ADVERTISEMENT

ಬಳುಕುವ ದೇಹಕ್ಕೆ ವ್ಯಾಯಾಮವೇ ‘ಸಾಕ್ಷಿ’

ಚೇತನ ಚಿಲುಮೆ

ಅಮಿತ್ ಎಂ.ಎಸ್.
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

‘ಫಿಟ್‌ನೆಸ್‌ ಕಾಪಾಡಿಕೊಳ್ಳುವುದೆಂದರೆ ಮಾಡಲೇಬೇಕೆಂದು ಕಷ್ಟಪಟ್ಟು ಜಿಮ್‌­ನಲ್ಲಿ ಬೆವರಿಳಿಸುವುದಲ್ಲ. ಊಟ, ನಿದ್ರೆ­ಯನ್ನು ಹೇಗೆ ಪ್ರೀತಿಸುತ್ತೇವೋ ಜಿಮ್‌­ನಲ್ಲಿ ಬೆವರಿಳಿಸುವ ಕಸರತ್ತನ್ನೂ ಪ್ರೀತಿಸ­ಬೇಕು. ಆಗಲೇ ಸೂಕ್ತ ಫಲ ಸಿಗುವುದು.
ದೇಹದ ಫಿಟ್‌ನೆಸ್‌ನಷ್ಟೇ ಮನಸ್ಸಿನ ಫಿಟ್‌ನೆಸ್‌ ಕೂಡ ಮುಖ್ಯ’ ಎಂದು ನುಡಿ­ಯುತ್ತಾರೆ ನಟಿ ಸಾಕ್ಷಿ ಅಗರ್‌ವಾಲ್‌.

ತೆಳ್ಳನೆಯ ಕಾಯ ಕಾಯ್ದುಕೊಳ್ಳುವ ವಿಷಯದಲ್ಲಿ ಸಾಕ್ಷಿ ತುಂಬಾ ಕಟ್ಟುನಿಟ್ಟಿನ ವ್ರತ ಪಾಲಿಸುತ್ತಿರುವವರು. ಊಟ ತಿಂಡಿಯ ವಿಚಾರದಲ್ಲಿ ಜಿಪುಣತನ ಕೊಂಚ ಹೆಚ್ಚೇ. ಆದರೆ ದೈಹಿಕ ಕಸರತ್ತಿನ ವಿಚಾರದಲ್ಲಿ ಹಾಗಲ್ಲ. ಜಿಮ್‌ ಎಂದರೆ ಅವರಿಗೆ ಚಿಕ್ಕ ಮಕ್ಕಳಿಗೆ ಆಟದ ಮೈದಾನದ ಮೇಲಿರುವ ಪ್ರೀತಿಯಂತೆ. ಜಿಮ್‌ ಕೊಠಡಿ ಹೊಕ್ಕರೆ ತಾಸುಗಟ್ಟಲೆ ವ್ಯಾಯಾಮದಲ್ಲಿ ಮಗ್ನರಾಗುವ ಈ ಸಾಕ್ಷಿಯ ತವರೂರು ಉತ್ತರಾಖಂಡ.

ಈಗ ಚೆನ್ನೈನ ಬಿಸಿಲ ಝಳದ ನಡುವೆಯೂ ಅಂದಗೆಡದಂತೆ ಸೌಂದರ್ಯ ಕಾಪಿಟ್ಟುಕೊಂಡಿರುವ ಈಕೆ ತನ್ನ ಕುಟುಂಬದೊಂದಿಗೆ ಚೆನ್ನೈನಲ್ಲೇ  ನೆಲೆ ಕಂಡಿದ್ದಾರೆ. ಪಕ್ಕದ ಬೆಂಗಳೂರು ಶಿಕ್ಷಣ, ವೃತ್ತಿ ಎರಡನ್ನೂ ಒದಗಿಸಿದ ನೆಚ್ಚಿನ ತಾಣ. ಬಣ್ಣದ ಲೋಕದ ಮೋಹ ಅಂಟಿಕೊಂಡದ್ದು ಕನ್ನಡದ ನೆಲದಲ್ಲಿಯೇ. ರೂಪದರ್ಶಿಯಿಂದ ನಟಿಯ ಸ್ಥಾನ ನೀಡಿದ್ದು ಸಹ ಕನ್ನಡ. ‘ಹೆದ್ದಾರಿ’ ಸಿನಿಮಾ ಮೂಲಕ ಚಿತ್ರಬದುಕಿನ ದಾರಿ ಕಂಡು­ಕೊಂಡಿ­ರುವ ಸಾಕ್ಷಿ, ಮಾಡೆ   ಲಿಂಗ್‌ ಅಥವಾ ಸಿನಿಮಾ ಮಾತ್ರವಲ್ಲ,  ಸಾಮಾನ್ಯರೂ ಫಿಟ್‌­ನೆಸ್‌ಗೆ ಆದ್ಯತೆ ನೀಡಲೇಬೇಕು ಎಂದು ನಂಬಿದವರು.

