ಬೆಂಗಳೂರು ಒಳಗೊಂಡಂತೆ ದೇಶದ ಮೆಟ್ರೊ ನಗರಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅದರಲ್ಲೂ ಇತರರಿಗೆ ಹೋಲಿಸಿದರೆ ರಾತ್ರಿ ಪಾಳಿ ಮಾಡುವವರು ಶೇ 41ರಷ್ಟು ಬೇಗ ಹೃದಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ವೆಬ್‌ಸೈಟ್ ವರದಿ ಮಾಡಿದೆ.
ಅಲ್ಲದೆ ಜಂಕ್‌ಫುಡ್ ಸೇವನೆ, ಅನಿಯಮಿತ ನಿದ್ರೆ, ವ್ಯಾಯಾಮ ಮಾಡದಿರುವುದು, ಅಧಿಕ ರಕ್ತದೊತ್ತಡ ಮುಂತಾದವುಗಳೂ ಹೃದ್ರೋಗದ ಕಾರಣಗಳಾಗಿವೆ ಎಂದೂ ಸಮೀಕ್ಷೆಯಿಂದ ತಿಳಿದು ಬಂದಿದೆ.
ಅನೇಕ ವಲಯಗಳಲ್ಲಿ ರಾತ್ರಿ ಪಾಳಿ ಕೆಲಸ ಮಾಡುವುದು ಅನಿವಾರ್ಯ. ಹೃದಯದ ಆರೋಗ್ಯದ ಬಗ್ಗೆ ಇವರಲ್ಲಿ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಜಾಗೃತಿ ಹೇಗೆ, ಮುನ್ನೆಚ್ಚರಿಕಾ ಕ್ರಮಗಳೇನು ಎಂಬ ಬಗ್ಗೆ `ಮೆಡಿಹೋಪ್~ ಆಸ್ಪತ್ರೆಯ ಹೃದಯ ತಜ್ಞ ಡಾ.ಅರಿವಳಗನ್ ಸೇಗರ್ ಮಾತನಾಡಿದ್ದಾರೆ.
ನಗರದ ಯುವ ಜನರಲ್ಲಿ/ಮುಖ್ಯವಾಗಿ ರಾತ್ರಿ ಪಾಳಿ ಮಾಡುವವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಕಾರಣವೇನು?
ಒತ್ತಡ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೆಳೆಯಬೇಕು, ಹೆಚ್ಚು ಹಣ ಸಂಪಾದಿಸಬೇಕು ಎನ್ನುವ ಆಕಾಂಕ್ಷೆ ಹಾಗೂ ಅದರಿಂದ ಉಂಟಾಗುವ ಒತ್ತಡವೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು. ಇದಲ್ಲದೇ, ಅನಿಯಮಿತ ಆಹಾರ ಮತ್ತು ನಿದ್ರೆ, ವ್ಯಾಯಾಮ ಇಲ್ಲದಿರುವುದೂ ಇತರೆ ಕಾರಣಗಳಾಗಿವೆ.
ಹೃದಯದ ಕಾಳಜಿ ವಹಿಸುವುದು ಹೇಗೆ?
ಮೊದಲ ಮಹತ್ವದ ಹೆಜ್ಜೆ ಎಂದರೆ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಲ್ಲಿಸಬೇಕು. ಧೂಮಪಾನಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಇತರರಿಗಿಂತ ಮೂರು ಪಟ್ಟು ಅಧಿಕ. ಅಲ್ಲದೇ, ದಿನನಿತ್ಯ ವ್ಯಾಯಾಮ ಮಾಡುವುದು, ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿ ಹೆಚ್ಚಿನ ಕೊಬ್ಬಿನಾಂಶ ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಸಮರ್ಪಕ ನಿದ್ದೆಯೂ ಅಗತ್ಯ.
ಹೃದಯಾಘಾತದ ಮುಖ್ಯ ಲಕ್ಷಣಗಳೇನು?
ಬೆವರುವುದು, ತಲೆ ತಿರುಗುವುದು, ವಾಕರಿಕೆ, ಉಸಿರಾಟ ತೊಂದರೆ, ಅನಿಯಮಿತ ಹೃದಯ ಬಡಿತ ಇತ್ಯಾದಿ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಗುರುತರ ಲಕ್ಷಣಗಳು ಕಂಡು ಬರದೇ ಹೋಗಬಹುದು. ಹಾಗೆಯೇ ಹೃದಯಾಘಾತದ ಲಕ್ಷಣಗಳು ಹೃದಯದಿಂದಲೇ ಕಾಣಿಸಿಕೊಳ್ಳುತ್ತವೆ ಎಂತಲೂ ಹೇಳುವಂತಿಲ್ಲ. ಕೆಲವೊಮ್ಮೆ ಗಂಟಲು, ದವಡೆ, ಭುಜಗಳಲ್ಲಿಯೂ ನೋವು ಕಂಡುಬರಬಹುದು.
ಒಮ್ಮೆ ಹೃದಯಾಘಾತ ಸಂಭವಿಸಿದ ನಂತರ ಮುಂದಿನ ಹೆಜ್ಜೆ?
ವೈದ್ಯರ ಸಲಹೆಯಂತೆ ಜೀವನಶೈಲಿ ಬದಲಾವಣೆ ಮತ್ತು ನಿರಂತರ ತಪಾಸಣೆ.
