ADVERTISEMENT

ನಾಲ್ಕು ದಶಕಗಳ ‘ಬಿಕೆಎಫ್‌’ ಸೇವೆ

ಸುಮನಾ ಕೆ
Published 11 ಮಾರ್ಚ್ 2020, 19:30 IST
Last Updated 11 ಮಾರ್ಚ್ 2020, 19:30 IST
   

‘ಮಧುಮೇಹ, ರಕ್ತದೊತ್ತಡದಿಂದ ಬಳಲುವ ರೋಗಿಗಳಿಗೆ ಕಿಡ್ನಿ ಡಯಾಲಿಸಿಸ್ ಮಾಡುವ ಕ್ರಮ ವಿಭಿನ್ನ. ಅಂಥವರಿಗೆ ಸಿಆರ್‌ಆರ್‌ಟಿ (ಕಂಟಿನ್ಯೂಸ್‌ ರೀನಲ್‌ ರಿಪ್ಲೆಸ್‌ಮೆಂಟ್‌ ಥೆರಪಿ) ಚಿಕಿತ್ಸೆ ನೀಡಬೇಕು. ಶೀಘ್ರದಲ್ಲೇ ಈ ಥೆರಪಿ ನೀಡುವ ಉಪಕರಣವನ್ನು ನಮ್ಮ ಫೌಂಡೇಷನ್‌ಗೆ ತರಿಸುತ್ತಿದ್ದೇವೆ..’

ಬೆಂಗಳೂರು ಕಿಡ್ನಿಫೌಂಡೇಷನ್‌ ದೇಣಿಗೆ ಸಂಗ್ರಹ ವಿಭಾಗದ ಮುಖ್ಯಸ್ಥ ರಮೇಶ್ ನಟರಾಜನ್, ಕೇಂದ್ರದಲ್ಲಿ ಅಳವಡಿಸುತ್ತಿರುವ ಹೊಸ ಥೆರಪಿ ಹಾಗೂ ಉಪಕರಣದ ಬಗ್ಗೆ ಮಾಹಿತಿ ನೀಡಿದರು. ‘ಮಧುಮೇಹಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಡಯಾಲಿಸ್ ಕ್ರಮ ಭಿನ್ನವಾಗಿರುತ್ತದೆ. ಅವರಿಗೆ ಸಿಆರ್‌ಆರ್‌ಟಿ ಚಿಕಿತ್ಸೆ ನೀಡಬೇಕು. ಸುಮಾರು 14 ರಿಂದ 15 ಗಂಟೆ ಸಮಯ ಹಿಡಿಯುತ್ತದೆ. ಇದಕ್ಕೆ ವಿಶೇಷ ಯಂತ್ರ ಬೇಕು. ಚೆನ್ನೈನಿಂದ ಈ ಯಂತ್ರವನ್ನು ತರಿಸುತ್ತಿದ್ದೇವೆ. ನಾಲ್ಕು ವಾರಗಳಲ್ಲಿ ಈ ಥೆರಪಿ ನಮ್ಮಲ್ಲಿ ಲಭ್ಯ’ ಎಂದು ಮಾತು ಮುಂದುವರಿಸಿದರು.

ನಾಲ್ಕು ದಶಕಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್‌ ಸೌಲಭ್ಯ ನೀಡುತ್ತಿದೆ ಬೆಂಗಳೂರು ಕಿಡ್ನಿ ಫೌಂಡೇಷನ್‌. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ರಿಯಾಯಿತಿ ದರದಲ್ಲಿ, ಅತಿ ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡುತ್ತಿದೆ.

ADVERTISEMENT

ಡಯಾಲಿಸಿಸ್‌ ಮಾಡಿಸಿಕೊಳ್ಳುವ ಮಹಿಳೆ ಯರಿಗೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ, ಮಹಿಳೆಯರಿಗಾಗಿ ಪ್ರತ್ಯೇಕ ವಾರ್ಡ್‌ ಮಾಡಿದೆ. ಅಲ್ಲಿ 19 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿದೆ. ಅದು ಮಹಿಳಾ ಕೇಂದ್ರಿತ ಡಯಾಲಿಸಿಸ್ ಕೇಂದ್ರವಾಗಿದೆ ಎನ್ನುತ್ತಾರೆ ರಮೇಶ್‌ ನಟರಾಜ್.

85 ಡಯಾಲಿಸಿಸ್‌ ಯಂತ್ರ
1979ರಲ್ಲಿ ಡಾ. ಶ್ರೀರಾಮ್‌ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಈ ಕೇಂದ್ರವನ್ನು ಆರಂಭಿಸಿದರು. ಬಹುಶಃ ಕರ್ನಾಟಕದಲ್ಲಿ ಡಯಾಲಿಸಿಸ್ ಚಿಕಿತ್ಸೆಯನ್ನು ಮೊದಲ ಬಾರಿಗೆ ಆರಂಭಿಸಿದ ಸಂಸ್ಥೆ ಇದು. ಸದ್ಯ ಕೇಂದ್ರದಲ್ಲಿ 85 ಡಯಾಲಿಸಿಸ್‌ ಯಂತ್ರಗಳಿವೆ. ಇದು ದೇಶದ ಎರಡನೇ ಅತಿ ದೊಡ್ಡ ಡಯಾಲಿಸಿಸ್‌ ಕೇಂದ್ರ ಎಂದು ಗುರುತಿಸಿಕೊಂಡಿದೆ.

