ADVERTISEMENT

ಬ್ಲಡ್ಡೇ ಇಲ್ಲ ಇನ್ನು ಪ್ರೆಶರ್ ಎಲ್ಲಿಂದಾ...

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST
ಬ್ಲಡ್ಡೇ ಇಲ್ಲ ಇನ್ನು ಪ್ರೆಶರ್ ಎಲ್ಲಿಂದಾ...
ಬ್ಲಡ್ಡೇ ಇಲ್ಲ ಇನ್ನು ಪ್ರೆಶರ್ ಎಲ್ಲಿಂದಾ...   

ರವಿ ಕಾಣದ್ದನ್ನ ಕವಿ ಕಂಡ ಅಂತಾರೆ, ಕವಿ ಕಾಣದ್ದನ್ನ ಒಬ್ಬ ಸೂಕ್ಷ್ಮ ಸಂವೇದಿ ವೈದ್ಯ ಕಾಣಬಲ್ಲ. ಪತ್ತೇದಾರಿ ಕಾದಂಬರಿ ಅಥವಾ ಚಲನಚಿತ್ರ ನೋಡಿದಾಗ ಅದರಲ್ಲಿನ ಹೀರೊ ಥರಾ ಆಗಬೇಕು, ಪೈಲಟ್ ನೋಡಿದಾಗ, ಅಧಿಕಾರಸ್ಥರನ್ನು ಕಂಡಾಗ ಅವರಂತೆಯೇ ಆಗಬೇಕು ಅಂದುಕೊಳ್ಳುವವರು ಬಹಳ. ಆದರೆ ಜೀವನವಿಡೀ ಇನ್ನೊಬ್ಬರ ನೋವಿನಲ್ಲೇ ತಮ್ಮ ನಲಿವು ಕಾಣುವ ವೈದ್ಯರಾಗಬೇಕೆನ್ನುವವರು ವಿರಳ. `ಅಯ್ಯೋ ಆ ಯಾತನೆ ನಮಗೆ ಬೇಡ~ ಎನ್ನುವವರೇ ಬಹಳ.
ಡಾಕ್ಟರರ ಡಾಕ್ಟರ್ ಎನಿಸಿಕೊಂಡ ಸರ್ ವಿಲಿಯಂ ಆಸ್ಲರ್ ಒಬ್ಬ ವೈದ್ಯನ ಕನಿಷ್ಠ ಅರ್ಹತೆ ಮೂರು `ಎಚ್~ಗಳು ಎಂದಿದ್ದಾರೆ. ಅಂದರೆ ಹ್ಯುಮ್ಯಾನಿಟಿ, ಹ್ಯುಮಿಲಿಟಿ ಮತ್ತು ಹ್ಯೂಮರ್ (ಮಾನವೀಯತೆ, ವಿನಮ್ರತೆ, ಹಾಸ್ಯ ಪ್ರಜ್ಞೆ). ಕಟಕಿಯಾಡುವವರು ಇದನ್ನೇ `ಹರಾಸ್ಡ್ ಹಸ್ಬೆಂಡ್ಸ್ ಹಾಸ್ಟೆಲ್~ ಎನ್ನುವುದು ಬೇರೆ ಮಾತು ಬಿಡಿ.

ನಮ್ಮ ಬಳಿ ಬರುವವರೆಲ್ಲರೂ ತಮ್ಮ ನೋವು, ತೊಂದರೆ ಹೇಳಿಕೊಳ್ಳುವವರೇ ಹೊರತು ಸುಖ-ಸಂತೋಷ ಹಂಚಿಕೊಳ್ಳುವವರಲ್ಲ. ಅದರ ನಡುವೆಯೇ ಒಮ್ಮೆ ನಾನು ಹೇಗೋ ಬಿಡುವು ಮಾಡಿಕೊಂಡು ಯಾವುದೋ ಸಮಾರಂಭಕ್ಕೆ ಹೋಗಿದ್ದೆ. ಎಲ್ಲರೊಡನೆ ಹಾಯಾಗಿ ಬೆರೆತು ಆ ದಿನದ ತಾಪತ್ರಯವನ್ನೆಲ್ಲಾ ಮರೆತು ಒಳ್ಳೆಯ ಮೂಡ್‌ನಲ್ಲಿದ್ದೆ. ಆಗ ವಿಐಪಿಯೊಬ್ಬರು ನನ್ನನ್ನು ನೋಡಿದ ಕೂಡಲೇ ನಿಧಿ ಸಿಕ್ಕವರಂತಾಗಿ ಪಕ್ಕಕ್ಕೆ ಕರೆದು ಕಿವಿಯಲ್ಲಿ `ನನ್ನೆಂಡ್ತಿಗೆ ವಿಪರೀತ ಬ್ಲೀಡಿಂಗ್, ಅಸಹನೀಯ~ ಎಂದಾಗ ನನ್ನ ಮುಖ ನೋಡಬೇಕಿತ್ತು, ನನಗೇ ಬ್ಲೀಡಿಂಗ್ ಆದ ಅನುಭವ!

