ADVERTISEMENT

ವರ್ತಮಾನದಲ್ಲಿ ಬದುಕಿ

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ನಿಮ್ಮ ದೇಹವನ್ನು ನೀವು ಹೇಗೆ ನೋಡಿಕೊಳ್ಳುತ್ತಿ­ದ್ದೀರಾ? ಅದಕ್ಕೆ ಎಷ್ಟು ಆರೈಕೆ ಮಾಡುತ್ತಿದ್ದೀರಾ? ನಿಮ್ಮ ದೇಹದೆಡೆ ಆಸ್ಥೆ ವಹಿಸುತ್ತಿದ್ದೀರಾ?  ತಾಯಿಯೊಬ್ಬಳು ಮಗುವನ್ನು ಆರೈಕೆ ಮಾಡಿದಂತೆ ನಿಮ್ಮ ದೇಹವನ್ನು ನೋಡಿಕೊಳ್ಳ­ಬೇಕು. ಆರೋಗ್ಯಕರ ಆಹಾರ, ಸಾಕಷ್ಟು ವಿಶ್ರಾಂತಿ ನೀಡಬೇಕು.

ನಿಯಮಿತವಾಗಿ  ವ್ಯಾಯಾಮ ಮಾಡಬೇಕು. ನೀವು ದೇಹವನ್ನು ನಿರ್ಲಕ್ಷ್ಯಿಸಿದಲ್ಲಿ ಅದು ಸೊರಗುತ್ತದೆ.   ನಮ್ಮ ದೇಹ ಒಂದು ಯಂತ್ರವಲ್ಲ. ಯಂತ್ರದಲ್ಲಿ ಜೀವಕೋಶಗಳು ಇರುವುದಿಲ್ಲ. ಆದರೆ, ದೇಹದಲ್ಲಿ  ಜೀವಂತ ಕೋಶಗಳು ಇರುತ್ತವೆ. ಪ್ರತಿ ಜೀವಕೋಶಕ್ಕೂ ಅದರದ್ದೇ ಆದ ಬದುಕು ಇರುತ್ತದೆ. ಮನಸ್ಸೂ ಇರು­ತ್ತದೆ.

ಇಂತಹ ಕೋಟ್ಯಂತರ ಕೋಶಗಳು ಪ್ರೀತಿ­ಯಿಂದ ಸಂಯೋಜನೆ ಹೊಂದಿ ನಮ್ಮನ್ನು ಪೂರ್ಣವಾಗಿಸುತ್ತವೆ. ಸಾಮಾನ್ಯವಾಗಿ ದೇಹ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಆದರೆ, ನಮ್ಮ ಗಮನ ನೀಡದ ಹೊರತೂ ಆರೋಗ್ಯ­ಯುತವಾಗಿ ಇರುವುದಿಲ್ಲ. ದೇಹದೆಡೆ ನಾವು ಗಮನ ಹರಿಸದೇ ಇದ್ದಾಗ ಕ್ರಮೇಣ ಅನಾ­ರೋಗ್ಯ ಆವರಿಸುತ್ತದೆ. ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಿರಿಕಿರಿ ಶುರುವಾಗುತ್ತದೆ.
ನಿಮಗೆ ಅತ್ಯುತ್ತಮ ಆರೋಗ್ಯ ಬೇಕು ಅಂದರೆ ದೇಹಕ್ಕೆ ಕೇವಲ ಔಷಧ ಹಾಗೂ ವಿಟಮಿನ್‌ಗಳನ್ನು ನೀಡಿದರೆ ಸಾಕಾಗುವುದಿಲ್ಲ.

