ADVERTISEMENT

ನಾರಿನ ಮಹತ್ವಕ್ಕೆ ಮತ್ತಷ್ಟು ಒತ್ತು

ಕೆ.ಸಿ.ರಘು
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
ನಾರಿನ ಮಹತ್ವಕ್ಕೆ ಮತ್ತಷ್ಟು ಒತ್ತು
ನಾರಿನ ಮಹತ್ವಕ್ಕೆ ಮತ್ತಷ್ಟು ಒತ್ತು   

ಕೆಲವು ವರ್ಷಗಳಿಂದ ನಮ್ಮ ಆಹಾರದಲ್ಲಿರುವ ನಾರಿನಂಶದ (dietary fiber) ಬಗ್ಗೆ ಹೆಚ್ಚು ವಿಷಯಗಳು ತಿಳಿಯಲ್ಪಟ್ಟಿವೆ. ಅಲ್ಲದೇ, ಆರೋಗ್ಯದ ಮೇಲೆ ಅದರ ಸಕಾರಾತ್ಮಕ ಪರಿಣಾಮಗಳೂ ಅರಿವಿಗೆ ಬರುತ್ತಿವೆ. ಇತ್ತೀಚೆಗೆ, ಜಾರ್ಜಿಯ ಸ್ಟೇಟ್ ವಿಶ್ವವಿದ್ಯಾಲಯದವರು ನಾರಿನಾಂಶ ಅತಿ ಕಡಿಮೆ ಇರುವ ಆಹಾರವನ್ನು ಇಲಿಗಳಿಗೆ ಕೊಟ್ಟು ಪ್ರಯೋಗ ಮಾಡಿದರು. ಆಗ ಅವುಗಳಲ್ಲಿ ಅನೇಕ ರೋಗಗಳು ಉಲ್ಬಣಗೊಂಡಿದ್ದನ್ನು ವಿವರಿಸಿದ್ದಾರೆ.

ಕರುಳಿನಲ್ಲಿ ಆರೋಗ್ಯಕ್ಕೆ ಪೂರಕವಾದ ಸೂಕ್ಷ್ಮಜೀವಿಗಳು ನಾಶವಾಗುವುದರಿಂದ, ಕರುಳನ್ನು ರಕ್ಷಿಸುವ ಮ್ಯೂಕಸ್ ಪರದೆ ಹಾಳಾಗಿ ಕೆಟ್ಟ ರೋಗಕಾರಕ ಸೂಕ್ಷ್ಮಜೀವಿಗಳು ಕರುಳನ್ನು ದಾಟಿ ಒಳ ಬರುವುದನ್ನು ಗಮನಿಸಿದ್ದಾರೆ. ಹಾಗೆಯೇ ನಾರಿನಾಂಶ ಕಡಿಮೆ ಇರುವ ಆಹಾರದಿಂದ ತೂಕ ಹೆಚ್ಚಾಗುವುದನ್ನೂ ಗಮನಿಸಿದರು. ಹಿಂದೆ ನಾರು ಎಂದರೆ, ಕೇವಲ ಶಕ್ತಿಯನ್ನು ಕೊಡದ ಗಾತ್ರಕ್ಕಾಗಿ ಇರುವ ನಿಷ್ಪ್ರಯೋಜಕ ಆಹಾರದ ಅಂಶ ಎಂದು ಪರಿಗಣಿಸಲಾಗುತ್ತಿತ್ತು. ಈಗ ನಾರು ಕರುಳಿನಲ್ಲಿ ಸೂಕ್ಷ್ಮಜೀವಿಗಳ ಸಹಾಯದಿಂದ ಜೀರ್ಣಗೊಂಡು ಸುಮಾರು ಒಂದು ಗ್ರಾಂಗೆ ಎರಡು ಕ್ಯಾಲರಿಯಷ್ಟು ಶಕ್ತಿಯನ್ನು ಒದಗಿಸುತ್ತದೆ ಎನ್ನಲಾಗುತ್ತಿದೆ. ಈ ರೀತಿ ಪಚನಗೊಂಡ ನಾರಿನಿಂದ ಉತ್ಪತ್ತಿಯಾಗುವ ‘ಶಾರ್ಟ್ ಚೈನ್ ಫ್ಯಾಟಿ ಆಸಿಡ್ಸ್’ ಅಂಶಗಳು ಲಿವರ್‌ನಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದನ್ನು ಕೂಡ ಹತ್ತಿಕ್ಕುತ್ತವೆ. ಕೊಲೆಸ್ಟ್ರಾಲನ್ನು ಕಡಿಮೆ ಮಾಡುವ ಔಷಧ ‘ಸ್ಟಾಟಿನ್‌’; ಇದರ ವ್ಯಾಪಾರ ಹಲವು ಜಗತ್ತಿನಾದ್ಯಂತ ಹಲವು ಕೋಟಿಗಳಷ್ಟು. ಆದರೆ ನಮಗೆ ಸುಲಭವಾಗಿ ಸಿಗುವ ನಾರು ಮಾಡುವ ಕೆಲಸ ಕೂಡ ಆ ಔಷಧದ ಕೆಲಸವೇ ಎನ್ನುವುದನ್ನು ನಾವು ತಿಳಿಯಬೇಕಿದೆ.  ಜೀರ್ಣಾಂಗದ ವ್ಯವಸ್ಥೆಯಲ್ಲಿ ಪ್ರಯೋಜಕ ಸೂಕ್ಷ್ಮಜೀವಿಗಳಿಗೆ ಹಾಸಿಗೆ ಮತ್ತು ಹೊದಿಕೆಯಾಗಿರುವಂಥದ್ದೇ ನಾರು.

