ನನ್ನ ಸಂಗಾತಿ ಸಹನಾಮಯಿ. ಆದರೆ ಅದೆಷ್ಟು ಕಾಲ ಅವರು ಹಂಗೇ ಕಾಯಬೇಕು? ಯೋನಿ ಸಂಕುಚನದ ಸಮಸ್ಯೆ ಇರುವ ಪ್ರತಿ ರೋಗಿಯೂ ಒಂದೊಂದು ಕತೆಯನ್ನು ಬಿಚ್ಚಿಡುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ನವದಂಪತಿ. ಹೆಂಡತಿಗೆ ತಾನು ಹೆಂಡತಿಯ ಕರ್ತವ್ಯ ನಿಭಾಯಿಸುತ್ತಿಲ್ಲ ಎಂಬ ನೋವು. ಅವರ ಸಂಬಂಧ ಬಾಂಧವ್ಯವಾಗಿ ಬದಲಾಗುತ್ತಿಲ್ಲ ಎಂಬ ‘ನೋವು’... ಅವರಿಗಿದೆ.
ಇನ್ನೊಂದು ಪ್ರಕರಣವಿದೆ. ಇಲ್ಲಿ ದಂಪತಿ ವರ್ಷಗಟ್ಟಲೆ ಮಿಲನಕ್ಕಾಗಿ ಹಾತೊರೆದರು. ಸಂಭೋಗಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಆದರೆ ಅವರೀಗಲೂ ದಂಪತಿಯಂತೆ ಬದುಕುತ್ತಿಲ್ಲ ಆದರೆ ಒಂದೇ ಮನೆಯಲ್ಲಿರುವ ಸದಸ್ಯರಂತಿದ್ದಾರೆ.
ಇನ್ನೊಂದು ಪ್ರಕರಣವನ್ನೂ ನೋಡಿ... ಇಲ್ಲೊಬ್ಬ ಹೆಣ್ಣುಮಗಳಿಗೆ ಮಿಲನದ ಪ್ರತಿ ವಿಫಲ ಯತ್ನದ ನಂತರವೂ ಖಿನ್ನತೆಗೆ ಒಳಗಾಗುತ್ತಿದ್ದರು. ಅದೆಷ್ಟೇ ಚಿಕಿತ್ಸೆಗೊಳಪಟ್ಟರೂ ಆ ಹೆಣ್ಣುಮಗಳು ಮಾತ್ರ ಖಿನ್ನತೆಯಿಂದಾಚೆ ಬರಲಾಗುತ್ತಿರಲಿಲ್ಲ.
ಅವರ ಸಂಗಾತಿಗೂ ಮಿಲನದ ಈ ವಿಫಲ ಯತ್ನದಿಂದಾಗಿ ತಾವು ತಿರಸ್ಕೃತರು ಎಂಬ ಭಾವ ಬೇರೂರುತ್ತಿತ್ತು. ಪರಿಣಾಮವಾಗಿ ಶೀಘ್ರಕೋಪಿಗಳಾಗಿದ್ದರು. ಯಾಕೆ ಹಂಗಾಗಿತ್ತು? ಏನಾಗಿತ್ತು ಅವರಿಬ್ಬರ ನಡುವೆ?
ಇಂಥ ಹತ್ತು ಹಲವು ಪ್ರಕರಣಗಳಿವೆ. ನೂರಾರು ಕಥನಗಳಿವೆ. ಮಿಲನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೇ ಮಕ್ಕಳನ್ನು ಪಡೆಯುವ ಆಸೆಯನ್ನೇ ಹಲವು ದಂಪತಿಗಳು ಕೈ ಬಿಟ್ಟಿದ್ದಾರೆ.
ಕಾರಣ ಯೋನಿ ಸಂಕುಚನ.
ಯೋನಿ ಸಂಕುಚನವನ್ನು ಸಂಭೋಗದ ಯತ್ನದಲ್ಲಿದ್ದಾಗ ಯೋನಿ ಸುತ್ತಲಿನ ಸ್ನಾಯುಗಳು ಅನೈಚ್ಛಿಕವಾಗಿ ಬಿಗಿಗೊಳ್ಳುವುದು ಎಂದು ವ್ಯಾಖ್ಯಾನಿಸಬಹುದಾಗಿದೆ. ಇದು ನಿಮ್ಮ ಲೈಂಗಿಕ ಜೀವನದಲ್ಲಿ ಅಡ್ಡಿಯಾಗುವ ಅಥವಾ ಲೈಂಗಿಕ ಬದುಕನ್ನೇ ಸ್ಥಗಿತಗೊಳಿಸಬಹುದಾದ ಸಮಸ್ಯೆಯಾಗಿದೆ. ಇದರಿಂದಾಗಿ ಖಿನ್ನತೆ, ಆತ್ಮವಿಶ್ವಾಸದ ಕೊರತೆ ಹಾಗೂ ಬಾಂಧವ್ಯಗಳ ನಡುವೆ ಸಮಸ್ಯೆಗಳನ್ನು ಸೃಷ್ಟಿಸಬಹುದಾಗಿದೆ.
ದಾಂಪತ್ಯ ಸುಖದಿಂದ ವಂಚನೆ ಅಷ್ಟೇ ಅಲ್ಲ ಕೌಟುಂಬಿಕ ಸುಖದಿಂದಲೂ ವಂಚನೆಯಾಗುತ್ತದೆ. ಮಗುವಾಗದೇ ಇರವುದರಿಂದ ನಿಮ್ಮದೇ ಆದ ಕುಟುಂಬವನ್ನು ಹೊಂದುವುದು ಅಸಾಧ್ಯವಾಗುತ್ತದೆ. ಈ ಸನ್ನಿವೇಶದಿಂದಾಗಿ ಡಿಂಭದ ತಪಾಸಣೆ ಮತ್ತು ಪರಿಶೀಲನೆಯನ್ನೂ ಮಾಡದಂತಾಗುತ್ತದೆ. ಚಿಕಿತ್ಸೆಯೂ ದೂರದ ಮಾತಾಗಿ ಉಳಿಯುತ್ತದೆ. ಯೋನಿ ಸಂಕುಚನದ ಲಕ್ಷಣಗಳು ಪ್ರತಿ ಮಹಿಳೆಯರಲ್ಲಿಯೂ ಪ್ರತ್ಯೇಕವಾಗಿರುತ್ತದೆ.
ಕೆಲವರಿಗೆ ಅವರ ಯೋನಿಯೊಳಗೆ ಏನನ್ನೂ ತೂರಿಸಲಾಗದು. ಇನ್ನೂ ಕೆಲವರು ಟ್ಯಾಂಪೋನ್ ಬಳಸಬಲ್ಲರು. ಆದರೆ ಮತ್ತೇನನ್ನೂ ಸ್ವೀಕರಿಸಲಾರರು. ಅವರ ಯೋನಿದ್ವಾರ ಸಂಪೂರ್ಣವಾಗಿ ಮುಚ್ಚಿರುತ್ತದೆ. ಆದರೆ ಇನ್ನೂ ಕೆಲವರಲ್ಲಿ ಸಂಭೋಗ ಕ್ರಿಯೆ ಸಾಧ್ಯವಾದರೂ ನೋವಿನಿಂದ ಕೂಡಿರುತ್ತದೆ.
ಯೋನಿ ಸಂಕುಚನದ ಲಕ್ಷಣಗಳು
ಸಾಮಾನ್ಯವಾಗಿ ಸಂಭೋಗಕ್ರಿಯೆಯಲ್ಲಿ ಪಾಲ್ಗೊಳ್ಳುವಾಗ ಮಹಿಳೆಯರು ಸಹಿಸಲು ಅಸಾಧ್ಯವಾದ ನೋವನ್ನು ಅನುಭವಿಸುತ್ತಾರೆ. ಇದು ಸಂಭೋಗ ಕ್ರಿಯೆಗೆ ಯತ್ನಿಸುವಾಗ ಮಾತ್ರ ಈ ನೋವು ಕಂಡು ಬರುತ್ತದೆ. ಆ ಪ್ರಯತ್ನವನ್ನು ಕೈಬಿಟ್ಟ ಕೂಡಲೇ ನೋವು ಮಾಯವಾಗುತ್ತದೆ.
ಚಿಕಿತ್ಸೆ
ಒಂದು ವೇಳೆ ದೈಹಿಕ ಕಾರಣಗಳಿಂದಾಗಿ ಯೋನಿ ಸಂಕುಚನಗೊಳ್ಳುತ್ತಿದೆಯೇ?
ಯೋನಿದ್ವಾರದ ಬಳಿಯ ಅತಿ ಸೂಕ್ಷ್ಮ ನರಗಳೇನಾದರೂ ಅಡ್ಡ ಬಂದಿವೆಯೇ?
ಅದರಿಂದಾಗಿ ನೋವು ಹೆಚ್ಚಾಗಿದೆಯೇ ಇವನ್ನೆಲ್ಲ ಗಮನಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ದೈಹಿಕ ಕಾರಣಗಳಿಂದಾಗಿ ಈ ಸಮಸ್ಯೆ ಉಂಟಾಗಿದ್ದರೆ ಅದಕ್ಕೆ ಪರಿಹಾರವಂತೂ ಇದ್ದೇ ಇದೆ. ಅಷ್ಟೇ ಅಲ್ಲ ಸ್ವಯಂ ಸಹಾಯದ ಕೆಲವು ತಂತ್ರಗಳೂ ಇವೆ.
ಲೈಂಗಿಕ ಥೆರಪಿ
ಲೈಂಗಿಕ ಮನೋಚಿಕಿತ್ಸಕರೊಡನೆ ಸಮಾಲೋಚನೆಗೆ ಒಳಗಾಗಬಹುದು. ಲೈಂಗಿಕ ಕ್ರಿಯೆಯ ಬಗ್ಗೆ ಇರುವ ಆತಂಕವನ್ನು ನಿವಾರಿಸಿ, ಅನಿಯಂತ್ರಿತವಾಗಿ ಬಿಗಿಗೊಳ್ಳುವ ಪ್ರಕ್ರಿಯೆಯಾಗದಂತೆ ತಡೆಯಬಹುದು. ಇಲ್ಲವೇ ತಜ್ಞ ಆಪ್ತ ಸಮಾಲೋಚಕರು ಆ ಸಮಯದಲ್ಲಿ ನೀವು ಉದ್ವೇಗಕ್ಕೆ ಒಳಗಾಗದಂತೆ, ಆತಂಕಕ್ಕೆ ಒಳಗಾಗದಂತೆ ತಡೆಯಲು ತರಬೇತಿ ನೀಡುವರು. ಸಾಕಷ್ಟು ತಿಳಿ ಹೇಳುವರು. ಮಾನಸಿಕ ಸಮಸ್ಯೆಗಳಿದ್ದಲ್ಲಿ ಅದಿಲ್ಲಿ ನಿವಾರಣೆಯಾಗುತ್ತದೆ. ಅನಿಯಂತ್ರಿತವಾಗಿ ಬಿಗಿಗೊಳ್ಳದಂತೆ ಸಹಾಯ ಮಾಡುತ್ತಾರೆ.
ಸ್ನಾಯುಗಳು ಸಡಿಲಗೊಳ್ಳಲು ಸಹಾಯಕವಾಗುವ ಕೆಲವು ವ್ಯಾಯಾಮಗಳನ್ನೂ ಸೂಚಿಸುತ್ತಾರೆ. ಇದಲ್ಲದೇ ವಜಿನಲ್ ಟ್ರೈನರ್ಸ್ ಎಂದು ಕರೆಯುವ ಸಾಧನಗಳನ್ನೂ ಬಳಸಬಹುದು. ವಜೀನಲರ್ ಟ್ರೈನರ್ಸ್‌ಗಳ ಬಳಕೆಯಿಂದಾಗಿ ಸ್ನಾಯುಗಳು ಸಡಿಲಗೊಳ್ಳುತ್ತವೆ. ಅಷ್ಟೇ ಅಲ್ಲ ನಿಧಾನವಾಗಿ ನೋವನ್ನು ಮರೆಯುವಂತಾಗುತ್ತದೆ. ಟ್ರೈನರ್ಸ್‌ಗಳ ಬಳಕೆಯನ್ನು ತಾವೇ ಮಾಡಬಹುದು. ತಮಗೆ ಅನುಕೂಲವಾದಾಗ ಹಾಗೂ ತಮ್ಮ ಮನೆಯಲ್ಲಿಯೇ ಖಾಸಗಿತನವನ್ನು ಉಳಿಸಿಕೊಂಡು ಚಿಕಿತ್ಸೆಯನ್ನು ಆರಂಭಿಸಬಹುದು.
ಟ್ರೈನರ್ಸ್‌ಗಳೆಂದರೆ ಪ್ಲಾಸ್ಟಿಕ್‌ನ ಮೃದುವಾದ ಶಿಶ್ನದ ಆಕಾರದ ಸಾಧನಗಳಾಗಿರುತ್ತವೆ. ನಾಲ್ಕು ವಿವಿಧ ಗಾತ್ರಗಳಲ್ಲಿ ದೊರೆಯುತ್ತವೆ. ಇದರಿಂದ ಯಾವುದೇ ಆತಂಕಗಳಿಲ್ಲದೇ ನಿಮ್ಮೊಳಗೆ ಪ್ರವೇಶಿಸಲು ಈ ಸಾಧನಗಳು ಸಹಾಯಕವಾಗಿರುತ್ತವೆ. ನಿಧಾನವಾಗಿ ಆದರೆ ನೋವು ರಹಿತವಾದ, ಸುಖದ ಸಂವೇದನೆಯನ್ನು ಹೆಚ್ಚಿಸುವಂಥ ಕಾರ್ಯ ಈ ಚಿಕಿತ್ಸೆಯಿಂದಾಗುತ್ತದೆ. ಅಗತ್ಯವಿದ್ದಲ್ಲಿ ಜಾರಕಗಳನ್ನು ಬಳಸಬಹುದು. ಗಾತ್ರದಲ್ಲಿ ಚಿಕ್ಕದಾಗಿರುವ ಟ್ರೈನರ್‌ಗಳನ್ನು ಮೊದಲು ಪ್ರಯತ್ನಿಸಬೇಕು. ನೋವಿನ ಆತಂಕ ನಿವಾರಣೆಯಾಗಬಹುದು.
