ಬಹು ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು ಚಿರಪರಿಚಿತ. ದೇಶದ ಎಲ್ಲ ಕಡೆಗಳಿಂದಲೂ ಬೇರೆ ಬೇರೆ ಆರ್ಥಿಕ ಸ್ಥಿತಿಗತಿಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಜನರು ಜೀವನೋಪಾಯ ಕಂಡುಕೊಳ್ಳಲು ಇಲ್ಲಿಗೆ ಬರುತ್ತಾರೆ. ಹೀಗೆ ಬಂದವರು ಕ್ರಮೇಣ ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ. ಹೊಸ ವಾತಾವರಣ, ಹೊಸ ಪರಿಸರ, ಹೊಸ ಬಗೆಯ ಆಹಾರಕ್ರಮ ಮತ್ತು ವಿಶೇಷವಾಗಿ ಹೊಸ ಜೀವನಶೈಲಿಗೆ ಹೊಂದಿಕೊಳ್ಳುತ್ತಾರೆ. ಇಂಥ ಜೀವನಶೈಲಿಯ ಎರಡು ಮುಖ್ಯ ಹಿನ್ನಡೆಗಳು ಎಂದರೆ, ಅನಾರೋಗ್ಯಕರ ಆಹಾರ ಆಯ್ಕೆಗಳು ಹಾಗೂ ಮನೆಯಲ್ಲಿಯೇ ಕುಳಿತು ಅಕ್ಷರಶಃ ಎಲ್ಲದರಲ್ಲೂ ಐಷಾರಾಮಿತನವನ್ನು ಪಡೆದುಕೊಳ್ಳುವುದು. ಇದರಿಂದ ದೈಹಿಕ ಚಟುವಟಿಕೆಗಳಿಗೆ ಆಸ್ಪದವಿಲ್ಲದೆ ಜೀವನಶೈಲಿ ಜಡವಾಗುತ್ತದೆ. ಇದು ಬೊಜ್ಜಿಗೆ ದಾರಿ.
ಮಹಿಳೆಯರಿಗೆ(ಶೇಕಡಾ 31.8) ಹೋಲಿಸಿದರೆ ಅತಿತೂಕವು ಪುರುಷರಲ್ಲಿ(ಶೇಕಡಾ 42.4)ಹೆಚ್ಚಿಗೆ ಇದೆ ಎಂದು ಅಧ್ಯಯನವೊಂದು ಹೇಳಿದೆ. ಬೆಂಗಳೂರಿನಲ್ಲಿ ವಯೋ-ಹೊಂದಾಣಿಕೆಯ ಬೊಜ್ಜಿನ ಪ್ರಮಾಣ ಶೇಕಡಾ 35.5. ಈ ವಿಷಯದಲ್ಲಿ ಪುರುಷರಿಗಿಂತ (ಶೇಕಡಾ 26.4) ಮಹಿಳೆಯರು (ಶೇಕಡಾ 44)ಹೆಚ್ಚು ಸ್ಥೂಲಕಾಯರು. ಬೊಜ್ಜು ಮತ್ತು ಅತಿತೂಕದ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ.
ಕಾಯಿಲೆ ಇರುವುದು ತಿಳಿದ ನಂತರ, ಅದನ್ನು ಕಡಿಮೆಮಾಡಲು ಔಷಧ ತೆಗೆದುಕೊಳ್ಳುತ್ತಾರೆ. ತೊಂದರೆ ಇರುವುದು ಗೊತ್ತಾದ ನಂತರ ಜನರ ಗಮನ ಚಿಕಿತ್ಸೆಯಿಂದ ತೊಂದರೆ ತಡೆಗಟ್ಟುವುದರತ್ತ ಕೇಂದ್ರೀಕರಿಸಲ್ಪಡುತ್ತದೆ. ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತಿದೆ ಎಂಬುದಕ್ಕೆ ಬೆಂಗಳೂರಿನ ತುಂಬೆಲ್ಲ ಕಂಡುಬರುವ ಫಿಟ್ನೆಸ್ ಕೇಂದ್ರಗಳೇ ಸಾಕ್ಷಿ.