ADVERTISEMENT

ನೀವು ಅದರ ಜತೆಯೇ ಇರಬೇಕಾಗುತ್ತದೆ. ನಿಮ್ಮ ಮನಸ್ಸು ಯಾವಾಗಲೂ ಏನನ್ನಾದರೂ ಯೋಚಿಸುತ್ತಿದ್ದರೆ, ಭೂತಕಾಲ, ಭವಿಷ್ಯತ್‌ ಕಾಲದ ನಡುವೆ ತೊಳಲಾಡುತ್ತಿದ್ದಲ್ಲಿ ದೇಹಕ್ಕೆ ತೊಂದರೆಯಾಗುತ್ತದೆ. ಸಂದುಹೋದ ಕಾಲದಲ್ಲಿ ಅನುಭವಿಸಿದ ನೋವನ್ನು ದೇಹ ಮತ್ತೊಮ್ಮೆ ಅನುಭವಿಸಬೇಕಾಗುತ್ತದೆ. ಈ ಹಿಂದೆ ಅನುಭವಿ­ಸಿದ ಖುಷಿ ಕೂಡ ಈಗ ನೋವು ಕೊಡುತ್ತದೆ. ಏಕೆಂದರೆ ಈಗ ಆ ಖುಷಿ ಮತ್ತೆ ದಕ್ಕುವುದಿಲ್ಲ. ಮಾನಸಿಕ ಹಾಗೂ ದೈಹಿಕ ನೋವು ಹೀಗೆ ಮರುಕಳಿಸುತ್ತಲೇ ಇರುತ್ತದೆ.

ವರ್ತಮಾನ­ದಲ್ಲಿ ಬದುಕುವುದು ಅಂದರೆ ಆಲೋಚನೆ ಮಾಡ­ದಿರುವುದು ಇಲ್ಲವೇ ಅತ್ಯಲ್ಪ ಆಲೋಚ­ನೆ­ಗಳನ್ನು ಹೊಂದಿರುವುದು. ಭೂತಕಾಲದಿಂದ ದೂರ ಸರಿದಾಗ ಇದು ಸಾಧ್ಯವಾಗುತ್ತದೆ. ನೀವು ವಸ್ತುನಿಷ್ಠ ಧೋರಣೆ ಬೆಳೆಸಿಕೊಳ್ಳುತ್ತೀರಿ. ‘ನಾನು ಇಂದು ವಿಭಿನ್ನವಾಗಿದ್ದೇನೆ’ ಎಂಬ ಅರಿವು ನಿಮಗಾಗುತ್ತದೆ. ಇಂತಹ ಬದಲಾವಣೆ ಒಳ್ಳೆಯದು. ಅನಿವಾರ್ಯ ಸಹ. 

ಬೆಳಿಗ್ಗೆ ನಡೆದ ಮೀಟಿಂಗ್‌  ಹೇಗಾಯಿತು ಎಂದು ಯಾರಾದರೂ ಪ್ರಶ್ನಿಸಿದಾಗ ನೀವು ತಡಬಡಾಯಿಸಿದಲ್ಲಿ ಬೇಸರ ಪಟ್ಟುಕೊಳ್ಳಬೇಡಿ. ನೀವು ವರ್ತಮಾನದಲ್ಲಿ ಬದುಕಿದಾಗ ಹೀಗಾಗುತ್ತದೆ. ಬೆಳಿಗ್ಗೆ ನಡೆದ ಘಟನೆ ಆಗಲೇ ಹಳೆಯದಾಗಿರುತ್ತದೆ. ಸದಾ ವರ್ತಮಾನದಲ್ಲಿ ಬದುಕಿದಾಗ ನಿಮ್ಮ ಬದುಕು ಸುಂದರವಾಗುತ್ತದೆ. ಸಣ್ಣ ಕೋಣೆ ದೊಡ್ಡದಾಗಿ ಕಾಣುತ್ತದೆ. ಬದುಕು ಉಲ್ಲಾಸಮಯವಾಗಿರುತ್ತದೆ. ವರ್ತಮಾನ ಯಾವಾಗಲೂ ನಿರಂತರವಾಗಿರುತ್ತದೆ.

  ನೀವು ಹಳೆಯದನ್ನು ಕಿತ್ತೊಗೆದಾಗ ನಿಮ್ಮ ಬದುಕಿನಲ್ಲಿ ಹೊಸ ಸಂಗತಿಗಳು ಜರುಗುತ್ತವೆ. ಬದಲಾವಣೆ ಬರುತ್ತದೆ.   ಭೂತಕಾಲ ನಮ್ಮಿಂದ ಜಾರಿಹೋಗಿದೆ. ಭವಿಷ್ಯ ಕೇವಲ ಭ್ರಮೆ. ಈ ಎರಡರ ನಡುವಿನ ವರ್ತಮಾನ ಮಾತ್ರ ಸತ್ಯ. ಈ ಸತ್ಯ ಅರಿತಾಗ ನೀವು ಕಳೆದುಹೋದ ಕಾಲದ ಬಗ್ಗೆ, ಸಂಗತಿಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತೀರಿ.

* ನಾವು ಯಾವಾಗಲೂ ಉತ್ತಮ ಮನೋಭಾವ ಬೆಳೆಸಿಕೊಳ್ಳಬೇಕು.
* ನಂಬಿಕೆ, ಧೈರ್ಯವನ್ನು ಯಾವಾಗಲೂ ಬಿಡಬಾರದು.
* ಪ್ರೀತಿ ಮತ್ತು ಕೃತಜ್ಞತೆಯನ್ನು ಮುಕ್ತವಾಗಿ ನೀಡಬೇಕು.
* ಭಾವನೆ, ಆಲೋಚನೆಗಳನ್ನು ಸೌರ್ಹಾದವಾಗಿಟ್ಟುಕೊಳ್ಳಬೇಕು.
ಈ ಕಥೆಯನ್ನು ಓದಿ. ಮಹಿಳೆಯೊಬ್ಬಳು ಬದುಕಿನ ಉದ್ದಕ್ಕೂ ಋಣಾತ್ಮಕ ಧೋರಣೆಯಿಂದ ಬದುಕಿದ್ದಳು. ಆದರೆ, ಒಂದೇ ಒಂದು ಒಳ್ಳೆಯ ಕೆಲಸ ಮಾಡಿದ್ದಳು.

ಆಕೆ ಸತ್ತಾಗ ದೇವರು ಹೀಗೆ ಹೇಳಿದ.  ’ನೀನು ಬದುಕಿನ ತುಂಬ ನೇತ್ಯಾತ್ಮಕ ಧೋರಣೆ ಹೊಂದಿದ್ದರಿಂದ ನರಕದಲ್ಲೇ ಬಹುಕಾಲ ಬದುಕಬೇಕಾಗುತ್ತದೆ. ಸ್ವರ್ಗದಲ್ಲಿ ಐದು ನಿಮಿಷ ಇರಬಹುದು. ಎಲ್ಲಿ ಮೊದಲು ಹೋಗುತ್ತೀಯಾ ಎಂಬುದನ್ನು ನಿರ್ಧರಿಸಿಕೊ’.   ಸ್ವರ್ಗಕ್ಕೇ ಮೊದಲು ಹೋಗುತ್ತೇನೆ ಎಂದು ಆಕೆ ಹೇಳಿದಳು.

ಸ್ವರ್ಗ ತಲುಪಿದ ಕೂಡಲೇ ಆಕೆ ಆ ಸಮಯ ಉಪಯೋಗಿಸಿಕೊಂಡಳು. ಸಕಾರಾತ್ಮಕ ವಾಗಿ ಆಲೋಚಿಸತೊಡಗಿದಳು. ಆ ಸುಂದರ ಕ್ಷಣಗಳು ವರ್ಧಿಸುತ್ತಲೇ ಹೋದವು. ಆಕೆಗೆ ನೀಡಲಾದ ಐದು ನಿಮಿಷ­ಗಳು ಶಾಶ್ವತ ಕ್ಷಣಗಳಾಗಿ ಪರಿಣಮಿಸಿದವು. ವರ್ತಮಾನದಲ್ಲಿ ಬದುಕುವುದು ಅಂದರೆ ಹಾಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.