ಸಹಿಸಲು ಸಾಧ್ಯವೆನಿಸಲೂಬಹುದು. ಆ ಸಂದರ್ಭದಲ್ಲಿ ಎರಡನೆಯ ಹಂತದ ಟ್ರೈನರ್ ಬಳಕೆಗೆ ಮುಂದಾಗಬಹುದು. ಹಾಗೆಯೇ ನಿಧಾನವಾಗಿ ಮೂರು ಮತ್ತು ನಾಲ್ಕನೆಯ ಹಂತದ ಟ್ರೈನರ್‌ಗಳನ್ನು ಬಳಸಬಹುದು. ಈ ಟ್ರೈನರ್‌ಗಳ ಬಳಕೆಯಿಂದ ಯೋನಿದ್ವಾರವೇನೂ ಅಗಲವಾಗುವುದಿಲ್ಲ. ಆದರೆ ಯೋನಿಯ ಸುತ್ತಲಿನ ಸ್ನಾಯುಗಳು ಸಡಿಲಗೊಳ್ಳುತ್ತವೆ.
ಇದು ಕೇವಲ ಸ್ವೀಕರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಕೊನೆಯ ಹಂತದ ಸಾಧನವನ್ನು ಬಳಸುವಾಗ ನೋವಾಗದಿದ್ದರೆ ನೀವು ಸಂಗಾತಿಯೊಡನೆ ಕೂಡುವ ಸಮಯ ಸನಿಹದಲ್ಲಿದೆ ಎಂದೇ ಅರ್ಥ. ಯಾವುದೋ ನೋವಿನ ಆತಂಕವಿಲ್ಲದೆ ಸಂಭೋಗ ಕ್ರಿಯೆಗೆ ಮುಂದಾಗಬೇಕು.
ಈ ತಂತ್ರವು ಯೋನಿಯನ್ನು ಅಗಲಗೊಳಿಸುವುದಿಲ್ಲ. ಯೋನಿಯನ್ನು ಹಿಗ್ಗಿಸುವುದೂ ಇಲ್ಲ. ಕೇವಲ ನೋವಿಲ್ಲದೇ ಸಂಭೋಗಕ್ರಿಯೆಯಲ್ಲಿ ನಿಮ್ಮ ಸಂಗಾತಿಯನ್ನು ಸ್ವೀಕರಿಸುವಾಗ ಸ್ನಾಯುಗಳು ಸಹಕರಿಸುವುದನ್ನಷ್ಟೇ ತರಬೇತಿಗೊಳಿಸುತ್ತವೆ. ಹಾಗಾಗಿ ಟ್ರೈನರ್‌ಗಳ ಬಗ್ಗೆ ಹೆಚ್ಚಿನ ಆತಂಕ ಬೇಡ.
ಆದರೆ ಕೊನೆಯ ಹಂತಕ್ಕೆ ತಲುಪಲು ದಿನಗಳಷ್ಟೇ ಅಲ್ಲ, ಕೆಲವೊಮ್ಮೆ ವಾರಗಟ್ಟಲೆ ಕಾಯಬೇಕಾಗಬಹುದು. ಸದ್ಯ ಟ್ರೈನರ್‌ಗಳಿಗಿಂತಲೂ ಮುಂದಿರುವ ಇನ್ನೊಂದು ತಂತ್ರವೂ ಬಂದಿದೆ. ಪ್ಲಾಸ್ಟಿಕ್‌ನ ಸ್ವಯಂಚಾಲಿತ ಟ್ರೈನರ್‌ಗಳು ಲಭ್ಯ ಇವೆ. ಇದು ಇನ್ನೂ ಸುಲಭಗೊಳಿಸುತ್ತದೆ ಹಾಗೂ ವಾರಗಟ್ಟಲೆ ಕಾಯಬೇಕಾಗಿಲ್ಲ.
ಮಾಹಿತಿಗೆ ಸಂಪರ್ಕಿಸಿ: 18002084444
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.