ADVERTISEMENT

ಕೊರೊನಾ ಸೋಂಕು; ಶ್ವಾಸಕೋಶವಲ್ಲದೇ ಇತರೆ ಅಂಗಾಂಗಗಳಿಗೂ ತೊಂದರೆ ಸಾಧ್ಯತೆ

ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ ತಜ್ಞರ ಅಭಿಮತ

ಪಿಟಿಐ
Published 27 ಆಗಸ್ಟ್ 2020, 10:34 IST
Last Updated 27 ಆಗಸ್ಟ್ 2020, 10:34 IST
ಏಮ್ಸ್‌
ಏಮ್ಸ್‌   

ನವದೆಹಲಿ: ಕೋವಿಡ್‌ 19 ಸೋಂಕಿನಿಂದ ಶ್ವಾಸಕೋಶ ಸೇರಿದಂತೆ ಎಲ್ಲ ಅಂಗಾಗಳಿಗೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್‌) ತಜ್ಞರು, ಶ್ವಾಸಕೋಶದ ತೊಂದರೆಗಳು, ಆರಂಭಿಕ ಲಕ್ಷಣಗಳು ಹಾಗೂ ಎದೆ ರೋಗಗಳಿಗೂ ಯಾವುದೇ ಸಂಬಂಧವಿಲ್ಲಎಂದುಸ್ಪಷ್ಟಪಡಿಸಿದ್ದಾರೆ.

ಕೇವಲ ಉಸಿರಾಟದ ಸಮಸ್ಯೆಯ ಆಧಾರದ ಮೇಲೆ ಪ್ರಕರಣಗಳನ್ನು ಸೌಮ್ಯ, ಸಾಧಾರಣ ಮತ್ತು ಗಂಭೀರ ಎಂಬ ವಿಭಾಗವಾಗಿ ವರ್ಗೀಕರಿಸುತ್ತಿರುವುದನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌ 19 ಸೋಂಕಿನಿಂದ ಶ್ವಾಸಕೋಶದ ಮೇಲೆ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಚರ್ಚಿಸಲುನೀತಿ ಆಯೋಗದ ಸಹಯೋಗದಲ್ಲಿ ಆಯೋಜಿಸಿದ್ದ ’ನ್ಯಾಷನಲ್ ಕ್ಲಿನಿಕಲ್ ಗ್ರ್ಯಾಂಡ್ ರೌಂಡ್ಸ್‌’ ಪಾಕ್ಷಿಕ ಕಾರ್ಯಕ್ರಮದಲ್ಲಿ ಏಮ್ಸ್‌ನ ತಜ್ಞರು ಈ ಎಂಟು ತಿಂಗಳಲ್ಲಿ ತಾವು ಗಮನಿಸಿದ ಮಾಹಿತಿಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿಏಮ್ಸ್‌ನ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ, ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ವಿ.ಪದ್ಮ ಶ್ರೀವಾಸ್ತವ, ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ಅಂಬುಜ್ ರಾಯ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ನೀರಜ್ ನಿಸ್ಚಾಲ್ ಭಾಗವಹಿಸಿದ್ದರು.

ADVERTISEMENT

ಕೋವಿಡ್‌ 19 ಸೋಂಕಿನ ಬಗ್ಗೆ ಕಳೆದ ಎಂಟು ತಿಂಗಳಿನಿಂದ ಸಾಕಷ್ಟು ಕಲಿತಿದ್ದೇವೆ ಮತ್ತು ಕಾಲಕ್ಕೆ ತಕ್ಕಂತೆ ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸುತ್ತಾ ಸಾಗಿದ್ದೇವೆಎಂದು ಡಾ. ಗುಲೇರಿಯಾ ಹೇಳಿದರು.ಆರಂಭದಲ್ಲಿ ಇದು ನ್ಯುಮೋನಿಯಾಕ್ಕೆ ಕಾರಣವಾಗುವ ವೈರಾಣು ಎಂದು ಭಾವಿಸಿದ್ದ ನಮಗೆ, ಶ್ವಾಸಕೋಶವಲ್ಲದೇ ಬೇರೆ ರೀತಿಯಲ್ಲೂ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಹಲವು ಪ್ರಕರಣಗಳಿಂದ ಗೊತ್ತಾಗಿದೆ ಎಂದಿದ್ದಾರೆ ಅವರು.