ಹೋಮಿಯೋಪತಿಯಲ್ಲಿ ಒಂದು ಕಾಯಿಲೆಗೆ ಥಟ್ಟನೆ ಒಂದು ಔಷಧ ಸೂಚಿಸುವುದಿಲ್ಲ. ಹೆಚ್ಚು ವಿವರ ಕೇಳಿ ಔಷಧಿ ಕೊಡಬೇಕಾಗುತ್ತದೆ. ಹಾಗಾಗಿ ರೋಗಿಗಳು ತಲೆನೋವು ಎಂದಾಗ, ಇತರ ವಿವರ ಕೇಳಲು ಹೊರಟರೆ ಅವರಿಂದ ನಮಗೇ ತಲೆನೋವು ಬರುವಷ್ಟು ಪ್ರಶ್ನೆಗಳ ಸುರಿಮಳೆಯಾಗುತ್ತದೆ. ಎಷ್ಟೋ ಬಾರಿ ನಾವು ಅಪಹಾಸ್ಯಕ್ಕೀಡಾದ ಪ್ರಸಂಗಗಳೂ ಇವೆ. ಒಮ್ಮೆ ತರುಣಿಯೊಬ್ಬಳು ಮೊಡವೆಗೆ ಪರಿಹಾರ ಕೋರಿ ಬಂದಿದ್ದಳು. `ನಿನ್ನ ಮಲದ ಬಣ್ಣ ಹೇಗಿರುತ್ತಮ್ಮಾ~ ಎಂದೆ `ಥೂ ಹೋಗ್ರಿ ಡಾಕ್ಟ್ರೆ ಅದನ್ನೆಲ್ಲಾ ಯಾರು ನೋಡ್ಕೊಂಡು ಕೂತಿರ‌್ತಾರೆ, ಅಸಹ್ಯ~ ಎಂದಾಗ ನನ್ನ ಪರಿಸ್ಥಿತಿ ಊಹಿಸಿಕೊಳ್ಳಿ.

ಇನ್ನೊಮ್ಮೆ ಖಡಕ್ ಮನುಷ್ಯರೊಬ್ಬರು ಎದುರಿಗೆ ಕೂತಿದ್ದರು. ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಹಿಸ್ಟರಿ ಕೇಳಿಯಾಗಿತ್ತು, ಕೊನೆಯಲ್ಲಿ `ನಿಮ್ಮ ವಂಶದಲ್ಲಿ ಯಾರಿಗಾದ್ರೂ~ ಎನ್ನುತ್ತಿದ್ದಂತೆಯೇ ಕತ್ತು ಉಳುಕುವಷ್ಟು ಜೋರಾಗಿ `ಇಲ್ಲ~ ಎಂದು ತಲೆ ಅಲ್ಲಾಡಿಸಿದರು. `ಏನು ಅಂತಾ ಮೊದ್ಲು ತಿಳ್ಕೊಳ್ರೀ~ ಅಂದೆ. ಮುಖ ಸಿಂಡರಿಸಿಕೊಂಡು `ಹೇಳಿ~ ಅಂದರು. `ಯಾರಿಗಾದ್ರೂ ಟಿ.ಬಿ, ಕ್ಯಾನ್ಸರ್ ಇತ್ಯಾದಿ~ ಎನ್ನುವಷ್ಟರಲ್ಲಿ ಎದ್ದು ನಿಂತವರೇ `ಏನ್ರೀ ಡಾಕ್ಟ್ರೇ ನಮ್ಮ ವಂಶಾನ ಏನು ಅಂತಾ ತಿಳ್ಕೊಂಡಿದ್ದೀರಿ~ ಅಂತಾ ರೋಪ್ ಹಾಕಿದಾಗ ನನಗೆ ಬೆವರಿಳಿಯುತ್ತಿತ್ತು.

ಎಷ್ಟೋ ಬಾರಿ ಅತಿ ಸಂದಿಗ್ಧ ಪರಿಸ್ಥಿತಿಯನ್ನೂ ನನ್ನ ಹಾಸ್ಯ ಪ್ರವೃತ್ತಿಯಿಂದ ಮಂಜಿನಂತೆ ಕರಗಿಸಿದ ಸನ್ನಿವೇಶಗಳೂ ಇವೆ. ಸಾಮಾನ್ಯವಾಗಿ ನನ್ನ ಬಳಿ ಎರಡು ತಿಂಗಳ ಪೂರ್ವಾನುಮತಿ ಪಡೆದು, ನಂತರವೂ ಕೆಲವೊಮ್ಮೆ ತುಸು ಅತಿ ಎನಿಸುವಷ್ಟು ಕಾಯ್ದು ಒಳಬರಬೇಕಾಗುತ್ತದೆ. ಒಂದು ದಿನ ರೋಗಿಗಳು ಕಾಯುವ ಕೋಣೆಯಲ್ಲಿ ವಿಪರೀತ ಗದ್ದಲ, ನನ್ನ ಸಹಾಯಕಿ ಮೇಲೆ ಯಾರೋ ರೇಗುವುದು ಕೇಳಿಬಂತು. ಸ್ವಲ್ಪ ಸಮಯದ ಬಳಿಕ ಸಹಾಯಕಿ ಒಳಬಂದು `ಮುದುಕರೊಬ್ಬರು ವಿಪರೀತ ಸಿಟ್ಟಲ್ಲಿದ್ದಾರೆ, ಈಗಲೇ ನೋಡ್ಬೇಕಂತೆ~ ಅಂದಳು. ಭುಸುಗುಡುತ್ತಲೇ ಒಳಬಂದು ನಿಂತ ವ್ಯಕ್ತಿಯನ್ನು `ಏನ್ರೀ ತೊಂದ್ರೆ~ ಅಂದೆ, `ಹೊಟ್ಟೆ ಉರಿ~  ಅಂದ್ರು. `ಯಾರ ಮೇಲ್ರೀ~ ಅಂದಾಗ ನಗುವ ಸರದಿ ಇಬ್ಬರದೂ ಆಗಿತ್ತು.

