ADVERTISEMENT

ಚಳಿಗಾಲದ ತ್ವಚೆಯ ಅಂದಕ್ಕೆ ಮನೆಮದ್ದು

ರೇಷ್ಮಾ
Published 12 ನವೆಂಬರ್ 2020, 16:53 IST
Last Updated 12 ನವೆಂಬರ್ 2020, 16:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇನ್ನೇನು ಚಳಿಗಾಲ ಆರಂಭವಾಗುತ್ತದೆ. ಚುಮುಚುಮು ಚಳಿ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಚರ್ಮದ ಕಾಳಜಿ ಮಾಡುವವರಿಗೆ ಚಳಿಗಾಲವೆಂದರೆ ಸಹ್ಯವಾಗದು. ಚಳಿಗಾಲದಲ್ಲಿ ಮುಖ, ಕೈ–ಕಾಲಿನ ಚರ್ಮ ಒಣಗುವುದು, ಕೂದಲು ಉದುರುವುದು, ಕಾಲು ಒಡೆಯುವುದು, ತುಟಿಯಲ್ಲಿ ಬಿರುಕು ಮೂಡುವುದು ಸಾಮಾನ್ಯ. ಆದರೆ ಇದಕ್ಕೆ ತಲೆಕೆಡಿಸಿಕೊಂಡು ಕುಳಿತುಕೊಳ್ಳುವ ಬದಲು ಚಳಿಗಾಲವನ್ನು ಸ್ವಾಗತಿಸಿ, ಮನೆಮದ್ದಿನ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಚಳಿಗಾಲದ ಆರಂಭಕ್ಕೆ ಮುನ್ನವೇ ಈ ಮನೆಮದ್ದಿನ ಕ್ರಮವನ್ನು ಅನುಕರಣೆ ಮಾಡುವುದು ಉತ್ತಮ.

ಮುಖ ಹಾಗೂ ಚರ್ಮದ ರಕ್ಷಣೆಗೆ...

ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ತೆಂಗಿನೆಣ್ಣೆ ಉತ್ತಮ ಔಷಧಿ. ತೆಂಗಿನೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮುಖ, ಚರ್ಮಕ್ಕೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಅದನ್ನು 20 ನಿಮಿಷಗಳ ಕಾಲ ಹಾಗೇ ಬಿಡಬೇಕು. ರಾತ್ರಿ ಇಡೀ ಬಿಟ್ಟರೂ ತೊಂದರೆಯಿಲ್ಲ. ಇದರಿಂದ ಚರ್ಮ ಒಣಗುವುದು ಕಡಿಮೆಯಾಗುತ್ತದೆ. ಅಲ್ಲದೇ ಕಾಂತಿಯೂ ಹೆಚ್ಚುತ್ತದೆ.

ADVERTISEMENT

ಲೋಳೆಸರದ ಬಳಕೆಯಿಂದ ಚರ್ಮದ ಬಿರುಕಿನ ನಿವಾರಣೆ ಮಾತ್ರವಲ್ಲ ಚರ್ಮದಲ್ಲಿನ ಕಲೆಗಳು, ಮೊಡವೆಗಳು ಹಾಗೂ ಸುಕ್ಕುಗಳೂ ನಿವಾರಣೆಯಾಗುತ್ತವೆ. ಲೋಳೆಸರದೊಂದಿಗೆ ಅರಿಸಿನ ಅಥವಾ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ಹಚ್ಚಿಕೊಳ್ಳುವುದರಿಂದ ಚಳಿಗಾಲದಲ್ಲಿ ಚರ್ಮದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ದಾಲ್ಚಿನ್ನಿ ಹಾಗೂ ಜೇನುತುಪ್ಪದ ಪ್ಯಾಕ್‌ ಅನ್ನು ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚಳಿಗಾಲದಲ್ಲಿ ಮುಖದ ಚರ್ಮ ಕಾಂತಿ ಕಳೆದುಕೊಳ್ಳದಂತೆ ಕಾಪಾಡಿಕೊಳ್ಳಬಹುದು. 2 ಚಮಚ ಜೇನುತುಪ್ಪಕ್ಕೆ 1/2 ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಮಿಶ್ರಣ ಮಾಡಿ ಮುಖ ಹಾಗೂ ಕೈ–ಕಾಲಿನ ಚರ್ಮಕ್ಕೆ ಹಚ್ಚಿ, 15 ರಿಂದ 20 ನಿಮಿಷ ಹಾಗೇ ಬಿಡಿ. ಒಣಗಿದ ಮೇಲೆ ಉಜ್ಜಿ ತೆಗೆಯಿರಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ 4 ದಿನ ಹೀಗೆ ಮಾಡಿ.

ತುಟಿಗಳ ಅಂದಕ್ಕೆ...

ಚಳಿಗಾಲದಲ್ಲಿ ತುಟಿ ಒಣಗಿ ಬಿರುಕು ಬಿಡುವುದಕ್ಕೆ ದುಬಾರಿ ಬೆಲೆಯ ಲಿಪ್‌ಬಾಮ್‌ ಬಳಕೆ ಮಾಡುವುದಕ್ಕಿಂತ ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳಿಂದ ತುಟಿಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಒಂದು ಚಮಚ ಸಕ್ಕರೆ ಅಥವಾ ಉಪ್ಪು, 1 ಚಮಚ ಜೇನುತುಪ್ಪ ಅಥವಾ ಎಣ್ಣೆ ಅದನ್ನು ಸಣ್ಣ ಬೌಲ್‌ನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹತ್ತಿಯ ಸಹಾಯದಿಂದ ತುಟಿಗೆ ಹಚ್ಚಿ ಚೆನ್ನಾಗಿ ತಿಕ್ಕಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ತುಟಿಯ ಒಣಗಿದ ಚರ್ಮ ಸ್ವಚ್ಛಗೊಳ್ಳುವುದಲ್ಲದೇ ತುಟಿಯ ರಂಗು ಹೆಚ್ಚುತ್ತದೆ.

ಜೇನುತುಪ್ಪವನ್ನು ರಾತ್ರಿ ಮಲಗುವಾಗ ಮುನ್ನ ತುಟಿಗೆ ಹಚ್ಚಿ ಮಲಗುವುದರಿಂದ ಕೂಡ ತುಟಿಯ ಚರ್ಮ ಒಣಗುವುದು ಹಾಗೂ ಬಿರುಕು ಮೂಡುವುದು ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಬೆಣ್ಣೆಹಣ್ಣಿನ ತಿರುಳು ಕೂಡ ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಉತ್ತಮ ಮದ್ದು. ಬೆಣ್ಣೆಹಣ್ಣಿನ ತಿರುಳಿನೊಂದಿಗೆ ಒಂದೆರಡು ಚಮಚ ತೆಂಗಿನೆಣ್ಣೆ ಸೇರಿಸಿ ತುಟಿ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತೊಳೆಯಿರಿ.

ತುಪ್ಪವನ್ನು ಬಿಸಿಮಾಡಿ ರಾತ್ರಿ ಮಲಗುವ ಮುನ್ನ ತುಟಿಗೆ ಸವರಿಕೊಂಡು ಮಲಗುವುದು ಕೂಡ ಚಳಿಗಾಲದಲ್ಲಿ ಉತ್ತಮ ಅಭ್ಯಾಸ.

ಕಾಲಿನ ಹಿಮ್ಮಡಿ ಒಡೆತಕ್ಕೆ

ಮೂರು ಚಮಚ ಅಕ್ಕಿಹಿಟ್ಟಿಗೆ ಒಂದು ಚಮಚ ಜೇನುತುಪ್ಪ, 2 ರಿಂದ 3 ಚಮಚ ಆ್ಯಪಲ್ ಸೈಡರ್ ವಿನಿಗರ್‌ ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿ. ಕಾಲನ್ನು 10 ನಿಮಿಷ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ನಂತರ ಆ ಪೇಸ್ಟ್‌ ಅನ್ನು ಹಚ್ಚಿ ಚೆನ್ನಾಗಿ ಸ್ಕ್ರಬ್ ರೀತಿ ಉಜ್ಜಿ. ವಾರದಲ್ಲಿ 3 ಬಾರಿ ಹೀಗೆ ಮಾಡಿ.

ಬಾಳೆಹಣ್ಣಿನೊಂದಿಗೆ ಕಲ್ಲುಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಡೆದ ಹಿಮ್ಮಡಿಗೆ ಚೆನ್ನಾಗಿ ಉಜ್ಜಿ. ಇದನ್ನು 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಿಂದ ನೀಟಾಗಿ ಕಾಲು ತೊಳೆದುಕೊಳ್ಳಿ. ಇದನ್ನು ವಾರದಲ್ಲಿ 2 ಬಾರಿ ಮಾಡುವುದರಿಂದ ಹಿಮ್ಮಡಿ ಒಡೆತಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಅಡುಗೆಎಣ್ಣೆಯಿಂದ ಕೂಡ ಹಿಮ್ಮಡಿ ಒಡೆತಕ್ಕೆ ಪರಿಹಾರ ಕಂಡುಕೊಳ್ಳಬಹುದು. ಯಾವುದೇ ಅಡುಗೆಎಣ್ಣೆ, ಅದು ಸೂರ್ಯಕಾಂತಿ, ಶೇಂಗಾ, ಎಳ್ಳೆಣ್ಣೆ ಇರಲಿ, ಅದನ್ನು ಹಿಮ್ಮಡಿ ಹಾಗೂ ಪಾದಕ್ಕೆ ತೆಳ್ಳಗೆ ಹಚ್ಚಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟು ಮಲಗುವಾಗ ಸಾಕ್ಸ್ ಧರಿಸಿ ಮಲಗಿ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಕಾಲು ತೊಳೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.