ಕೊರೊನಾ ಸೋಂಕಿನ ರೋಗಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣಗಳು ಇರುವವರು ಎಂದು ಗುರುತಿಸಿರುವ ಕೊರೊನಾ ಸೋಂಕಿತರಲ್ಲಿ ಹೃದಯದ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಮತ್ತು ಪಾರ್ಶ್ವವಾಯುವನಿಂದ ಬಳಲುತ್ತಿರುವಂತಹ ಕೆಲವು ಪ್ರಕರಣಗಳನ್ನು ಗುರುತಿಸಿರುವುದಾಗಿ ತಜ್ಞರು ತಿಳಿಸಿದ್ದಾರೆ.

’ಕೊರೊನಾ ಸೋಂಕಿನಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ವೈರಸ್ಬೇರೆ ಬೇರೆ ಅಂಗಾಗಳಿಗೂ ತೊಂದರೆ ಮಾಡುತ್ತಿರುವುದಕ್ಕೆ ಹಲವು ಉದಾಹರಣೆಗಳು ಲಭ್ಯವಾಗಿವೆ. ಹೀಗಾಗಿ ಉಸಿರಾಟದ ತೊಂದರೆಯ ಲಕ್ಷಣಗಳ ಮೇಲೆ ಸೌಮ್ಯ, ಸಾಧಾರಣ ಮತ್ತು ಗಂಭೀರ ಪ್ರಕರಣಗಳೆಂದು ವರ್ಗೀಕರಣ ಮಾಡುವುದನ್ನು ಮತ್ತೆ ಪರಿಶೀಲಿಸಬೇಕಿದೆ’ ಎಂದುಡಾ. ನಿಶ್ಚಲ್ ಹೇಳಿದರು.

ಗಂಭೀರ ಕಾಯಿಲೆಗಳಿದ್ದ 35 ವರ್ಷದ ವ್ಯಕ್ತಿಯಲ್ಲಿ, ಕೊರೊನಾ ಸೋಂಕಿನ ಲಕ್ಷಣಗಳಿಲ್ಲದಿದ್ದರೂ, ಪರೀಕ್ಷೆಗೊಳಪಡಿಸಿದಾಗ, ಆತನಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟ ಪ್ರಕರಣವೊಂದನ್ನು ನಿಶ್ಚಲ್‌ ಉದಾಹರಣೆ ನೀಡಿದರು. ಆ ವ್ಯಕ್ತಿ ತಲೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದು, ಅವರಿಗೆ ಗಂಭೀರ ಪ್ರಮಾಣದಲ್ಲಿ ತ್ರಂಬೊಸಿಸ್‌ ಕಾಯಿಲೆಯಿತ್ತು ಎಂದು ಅವರು ವಿವರಿಸಿದರು.

ಇದೇ ವೇಳೆ ನಾಡಿ ಬಡಿತದ ಪ್ರಮಾಣ ಕಡಿಮೆಯಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟು, ಚಿಕಿತ್ಸೆಯ ನಂತರ ಅವರು ಗುಣಮುಖರಾದ ಮಾಹಿತಿಯನ್ನು ಡಾ. ಅಂಬುಜಾ ಮತ್ತು ತಂಡ ಹಂಚಿಕೊಂಡರೆ, ’ಕೊರೊನಾ ಸೋಂಕು ತಗುಲಿದ ಕೆಲವು ರೋಗಿಗಳ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದ್ದು, ಇದು ಪಾರ್ಶ್ವವಾಯು ತಗುಲಲು ಕಾರಣವಾಗಬಹುದು’ ಎಂದು ಡಾ. ಪದ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.