ಇಲ್ಲಿ ಒಂದು ಬಾರಿ ಡಯಾಲಿಸಿಸ್‌ ಮಾಡಿಸಿ ಕೊಳ್ಳಲು ₹1,300 ದರ ನಿಗದಿಪಡಿಸಿದೆ. ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ₹750 ರಲ್ಲಿ ಡಯಾಲಿಸಿಸ್‌ ಮಾಡುತ್ತದೆ. ಹಾಗೇ ಅತಿ ಬಡವರಿಗೆ ದಾನಿಗಳಿಂದ ಸಹಾಯಧನ ಪಡೆದು ‘ಡಯಾಲಿಸಿಸ್‌ ರೋಗಿಗಳ ಪುನಶ್ಚೇತನ ಕಾರ್ಯಕ್ರಮ’ದಡಿಯಲ್ಲಿ ಉಚಿತವಾಗಿ ಡಯಾಲಿಸಿಸ್‌ ಮಾಡಲಾಗುತ್ತದೆ.

‘ಇಲ್ಲಿ ಪ್ರತಿದಿನ ಅಂದಾಜು 240 ಜನರು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಾರೆ. ಪ್ರತಿ ತಿಂಗಳಿಗೆ 3,400 ಮಂದಿಗೆ ಡಯಾಲಿಸಿಸ್‌ ಮಾಡಲಾಗುತ್ತದೆ. ಅದರಲ್ಲಿ ಸರಾಸರಿ 500 ಮಂದಿಗೆ ಉಚಿತವಾಗಿ ಡಯಾಲಿಸಿಸ್‌ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ ರಮೇಶ್‌ ನಟರಾಜನ್‌.

ಪೌಷ್ಟಿಕ ಆಹಾರ ನೆರವು
ರೋಗಿಗಳಿಗೆ ಡಯಾಲಿಸಿಸ್ ಮಾಡುವುದರ ಜತೆಗೆ,ಪೋಷಕಾಂಶಗಳ ನೆರವನ್ನೂ ಬಿಕೆಎಫ್‌ ನೀಡುತ್ತಿದೆ. ಪ್ರತಿ ದಿನ ಸುಮಾರು 180 ರೋಗಿಗಳಿಗೆ ಉಚಿತ ಪೋಷಕಾಂಶಯುಕ್ತ ಆಹಾರ ನೀಡುತ್ತದೆ. ಹಾಗೆಯೇ ಪ್ರತಿ ತಿಂಗಳು ಅನೇಕ ರೋಗಿಗಳಿಗೆ 5 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಬೇಳೆ ಪೂರೈಸುತ್ತದೆ.

ಡಯಾಲಿಸಿಸ್‌ ಒಳಗಾಗುವವರು ಬೇಗನೇ ಖಿನ್ನತೆಗೆ ಒಳಗಾಗುತ್ತಾರೆ. ಹಾಗಾಗಿ ಎಲ್ಲಾ ರೋಗಿಗಳಿಗೆ ತಜ್ಞ ಸಮಾಲೋಚಕರ ನೆರವಿನಿಂದ ಅಗತ್ಯ ಸಮಾಲೋಚನೆ ನೀಡುತ್ತದೆ. ‘ಕೌನ್ಸೆಲಿಂಗ್‌ ವೇಳೆ ರೋಗಿಯ ಹಣಕಾಸಿನ ಪರಿಸ್ಥಿತಿ ಅರಿತು, ಉಚಿತ ಚಿಕಿತ್ಸೆ ನೀಡಿ ಎಷ್ಟೋ ರೋಗಿಗಳ ಮಕ್ಕಳು ಶಾಲೆ ತೊರೆಯುವುದನ್ನು ತಪ್ಪಿಸಿದ್ದೇವೆ‘ ಎನ್ನುತ್ತಾರೆ ರಮೇಶ್‌ ನಟರಾಜನ್‌.

ಡಯಾಲಿಸಿಸ್ ಜತೆಗೆ ಸಾರ್ವಜನಿಕರಲ್ಲಿ ಕಿಡ್ನಿ ಆರೋಗ್ಯ ಕುರಿತು ಮಾಹಿತಿ ನೀಡಲು ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ‌. ಮಕ್ಕಳು, ಯುವಕರಿಗಾಗಿ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತದೆ. ರೋಗಿಗಳ-ಸಹಾಯಕರ ಸಂತೋಷ ಕೂಟ ಏರ್ಪಡಿಸುತ್ತದೆ. ಪ್ರತಿ ವರ್ಷ ವಿಶ್ವ ಕಿಡ್ನಿ ದಿನದ ಅಂಗವಾಗಿ ‌ವಾಕಥಾನ್‌ ಆಯೋಜಿಸುತ್ತದೆ.

ಕಿಡ್ನಿ ಡಯಾಲಿಸಿಸ್ ಮತ್ತು ಇತರೆ ಮಾಹಿತಿಗಾಗಿಬೆಂಗಳೂರು ಕಿಡ್ನಿ ಫೌಂಡೇಷನ್‌ ಸಂಪರ್ಕಕ್ಕೆ –080 26614848, 29544848
ಇಮೇಲ್: info@bkfindia.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.