ಬಳ್ಳಿಯಂತೆ ಬಳುಕುವ ದೇಹದ ಈಕೆಗೆ ಏರೋಬಿಕ್ಸ್‌ ಎಂದರೆ ಬಲು ಪ್ರೀತಿ. ಅದರಲ್ಲೂ ಬಾಲಿವುಡ್‌ ಏರೋಬಿಕ್ಸ್‌, ಕಿಕ್‌ ಬಾಕ್ಸಿಂಗ್ ಏರೋಬಿಕ್ಸ್‌, ಜಿಂಬಾ ಏರೋಬಿಕ್ಸ್‌ಗಳೆಂದರೆ ಅಚ್ಚುಮೆಚ್ಚು. ಏರೋಬಿಕ್ಸ್‌ನಿಂದ ಮನಸ್ಸು ಮತ್ತು ದೇಹ ಎರಡೂ ಹಗುರಾಗುತ್ತವೆ. ಮನಸ್ಸನ್ನು ಉಲ್ಲಸಿತವಾಗಿಡಲು ಏರೋಬಿಕ್ಸ್‌ಗಿಂಥ ಔಷಧ ಮತ್ತೊಂದಿಲ್ಲ ಎನ್ನುವ ನಂಬಿಕೆ ಅವರದು.

ದಿನಕ್ಕೆ ಎರಡು ಗಂಟೆ ಕಸರತ್ತು ನಡೆಸಲೇಬೇಕೆಂಬ ನಿಯಮ ಪಾಲನೆ­ಯನ್ನು ಮರೆಯುವುದಿಲ್ಲ. ಅದರಲ್ಲಿ ಒಂದು ಗಂಟೆ ತರಹೇವಾರಿ ಏರೋ­ಬಿಕ್ಸ್‌ಗೆ ಮೀಸಲು. ಉಳಿದ ಅವಧಿಯಲ್ಲಿ ಕಾರ್ಡಿಯೊ, ಟ್ರೆಡ್‌ಮಿಲ್‌ ಮತ್ತಿತರ ಶ್ರಮ. ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿ, ಗಾಳಿ ಆಸ್ವಾದಿಸುತ್ತಾ ಉದ್ಯಾನಗಳಲ್ಲಿ ಓಡುವುದು ಮತ್ತು ಒಂದು ಗಂಟೆ ಪವರ್‌ ಯೋಗ ಮಾಡುವುದೂ ಅವರ ನೀಳ ಕಾಯ ಸಂರಕ್ಷಣೆಯ ಒಂದು ಭಾಗ. ಒತ್ತಡ ಕಡಿಮೆ ಮಾಡಲು ದಿನದ ಸ್ವಲ್ಪ ಹೊತ್ತು ಧ್ಯಾನಕ್ಕಾಗಿ ಮೀಸಲಿಡುತ್ತಾರೆ ಸಾಕ್ಷಿ.

ತಿನಿಸಿನ ವಿಚಾರದಲ್ಲಿ ವ್ಯಾಯಾಮಕ್ಕೆ ನೀಡುವಷ್ಟು ಧಾರಾಳತನ ಅವರಲ್ಲಿಲ್ಲ. ಒಂದೇ ಬಾರಿಗೆ ಹೊಟ್ಟೆ ತುಂಬಾ ಊಟ ಮಾಡುವ ಕ್ರಮವನ್ನು ಸಾಕ್ಷಿ ಒಪ್ಪುವುದಿಲ್ಲ. ಹಸಿವಾದಾಗೆಲ್ಲ ಸ್ವಲ್ಪ ಸ್ವಲ್ಪವೇ ತಿನ್ನುವುದು ಸರಿ ಎನ್ನುವುದು ಅವರ ಅನಿಸಿಕೆ. ವ್ಯಾಯಾಮಕ್ಕೂ ಮುನ್ನ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದು ರೂಢಿ. ದೇಹ ದಂಡಿಸುವ ಮುನ್ನ ಖಾಲಿ ಹೊಟ್ಟೆಯಲ್ಲಿ ಇರುವುದು ಒಳ್ಳೆಯದಲ್ಲ, ಮೊಟ್ಟೆಯ ಬಿಳಿ ಭಾಗ ದೇಹಕ್ಕೆ ಶ್ರಮದ ಕೆಲಸ ನಿರ್ವಹಿಸಲು ಬೇಕಾದ ಶಕ್ತಿ ತುಂಬುತ್ತದೆ ಎನ್ನುತ್ತಾರೆ ಅವರು.

ವ್ಯಾಯಾಮದ ಬಳಿಕ ಓಟ್ಸ್‌ ತಿಂದು ರಾಗಿ ಮಾಲ್ಟ್‌ ಸೇವಿಸಿದರೆ ಅವರ ಬೆಳಗಿನ ಉಪಾಹಾರ ಮುಗಿದಂತೆ. ಚಪಾತಿ, ಮೂಂಗ್‌ದಾಲ್‌, ಸಬ್ಜಿ, ಸ್ವಲ್ಪ ಮೊಸರು ಇವಿಷ್ಟೇ ಅವರ ಮಧ್ಯಾಹ್ನದ ಊಟದ ಮೆನು. ದಪ್ಪಗಾಗುವ ಭಯದಿಂದ ಅವರು ಅನ್ನದಿಂದ ಬಲು ದೂರ.

ರಾತ್ರಿಯೂಟಕ್ಕೂ ಚಪಾತಿ– ದಾಲ್‌, ಸೂಪ್‌, ಸಲಾಡ್‌ ಮಾತ್ರ. ಇಷ್ಟೇ ಊಟ ಸಾಕೇ ಎಂದರೆ, ‘ಇದು ಊಟದ ಹೊತ್ತಿನ ತಿನಿಸುಗಳಷ್ಟೇ’ ಎಂದು ಉತ್ತರಿಸುತ್ತಾರೆ ಸಾಕ್ಷಿ. ಆಗಾಗ್ಗೆ ಗ್ರೀನ್‌ ಟೀ ಹೀರುತ್ತಾ ವಾಲ್‌ನಟ್‌ ಸವಿಯುವುದು ಅವರಿಗಿಷ್ಟ. ಮಧ್ಯೆ ಹಸಿವಾದರೆ ಬ್ರೆಡ್‌– ಜಾಮ್‌ ಕಾಂಬಿನೇಷನ್‌, ಇಲ್ಲವೇ ಹಣ್ಣು, ಜ್ಯೂಸ್‌ ಸೇವನೆ. ಎಣ್ಣೆ ಖಾದ್ಯಗಳಿಂದಲೂ ದೂರ ಈ ಸಸ್ಯಾಹಾರಿ ಪ್ರಿಯೆ. ಮಲಗುವ ಮುನ್ನ ಸೇಬು ಅಥವಾ ಪರಂಗಿ ಹಣ್ಣು ತಿನ್ನುತ್ತಾರೆ. ಕಾರ್ಬೊಹೈಡ್ರೇಟ್‌ಯುಕ್ತ ಆಹಾರ ಪದಾರ್ಥಗಳನ್ನು ಒಲ್ಲೆ ಎನ್ನುವ ಸಾಕ್ಷಿ, ಕಡಿಮೆ ಕೊಬ್ಬಿನಂಶ ಉಳ್ಳ ತಿನಿಸುಗಳನ್ನು ಮಾತ್ರ ಇಷ್ಟಪಡುತ್ತಾರೆ.

ಏಕರೂಪದ ಶರೀರ ಕಾಪಾಡಿಕೊಳ್ಳಲು ಇಷ್ಟೆಲ್ಲ ಹರಸಾಹಸ ಪಡಲೇಬೇಕು. ಇದು ನಟಿಯರಿಗೆ ಅನಿವಾರ್ಯ. ಊಟ ತಿಂಡಿಯಲ್ಲಿ ಹಿತಮಿತವಾದ ಆಯ್ಕೆಯಿದ್ದು, ದೈಹಿಕ ಶ್ರಮಕ್ಕೆ ಒಡ್ಡಿಕೊಳ್ಳುವುದರಲ್ಲಿ ಆಲಸ್ಯ ತೋರದಿದ್ದರೆ ಜನಸಾಮಾನ್ಯರೂ ತನ್ನಂತೆ ಥಳುಕು ಬಳುಕಿನ ದೇಹ ಸೌಷ್ಟವ ಹೊಂದುವುದು ಕಷ್ಟವೇನಲ್ಲ ಎಂಬ ಅಭಿಪ್ರಾಯ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT