ADVERTISEMENT

ಪುರುಷನಿಗೂ ಗರ್ಭಕೋಶ!

ವೈದ್ಯ-ಹಾಸ್ಯ

ಡಾ.ಎನ್.ಅನಂತ ರಾಮನ್
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST
ಪುರುಷನಿಗೂ ಗರ್ಭಕೋಶ!
ಪುರುಷನಿಗೂ ಗರ್ಭಕೋಶ!   

ಮಗೆ ಹಾಸ್ಯವನ್ನು ಆನಂದಿಸುವ ಮನೋಭಾವ ಇದ್ದರೆ ಪ್ರತಿನಿತ್ಯದ ಅನೇಕ ಘಟನೆಗಳು ನಗೆ ಉಕ್ಕಿಸುತ್ತವೆ. ಹೀಗೆಯೇ ನಮ್ಮ ವೈದ್ಯ ವೃತ್ತಿಯಲ್ಲೂ ಹಾಸ್ಯ ಘಟನೆಗಳಿಗೆ ಕೊರತೆಯೇನಿಲ್ಲ. ವೈದ್ಯರಾದ ನಾವು ರೋಗಿಗೆ ಗುಣವಾಗಲೆಂದು ನಗಿಸಿ, ಚಿಕಿತ್ಸೆಯನ್ನು ಕೊಟ್ಟು ಕಳಿಸುತ್ತೇವೆ. ಒಮ್ಮಮ್ಮೆ ರೋಗಿಗಳು ತಿಳಿಸುವ ತಪ್ಪು ವಿವರಣೆಗಳು ನಗು ಹುಟ್ಟಿಸುತ್ತವೆ.

ಆಗ ವೈದ್ಯರಾಗಲೀ ಅಥವಾ ಅವರ ಸಿಬ್ಬಂದಿಯಾಗಲೀ ರೋಗಿಯ ಮುಂದೆ ನಗುವ ಹಾಗಿಲ್ಲ! ರೋಗಿಯು ಕ್ಲಿನಿಕ್‌ನಿಂದ ಹೊರಹೋದ ಮೇಲಷ್ಟೇ ನಗಬೇಕು. ಇಂತಹ ಕೆಲವು ಘಟನೆಗಳನ್ನು ಇಲ್ಲಿ ತಿಳಿಸುತ್ತೇನೆ. ಉನ್ನತ ಹುದ್ದೆಯಿಂದ ಆಗ ತಾನೇ ನಿವೃತ್ತಿ ಹೊಂದಿದ್ದ ಒಬ್ಬರು ತಮ್ಮ ದೀರ್ಘಕಾಲದ ಚರ್ಮ ರೋಗದ ನಿವಾರಣೆಗಾಗಿ ಅನೇಕ ವೈದ್ಯರಲ್ಲಿ ಸುತ್ತಿ, ಕಡೆಗೆ ನನ್ನಲ್ಲಿಗೆ ಬಂದರು.

ತಾವು ಹಿಂದೆ ಚಿಕಿತ್ಸೆ ಪಡೆದಿದ್ದ ವೈದ್ಯರ ಸಲಹಾ ಚೀಟಿಗಳು ಮತ್ತು ತಪಾಸಣಾ ವರದಿಗಳನ್ನು ಒಳಗೊಂಡ ದೊಡ್ಡ ಫೈಲನ್ನು ದೊಪ್ಪನೆ ನನ್ನ ಟೇಬಲ್ ಮೇಲೆ ಹಾಕಿದರು. ಜೊತೆಗೆ ರೋಗದ ಬಗ್ಗೆ ಸುದೀರ್ಘವಾದ ವಿವರಣೆಯನ್ನೂ ಕೊಟ್ಟರು. ಅವರು  ಕೊನೆಯಲ್ಲಿ ತಿಳಿಸಿದ ವಿವರ ಹೀಗಿತ್ತು- `ಡಾಕ್ಟ್ರೇ ನನ್ನ ದೇಹದ ಎಲ್ಲ ಭಾಗದಲ್ಲೂ ತಡೆಯಲಾಗದಷ್ಟು ನವೆ. ಇದರಿಂದ ಉರಿ. ನನ್ನ ಯೂಟ್ರಸ್ (ಗರ್ಭಾಶಯ!) ಭಾಗದಲ್ಲೂ ನವೆಯ ಹಾವಳಿ ಅಸಾಧ್ಯ'.

