ADVERTISEMENT

ಮಾತು: ವ್ಯಕ್ತಿತ್ವದ ಭಾವಸೂಚಕ

ಮೋಹನ ಕಾನರ್ಪ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST
ಮಾತು: ವ್ಯಕ್ತಿತ್ವದ ಭಾವಸೂಚಕ
ಮಾತು: ವ್ಯಕ್ತಿತ್ವದ ಭಾವಸೂಚಕ   

‘ಮಾತು’ ಈ ಶಬ್ದವೇ ಮುತ್ತಿನಂತೆ. ಇದು ಮನುಷ್ಯರಿಗೆ ದೇವರು ನೀಡಿದ ವರ. ‘ಅಮ್ಮಾ...’ ಎಂಬ ಮೊದಲ ಶಬ್ದದಿಂದ ಆರಂಭವಾಗುವ ಮಾತಿನ ಲಹರಿ ಸದಾ ಹರಿಯುತ್ತಲೇ ಇರುತ್ತದೆ. ಮಾತು ತಿಳಿನೀರಿನಂತೆ ಹರಿಯಬೇಕೆ ಹೊರತು ಭೋರ್ಗೆರೆವ ನದಿಯಂತೆ ಅಲ್ಲ. ಮಾತು ಮನುಷ್ಯ–ಮನುಷ್ಯರ ನಡುವೆ ಸಂಬಂಧಗಳನ್ನು ಹುಟ್ಟುಹಾಕುತ್ತದೆ. ಭಾವನೆಗಳನ್ನು ವ್ಯಕ್ತಪಡಿಸಲೂ ಇದುವೇ ಸಾಧನ.

‘ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು’ಎನ್ನುವುದು ಹಿರಿಯರ ಮಾತು. ಎಷ್ಟೇ ಓದಿ, ಯಾವುದೇ ಪದವಿಯಲ್ಲಿದ್ದು, ಹಣ–ಅಂತಸ್ತು ಏನೇ ಇದ್ದರೂ ಒಳ್ಳೆಯ ಮಾತನ್ನಾಡುವ ಗುಣ ಇಲ್ಲದಿದ್ದರೆ ಮನುಷ್ಯಸಂಬಂಧದಲ್ಲಿ ಸೊಗಸು ಕಾಣದು. ‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಎಂಬ ಗಾದೆ ಮಾತಿನಂತೆ ನಾವು ಆಡುವ ಪ್ರತಿ ಮಾತನ್ನು ಎಚ್ಚರದಿಂದ ಆಡಬೇಕು. ಇಲ್ಲದಿದ್ದರೆ ಒಂದು ಚಿಕ್ಕ ಮಾತು ಜೀವನದ ನೆಮ್ಮದಿಯನ್ನು ಹಾಳು ಮಾಡಬಹುದು.

ಇಂದು ಮಾತಿನಿಂದಲೇ ಅದೆಷ್ಟೋ ಸಂಬಂಧಗಳ ನಡುವಿನ ಬಾಂಧವ್ಯಗಳು ಹಾಳಾಗುತ್ತಿವೆ. ತಂದೆ–ತಾಯಿ, ಅಣ್ಣ–ತಮ್ಮ, ಗಂಡ–ಹೆಂಡತಿ ಇವರ ನಡುವಿನ ಆತ್ಮೀಯತೆಯೇ ಮರೆಯಾಗಿದೆ. ಆ ಕಾರಣದಿಂದಾಗಿ ವಿಚ್ಛೇದನ ಪ್ರಕರಣಗಳು, ಕೌಟುಂಬಿಕ ಕಲಹಗಳು ಹುಟ್ಟಿ ಸಂಬಂಧಗಳು ನ್ಯಾಯಲಯದ ಮೆಟ್ಟಿಲು ಹತ್ತುತ್ತಿವೆ. ಮಾತಿನಲ್ಲಿ ಉಂಟಾದ ಸಣ್ಣ ಜಗಳವೇ ಮುಂದೆ ದ್ವೇಷದ ಮಟ್ಟದವರೆಗೆ  ಹೋಗಿ, ಅನಾಹುತಗಳನ್ನೂ ಸೃಷ್ಟಿಸಬಲ್ಲದು.

ADVERTISEMENT

ಮಾತು ಆಡುವ ಮೊದಲೇ ಯೋಚಿಸಿದರೆ ಆಮೇಲೆ ಅದಕ್ಕಾಗಿ ನೊಂದುಕೊಳ್ಳುವ ಪ್ರಸಂಗ ಎದುರಾಗುವುದಿಲ್ಲ. ನೋಯಿಸಿದ ಮೇಲೆ ‘ಸಾರಿ’ ಎಂಬ ಪದ ಹೇಳಿದರೆ ನೋವಿಗೆ ಅದು ಔಷಧ ಆಗದು. ಎಲ್ಲರ ಜೀವನದಲ್ಲೂ ಪರಸ್ಪರ ಭಿನ್ನಾಭಿಪ್ರಾಯ, ವಾದ–ವಿವಾದಗಳು ಸ್ವಾಭಾವಿಕ. ಆದರೆ ಅಂಥ ಸಂದರ್ಭಗಳಲ್ಲಿ ತಾಳ್ಮೆ–ಕ್ಷಮಾಗುಣ ನಮ್ಮಲ್ಲಿದ್ದರೆ ಬದುಕು ಸುಂದರವಾಗುವುದರಲ್ಲಿ ಸಂಶಯವಿಲ್ಲ. 

ನೆನಪಿಡಬೇಕಾದ ಅಂಶಗಳು

* ಮಾತು ಮಾನವನಿಗೆ ಸ್ವಾಭಾವಿಕವಾಗಿ. ಆದರೆ ನಾಲಿಗೆಯನ್ನು ಹತೋಟಿಯಲ್ಲಿಡಬೇಕಾದದ್ದು ಮುಖ್ಯ.

* ಮಾತು ಶಿಸ್ತುಬದ್ಧವಾಗಿರಲಿ; ಬೇಕಾಬಿಟ್ಟಿ ಬಾಯಿಗೆ ಬಂದಂತೆ ಮಾತಾನಾಡುವುದು ಸೂಕ್ತವಲ್ಲ.

* ಇತರರೊಂದಿಗೆ ಮಾತನಾಡುವಾಗ ಆಸಕ್ತಿಯಿಂದ ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಿ. ಅದಕ್ಕೆ ಅನುಗುಣವಾಗಿ ಸಂಸ್ಕಾರಯುತ ವರ್ತನೆ ನಿಮ್ಮದಾಗಲಿ.

* ಮಾತಿನಲ್ಲಿ ಎಚ್ಚರ ಮುಖ್ಯ. ಇತರರ ಲೋಪ–ದೋಷಗಳಿಗೆ ಪ್ರತಿಕ್ರಿಯಿಸುವುದೇ ನಮ್ಮ ಮಾತಿನ ಉದ್ದೇಶ ಆಗಬಾರದು.

* ಮಾತಿನಲ್ಲಿ ಅಹಂಭಾವನೆ ಬೇಡ; ಮಾತಿನಲ್ಲಿ ಪ್ರೀತಿ–ವಿಶ್ವಾಸಗಳು ತುಂಬಿರಲಿ.

* ಯಾರೊಂದಿಗೆ ಯಾವಾಗ, ಯಾವ ರೀತಿ, ಹೇಗೆ ಮಾತನಾಡಬೇಕು – ಎಂಬ ಎಚ್ಚರ ಸದಾ ಇರಲಿ.

* ನಿಮ್ಮಲ್ಲಿನ ಲೋಪ–ದೋಷಗಳ ಬಗ್ಗೆ ಆತ್ಮೀಯರು ತಿಳಿಸಿದರೆ ಅವನ್ನು ವಿಮರ್ಶೆಗೆ ಒಡ್ಡಿ; ಹೇಳಿದವರನ್ನು ದ್ವೇಷಿಸಲು ಮುಂದಾಗಬೇಡಿ.

* ಸಣ್ಣ ಪುಟ್ಟ ಕಾರಣಗಳಿಗೆ ಜಗಳಕ್ಕೆ ಇಳಿದು, ಗೆಳೆತನವನ್ನು ಮುರಿದುಕೊಳ್ಳಬೇಡಿ.

ಬದುಕಿನ ಉನ್ನತಿಗೂ–ಅವನತಿಗೂ, ಸಂಘರ್ಷಕ್ಕೂ–ಪ್ರೀತಿಗೂ ಮಾತು ಕಾರಣವಾಗುತ್ತದೆ. ಹೀಗಾಗಿ ಮಾತನಾಡುವ ಮೊದಲು ನಾಲ್ಕಾರು ಸಲ ಯೋಚಿಸಿ, ಮಾತನಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.