ADVERTISEMENT

ಮಜ್ಜಿಗೆ ಎಂಬ ಅಮೃತಪೇಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಮಜ್ಜಿಗೆ ಎಂಬ ಅಮೃತಪೇಯ
ಮಜ್ಜಿಗೆ ಎಂಬ ಅಮೃತಪೇಯ   

- ಡಾ. ಎನ್. ಅನಂತರಾಮನ್‌

ಮದುವೆ, ಗೃಹಪ್ರವೇಶ ಮುಂತಾದ ಸಮಾರಂಭಗಳಲ್ಲಿ ಅತಿಥಿಗಳಿಗೆ ಬಡಿಸುವ ಊಟದ ಕೊನೆಯಲ್ಲಿ ‘ಮೊಸರು’ ಇದ್ದರೆ ನಮ್ಮ ಗೌರವ–ಅಂತಸ್ತುಗಳು ಹೆಚ್ಚಾಗುತ್ತವೆ; ಅದರ ಬದಲಾಗಿ ‘ನೀರುಮಜ್ಜಿಗೆ’ಯನ್ನು ಬಿಡಿಸಿದರೆ ನಮ್ಮನ್ನು ಕೀಳಾಗಿ ಅತಿಥಿಗಳು ಕಾಣುತ್ತಾರೆ! ಆದರೆ ಆರೋಗ್ಯಶಾಸ್ತ್ರವು ಊಟದ ಕೊನೆಯಲ್ಲಿ ‘ಭೋಜನಾಂತೇ ತಕ್ರಂ ಪೇಯಂ’ – ಮಜ್ಜಿಗೆಯನ್ನು ಸೇವಿಸಬೇಕು ಎಂದು ತಿಳಿಸುತ್ತದೆ.

ಏಕೆ? ಗಟ್ಟಿ ಮೊಸರಿಗೆ ನೀರನ್ನು ಬೆರೆಸಿ ಕಡೆಗೋಲು(ಮಂತು)ನಿಂದ ಕಡೆದು ತಯಾರಿಸುವ ಪೇಯವೇ – ಮಜ್ಜಿಗೆ. ಈಗ ಮೊಸರನ್ನು ಕಡೆಯಲು ಮಿಕ್ಸಿಗಳು ಬಳಕೆಯಾಗುತ್ತವೆ. ಈ ಮಂಥನ(ಕಡೆಯುವ)ಕ್ರಿಯೆಯಲ್ಲಿ ಮೊಸರಿನಲ್ಲಿರುವ ಸಿಹಿಗುಣವು ಒಗರು (ಒಗಚು) ಗುಣವಾಗಿ ಮಾರ್ಪಾಡಾಗುತ್ತದೆ. ಸ್ಪಲ್ಪ ಒಗರು ರುಚಿಯುಳ್ಳ ಮಜ್ಜಿಗೆಯನ್ನು ಆಹಾರದ ಕೊನೆಗೆ ಸೇವಿಸುವುದರಿಂದ ಜೀರ್ಣರಸಗಳ ಸ್ರಾವವು ನಿಲುಗಡೆಗೆ ಬಂದು, ನಮಗೆ ಊಟ ಮಾಡಿದ ತೃಪ್ತಿಯ ಭಾವನೆ ಸಿಗುತ್ತದೆ. ಕೆಲವರು ಮೊಸರಿಗೆ ನೀರನ್ನು ಸೇರಿಸಿ ಕುಡಿಯುತ್ತಾರೆ. ಇದು ಮಜ್ಜಿಗೆಯಾಗದು; ಕಡೆಯುವ ಪ್ರಕ್ರಿಯೆಯಿಂದ ಮೊಸರಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಹೆಚ್ಚು ಕ್ರಿಯಾತ್ಮಕವಾಗಿ ಪರಿವರ್ತನ ಹೊಂದಿ ಮಜ್ಜಿಗೆಯು ಸಿಗುತ್ತದೆ. ಇದು ಎಲ್ಲಾ ವಯಸ್ಸಿನವರಿಗೂ ಒಗ್ಗುವ ಪೇಯ. ಎಳೆಯ ಮಕ್ಕಳಲ್ಲಿ ಕೆಲವರಿಗೆ ತಾಯಿಹಾಲನ್ನು ಹೊರತು ಪಡಿಸಿ ‘ಮೇಲು ಹಾಲಿ’ನ ಅಲರ್ಜಿ ಇರುತ್ತದೆ. ಇಂತಹ ಶಿಶುವು ಪದೇ ಪದೇ ಕಕ್ಕುವುದು, ಮೇಲಿಂದ ಮೇಲೆ ಮಲಪ್ರವೃತ್ತಿಯನ್ನು ಮಾಡಿಕೊಳ್ಳುವುದು ಕಂಡುಬರುತ್ತದೆ. ಇಂತಹ ಮಕ್ಕಳಿಗೆ ತಾಜಾ ಮಜ್ಜಿಗೆಯನ್ನು ತಯಾರಿಸಿ, ಹಾಲಿನ ಬದಲು ಕುಡಿಸಬಹುದು. ಇದು ನಮ್ಮ ವೈದ್ಯಕೀಯ ಅನುಭವದಿಂದಲೂ ದೃಢಪಟ್ಟಿದೆ. ಬೆಳೆದ ಮಕ್ಕಳ ತಾಯಿಯರು ತಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಎಂದು ಕೆಲವೊಮ್ಮೆ ವೈದ್ಯರಲ್ಲಿ ದೂರನ್ನು ತರುವುದುಂಟು. ಇಂತಹ ಮಕ್ಕಳು ಹೆಚ್ಚು ಪ್ರಮಾಣದಲ್ಲಿ ಹಾಲು ಕುಡಿಯುವುದು ಕಂಡುಬಂದರೆ, ಆ ಅಭ್ಯಾಸವನ್ನು ಬಿಡಿಸಿ, ಹಾಲಿನ ಬದಲಾಗಿ ಮಜ್ಜಿಗೆಯನ್ನು ಕೊಟ್ಟರೆ ಮಕ್ಕಳ ಹಸಿವೆ ಹೆಚ್ಚುತ್ತದೆ.

ADVERTISEMENT

ಬೇಸಿಗೆಯ ಕಾಲದಲ್ಲಿ ಬಾಯಾರಿಕೆಯು ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆಗ ಹೆಚ್ಚಾಗಿ ನೀರನ್ನು ಕುಡಿದರೆ ಹಸಿವೆಯಯ ಕುಂದುತ್ತದೆ. ನೀರಿನ ಬದಲಾಗಿ ಮಜ್ಜಿಗೆಯನ್ನು ಕುಡಿದರೆ ಬಾಯಾರಿಕೆಯು ತಣಿಯುವುದರ ಜೊತೆಗೆ ಜೀರ್ಣಶಕ್ತಿಯು ಸಮರ್ಪಕವಾಗಿರುತ್ತದೆ. ಇದನ್ನು ತಿಳಿದ ನಮ್ಮ ಹಿರಿಯರು ಬೇಸಿಗೆಯಲ್ಲಿ ‘ರಾಮನವಮಿ’ ಎಂಬ ಹಬ್ಬವನ್ನು ಆಚರಿಸಿ, ಇದರಲ್ಲಿ ಮಜ್ಜಿಗೆಯನ್ನು ನಾವು ಕುಡಿಯುವುದರ ಜೊತೆಗೆ ಎಲ್ಲರಿಗೂ ಹಂಚುವ ಪದ್ಧತಿಯನ್ನು ಆಚರಣೆಗೆ ತಂದರು ಎನಿಸುತ್ತದೆ. ಬೇಸಿಗೆಯಲ್ಲಿ ಕೆಲವರಿಗೆ ಭೇದಿರೋಗವು ಕಾಡುತ್ತದೆ.  ಕೆಲವರಿಗೆ ಪದೇ ಪದೇ ಮಲಪ್ರವೃತ್ತಿಯ ತೊಂದರೆ (ಐ.ಬಿ.ಎಸ್‌) ಇರುತ್ತದೆ. ಇಂತಹವರಿಗೆ ಮಜ್ಜಿಗೆಯ ಸೇವನೆಯು ರಾಮಬಾಣದಂತೆ ಕೆಲಸ ಮಾಡುತ್ತದೆ. ಮಜ್ಜಿಗೆಯ ಎಳೆಯ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿವರಿಗೂ ಮತ್ತು ಆರೋಗ್ಯವಂತರಿಗೂ ರೋಗಿಗಳಿಗೂ ಒಗ್ಗುವ ಪೇಯವಾಗಿದೆ. ಮೊಸರನ್ನು ನೀರಿನೊಡನೆ ಕಡೆದು ತಯಾರಿಸುವ ಸಾದಾ ಮಜ್ಜಿಗೆಗೆ ಶುಂಠಿ, ಕರಿಬೇವು ಮುಂತಾದವುಗಳನ್ನು ಸೇರಿಸಿದ ಮಸಾಲಾ ಮಜ್ಜಿಗೆಯು ಮಿಲ್ಕ್ ಪಾರ್ಲರ್‌ಗಳಲ್ಲಿ ಲಭ್ಯವಿದೆ. ರಕ್ತದೊತ್ತಡ, ಸಕ್ಕರೆಕಾಯಿಲೆ, ಸ್ಥೂಲತೆ ಇರುವವರು ಕೆಳಕಂಡ ರೀತಿಯಲ್ಲಿ ಮಜ್ಜಿಗೆಯನ್ನು ತಯಾರಿಸಿ ಬಳಸಬಹುದು.

ಕರೀಬೇವು, ಕೊತ್ತಂಬರಿಸೊಪ್ಪು, ಪುದಿನಾ – ತಲಾ ಮೂರು ಎಲೆಗಳು; ಹಸಿಶುಂಠಿ – ಕಡಲೆಕಾಳಿನಷ್ಟು; ಜೀರಿಗೆ, ಓಮ (ಅಜವಾನ) ತಲಾ ಕಾಲು ಚಮಚದಷ್ಟು ತೆಗೆದುಕೊಂಡು, ಅವಕ್ಕೆ ಅರ್ಧ ಲೋಟದಷ್ಟು ಮೊಸರು ಮತ್ತು ಸಮಪ್ರಮಾಣದ ನೀರನ್ನು ಬೆರೆಸಿ, ಕಡೆದು ಕೊನೆಗೆ ಸೋಸಿಕೊಳ್ಳಬೇಕು. ಈ ಮಜ್ಜಿಗೆಯನ್ನು ದಿನಕ್ಕೆ ಮೂರು ವೇಳೆ ಆಹಾರದ ನಂತರ ಸೇವಿಸಿದರೆ ಮೇಲೆ ತಿಳಿಸಿದ ರೋಗಗಳ ಜೊತೆಗೆ ಹೊಟ್ಟೆಯಲ್ಲಿ ವಾಯು ತುಂಬುವುದು ನಿವಾರಣೆಯಾಗಿ ಮುಲಬದ್ಧತೆಯೂ ದೂರವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.