ಇಂದು ಉತ್ತಮ ಸೂಕ್ಷ್ಮಜೀವಿಗಳನ್ನು (probiotics) ಹೊರಗಿನಿಂದ ಮಾರುಕಟ್ಟೆಯಲ್ಲಿ ಕೊಂಡು ಸೇವನೆ ಮಾಡುತ್ತಿದ್ದಾರೆ. ಇವುಗಳನ್ನು ಪ್ರತ್ಯೇಕವಾಗಿ ಸೇವಿಸುವ ಬದಲು, ಅವುಗಳಿಗೆ ಪೂರಕ ವಾತಾವರಣವನ್ನು ಕರುಳಿನಲ್ಲಿ ಒದಗಿಸಿಕೊಟ್ಟರೆ, ಅದು ತಾನಾಗಿಯೇ ಸಹಸ್ರಾರು ಸಂಖ್ಯೆಯಲ್ಲಿ ದ್ವಿಗುಣಗೊಳ್ಳುತ್ತದೆ. ನಾರನ್ನೂ ನಾವು ಔಷಧದ ಅಂಗಡಿಯಲ್ಲಿ ಕೊಂಡು ಸೇವಿಸುತ್ತಿರುವುದುಂಟು! ಇತ್ತ ದವಸಧಾನ್ಯಗಳಿಂದ ನಾರನ್ನು ಬೇರ್ಪಡಿಸಿ, ಹಂದಿ ಮತ್ತು ಎಮ್ಮೆಗಳಿಗೆ ಹಾಕುತ್ತಿದ್ದೇವೆ. ಇಲ್ಲಿ ಗಮನಿಸಬೇಕಾದ ವಿಷಯ, ಆಹಾರದಿಂದ ಬೇರ್ಪಡಿಸಿ ಹೊರತೆಗೆದು ನುಣ್ಣಗೆ ಪುಡಿ ಮಾಡಿದ ನಾರು ಅದರ ಕೆಲಸವನ್ನು ಮಾಡುವುದಿಲ್ಲ. ಆಹಾರದಿಂದ ತೆಗೆಯದೆ ಉಳಿಸಿಕೊಂಡಿದ್ದಾಗ, ಪ್ರಕೃತಿದತ್ತವಾಗಿ ಇತರ ಪೌಷ್ಟಿಕಾಂಶಗಳೊಂದಿಗೆ ಬೆರೆತಿರುವಾಗ, ಅದು ಆರೋಗ್ಯಕರವಾಗಿರುತ್ತದೆ.

ADVERTISEMENT

ದವಸಧಾನ್ಯಗಳಲ್ಲಿ ಸಿಗುವ ನಾರಿಗಿಂತಲೂ, ಹಣ್ಣು-ತರಕಾರಿಗಳಲ್ಲಿನ ನಾರು ಉತ್ತಮ ಎನ್ನುತ್ತಾರೆ. ಹಾಗೆಯೇ, ಅಳವಿಬೀಜ, ಚಿಯಾಸ್ ಬೀಜ ಮತ್ತು ಕಾಮಕಸ್ತೂರಿಯಂತಹ ಎಣ್ಣೆಕಾಳುಗಳನ್ನು ನೀರಿನಲ್ಲಿ ನೆನೆಸಿ ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಸೇವಿಸುವುದರಿಂದ ಉತ್ತಮ ಗುಣಮಟ್ಟದ ಕರಗುವ ನಾರನ್ನು ಪಡೆಯಬಹುದು. ಕರಗದ ನಾರು ಮತ್ತು ಕರಗುವ ನಾರು ಎಂದು ನಾರಿನಲ್ಲಿ ಎರಡು ವಿಧಗಳುಂಟು.