ಚರ್ಮದ ಮೃದುತ್ವ
ಬಿಎಂಐ ಸೂಕ್ತ ಪ್ರಮಾಣದಲ್ಲಿ ಇರಬೇಕಾದುದು ಎಲ್ಲರಿಗೂ ಮುಖ್ಯ. ಬಿಎಂಐ ಎಂದರೆ ಬಾಡಿ ಮಾಸ್ ಇಂಡೆಕ್ಸ್. ವ್ಯಕ್ತಿಯೊಬ್ಬ ಸಹಜ ತೂಕ ಹೊಂದಿದ್ದಾನೆಯೇ, ಅತಿತೂಕ ಹೊಂದಿದ್ದಾನೆಯೇ ಅಥವಾ ಕಡಿಮೆ ತೂಕ ಹೊಂದಿದ್ದಾನೆಯೇ ಎಂಬುದನ್ನು ಇದು ಸೂಚಿಸುತ್ತದೆ. ವ್ಯಕ್ತಿಯ ಆರೋಗ್ಯಕ್ಕೆ, ರೂಪಕ್ಕಿಂತ, ಸೂಕ್ತ ಬಿಎಂಐನೊಂದಿಗೆ ಫಿಟ್ ಮತ್ತು ಸ್ಲಿಮ್ ಆಗಿರುವುದು ಹೆಚ್ಚು ಮುಖ್ಯ. ಅತಿತೂಕದವರಿಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚು. ಇದರ ಜೊತೆಗೆ, ದೇಹದ ಎಲ್ಲ ಕಡೆ ಚರ್ಮದ ಸುಕ್ಕುಗಳೊಂದಿಗೆ ಹೆಚ್ಚು ವಯಸ್ಸಾದಂತೆ ಕಾಣುತ್ತದೆ.
ಚರ್ಮದ ಒಳಗೆ ಬೊಜ್ಜಿನ ಅಂಶ ಹೆಚ್ಚಿ, ಅದು ಚರ್ಮಕ್ಕೆ ಸ್ಪಂಜ್ ಮತ್ತು ಮೃದುತ್ವದ ಭಾವನೆ ಉಂಟುಮಾಡುತ್ತದೆ. ಇದರರ್ಥ, ಚರ್ಮ ಹೆಚ್ಚು ಮೃದುವಾಗುತ್ತಿದೆ ಎಂದಲ್ಲ. ಬದಲಿಗೆ, ವಾಸ್ತವ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ.
ಪುರುಷರು ತೂಕವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಯಾಕೆ ಮುಖ್ಯ? ಜೀವನಶೈಲಿ ಅವ್ಯವಸ್ಥೆಗಳಿಂದ ಪುರುಷರಲ್ಲಿ ನಿಮಿರು ದೌರ್ಬಲ್ಯ, ಪ್ಯಾಂಕ್ರಿಯಾಸ್ ಕ್ಯಾನ್ಸರ್, ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಹಾರ್ಮೋನ್ ಅವ್ಯವಸ್ಥೆಗಳು, ಮಧುಮೇಹ ಮುಂತಾದ ತೊಂದರೆಗಳಿಗೆ ಹಾದಿಮಾಡುತ್ತದೆ. ಆದ್ದರಿಂದ, ದೈಹಿಕ ವ್ಯಾಯಾಮ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಕ್ರಮದ ಮೂಲಕ ತೂಕವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದರಿಂದ ಜೀವನಶೈಲಿ ಸಂಬಂಧಿ ಅವ್ಯವಸ್ಥೆಗಳನ್ನು ತಡೆಗಟ್ಟಬಹುದು.
