ADVERTISEMENT

ಧೂಮಪಾನ ಎಂದರೆ ದೇಹತ್ಯಾಗ!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಆಧುನಿಕ ಯುಗದಲ್ಲಿ ಒತ್ತಡ, ಆತಂಕ, ಟೆನ್ಶನ್ ಎಂದು ಒದ್ದಾಡುತ್ತಾ ಇರುವ ಜನರು, ಇಂಥಹ ಮಾನಸಿಕ ಗೊಂದಲಗಳನ್ನು ಹತ್ತಿಕ್ಕುತ್ತಿರುವುದಾದರೂ ಹೇಗೆ ? ಇದು ಯಾಕೆ ? ಏನು? ಎಂಬುದರ ಬಗ್ಗೆ ಚಿಂತನೆ ಮಾಡದೆ, ಇವೆಲ್ಲದರ ನಿರ್ವಹಣೆಗೆ ಎನ್ನುವಂತೆಯೋ ಅಥವಾ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿದರೆ ಅದು ನಾಗರೀಕತೆಯ ಸಂಕೇತವೋ ಎಂಬಂತೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದಕರ!

ತಂಬಾಕು ಸೇವನೆ ಎಗ್ಗಿಲ್ಲದಂತೆ ಮುಂದುವರೆದಿದೆ ! ಗುಟ್ಕಾ ಸಂಸ್ಕೃತಿ ಹದಿಹರೆಯದಲ್ಲೇ ಶುರುವಾಗಿದೆ. ಹೆಣ್ಣುಮಕ್ಕಳೂ ಸಹ ಬಾಯಲ್ಲಿ ಸಿಗರೇಟ್ ಹೊಗೆ ಬಿಡುತ್ತಾ ಪಬ್‌ಗಳತ್ತ ನಡೆದಿರುವುದು ನೋಡುತ್ತಿದ್ದೇವೆ.

ಬೆಂಗಳೂರಿನಲ್ಲಿ ಗ್ರಾಮೀಣ ಪ್ರದೇಶದ ಯುವಕರ ಚಿಕ್ಕಗುಂಪೊಂದು ಆಡುತ್ತಿದ್ದ ಮಾತು ಕಿವಿಗೆ ಬಿತ್ತು. `ನೋಡೋ, ಆಕಿ ಎಷ್ಟು ಸಿಗರೇಟ್ ಸೇದುತ್ತಿದ್ದಾಳೆ~ ಎಂದು ಒಬ್ಬ ಮಹಿಳೆಯ ಕಡೆ ಕೈ ಮಾಡಿ ತೋರಿಸುತ್ತಿದ್ದರು.

ಇದು ನಡೆದದ್ದು ಮಾನಸಿಕ ನೆಮ್ಮದಿದಾಗಿ, ಆರೋಗ್ಯಕ್ಕಾಗಿ,  ಧ್ಯಾನದ ಮಾರ್ಗವನ್ನು ಹರಡುತ್ತಿರುವ ಕ್ಷೇತ್ರ ಒಂದರಲ್ಲಿ ! ಎಂಥಹ ವಿಪರ್ಯಾಸವಾದರೂ ಸಹ ಧ್ಯಾನವು ಆಕೆಯ ಮನಃಶಾಂತಿಗೆ ಮಾರ್ಗ ಎಂಬುದು ಆಕೆಯ ಅರಿವಿಗೆ ಬರುವುದರಲ್ಲಿ ಸಂಶಯವೇ ಇಲ್ಲ!

ಅಮೆರಿಕಾದಲ್ಲಿ ಪ್ರತಿ ದಿನ ಒಂದು ಸಾವಿರ ಜನರು, ಸಿಗರೇಟ್ ಸೇವನೆಗೆ ವಿದಾಯ ಹೇಳುತ್ತಾರಂತೆ! ಅದು ಹೇಗೆ ಎಂದು ಆಶ್ಚರ್ಯವೇ? ಇವರೆಲ್ಲ ಸಿಗರೇಟ್ ಸೇವನೆಯ ದುಷ್ಟರಿಣಾಮದಿಂದ ದೇಹತ್ಯಾಗ ಮಾಡುತ್ತಿರುವವರು! ಸಿಗರೇಟ್ ತ್ಯಾಗ ಅಲ್ಲ!

ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನೂ ಸಿಗರೇಟ್ ಸೇವಿಸುತ್ತಾನೆಂದರೆ ನಂಬುವಿರಾ? ಬರೀ ಸಿಗರೇಟ್, ಬೀಡಿ ಹಚ್ಚಿ ಅದನ್ನು ಬಾಯಲ್ಲಿಟ್ಟು ಸೇದಿದರಷ್ಟೇ ಧೂಮಪಾನಿಗಳೇ? ಇಲ್ಲ!
ಅದಕ್ಕಿಂತ ಹೆಚ್ಚು ದುಷ್ಪರಿಣಾಮ ಅವರೊಡನಿರುವ ಎಲ್ಲ ಮನುಷ್ಯರು, ಅವರು ಉಗುಳುವ ಹೊಗೆಯನ್ನು ಸೇವಿಸುವ ಜನರೂ ಸಹ!

ಫಿಲ್ಟರ್ ಮೂಲಕ ಅವರು ಸಿಗರೇಟ್ ಸೇದಿದರೆ, ಅದಿಲ್ಲದೆಯೇ ನೇರವಾಗಿ ಅವರು ಉಗುಳಿದ ಹೊಗೆಯನ್ನು ಸೇವಿಸುವ ನಾವೆಲ್ಲರೂ, `ಪ್ಯಾಸೀವ್ ಸ್ಮೋಕರ್ಸ್‌~! ತೆಪ್ಪಗೆ ಆ ಹೊಗೆಯನ್ನು ಸೇರಿಸುವ ಜಡ ಧೂಮಪಾನಿಗಳು!

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಯಲ್ಲಿದೆಯೇ? ಸಿಗರೇಟ್ ಅನ್ನು ಕೊಂಡ ವ್ಯಕ್ತಿ ರಾಜಾರೋಷವಾಗಿ ಅದೇ ಅಂಗಡಿಯಲ್ಲಿ ಅದಕ್ಕೆ ಬೆಂಕಿ ಹಚ್ಚಿ, ಎಲ್ಲರ ಮೇಲೂ ಧೂಮಪಾನ ಹೊಗೆಯನ್ನು ಹರಡಿ ಹೋಗುತ್ತಾನೆ! ತಮ್ಮ ದೇಹವನ್ನು ಮಸಿಯಲ್ಲಿ ಮುಳುಗಿಸುವ ಜೊತೆಗೆ ಎಲ್ಲರ ಆರೋಗ್ಯವನ್ನು ಹಾಳು ಮಾಡುವ ಭೂಪರಿವರು!

ಧೂಮಪಾನದಿಂದಾಗುವ ತೊಂದರೆಗಳಿಗೆ ಲೆಕ್ಕವೇ ಇಲ್ಲ ! ಧೂಮಪಾನದಿಂದ ಶ್ವಾಸಕೋಶಗಳಿಗಷ್ಟೇ ರೋಗ ತಗಲುವುದಿಲ್ಲ! ತಲೆಯಿಂದ ಕಾಲಿನವರೆಗೂ ಎಲ್ಲ ಅಂಗಾಂಗಗಳೂ ರೋಗಗ್ರಸ್ಥವಾಗುವುದೆಂಬುದನ್ನು ಅರಿಯಬೇಕು.

ದುಷ್ಪರಿಣಾಮಗಳತ್ತ ಒಂದು ನೋಟ:
ನಿರ್ಜೀವವಾಗಿ, ಹೊಳಪಿಲ್ಲದ ತಲೆ ಕೂದಲು ಸಿಗರೇಟ್ ವಾಸನೆಯುಕ್ತವಾಗಿ ಮಾಸಿದಂತೆ ಅಥವಾ ಬಣ್ಣ ಬದಲಾಯಿಸಿದಂತಾಗಿ, ಕೂದಲಿನ ಬೆಳವಣಿಗೆ ಕುಂಠಿತವಾಗುವುದರ ಜೊತೆಗೆ ಬೇಗ ಬೆಳ್ಳಗಾಗುತ್ತದೆ. ಮಿದುಳಿನ ಮೇಲೆ ತಂಬಾಕಿನ ಪರಿಣಾಮ ಘೋರವಾದದ್ದು.

