ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ರಕ್ತ ಗರಣೆಗಟ್ಟಿದರೆ ಮಧುಮೇಹಿಗಳಿಗೆ ಇನ್ನಷ್ಟು ಅಪಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:51 IST
Last Updated 19 ನವೆಂಬರ್ 2020, 20:51 IST
ಡಾ. ಗಣಪತಿ
ಡಾ. ಗಣಪತಿ   

ಬೆಂಗಳೂರು: ಕೋವಿಡ್‌–19 ಆರಂಭವಾದಾಗಿನಿಂದಲೂ ಮಧುಮೇಹ ಇರುವವರಿಗೆ ಕೊರೊನಾ ಸೋಂಕು ಬಂದರೆ ಏನೇನು ತೊಂದರೆಗಳು ಆಗಬಹುದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮಧುಮೇಹಿಗಳಿಗೆ ಕೊರೊನಾ ಸೋಂಕು ತಗಲುವ ಅಪಾಯ ಅಷ್ಟೇನೂ ಇಲ್ಲ, ಆದರೆ ಸೋಂಕಾದರೆ ಹೆಚ್ಚಿನ ಅಪಾಯ ಕಾದಿದೆ ಎಂಬುದು ಈಗಾಗಲೇ ಸಾಬೀತಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿದ್ದರೆ ಅದು ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ವೈರಸ್‌ ಇನ್ಸುಲಿನ್‌ ಉತ್ಪಾದಿಸುವ ಪ್ಯಾಂಕ್ರಿಯಾಸ್‌ ಕೋಶಗಳ ಮೇಲೂ ದಾಳಿ ನಡೆಸುತ್ತದೆ. ನಿಯಂತ್ರಣವಿಲ್ಲದ ಮಧುಮೇಹ ಅಪಾಯಕಾರಿ ಮಟ್ಟ ತಲುಪುತ್ತದೆ. ಹಾಗೆಯೇ ಮಧುಮೇಹ ಇಲ್ಲದವರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕೋವಿಡ್‌–19ಗೆ ಪ್ರತಿಕ್ರಿಯಿಸುವ ದೇಹ ‘ಸೈಟೊಕೈನ್‌’ ಎಂಬ ಕಣಗಳನ್ನು ಬಿಡುಗಡೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಜಾಸ್ತಿಯಾಗುತ್ತದೆ. ಇದರಿಂದ ವೈರಸ್‌ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಇದಲ್ಲದೇ ರಕ್ತ ಗರಣೆಗಟ್ಟುವುದಕ್ಕೆ ಕಾರಣವಾಗುವ ಈ ವೈರಸ್‌ನಿಂದಾಗಿ ಇನ್ನಷ್ಟು ಸಂಕೀರ್ಣ ಪರಿಸ್ಥಿತಿ ತಲೆದೋರುತ್ತದೆ. ವಯಸ್ಸು, ಅಧಿಕ ರಕ್ತದೊತ್ತಡದಿಂದಾಗಿ ತೊಂದರೆಗಳು ಇನ್ನಷ್ಟು ಜಾಸ್ತಿಯಾಗುತ್ತವೆ. ಕೋವಿಡ್‌–19 ಚಿಕಿತ್ಸೆಯಿಂದಲೂ ಸಕ್ಕರೆ ಮಟ್ಟದಲ್ಲಿ ಏರುಪೇರು ಉಂಟಾಗಬಹುದು ಎನ್ನುತ್ತಾರೆ ಬೆಂಗಳೂರಿನ ಎಂಡೋಕ್ರೈನಾಲಜಿಸ್ಟ್‌ ಮತ್ತು ಸೇಂಟ್‌ ಜಾನ್ಸ್‌ ವೈದ್ಯಕೀಯ ಕಾಲೇಜಿನ ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಗಣಪತಿ ಬಂಟ್ವಾಳ.

ಕೋವಿಡ್‌–19 ತಗಲಿದರೆ ಮಧುಮೇಹಿಗಳು ತಮ್ಮ ಔಷಧವನ್ನು ಮುಂದುವರಿಸಬಹುದು. ಆದರೆ ವಾಂತಿಯಾದರೆ, ಆಹಾರ ಸೇವಿಸಲು ಕಷ್ಟವಾದರೆ ಕೆಲವು ಔಷಧಿಗಳನ್ನು ನಿಲ್ಲಿಸಬೇಕಾಗುತ್ತದೆ.

ADVERTISEMENT

ಸೋಂಕಿನಿಂದ ಹೈಪರ್‌ಗ್ಲೈಸಿಮಿಯ (ಅತಿಯಾದ ಸಕ್ಕರೆ ಮಟ್ಟದಿಂದ ಆಗುವ ತೊಂದರೆ), ಕೀಟೊಆಸಿಡೋಸಿಸ್‌ ಉಂಟಾಗಬಹುದು. ಆದರೆ ಇಂತಹ ತೊಂದರೆಯನ್ನು ಇನ್ಸುಲಿನ್‌ ಚುಚ್ಚುಮದ್ದಿನಿಂದ ಕಡಿಮೆ ಮಾಡಬಹುದು. ಹಾಗೆಯೇ ಕೊಲೆಸ್ಟರಾಲ್‌ ಔಷಧಿಯನ್ನು ಕೂಡ ಮುಂದುವರಿಸಬಹುದು.

-ಮಧುಮೇಹ ಇರುವವರು ಫ್ಲು ಲಸಿಕೆ ಕೂಡ ತೆಗೆದುಕೊಳ್ಳಲು ಅಡ್ಡಿಯಿಲ್ಲ.

- ಒತ್ತಡವನ್ನು ಯೋಗ, ಧ್ಯಾನದಿಂದ ಕಡಿಮೆ ಮಾಡಿಕೊಳ್ಳಬಹುದು.

- ಆಹಾರದಲ್ಲಿ ಏರುಪೇರಾದರೆ ಮನೆಯಲ್ಲೇ ವ್ಯಾಯಾಮ ಮಾಡಿ

- ಪಾರ್ಕ್‌ನಲ್ಲಿ ಎಚ್ಚರಿಕೆಯೊಂದಿಗೆ ವೇಗದ ನಡಿಗೆ ಮಾಡಬಹುದು

- ಟೆರೇಸ್‌ನಲ್ಲಿ ಲಘು ವ್ಯಾಯಾಮ, ನಡಿಗೆ ಸೂಕ್ತ

- ತೂಕವನ್ನು, ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸಿಕೊಳ್ಳಿ.

- ಕುಟುಂಬದವರ ನಿಗಾ ಇರಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.