ADVERTISEMENT

ತೂಕ ಇಳಿಕೆ ಶಸ್ತ್ರಚಿಕಿತ್ಸೆ ಮೂಳೆ ಮುರಿದೀತು ಜೋಕೆ...!

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ಬದಲಾದ ಜೀವನ ಶೈಲಿ, ಶ್ರಮವಿಲ್ಲದ ಕೆಲಸ - ಇವೇ ಮುಂತಾದ ಕಾರಣಗಳಿಂದ ಇಂದು ಸ್ಥೂಲದೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ತೂಕ ಇಳಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡಿ ಕೊನೆಗೆ ಶಸ್ತ್ರಕ್ರಿಯೆ ಮೊರೆಹೋಗುವವರಿಗೇನೂ ಕಡಿಮೆ ಇಲ್ಲ. ಆದರೆ ತೂಕ ಇಳಿಕೆ ಶಸ್ತ್ರಕ್ರಿಯೆ ಬಳಿಕ ಮೂಳೆ ಮುರಿಯುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.

 ತೂಕ ಇಳಿಕೆಗೆ ಮಾಡಿಸಿಕೊಳ್ಳುವ ಗ್ಯಾಸ್ಟ್ರಿಕ್ ಬೈಪಾಸ್‌ನಂಥ ಶಸ್ತ್ರಚಿಕಿತ್ಸೆಯಿಂದ ಮೂಳೆ ಮುರಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಈ ಹಿಂದಿನ ಸಂಶೋಧನೆಗಳೂ  ಹೇಳಿದ್ದವು. `ತೂಕ ಇಳಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಲ್ಲಿ ಮೂಳೆ ಮುರಿಯವ ಸಾಧ್ಯತೆ ಶೇ 1.8 ರಷ್ಟು ಅಧಿಕಾವಾಗಿರುತ್ತದೆ~ ಎಂದು ಅಧ್ಯಯನವೊಂದು ಹೇಳಿತ್ತು.

ಆದರೆ ಇತ್ತೀಚಿನ ಸಂಶೋಧನೆಯೊಂದು ಈ ಸಾಧ್ಯತೆಯನ್ನು  ಶೇ 2.3 ರಷ್ಟು ಅಧಿಕ ಎಂದು ವ್ಯಾಖ್ಯಾನಿಸಿದೆ.ಪಾದ ಹಾಗೂ ಕೈ ಮೂಳೆ ಮುರಿಯುವ ಸಾಧ್ಯತೆಯು ಸುಮಾರು ಮೂರುಪಟ್ಟು ಅತ್ಯಧಿಕ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

 ಬೆರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡ 258 ಮಂದಿಯನ್ನು ಪರೀಕ್ಷಿಸಿದಾಗ ಇವರಲ್ಲಿ 79 ಮಂದಿ, 9 ವರ್ಷಗಳಲ್ಲಿ ಅನೇಕ ಬಾರಿ ಮೂಳೆ ಮುರಿದುಕೊಂಡ ನಿದರ್ಶನಗಳು ಕಂಡುಬಂದವು. ಮೊದಲ ಬಾರಿ ಮೂಳೆ ಮುರಿದುಕೊಂಡಿದ್ದು ಚಿಕಿತ್ಸೆಯಾದ ಆರು ವರ್ಷಗಳ ಬಳಿಕ.

ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ ಬಳಿಕ ಉಂಟಾಗುವ ಮೂಳೆ ಮುರಿತಕ್ಕೂ, ಒಸ್ಟಿಯೊಪೊರೊಸಿಸ್‌ಗೂ (ಮೂಳೆಸವೆತ) ಯಾವುದೇ ಸಂಬಂಧ ಇಲ್ಲ ಎನ್ನುವುದು ತಜ್ಞರ ಅಭಿಮತ.

ಈ ಸಮಸ್ಯೆಗೆ  ಇಂಥದ್ದೇ ನಿಖರ ಕಾರಣ  ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಈ ದಿಸೆಯಲ್ಲಿ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ ಎಂದು  ನ್ಯೂಯಾರ್ಕ್‌ನ ರೊಚೆಸ್ಟರ್‌ನ  ಮೆಯೋ ಕ್ಲಿನಿಕ್ ಕಾಲೇಜಿನ ಕೆಲ್ಲಿ ನಕ್ರಮುರಾ ಹೇಳುತ್ತಾರೆ.

(ನ್ಯೂಯಾರ್ಕ್ ಟೈಮ್ಸ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT