ADVERTISEMENT

ಮಹಿಳೆಯರ ಹೃದಯದ ಗುಟ್ಟು

ಪ್ರಜಾವಾಣಿ ವಿಶೇಷ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಆಧುನಿಕತೆ ಎಂಬ `ಜವ್ವನೆ' ಮನುಷ್ಯ ಜೀವನದ ಅನೇಕ ಪಲ್ಲಟಗಳಿಗೆ ಕಾರಣವಾಗಿದೆ. ಉದ್ಯೋಗಸ್ಥ ಮಹಿಳೆಯರು ಇಂದು ಜೀವನಶೈಲಿ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈಚೆಗೆ ವೆಡ್ನಾ ನಡೆಸಿದ `ವಿಷುಯಲೈಸಿಂಗ್ ದಿ ಎಕ್ಸ್‌ಟೆಂಟ್ ಆಫ್ ಹಾರ್ಟ್ ಡಿಸೀಸ್ ಇನ್ ಇಂಡಿಯನ್ ವುಮೆನ್' ಎಂಬ ಸಮೀಕ್ಷೆ ಈ ಅಂಶಗಳನ್ನು ಬಹಿರಂಗಪಡಿಸಿದೆ.

ವಿವಿಧ ಉದ್ಯೋಗದಲ್ಲಿರುವ ಮೆಟ್ರೊ ಹಾಗೂ ಅರೆ ಮೆಟ್ರೊ ನಗರಗಳಲ್ಲಿ ವಾಸಿಸುತ್ತಿರುವ 600ಕ್ಕೂ ಅಧಿಕ ಮಹಿಳೆಯರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ದೃಢಪಟ್ಟಿವೆ. ಕಳೆದ ಐದು ವರ್ಷದಿಂದೀಚೆಗೆ 20 ವರ್ಷಗಳಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಶೇ. 16ರಿಂದ 20ರಷ್ಟು ರೋಗಲಕ್ಷಣ ಪ್ರಮಾಣ ಹೆಚ್ಚಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ 54 ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ, ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆ ಕುರಿತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಮತ್ತು ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಮಾತನಾಡಿದ್ದಾರೆ.
ಆತಂಕಕಾರಿ ಬೆಳವಣಿಗೆ

`ಮಹಿಳೆಯರಿಗಿಂತ ಪುರುಷರು ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂಬ ನಂಬಿಕೆ ಮೂವತ್ತು ವರ್ಷಗಳ ಹಿಂದೆ ಇತ್ತು. ಈ ನಂಬಿಕೆ ಈಗ ಕುಸಿದಿದೆ. 25-30 ವರ್ಷ ವಯಸ್ಸಿನ ಮಹಿಳೆಯರಲ್ಲೂ ಈಗ ಹೃದಯ ಸಂಬಂಧಿ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಹಿಂದಿನದಕ್ಕೆ ಹೋಲಿಸಿದರೆ ಈ ಪ್ರಮಾಣ ಈಗ ಶೇ. 10ರಿಂದ 15ರಷ್ಟು  ಹೆಚ್ಚಳವಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವುದಕ್ಕೆ ಆಸ್ಟ್ರೋಜೆನ್ ಹಾರ್ಮೋನ್‌ಗಳ ಕೊರತೆ ಹಾಗೂ ಒತ್ತಡದ ಜೀವನ ಪ್ರಮುಖ ಕಾರಣ' ಎನ್ನುತ್ತಾರೆ ಡಾ. ಸಿ.ಎನ್.ಮಂಜುನಾಥ್.

`ಋತುಚಕ್ರ ಆರಂಭಕ್ಕೂ ಮುನ್ನ ಮಹಿಳೆಯರು ಅತ್ಯಂತ ಆರೋಗ್ಯವಂತರು, ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುವುದಿಲ್ಲ ಎಂಬ ಅಭಿಪ್ರಾಯವೂ ಇತ್ತು. ಅದೂ ಈಗ ಬದಲಾಗಿದೆ' ಎಂದು ಮಾತು ಸೇರಿಸುತ್ತಾರೆ ಅವರು.

ಆಸ್ಟ್ರೋಜೆನ್ ಹಾರ್ಮೋನ್ ಕೊರತೆ
`ಹೃದಯ ಸಂಬಂಧಿ ಕಾಯಿಲೆ ತಡೆಯುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಆಸ್ಟ್ರೋಜೆನ್ ಹಾರ್ಮೋನ್‌ಗಳು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಮಹಿಳೆಯರ ದೇಹದಲ್ಲಿ ಕಡಿಮೆಯಾಗುತ್ತಿವೆ. ಹಾರ್ಮೋನ್‌ಗಳ ಕೊರತೆಯಿಂದ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಬದಲಾದ ಜೀವನ ಶೈಲಿ ಅಲ್ಲದೆ ಧೂಮಪಾನ, ಮದ್ಯಪಾನ, ಖಿನ್ನತೆ, ಒತ್ತಡ, ಬೊಜ್ಜು, ರಕ್ತದೊತ್ತಡ, ಮಧುಮೇಹ ಮೊದಲಾದ ಕಾರಣಗಳಿಂದಾಗಿ ಹೃದಯದ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿವೆ' ಎನ್ನುತ್ತಾರೆ ಡಾಕ್ಟರ್.

ಉದ್ಯೋಗಸ್ಥ ಮಹಿಳೆಯರೇ ಹೆಚ್ಚು
ಮನೆ, ಕಚೇರಿ ಎರಡನ್ನೂ ನಿಭಾಯಿಸುವ ಮಹಿಳೆಯರು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತ್ದ್ದಿದಾರೆ. ಉದ್ಯೋಗಸ್ಥ ಮಹಿಳೆಯರ ಪೈಕಿ ಶೇ.81 ಮಂದಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದರೂ ಅವರಲ್ಲಿಯೇ ಹೆಚ್ಚು ಹೃದಯ ಸಂಬಂಧಿ ಕಾಯಿಲೆ ಕಂಡುಬರುತ್ತಿದೆ. ಮನೆ, ಕಚೇರಿ ಎರಡರ ಜವಾಬ್ದಾರಿ ಹೊತ್ತಿರುವುದರಿಂದ ಸ್ವಾಭಾವಿಕವಾಗಿ ಒತ್ತಡ ಹೆಚ್ಚಾಗುತ್ತಿದೆ. ಅವಿಭಕ್ತ ಕುಟುಂಬಗಳ ಕಣ್ಮರೆ ಕೂಡ ಇದಕ್ಕೆ ಮತ್ತೊಂದು ಕಾರಣ' ಎನ್ನುತ್ತಾರೆ ಅವರು.

ತಿಳಿವಳಿಕೆ ಕೊರತೆ
`ದೇಶದಲ್ಲಿನ ಶೇ 83ರಷ್ಟು ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಹೆಚ್ಚಿನ ಜ್ಞಾನ, ತಿಳಿವಳಿಕೆಯೇ ಇಲ್ಲ. ಹೃದಯ ಕಾಯಿಲೆಗೆ ತುತ್ತಾದ ನಂತರ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಸೇರುತ್ತಿರುವುದು ಹೆಚ್ಚಾಗಿದೆ. ಇದರಿಂದ ಶೇ. 76 ಮಂದಿ ಮೃತಪಡುತ್ತಿದ್ದಾರೆ. ರೋಗ ಲಕ್ಷಣ ಗ್ರಹಿಸುವುದರಲ್ಲಿ ತೋರುತ್ತಿರುವ ವಿಳಂಬ ಧೋರಣೆಯೂ ಮರಣ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣ' ಎನ್ನುತ್ತಾರೆ ಮಂಜುನಾಥ್.

ಇವುಗಳಿಂದ ದೂರವಿರಿ


*ಒತ್ತಡ, ಖಿನ್ನತೆ
*ಮದ್ಯಪಾನ, ಧೂಮಪಾನ
*ನೋವು ನಿವಾರಕ ಔಷಧಿ
*ಕೊಬ್ಬಿನಾಂಶ ಹೆಚ್ಚಿರುವ ಆಹಾರ

ADVERTISEMENT

ಹೃದಯಕ್ಕೆ ಆಪತ್ತು ಬರುವುದು...
*ಸಕ್ಕರೆ ಕಾಯಿಲೆ
*ದೇಹದಲ್ಲಿ ಅತಿಯಾದ ಕೊಬ್ಬಿನಾಂಶ
*ರಕ್ತದೊತ್ತಡ
*ಅತಿಯಾದ ನಿರೀಕ್ಷೆಗಳು

ಹೃದಯದ ಆರೋಗ್ಯಕ್ಕೆ...
*ಯೋಗ, ನಿತ್ಯ ವ್ಯಾಯಾಮ
*ವರ್ಷಕ್ಕೊಮ್ಮೆ ತಪಾಸಣೆ
*ಉತ್ತಮ ಆಹಾರ ಪದ್ಧತಿ
*ಒತ್ತಡರಹಿತ ಜೀವನ
*ತರಕಾರಿ ಮತ್ತು ಹಣ್ಣು ಸೇವನೆ
*ಕಡಿಮೆ ಮಾಂಸಾಹಾರ ಸೇವನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.