ADVERTISEMENT

ತಂಬಾಕು ಬಳಕೆ ನಿಲ್ಲಿಸಿ...

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST
ತಂಬಾಕು ಬಳಕೆ ನಿಲ್ಲಿಸಿ...
ತಂಬಾಕು ಬಳಕೆ ನಿಲ್ಲಿಸಿ...   

ಡೆಯಬಹುದಾದಂತಹ ಕ್ಯಾನ್ಸರ್‌ಗಳಿಗೆ ಧೂಮಪಾನ ಪ್ರಮುಖ ಕಾರಣ. ಯಾವುದೇ ರೀತಿಯಲ್ಲಿ ತಂಬಾಕಿನ ಸೇವನೆ ದೇಹದ ಯಾವುದೇ ಅಂಗದಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲದು. ಇವುಗಳಲ್ಲಿ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಬ್ಲಾಡರ್ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್ ಮುಂತಾದವು ಸೇರಿವೆ. ತಂಬಾಕು ಧೂಮಪಾನ ಹಲವಾರು ಹೃದಯ, ಶ್ವಾಸಕೋಶ ಮತ್ತು ಮೆದುಳಿನ ರೋಗಗಳಿಗೂ ಕಾರಣವಾಗಿದೆ.

ತಂಬಾಕಿನ ಧೂಮದಲ್ಲಿ ನಿಕೊಟಿನ್ ಹಾಗೂ ನೂರಾರು ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳಿವೆ. ನಿಕೊಟಿನ್ ತಂಬಾಕನ್ನು ಚಟವಾಗಿಸುತ್ತದೆ. ಅದು ಸ್ವತಃ ಕ್ಯಾನ್ಸರ್ ಉಂಟು ಮಾಡುವುದಿಲ್ಲ.

ಧೂಮಪಾನದ ಹೊಗೆಯನ್ನು ಸೇವಿಸುವ ಧೂಮಪಾನ ಮಾಡದವರಿಗೂ ಕೂಡ ಹೃದಯ ರಕ್ತನಾಳಗಳು ಮತ್ತು ಶ್ವಾಸಕೋಶದ ರೋಗಗಳ ಜೊತೆಗೆ ಕ್ಯಾನ್ಸರ್‌ನ ಅಪಾಯ ಇರುತ್ತದೆ.
ಕಟ್ಟುನಿಟ್ಟಿನ ಕಾನೂನುಕ್ರಮ ಅನುಷ್ಠಾನದೊಂದಿಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ.
 
ಇದರೊಂದಿಗೆ ತಂಬಾಕು ಕಂಪನಿಗಳು ಅಭಿವೃದ್ಧಿಶೀಲ ದೇಶಗಳಿಗೆ ಕಾರ್ಯಾಚರಣೆಯನ್ನು ವರ್ಗಾಯಿಸಿವೆ. ಈಗ ಎಲ್ಲಾ ತಂಬಾಕು ಸೇವನೆ ಮಾಡುವವರಲ್ಲಿ ಶೇ 84ರಷ್ಟು ಜನರು ಅಭಿವೃದ್ಧಿಶೀಲ ದೇಶಗಳಲ್ಲಿದ್ದು ಇದರಿಂದ ಈ ದೇಶಗಳಲ್ಲಿ ಕ್ಯಾನ್ಸರ್ ಮತ್ತು ಸಾವಿನ ಸಂಖ್ಯೆ ಅಪಾರವಾಗಿ ಹೆಚ್ಚುತ್ತಿದೆ.

ಭಾರತದಲ್ಲಿ ಅಂದಾಜಿನ ಪ್ರಕಾರ ಸುಮಾರು 12ಕೋಟಿ ತಂಬಾಕು ಬಳಕೆದಾರರು (ಧೂಮಪಾನ, ತಂಬಾಕು ಅಗಿಯುವುದು, ನಶ್ಯಯೇರಿಸುವುದು) ಇದ್ದು ಕ್ಯಾನ್ಸರ್ ಸೇರಿದಂತೆ ತಂಬಾಕು ಸಂಬಂಧಿತ ರೋಗಗಳಿಂದಾಗಿ ಒಂದು ಕೋಟಿ  ಜನರು ಮೃತಪಡುತ್ತಾರೆ. ಆತಂಕದ ವಿಷಯವೆಂದರೆ ಈ ಸಾವುಗಳು 30 ವರ್ಷದಿಂದ 60 ವರ್ಷದವರಲ್ಲಿ ಕಂಡು ಬರುತ್ತವೆ. ಇವು ಜೀವನದ ಅತ್ಯಂತ ಉತ್ಪಾದಕತೆಯುಳ್ಳ ವರ್ಷಗಳಾಗಿದ್ದು ಇದರಿಂದ ಅಪಾರವಾದ ಸಾಮಾಜಿಕ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ.

ತಂಬಾಕಿನ ಬಳಕೆ ಈಗ ಬದಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಮಹಿಳೆಯರು ಧೂಮಪಾನ ಮಾಡುತ್ತಿರುವುದು ಕ್ಯಾನ್ಸರ್ ಪ್ರಕರಣಗಳ ಬದಲಾವಣೆಯನ್ನು ನೋಡಿದಾಗ ಕಂಡುಬಂದಿದೆ. ಯುವಜನರಲ್ಲಿ ಮತ್ತು ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ತಂಬಾಕು ಜಗಿಯುವುದರಿಂದ ಬಾಯಿ ಗಂಟಲು ಮತ್ತು ಅನ್ನನಾಳದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತವೆ.

ತಂಬಾಕು ಜಾಹೀರಾತುಗಳನ್ನು ನಿಷೇಧಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದು, ತಂಬಾಕು ಉತ್ಪನ್ನಗಳಿಗೆ ಸಂಪರ್ಕವನ್ನು ನಿರ್ಬಂಧಿಸುವುದು ಮುಂತಾದವುಗಳು ಸಹಾಯಕವಾಗಬಹುದಾದರೂ ಅಂತಿಮವಾಗಿ ತಂಬಾಕು ಬಳಕೆ ಕಡಿಮೆ ಮಾಡುವಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮುಖ್ಯವಾಗಿರುತ್ತವೆ.

ಇದರಿಂದ ಕ್ಯಾನ್ಸರ್ ಪ್ರಕರಣಗಳು ಕಡಿಮೆಯಾಗುತ್ತವೆ. ದೀರ್ಘಕಾಲದ ಧೂಮಪಾನ ಮಾಡುತ್ತಿರುವವರಲ್ಲಿ ಸಿಗರೇಟ್ ಬಿಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದರಿಂದ ಧೂಮಪಾನ ಮುಂದುವರಿಸುವವರಿಗಿಂತಲೂ ಕ್ಯಾನ್ಸರ್‌ನ ಅಥವ ಹೃದಯರೋಗಗಳ ಅಪಾಯ ಉಂಟಾಗುವುದು ಕಡಿಮೆಯಾಗುತ್ತದೆ.

ಕ್ಯಾನ್ಸರ್ ಉಂಟಾಗಿರುವ ಧೂಮಪಾನಿಗಳಿಗೂ ಧೂಮಪಾನ ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಧೂಮಪಾನ ಮುಂದುವರಿಸಿದರೆ ಚಿಕಿತ್ಸೆಯ ಪರಿಣಾಮ ಕಡಿಮೆಯಾಗುತ್ತದೆ. ಜೊತೆಗೆ ಅಡ್ಡ ಪರಿಣಾಮಗಳು ಹೆಚ್ಚಾಗಿ 2ನೇ ಹಂತದ ಕ್ಯಾನ್ಸರ್‌ಗಳ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ.

ಕ್ಯಾನ್ಸರ್‌ನ ಉನ್ನತ ಹಂತದಲ್ಲಿ ತೀವ್ರತರಹದ ರೋಗಿಷ್ಠರಾಗುವುದು ಮತ್ತು ಸಾವು ಹೆಚ್ಚಾಗಿ ಕಂಡುಬಂದಿದೆ. ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಕ್ಯಾನ್ಸರ್‌ಅನ್ನು ತಡೆಯಲು ಅದನ್ನು ಶೀಘ್ರ ಪತ್ತೆ ಮಾಡುವುದು ಏಕೈಕ ಮುನ್ನಡೆಯ ಮಾರ್ಗವಾಗಿದೆ.

ಆರೋಗ್ಯಕರ ಜೀವನಶೈಲಿ
*ತಂಬಾಕು ಮತ್ತು ಮದ್ಯಸೇವನೆ ತಪ್ಪಿಸಿ.

* ಹೆಚ್ಚಾಗಿ ತಾಜಾ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಸಸ್ಯಾಹಾರಿ ಆಹಾರಕ್ರಮ ಅಳವಡಿಸಿಕೊಳ್ಳಿ.

*ನಿಗದಿತ ವ್ಯಾಯಾಮ ಮತ್ತು ಸೂಕ್ತಮಟ್ಟದ ದೇಹ ತೂಕ ಉಳಿಸಿಕೊಳ್ಳುವುದು.
ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಮತ್ತು ಇತರೆ ಆರೋಗ್ಯ ತೊಂದರೆಗಳ ನಿರ್ವಹಣೆಯಲ್ಲಿ ಅದನ್ನು ತಡೆಯುವುದೇ ಅತ್ಯಂತ ಕಡಿಮೆ ವೆಚ್ಚದ ನಿರ್ವಹಣೆಯಾಗಿದೆ. ಇಂದೇ ಧೂಮಪಾನ ಬಿಟ್ಟು ಬಿಡಿ ಮತ್ತು ಯಾವುದೇ ರೀತಿಯ ತಂಬಾಕು ಸೇವನೆ ನಿಲ್ಲಿಸಿಬಿಡಿ.
(ಮುಖ್ಯ ವಿಕಿರಣ ಕ್ಯಾನ್ಸರ್ ತಜ್ಞರು, ಸಂಪರ್ಕ ಸಂಖ್ಯೆ 
94834 00000)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.