ಹೃದಯಕ್ಕೆ ಸಸ್ಯಾಹಾರ ಒಳ್ಳೆಯದೇ, ಮಾಂಸಾಹಾರವೇ?
ಹಾಗೆ ನಿರ್ದಿಷ್ಟವಾಗಿ ಹೇಳಲಾಗದು, ಆದರೆ ಕೆಂಪು ಮಾಂಸ (ಗೋಮಾಂಸ ಮತ್ತು ಹಂದಿ ಮಾಂಸ ) ಹಾಗೂ ತುಪ್ಪ ಹೃದಯಕ್ಕೆ ಅಷ್ಟು ಒಳ್ಳೆಯದಲ್ಲ.
ಹೃದಯದ ಆರೋಗ್ಯಕ್ಕಾಗಿ ಮುಖ್ಯ ಸಲಹೆ?
ಹೃದಯ ಸಂಬಂಧಿ ಸಮಸ್ಯೆಗಳಿಗೆ ಔಷಧಿಗಿಂತಲೂ ವ್ಯಾಯಾಮ ಮತ್ತು ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವನ ಶೈಲಿ ಬದಲಾಯಿಸಿಕೊಳ್ಳುವುದರಿಂದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಧಿಕ ರಕ್ತದೊತ್ತಡ ಹೃದಯಕ್ಕೆ ತೊಂದರೆ ಕೊಡುವ ಮುಖ್ಯ ಅಂಶಗಳಲ್ಲಿ ಒಂದು.
ಕಡಿಮೆ ರಕ್ತದೊತ್ತಡ ಇರುವವರಲ್ಲಿ ಹೃದಯ ಕಾಯಿಲೆಗಳು ಕಂಡುಬರುತ್ತವೆಯೇ?
ಬಹಳ ಕಡಿಮೆ.
ಹೃದಯ ಸಮಸ್ಯೆಗಳಲ್ಲಿ ಅನೇಕ ವಿಧಗಳಿವೆ. ಯಾವುದು ಹೃದಯಾಘಾತ, ಯಾವುದು ಸಾಮಾನ್ಯ ತೊಂದರೆ ಎಂದು ಕಂಡುಹಿಡಿಯುವುದು ಹೇಗೆ?
ಇದನ್ನು ಗುರುತಿಸುವುದು ಸಾಮಾನ್ಯ ಜನರಿಗೆ ಕಷ್ಟ. ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಸಲಹೆ ಕೇಳುವುದು ಉತ್ತಮ. 40 ವರ್ಷ ದಾಟಿದ ನಂತರ ಯಾವುದೇ ತೊಂದರೆ ಕಂಡುಬರದೇ ಇದ್ದರೂ ಎರಡು ವರ್ಷಕ್ಕೆ ಒಮ್ಮೆಯಾದರೂ ತಪಾಸಣೆ ಮಾಡಿಸಿಕೊಳ್ಳಬೇಕು.
ಮಹಿಳೆಯರಿಗಿಂತಲೂ ಪುರುಷರಿಗೆ ಹೃದಯಾಘಾತ ಅಧಿಕ ಎಂಬ ನಂಬಿಕೆ ಇದೆ?
ಹೌದು, ಮಹಿಳೆಯರಿಗೆ ನೈಸರ್ಗಿಕ ರಕ್ಷಣೆ (ಋತುಚಕ್ರ) ಇದೆ ಎನ್ನುವುದನ್ನು ವೈದ್ಯಕೀಯ ಮೂಲಗಳು ದೃಢಪಡಿಸಿವೆ. ಆದರೆ ಮುಟ್ಟು ನಿಂತ ನಂತರ ಮಹಿಳೆಯರು ನಿಯಮಿತ ಹೃದಯ ತಪಾಸಣೆಗೆ ಒಳಗಾಗುವುದು ಒಳ್ಳೆಯದು.
`ಸೈಲೆಂಟ್ ಹಾರ್ಟ್ ಅಟ್ಯಾಕ್~ ಬಗ್ಗೆ ತಿಳಿಸಿ?
ಹೆಸರೇ ಸೂಚಿಸುವಂತೆ `ಸೈಲಂಟ್ ಹಾರ್ಟ್ ಅಟ್ಯಾಕ್~ ಕೊನೆಯ ಗಳಿಗೆಯವರೆಗೂ ಯಾವುದೇ ಮುನ್ಸೂಚನೆ ನೀಡುವುದಿಲ್ಲ. ಎದೆ ನೋವು ಅಥವಾ ಇತರ ಯಾವುದೇ ಪ್ರಕಾರದ ಲಕ್ಷಣಗಳು ಇಲ್ಲಿ ಕಂಡುಬರುವುದಿಲ್ಲ. ಆದರೆ ಎದೆಯ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಸಿವಿಸಿ ಉಂಟಾಗಬಹುದು. ರೋಗಿಯ ವೈದ್ಯಕೀಯ ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ಹಾಗೂ ನಿಯಮಿತವಾದ ಇಸಿಜಿ ಮತ್ತು ರಕ್ತ ಪರೀಕ್ಷೆ ನಡೆಸುವ ಮೂಲಕ ಇದನ್ನು ಗುರುತಿಸಬಹುದು.
ಮಾಹಿತಿಗೆ- 08033431000
ಜ್ಞ್ಛಿಟಃಞಛಿಜಿಟಛಿಟಜಿಠಿಚ್ಝ.್ಚಟಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.