ಕ್ಯಾರೋಟಿಡ್ ಆರ್ಟರಿಯಲ್ಲಿ ಕೊಬ್ಬು ಶೇಖರಣೆ, ರಕ್ತವು ಮಂದವಾಗುವುದು.ಇದರಿಂದಾಗಿ ಮಿದುಳಿಗೆ ರಕ್ತ ಸಂಚಾರ ಕುಂಠಿತ, ಸ್ಥಗಿತವಾದಾಗ  ಪಾರ್ಶ್ವವಾಯು. ಧೂಮಪಾನಿಗಳು ಪಾರ್ಶ್ವವಾಯು ಪೀಡಿತರಾಗುವುದು, ಆರೋಗ್ಯವಂತರಿಗಿಂತ ಒಂದೂವರೆ ಪಟ್ಟು ಹೆಚ್ಚು! ಕಣ್ಣುಗಳಲ್ಲಿ ಅನೇಕ ವಿಧದ ತೊಂದರೆ ಗ್ಲಕೋಮ, ಪೊರೆ, ಹಾಗೂ ದೃಷ್ಟಿಹೀನತೆ.

ವಾಸನೆಯನ್ನು ಗ್ರಹಿಸಲಾಗದಿರುವುದು, ಹಲ್ಲುಗಳು ಹಳದಿಯಾಗಿ, ಕೊಳೆಕಟ್ಟಿದಂತೆ ಕಾಣುವುದು, ವಸಡುಗಳಿಂದ ರಕ್ತಸ್ರಾವವಾಗುವಿಕೆ, ವಸಡುಗಳಲ್ಲಿ ಸೋಂಕು, ತುಟಿ, ಬಾಯಿ, ನಾಲಿಗೆ, ಗಂಟಲು, ಅನ್ನನಾಳ, ಶ್ವಾಸಕೋಶ, ಉದರ, ಗರ್ಭಕೋಶದ ಕೊರಳು, ಮೂತ್ರಪಿಂಡ, ಮೂತ್ರ ಚೀಲ ಹೀಗೆ ಹಲವಾರು ಅಂಗಗಳ ಕ್ಯಾನ್ಸರ್‌ಗೆ ಧೂಮಪಾನ ಕಾರಣವಾಗಿದೆ.

ರಕ್ತನಾಳಗಳಲ್ಲಿ ಉಂಟಾಗುವ ಕೊಬ್ಬು ಶೇಖರಣೆ, ನಂತರದಲ್ಲಿ ಅದರ ಮೇಲೆ  ರಕ್ತ ಹೆಪ್ಪುಗಟ್ಟುವಿಕೆಯಿಂದ ಕೈಕಾಲುಗಳು ಗ್ಯಾಂಗ್ರೀನ್‌ಗೆ ತುತ್ತಾಗುವವು. ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಸಾಧ್ಯತೆಗಳಿಗೂ ಕಾರಣವಾಗುವುದು. ಬಾಯಿಯ ರುಚಿ ತಗ್ಗುವಿಕೆ, ಗಂಟಲು ಬೇನೆ , ಜೊತೆಗೆ ಹೊರ ಹೊಮ್ಮುವ ದುರ್ಗಂಧ ಉಸಿರು, ಇತರೇ ಸಾಮಾನ್ಯ ತೊಂದರೆಗಳು.

ಧೂಮಪಾನದಲ್ಲಿರುವ ಹಾನಿಕಾರಕ ವಸ್ತುಗಳು ನೇರವಾಗಿ ಶ್ವಾಸಕೋಶಗಳನ್ನು ಪ್ರವೇಶಿಸುವುದರಿಂದ ಅಲ್ಲಿ ದುಷ್ಪರಿಣಾಮಗಳು ನೂರಾರು ! ಗರ್ಭಿಣಿ ಸ್ತ್ರೀಯರು ಹಾಗೂ ಗರ್ಭದಲ್ಲಿರುವ ಶಿಶುವಿನ ಮೇಲೂ ಸಿಗರೇಟಿನ ದುಷ್ಪರಿಣಾಮಗಳಾಗುವವು.

ಉಸಿರಿನ ತೊಂದರೆ, ಆಸ್ತಮ, ಕೆಮ್ಮು, ಕಫ, ದಮ್ಮು, ತೀವ್ರ ಬ್ರಾಂಕೈಟಿಸ್, ಎಂಫಸೀಮ ಎಂಬಂತೆ   ನೂರಾರುರೋಗಗಳು.ಶ್ವಾಸಕೋಶಗಳಾದರೆ ಕಪ್ಪಗೆ ಮಸಿಯಿಂದ ತುಂಬಿರುವವು. ಜಠರದ ಸಮಸ್ಯೆಗಳೆಂದರೆ, ಉರಿ, ಅಲ್ಸರ್, ಹಾಗೂ ಕ್ಯಾನ್ಸರ್! ಪಿತ್ತಕೋಶದಲ್ಲಿ ಕಲ್ಲುಗಳು, ಕರುಳಿನ ತೊಂದರೆಗಳು.

ಚರ್ಮ ಸುಕ್ಕುಗಟ್ಟುವಿಕೆ, ಬೇಗ ವಯಸ್ಸಾದಂತೆ ಕಾಣುವುದು, ಕಾಲುಗಳಲ್ಲಿ ನೋವು, ನಡೆಯಲಾಗದಿರುವಿಕೆ, ಲೈಂಗಿಕ ದೌರ್ಬಲ್ಯ, ರಕ್ತದಲ್ಲಿನ ಕೊಬ್ಬಿನಂಶ ಹೆಚ್ಚುವಿಕೆ ಮುಂತಾದವೂ ಸಹ ತಂಬಾಕಿನಿಂದುಂಟಾಗುವ ದುಷ್ಪರಿಣಾಮಗಳು. ಜೊತೆಗೇ ಜೇಬಿನಲ್ಲಿರುವ, ಗಳಿಸಿರುವ ಹಣವೆಲ್ಲವೂ ಪೋಲಾಗುವುದು, ಹಣ ಕೊಟ್ಟುಕೊಂಡುಕೊಳ್ಳುವ ದೈಹಿಕ ಕಾಯಿಲೆಗಳಿವು!

ಸಿಗರೇಟಿನ ಚಟಕ್ಕೆ ಬೀಳಲು , ಸಹವಾಸದೋಷ, ಸ್ನೇಹಿತರ ಒತ್ತಡ, ಬಲವಂತ, ಕುತೂಹಲ, ಪ್ರತಿಷ್ಠೆ, ದೊಡ್ಡಸ್ತಿಕೆ ಪ್ರದರ್ಶನ, ಒತ್ತಡ ನಿರ್ವಹಣೆ ಎಂಬಂತಹ ಕಾರಣಗಳಿರಬಹುದು. ಸತ್ಯ ಸಂಗತಿಯೆಂದರೆ ಸಿಗರೇಟ್ ಸೇವನೆಯಿಂದ ಇನ್ನಷ್ಟು ಒತ್ತಡ ಹೆಚ್ಚಾಗುವುದೇ ವಿನಹ ಅದರಿಂದ ಒತ್ತಡ, ಆತಂಕ ನಿರ್ವಹಣೆಯಾಗುವುದಿಲ್ಲ!

ಸಿಗರೇಟ್ ಸೇದಿದ ತಕ್ಷಣ, ಎದೆ ಬಡಿತ ಹೆಚ್ಚುವುದು, ಬಿ.ಪಿ. (ರಕ್ತದೊತ್ತಡ) ಹೆಚ್ಚಾಗುವುದು. ನರ ಹಾಗೂ ಮಿದುಳು ಉತ್ತೇಜನಗೊಳ್ಳುವವು.

ಹಸಿವು ಕಡಿಮೆಯಾಗುವುದು. (ಧೂಮಪಾನ ತ್ಯಜಿಸಿದ ನಂತರ ಅನೇಕರ ತೂಕ ಹೆಚ್ಚುವುದು. ಇದಕ್ಕೆ ಕಾರಣ, ಧೂಮಪಾನಿಗಳಲ್ಲಿ ಹಸಿವು ಹೆಚ್ಚುವುದು ಹಾಗೂ ಸಾಕಷ್ಟು ಆಹಾರ ಸೇವಿಸಲು ಸಾಧ್ಯವಾಗುವುದು).

ಧೂಮಪಾನದಿಂದ ರೋಗ ನಿರೋಧಕ ಶಕ್ತಿ ಕುಸಿತ, ಕ್ಷಯರೋಗಕ್ಕೆ ಆಹ್ವಾನ.ಜೀವನ ಪರ್ಯಂತ ಧೂಮಪಾನಿಯಾಗಿರುವ ಇಬ್ಬರಲ್ಲಿ ಒಬ್ಬನನ್ನು ಎಂಬಂತೆ, ಸಿಗರೇಟ್ ಸೇವನೆ ಕೊಲೆ ಮಾಡುವುದು. ಇದರಲ್ಲಿ ಅರ್ಧದಷ್ಟು ಸಾವು ಸಂಭವಿಸುವುದು ಮಧ್ಯ ವಯಸ್ಕರಲ್ಲಿ.