ಹಣ್ಣುಗಳ ಜ್ಯೂಸ್ ಸೇವನೆಯ ಬದಲು ಹಣ್ಣುಗಳನ್ನೇ ತಿನ್ನುವುದರಿಂದ ನಾರಿನಾಂಶವು ಸೇವಿಸಿದಂತಾಗುವುದು. ಹಾಗೇ ಸಕ್ಕರೆಯಂತಹ ಅಂಶಗಳು ನಿಧಾನವಾಗಿ ರಕ್ತಗತವಾಗುವುದರಿಂದ ಮಧುಮೇಹರೋಗಕ್ಕೆ ಎಡೆಮಾಡಿಕೊಡುವುದಿಲ್ಲ. ಪೌಷ್ಟಿಕಾಂಶ ಉತ್ತಮ ರೀತಿಯಲ್ಲಿ ಪಡೆಯಲು ಮತ್ತು ದೇಹಪ್ರಕೃತಿಗೆ ಹೊಂದಿಕೊಳ್ಳುವಂತೆ ಜೀರ್ಣಿಸಲು ನಾರಿನ ಹೊದಿಕೆ ಅತ್ಯವಶ್ಯಕ. ದಶಕದ ಹಿಂದೆ ನಮ್ಮ ದೇಹದ ಗುಣಾಣುಗಳನ್ನು ಮ್ಯಾಪ್ ಮಾಡಿದಾಗ, ಅಲ್ಲಿ ಕೆಲಸ ಮಾಡುವ ಗುಣಾಣುಗಳು ಕೇವಲ ಶೇ 3, ಉಳಿದ ಗುಣಾಣುಗಳೆಲ್ಲವು ನಿಷ್ಪ್ರಯೋಜಕ (junk genes) ಎಂದು ಕಲ್ಪಿಸಿಕೊಳ್ಳಲಾಯಿತು. ಈಗ ಆ ಶೇ 97 ಭಾಗವೇ ನಿಷ್ಪ್ರಯೋಜಕ ಭಾಗವನ್ನು ಇಡೀ ಗುಣಾಣುವನ್ನು ನಿಯಂತ್ರಿಸುವ ಭಾಗವೆಂದು ಪರಿಗಣಿಸಲಾಗಿದೆ. ಹಾಗೆಯೇ ನಮ್ಮ ಮೆದುಳಿನಲ್ಲಿ, ಮೆದುಳನ್ನು ಹಿಡಿದಿಡುವ ಭಾಗವನ್ನು ‘ಗ್ಲಿಯಾ’ ಅಥವಾ ‘ಗಮ್’ ಎಂದು ಹೆಸರಿಸಿದ್ದಾರಷ್ಟೆ; ಅದು ಕೇವಲ ಮೆದುಳನ್ನು ಕೇವಲ ಸುತ್ತುವರಿದು ಹಿಡಿದಿಡುವ ನಿಷ್ಪ್ರಯೋಜಕ ಭಾಗವೆಂದೇ ಇಲ್ಲಿಯ ತನಕ ವಿವರಿಸಲಾಗುತ್ತಿತ್ತು. ಇಂದು ಮೆದುಳಿನಲ್ಲಿರುವ ನ್ಯೂರಾನಷ್ಟೇ ಕಾರ್ಯವೈಖರಿಯನ್ನು ಗ್ಲಿಯಾ ಜೀವಕೋಶಗಳಲ್ಲಿಯೂ ಗುರುತಿಸಲಾಗುತ್ತಿದೆ. ಈ ರೀತಿ ಯಾವ ಭಾಗವನ್ನು ನಿಷ್ಪ್ರಯೋಜಕವೆಂದು ನಾವು ಪರಿಗಣಿಸುತ್ತೇವೆಯೋ ಅಲ್ಲಿ ಯಾವುದೋ ಪ್ರಮುಖ ಕಾರ್ಯವೈಖರಿ ಅಡಕವಾಗಿರುತ್ತದೆ. ನಮಗೆ ಕೇವಲ ಪೌಷ್ಟಿಕಾಂಶಗಳು ಸುಲಭರೂಪದಲ್ಲಿ ಸಂಸ್ಕರಿಸಿ, ದಕ್ಕಿಸಿಕೊಂಡರೆ ಸಾಕು ಎನ್ನುವುದು ಸರಿಯಲ್ಲ. ಅದು ಯಾವ ರೂಪದಲ್ಲಿ ಹೇಗೆ ಹೆಣೆದುಕೊಂಡಿರುತ್ತದೆಯೋ ಅದನ್ನು ಚಿತ್ರ ವಿಚಿತ್ರಗೊಳಿಸದೆ ಸಾಧ್ಯವಾದಷ್ಟು ಹಾಗೆಯೇ ಪಡೆಯುವುದರಿಂದ ನಮ್ಮ 32 ಅಡಿ ಉದ್ದದ ಕರುಳಿಗೆ ಅವಮಾನ ಮಾಡಿದಂತೇನೂ ಆಗುವುದಿಲ್ಲ!

(ರಘು. ಕೆ. ಸಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.