗುತ್ತಿದೆಯಲ್ಲ' ಎಂಬ ಅಚ್ಚರಿಯ ಉದ್ಗಾರ ತೆಗೆಯಬೇಡಿ. ನಾನು ಇದಕ್ಕೆ ಅರ್ಹನಾಗಿದ್ದೇನೆ ಎಂದೇ ಮನಸ್ಸಿಗೆ ಹೇಳಿಕೊಳ್ಳಿ.

ನಮ್ಮ ಮನಸ್ಸಿನ ಮೂಲಸ್ಥಿತಿಯಾದ ಸಂತಸವನ್ನು ನೀವು ಹುಡುಕಿಕೊಳ್ಳಬೇಕು. ಮನಸ್ಸಿನಲ್ಲಿ ಸಂತಸದ ಭಾವನೆ ತುಂಬಿಕೊಳ್ಳುವುದರಿಂದ ಸಂತಸಕರ ಸನ್ನಿವೇಶಗಳು, ಸಾಧ್ಯತೆಗಳು ಸೃಷ್ಟಿಯಾಗುತ್ತವೆ.

ಬಾಲ್ಯದ ಗೆಳೆಯ/ ಗೆಳತಿಯೊಂದಿಗೆ ನಗುತ್ತಿರುವ ಹಳೆಯ ಛಾಯಾಚಿತ್ರಗಳನ್ನು ಆಲ್ಬಂನಿಂದ ತೆಗೆದು ನೋಡಿ. ಇದರಿಂದ ನಿಮ್ಮಲ್ಲಿ ಭದ್ರತಾ ಭಾವ ಮೊಳೆಯುತ್ತದೆ. ಮಕ್ಕಳ ನಾಟಕ ನೋಡಿ. ಅಹಂಕಾರದಿಂದ ಹೊರತಾದ ಅವರ ಅಭಿವ್ಯಕ್ತಿ ನಿಮ್ಮಲ್ಲೂ ಆತ್ಮವಿಶ್ವಾಸ ಮೂಡಿಸುತ್ತದೆ. ಸಿಹಿಯಾದ ಹಣ್ಣನ್ನು ದಿನವೂ ನಿಧಾನವಾಗಿ ತಿನ್ನಿ.

ಇದು ಮೆದುಳಿಗೆ ಫ್ರುಕ್ಟೋಸ್ ಒದಗಿಸಿ ಶಕ್ತಿ ತುಂಬುತ್ತದೆ. ಕಾಮಿಡಿ ನೋಡಿ ಮನಬಿಚ್ಚಿ ನಗಿ. ನಗು ನಿಮ್ಮ ಉಸಿರನ್ನು ಸರಾಗವಾಗಿಸುತ್ತದೆ. ದಿನವೂ ಇಷ್ಟದ ಎರಡು ಹಾಡುಗಳನ್ನು ದೊಡ್ಡದಾಗಿ ಹಾಡಿಕೊಳ್ಳಿ. ಇದು ನಿಮ್ಮ ಥೈರಾಯಿಡ್ ಗ್ರಂಥಿಗಳನ್ನು ಚುರುಕಾಗಿಸಿ ದುಃಖವನ್ನು ದೂರ ಮಾಡುತ್ತದೆ.

ನಿಮ್ಮ ಜೀವನದಲ್ಲಿರುವ ಶ್ರೇಷ್ಠ ವ್ಯಕ್ತಿಗಳನ್ನೆಲ್ಲ ನೆನಪಿಸಿಕೊಳ್ಳಿ. ನಿಮ್ಮ ತಲೆನೋವನ್ನು ಅದು ದೂರವಾಗಿಸುತ್ತದೆ. ಹೊಸದನ್ನು ಕಲಿಯಿರಿ. ಇದು ಬದುಕಿಗೆ ತಾಜಾತನ ತಂದುಕೊಡುತ್ತದೆ. ಖಲೀಲ್ ಗಿಬ್ರಾನ್ ತರಹದ ಕವಿಗಳು ಬರೆದ ಕವಿತೆಗಳನ್ನು ಓದಿ. ಸೂರ್ಯಾಸ್ತ, ಸೂರ್ಯೋದಯಗಳನ್ನು ನೋಡಿ.
ಸೌಂದರ್ಯವನ್ನು ಆಸ್ವಾದಿಸುವುದು ಅಂದರೆ ದೈವಿಕತೆಯನ್ನು ಅಪ್ಪಿಕೊಳ್ಳುವುದು.

ಪ್ರತಿನಿತ್ಯ ಇಡೀ ದೇಹಕ್ಕೆ ಚಟುವಟಿಕೆ ಸಿಗುವಂತೆ ಸಂಪೂರ್ಣ ವ್ಯಾಯಾಮ ಮಾಡಿ. ವ್ಯಾಯಾಮ ಮುಗಿದಾಗ ನಿಮ್ಮಲ್ಲಿ ಸಂತಸ ಉಕ್ಕುತ್ತದೆ.

ಆಕಾಶದೆಡೆ ನೋಡುತ್ತಾ `ಈ ಕ್ಷಣ ಬದುಕಿ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ/ಳೆ, ಖುಷಿಯಿಂದ ಇದ್ದೇನೆ' ಎಂದು ಹೇಳಿಕೊಳ್ಳಿ. ಆಕಾಶದ ನೀಲಿ ಬಣ್ಣ ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಅದು ಸೃಜನಶೀಲತೆಯನ್ನು ಹುಟ್ಟುಹಾಕುತ್ತದೆ. ಆಕಾಶ ಅಂದರೆ ಅಗಾಧವಾದದ್ದು ಮತ್ತು ಶಾಂತಿಯಿಂದ ಕೂಡಿದ್ದು ಎಂಬ ಪರಿಕಲ್ಪನೆ ನಮ್ಮ ಮೆದುಳಲ್ಲಿ ಇದೆ. ಇದರಿಂದಾಗಿ ನಮ್ಮ ಮೆದುಳು ಆಲ್ಫಾ ಅಲೆಗಳನ್ನು ಹುಟ್ಟುಹಾಕುತ್ತದೆ. ಇದರಿಂದಾಗಿ ಹೊಸ ಒಳನೋಟ, ಸಾಧ್ಯತೆಗಳೆಲ್ಲ ನಮಗೆ ಗೋಚರವಾಗುತ್ತವೆ.

ಮೇಲೆ ಹೇಳಿದ ಎಲ್ಲವನ್ನೂ ತಪ್ಪದೇ ಮಾಡಿ. ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸಲು ಸಂತಸ ತರುವ ಚಟುವಟಿಕೆಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಚಟ ಅಂದರೆ ನಕಾರಾತ್ಮಕ ಭಾವನೆಗಳ ಓವರ್‌ಡೋಸ್ ಇದ್ದಂತೆ. ಬದುಕಿನಲ್ಲಿ ಖುಷಿ, ಸಂತಸ, ಸಂಭ್ರಮ ಇದ್ದಾಗ ನೀವು ಚಟವನ್ನು ತಾವಾಗಿಯೇ ನಿಲ್ಲಿಸುತ್ತೀರಿ. ಅದು ದೈತ್ಯ ಹೆಜ್ಜೆ.

ಅಭ್ಯಾಸವೊಂದು ಚಟ ಆಗಬೇಕಾದರೆ ಹಲವು ಸಲ ಅದನ್ನೇ ಮಾಡಬೇಕಾಗುತ್ತದೆ. ಆದರೆ, ಇದು ಬೇಡ ಎಂದು ದೃಢವಾಗಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ನೀವು ಎಲ್ಲದಕ್ಕೂ ಟಾಟಾ ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.