ಅವರಿಗೆ ಸೂಕ್ತ ಔಷಧಿ ಕೊಟ್ಟು ಕಳುಹಿಸಿದ ನಂತರ ನಾನು ಮನಸಾರೆ ನಕ್ಕೆ. ಏಕೆಂದರೆ ಹೆಂಗಸರಿಗೆ ಮಾತ್ರವೇ ಗರ್ಭಾಶಯ ಇರುತ್ತದೆ ಎನ್ನುವ ವಿಷಯ ಅವರಿಗೆ ಗೊತ್ತಿರಲಿಲ್ಲವೇನೋ?!
                                                                       
                                                                           ***
ಮತ್ತೊಬ್ಬ ರೋಗಿ ತಮ್ಮ ದೇಹದ ಅನೇಕ ಕಡೆ ಕೀವು ಗುಳ್ಳೆಗಳು ಪದೇ ಪದೇ ಕಾಡಿಸುತ್ತಿದುದನ್ನು ನನಗೆ ತಿಳಿಸಿದ್ದು ಹೀಗೆ:
`ಡಾಕ್ಟ್ರೇ ಈ ಗುಳ್ಳೆಗಳು ಒಂದಾದ ಮೇಲೊಂದು ಬಂದು ಕಾಡುತ್ತಿವೆ. ಔಷಧ ಸೇವಿಸಿದಾಗ ಗುಣವಾದರೂ ಸ್ವಲ್ಪ ದಿನಗಳ ನಂತರ ಮತ್ತೊಂದು ಜಾಗದಲ್ಲಿ ಏಳುತ್ತವೆ.

ADVERTISEMENT

ಈಗ ನೋಡಿ, ಮೂರು ದಿನಗಳಿಂದ ನನ್ನ ಪೃಷ್ಟ ಭಾಗದಲ್ಲಿ ಮೊಡವೆ ಗುಳ್ಳೆಗಳು ಎದ್ದು ನನಗೆ ಕೂರಲು ಸಹ ಆಗುತ್ತಿಲ್ಲ!'. ಅವರು ಹೊರಹೋದ ನಂತರ ನಾನು ಮತ್ತು ನನ್ನ ಸಿಬ್ಬಂದಿ ಜೋರಾಗಿ ನಕ್ಕೆವು. ಏಕೆಂದರೆ ಮೊಡವೆ ಎಂಬ ಕೀವು ಗುಳ್ಳೆಗಳು ಏಳುವುದು ಮುಖದ ಮೇಲೆ ಹೊರತು ಪೃಷ್ಟದ ಮೇಲಲ್ಲ!
                                                                            ***
ಒಮ್ಮೆ ಶಾಲಾ ಶಿಕ್ಷಕಿಯೊಬ್ಬರು ನನ್ನಲ್ಲಿಗೆ ಬಂದರು. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅನುಭವವಿದ್ದ ಅವರು ತಮ್ಮ ಕಾಯಿಲೆಯ ಪರಿಹಾರಕ್ಕೆ ಅನೇಕ ಆಸ್ಪತ್ರೆಗಳನ್ನು ಸುತ್ತಿದ್ದರು. ಅವರನ್ನು ಕೂಲಂಕಶವಾಗಿ ಪರೀಕ್ಷಿಸಿ ಔಷಧಿ ಕೊಟ್ಟು ಕಳುಹಿಸಿದೆ.

ಒಂದು ವಾರದ ನಂತರ ಮತ್ತೆ ಬಂದ ಶಿಕ್ಷಕಿ, ಜೋರು ಧ್ವನಿಯಲ್ಲಿ `ಡಾಕ್ಟ್ರೇ ನನಗೆ ಹಾರಿಬಲ್ ಇಂಪ್ರೂವ್‌ಮೆಂಟ್ ಆಗಿದೆ' ಎಂದರು. ನನಗೆ ಗಾಬರಿಯಾಗಿ ಬೆವರಿದೆ. ನಂತರ ನನಗೆ ತಿಳಿದದ್ದು  ನನ್ನ ಔಷಧಿಯಿಂದ ಆಕೆಗೆ ಗುಣ ಕಂಡು ಬಂದಿತ್ತು ಎಂಬುದು. ಆ ಶಿಕ್ಷಕಿ `ವಂಡರ್‌ಪುಲ್' ಎಂಬ ಪದದ ಬದಲಾಗಿ `ಹಾರಿಬಲ್' ಎಂಬ ಪದವನ್ನು ಬಳಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.