ಕೆಲವರಿಗೆ ಇಂಗ್ಲಿಷ್‌ನ ವ್ಯಾಮೋಹ. `ಸ್ವಲ್ಪ ನೋಡಿ ಡಾಕ್ಟ್ರೇ ನನಗೇನಾದ್ರೂ ವೈರ್‌ಲೆಸ್ ಫೀವರ‌್ರಾ~ ಅಂತಾರೆ. `ನನಗೆ ಬಿ ಕಾಂಪ್ಲೆಕ್ಷನ್~ ಇದೆಯಂತೆ ಅನ್ನುವವರೂ ಇದ್ದಾರೆ. ಮಹಿಳೆಯೊಬ್ಬಳು `ನನಗೆ ಯೂರಿನ್ ಬಂದ್ ಆಗಿತ್ತು, ಆಸ್ಪತ್ರೇಲಿ ಈಗ ತಾನೇ ಕ್ಯಾತಿಡ್ರಲ್ ಹಾಕಿ ತೆಗೆದ್ರು~ ಅಂದಾಗ ಚರ್ಚ್ ಮೇಲಿನ ಕ್ಯಾತಿಡ್ರಲ್ ನೆನೆದು ಹೈರಾಣಾಗಿ ಹೋಗಿದ್ದೆ. (ಕ್ಯಾತೆಟರ್‌ನ ಅಪಭ್ರಂಶ ಅದಾಗಿತ್ತು) ಇನ್ನು ಇನ್‌ಫೆಕ್ಷನ್ ಬದಲಿಗೆ `ನನಗೆ ಇನ್‌ಸ್ಪೆಕ್ಷನ್~ ಆಗಿದೆ ಎಂದು ಹೇಳುವವರ ಸಂಖ್ಯೆಯಂತೂ ಹೆಚ್ಚಾಗೇ ಇದೆ.

ಹಳ್ಳಿಯ ಶ್ಯಾನುಭೋಗರೊಬ್ಬರು ತಮ್ಮ ಮಲಬದ್ಧತೆಯ ಬಗ್ಗೆ ವಿವರಿಸುತ್ತಾ, `ಅದಾಗೇ ಆಗುವುದೇ ಇಲ್ಲಾ ಡಾಕ್ಟ್ರೆ, ನಿತ್ಯವೂ ನನ್ನ ಬೆರಳನ್ನ ಲಂಗ್ಸ್‌ದೊಳಗೆ ಹಾಕೇ ತೆಗೀಬೇಕು~ ಎಂದಾಗ ಹೌಹಾರುವ ಸರದಿ ನನ್ನದಾಗಿತ್ತು (ರೆಕ್ಟಮ್‌ಗೆ ಅವರು ಲಂಗ್ಸ್ ಎಂದು ಬಳಸಿದ್ದರು). ಅನೀಮಿಯದಿಂದ ಬಳಲುತ್ತಿದ್ದ ಹಳ್ಳಿಯ ಮಹಿಳೆಯೊಬ್ಬಳಿಗೆ ಬಂದಿದ್ದ ಸಂಶಯ ನನ್ನದೂ ಆಗಿತ್ತು. ಡಾಕ್ಟ್ರೇ `ಬ್ಲಡ್ಡೇ ಇಲ್ಲಾ ಅಂತಾರೆ ಇನ್ನು ಬ್ಲಡ್‌ಪ್ರೆಶರ್ ಎಲ್ಲಿಂದಾ ಬಂತು~ ಎಂದಾಕೆ ಕೇಳಿದ್ದಳು.

`ನನ್ನ ಕಿಡ್ನಿ ಊದಿದೆ~ ಎಂದಾಗ `ಅದ್ಹೇಗ್ರೀ ಗೊತ್ತಾಯ್ತು ನಿಮ್ಗೆ~ ಎಂದರೆ `ನಿಮಗ್ಗೊತ್ತಾಗಲ್ವ~ ಅಂತ ನನ್ನನ್ನೇ ನೋಡಿ ಮುಸಿಮುಸಿ ನಕ್ಕ ಭೂಪನೊಬ್ಬ. ಅವನು `ವೃಷಣ~ಕ್ಕೆ ಪರ್ಯಾಯವಾಗಿ `ಕಿಡ್ನಿ~ ಪದ ಬಳಸಿದ್ದ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.