ಧೂಮಪಾನಿಯ ಶ್ವಾಸಕೋಶಗಳು ಚಿಮಣಿಯಲ್ಲಿ ಕಟ್ಟಿದ ಕಪ್ಪು ಹೊಗೆಯಂತಿರುವವು,! ದಿನಕ್ಕೆ 20 ಸಿಗರೇಟ್ ಸೇದುವವನು ಒಂದು ವರ್ಷಕ್ಕೆ ಸುಮಾರು 210 ಗ್ರಾಂ ಟಾರ್/ಡಾಂಬರನ್ನು (ಒಂದು ಕಪ್ ನಷ್ಟು) ಸೇವಿಸಿದಂತೆ.ಶ್ವಾಸಕೋಶದ ಕ್ಯಾನ್ಸರ್, ಧೂಮಪಾನಿಗಳಲ್ಲಿ ಹತ್ತುಪಟ್ಟು ಹೆಚ್ಚು!

ಕಡಿಮೆ ನಿಕೋಟಿನ್ ಇರುವ ಸಿಗರೇಟ್ ಸಹ ಅಪಾಯ. ಏಕೆಂದರೆ ಧೂಮಪಾನಿಯು ಒಳಗೆ ದೀರ್ಘವಾಗಿ ಎಳೆದುಕೊಂಡ ಹೊಗೆಯನ್ನು ಸ್ವಲ್ಪ ಹೊತ್ತು ಹಾಗೆಯೇ ಇಟ್ಟುಕೊಂಡು ನಂತರ ಹೊರ ಬಿಡುವನು. ಇದರಿಂದ ಶ್ವಾಸಕೋಶದ ಒಳಗೆ ಹಾನಿಕಾರಕ ವಸ್ತುಗಳು ಸೇರಿಕೊಳ್ಳುವವು.

ಹೃದಯದ ಕಾಯಿಲೆಗಳಿಂದುಂಟಾದ ಐದು ಮರಣಗಳಲ್ಲಿ ಒಂದಕ್ಕೆ ಕಾರಣ ಸಿಗರೇಟ್ ಸೇವನೆ. ಚಿಕ್ಕ ವಯಸ್ಸಿನಲ್ಲಾಗುವ ಹೃದಯ ಸಂಬಂಧೀ ಸಾವುಗಳ್ಲ್ಲಲಿ ಶೇ. 75 ರಷ್ಟು ಸಾವಿಗೆ (ತಂಬಾಕು) ಸಿಗರೇಟ್ ಕಾರಣ!

ಗರ್ಭಿಣಿ ಸ್ತ್ರೀಯರು ಧೂಮಪಾನಿಗಳಾಗಿದ್ದಲ್ಲಿ, ಹುಟ್ಟುವ ಮಗುವಿನ ತೂಕ ಕಡಿಮೆಯಾಗುವುದು. ಬೇಗನೇ ಹೆರಿಗೆಯಾಗುವುದು. ಅಬಾರ್ಷನ್ ಆಗಬಹುದು, ಅಥವಾ ಹುಟ್ಟಿದ ತಕ್ಷಣ ಮಗು ಅಸುನೀಗಬಹುದು!

ಗರ್ಭದಿಂದ ಗೋರಿಯವರೆಗೆ ಎಂಬಂತೆ ಸಿಗರೇಟಿನ ದುಷ್ಪರಿಣಾಮಗಳು ಅನೇಕ ! ಆರೋಗ್ಯವೇ ಭಾಗ್ಯ! ಇಂದೇ ಧೂಮಪಾನ ತ್ಯಜಿಸಿ. ಅರೋಗ್ಯವನ್ನು ಮರಳಿ ಪಡೆಯಿರಿ.

ಎಷ್ಟೇ ವರ್ಷದಿಂದ ಧೂಮಪಾನಿಗಳಾಗಿದ್ದರೂ ಸರಿ, ತ್ಯಜಿಸಿದ ಕೆವೇ ಗಂಟೆಗಳಲ್ಲಿ ದೇಹದ ಆರೋಗ್ಯ ಉತ್ತಮಗೊಳ್ಳಲು ಶುರುವಾಗುವುದು. ಧೂಮಪಾನಿಗಳಿಂದ ದೂರವಿರಿ, ಸೆಕೆಂಡ್ ಹ್ಯಾಂಡ್ ಸ್ಮೋಕ್ ಇನ್ನೂ ಅಪಾಯಕಾರಿ 

(ಲೇಖಕರ ಮೊಬೈಲ್: 9972509785)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.