ಪುರುಷರು ತೂಕ ಇಳಿಸುವ ಯತ್ನದಲ್ಲಿದ್ದಾಗ, ಸ್ನಾಯುಗಳ ನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ತೂಕ ಇಳಿಸುವ ವ್ಯಾಯಾಮ ಮಾಡುತ್ತಿರುವಾಗ ದೇಹವು ಸ್ನಾಯು ಅಂಗಾಂಶಗಳನ್ನು ಏಕೆ ಮುರಿಯುತ್ತದೆ? ಆಹಾರ ಸೇವನೆ ಕಡಿಮೆ ಇರುವಾಗ, ಕ್ಯಾಲರಿ(ಗ್ಲೂಕೋಸ್) ಕೊರತೆಯನ್ನು ದೇಹಕ್ಕೆ ತುಂಬಿಕೊಡಬೇಕು. ದೇಹದ ರಕ್ತ ಪ್ರವಾಹದಲ್ಲಿ ಪ್ರೋಟೀನ್‌ಗಳು ನಿರಂತರವಾಗಿ ಇರುವುದನ್ನು ಖಾತ್ರಿಪಡಿಸಿದರೆ, ಪ್ರೋಟೀನ್‌ಗಳಿಗಾಗಿ ದೇಹವು ಸ್ನಾಯು ಅಂಗಾಂಶಗಳತ್ತ ಹೋಗುವ ಸಾಧ್ಯತೆ ಕಡಿಮೆ. ಆದ್ದರಿಂದ ಆಹಾರದ ಮೂಲಕ ಸಾಕಷ್ಟು ಪ್ರೋಟೀನ್‌ಗಳು ದೇಹಕ್ಕೆ ಹೋಗುವಂತೆ ನೋಡಿಕೊಳ್ಳಬೇಕು.
ದೇಹದ ಪ್ರತಿ ಕೆ.ಜಿ.ತೂಕಕ್ಕೆ ಪ್ರತಿ ದಿನಕ್ಕೆ 1-1.5 ಗ್ರಾಂ ಪ್ರೋಟೀನ್ ತೆಗೆದುಕೊಳ್ಳಬೇಕು. ಇದನ್ನು ದಿನದ ನಾಲ್ಕು ಆಹಾರ ಸೇವನೆಗಳಿಗೆ ಸಮಾನವಾಗಿ ವಿಂಗಡಿಸಿಕೊಳ್ಳಬೇಕು. ಇದರಿಂದ, ದೇಹದ ರಕ್ತ ಪ್ರವಾಹದಲ್ಲಿ ಸತತವಾಗಿ ಪ್ರೋಟೀನ್ ಇರುವುದನ್ನು ಖಾತ್ರಿಪಡಿಸಬಹುದು. ಅಂದಾಗ, ದೇಹವು ಪರಿಶ್ರಮದಿಂದ ಗಳಿಸಿದ, ಸ್ನಾಯು ಅಂಗಾಂಶದಿಂದ ಪ್ರೋಟಿನ್ ಪಡೆಯುವುದಕ್ಕೆ ಮತ್ತೊಮ್ಮೆ ಆಲೋಚಿಸುತ್ತದೆ.
ವ್ಯಕ್ತಿಯೊಬ್ಬ ತೂಕ ಇಳಿಸುವುದಕ್ಕೆ ಹೊರಟಿದ್ದಾನೆ ಎಂದುಕೊಳ್ಳೋಣ. ಆತ ಏನನ್ನು ತಗ್ಗಿಸುವುದಕ್ಕೆ ಯತ್ನಿಸುತ್ತಾನೆ? ಎಲುಬಿನ ಸಾಂದ್ರತೆಯನ್ನೇ? ಅಂಗಾಂಗಗಳ ತೂಕವನ್ನೇ? ಅಲ್ಲ. ಸಾಮಾನ್ಯವಾಗಿ ಆ್ಯಡಿಪೋಸ್ ಟಿಶ್ಯೂಗಳಲ್ಲಿನ ಕೊಬ್ಬನ್ನು ಇಳಿಸಲು ನೋಡುತ್ತಾರೆ.
ಪೌಷ್ಟಿಕಾಂಶಯುಕ್ತ ಆಹಾರಕ್ರಮದ ಮೂಲಕ ತೂಕ ನಿರ್ವಹಣೆ ಮತ್ತು ಆರೋಗ್ಯಕರ ದೇಹ ಹೊಂದಬಹುದೇ ವಿನಾ ತೀವ್ರವಾದ ಕಟ್ಟುನಿಟ್ಟಿನ ಆಹಾರಕ್ರಮದ ಮೂಲಕ ಅಲ್ಲ.
ತೂಕ ಇಳಿಕೆ ನಂತರ ಚರ್ಮ ಜೋತುಬೀಳುವುದು ಜನರು ಎದುರಿಸುವ ಸಾಮಾನ್ಯ ಸಮಸ್ಯೆ. ಏಕೆ ಹೀಗಾಗುತ್ತದೆ ಎಂದರೆ, ತೀವ್ರ ಗತಿಯಲ್ಲಿ ತೂಕವನ್ನು ಕಡಿಮೆ ಮಾಡಿಕೊಂಡಾಗ ಚರ್ಮ ಕೂಡ ಅದೇ ವೇಗದಲ್ಲಿ ತೂಕ ಇಳಿಕೆಗೆ ಹೊಂದಿಕೊಳ್ಳಬೇಕಾಗುತ್ತದೆ. ತನ್ನ ಸ್ಥಿತಿಸ್ಥಾಪಕತ್ವ ಗುಣದ ಹೊರತಾಗಿಯೂ ಅನೇಕ ಕಿಲೋ ತೂಕ ಇಳಿಕೆ ನಂತರವೂ ಚರ್ಮವು ತನ್ನ ಮೊದಲಿನ ಸ್ವರೂಪವನ್ನೇ ಇಟ್ಟುಕೊಳ್ಳಬಲ್ಲದು.
ಮಗುವಿಗೆ ಜನ್ಮ ಕೊಟ್ಟ ನಂತರ ಗರ್ಭಿಣಿಯರಲ್ಲಿ ಇದೇ ರೀತಿ ಆಗುತ್ತದೆ. ಚರ್ಮ ಹಾಳಾಗದಂತೆ ನೋಡಿಕೊಳ್ಳಲು ಉತ್ತಮ ಉಪಾಯ ಎಂದರೆ, ನಿಧಾನಕ್ಕೆ, ಕ್ರಮೇಣ ತೂಕ ಇಳಿಸಲು ಯತ್ನಿಸುವುದು. ತೂಕ ಇಳಿಸಲು ತೀವ್ರ ಕಟ್ಟುನಿಟ್ಟಿನ ಡಯಟ್ ಅಥವಾ ಶಸ್ತ್ರಚಿಕಿತ್ಸೆ ಬದಲಿಗೆ ಸೂಕ್ತ ಸಮತೋಲನದ, ಕಡಿಮೆ ಕ್ಯಾಲರಿಯ ಆಹಾರಕ್ರಮ ಮತ್ತು ನಿಯಮಿತ ವ್ಯಾಯಾಮದಂತಹ ಆರೋಗ್ಯಕರ ತೂಕ ಇಳಿಕೆ ವಿಧಾನಗಳನ್ನು ಯತ್ನಿಸುವುದು ಒಳಿತು.
ಇಂಥ ಕ್ರಮಗಳಿಂದ ಫಲಿತಾಂಶ ವೇಗವಾಗಿ ಸಿಗದಿದ್ದರೂ, ಹೊಂದಿಕೊಳ್ಳಲು ಚರ್ಮಕ್ಕೆ ಸಾಕಷ್ಟು ಸಮಯ ಸಿಗುತ್ತದೆ ಮತ್ತು ಚರ್ಮ ದೃಢವಾಗಿರುತ್ತದೆ ಮತ್ತು ಎಳೆಯದಾಗಿ ಕಾಣುತ್ತದೆ. ನಿಧಾನ ಮತ್ತು ಆರೋಗ್ಯಕರ ತೂಕ ಇಳಿಕೆ ವಿಧಾನವು ದೀರ್ಘಕಾಲೀನ ನೆಲೆಯಲ್ಲಿ ತೂಕ ಬಾರದಂತೆ ಖಾತ್ರಿಪಡಿಸುತ್ತದೆ. ಈ ನಿಟ್ಟಿನಲ್ಲಿ ಸಲಹೆಸೂಚನೆ, ಮಾರ್ಗದರ್ಶನಕ್ಕಾಗಿ ಸ್ಲಿಮಿಂಗ್ ಮತ್ತು ಆಹಾರತಜ್ಞರನ್ನು ಭೇಟಿಯಾಗುವುದನ್ನು ಸಲಹೆ ಮಾಡಲಾಗಿದೆ. ಈ ತಜ್ಞರು ಕುಟುಂಬದ ಆರೋಗ್ಯ ಇತಿಹಾಸ, ಹಾಲಿ ಆರೋಗ್ಯ ಪರಿಸ್ಥಿತಿ ಮುಂತಾದ ಅಂಶಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಾರೆ.
(ಲೇಖಕರ ಸಂಪರ್ಕ ಸಂಖ್ಯೆ: 8884400323)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.