ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಮಧುಮೇಹಿಗಳಲ್ಲಿ ಬಿಗಡಾಯಿಸುವ ಅಪರೂಪದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 21:23 IST
Last Updated 3 ಜನವರಿ 2021, 21:23 IST
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ   

ಮಧುಮೇಹಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೋವಿಡ್‌–19 ಬರುವ ಸಾಧ್ಯತೆ ಹೆಚ್ಚು ಹಾಗೂ ಬಂದರೆ ಸಮಸ್ಯೆಗಳೂ ಜಾಸ್ತಿ ಎಂಬುದನ್ನು ಈಗಾಗಲೇ ಅಧ್ಯಯನಗಳು ಸಾಬೀತುಪಡಿಸಿವೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಅಧ್ಯಯನಗಳು ನಡೆದಿದ್ದು, ಮಧುಮೇಹಿಗಳಲ್ಲಿ ರಕ್ತದಲ್ಲಿನ ಗ್ಲುಕೋಸ್‌ ಕಡಿಮೆ ಮಾಡುವ ಕೆಲವು ಔಷಧಗಳ ಜೊತೆಗೆ ಕೋವಿಡ್‌ಗೆ ಸಂಬಂಧಿಸಿದ ಸಮಸ್ಯೆಗಳೂ ಸೇರಿಕೊಂಡು ರೋಗಿಯ ಪರಿಸ್ಥಿತಿ ಗಂಭೀರ ಸ್ವರೂಪ ತಾಳಬಹುದು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಗ್ಲುಕೋಸ್‌ ಬಿಡುಗಡೆ ಮಾಡುವ ಮೂಲಕ ಮಧುಮೇಹ ಕಡಿಮೆ ಮಾಡುವ ಔಷಧಿ (ಎಸ್‌ಜಿಎಲ್‌ಟಿ2ಐ)ಯಿಂದ ಈ ಸಮಸ್ಯೆ ತಲೆದೋರುತ್ತದೆ ಎಂದು ಅಮೆರಿಕದ ಬ್ರಿಗ್ಹಾಮ್‌ ಆ್ಯಂಡ್‌ ವಿಮೆನ್ಸ್‌ ಆಸ್ಪತ್ರೆಯ ಸಂಶೋಧಕರು ಬೆಳಕು ಚೆಲ್ಲಿದ್ದಾರೆ.

ಸಕ್ಕರೆ ರೋಗಿಗಳಲ್ಲಿ ಅಪರೂಪದ ಆದರೆ ಮಾರಕವಾದ ಕೀಟೊಆಸಿಡೋಸಿಸ್‌ (ಡಿಕೆಎ) ಎಂಬ ಪರಿಸ್ಥಿತಿ ತಲೆದೋರುತ್ತದೆ. ಜೀವಕೋಶಗಳು ಕಾರ್ಯನಿರ್ವಹಣೆಗೆ ಗ್ಲುಕೋಸ್‌ ಹೀರಲು ವಿಫಲವಾದಾಗ ಈ ಪರಿಸ್ಥಿತಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಅಗತ್ಯವಿರುವ ಗ್ಲುಕೋಸ್‌ ಹೀರಲು ವಿಫಲವಾದ ಜೀವಕೋಶಗಳು ಕೊಬ್ಬನ್ನು ಬಳಸಿಕೊಂಡು ಕೀಟೋನ್ಸ್‌ ಎಂಬ ಆ್ಯಸಿಡ್‌ ಪ್ರಮಾಣ ಹೆಚ್ಚು ಮಾಡುತ್ತವೆ. ಕೊರೊನಾ ಸೋಂಕು ತಗಲಿದ ಮಧುಮೇಹಿಗಳಲ್ಲಿ ಮಾರಕವಾದ ಇಯುಡಿಕೆಎ ಎಂಬ ಅತ್ಯಂತ ಗಂಭಿರ ಸಮಸ್ಯೆ ಕಂಡು ಬಂದಿದ್ದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಇಯುಡಿಕೆಎ ಲಕ್ಷಣವೆಂದರೆ ಕಡಿಮೆಯಾದ ಗ್ಲುಕೋಸ್‌ ಮಟ್ಟ, ಆದರೆ ಇದನ್ನು ಪತ್ತೆ ಮಾಡುವುದು ಅತ್ಯಂತ ಕಷ್ಟದ ಕೆಲಸ ಎನ್ನುತ್ತಾರೆ ವಿಜ್ಞಾನಿಗಳು. ಈ ಕುರಿತು ದಿ ಅಮೆರಿಕನ್‌ ಅಸೋಸಿಯೇಶನ್‌ ಆಫ್‌ ಕ್ಲಿನಿಕಲ್‌ ಎಂಡೊಕ್ರಿನೊಲೋಜಿಸ್ಟ್ಸ್‌ ವರದಿಯಲ್ಲಿ ಪ್ರಕಟಿಸಲಾಗಿದೆ.

ಸಾಮಾನ್ಯವಾಗಿ ಯಾವುದೇ ಕಾಯಿಲೆಯಿಂದ ವಾಂತಿ– ಭೇದಿ, ಹಸಿವಾಗದಿರುವುದು ಮೊದಲಾದ ಲಕ್ಷಣಗಳಿದ್ದರೆ ಈ ಇಯುಡಿಕೆಎ ಸಂಭವಿಸುತ್ತದೆ. ಜೊತೆಗೆ ಮೇಲೆ ತಿಳಿಸಿದ ಔಷಧವನ್ನು ತೆಗೆದುಕೊಳ್ಳುತ್ತಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ ಎಂದಿರುವ ಸಂಶೋಧಕರು, ಕೋವಿಡ್‌–19ನಿಂದ ಇಂತಹ ಪ್ರಕರಣಗಳು ಹೆಚ್ಚಾಗಿವೆ ಎಂದಿದ್ದಾರೆ. ಹೀಗಾಗಿ ಹಸಿವಾಗದಿದ್ದರೆ, ಊಟ ಮಾಡಿರದಿದ್ದರೆ ಮಧುಮೇಹಿಗಳು ಔಷಧವನ್ನೂ ನಿಲ್ಲಿಸುವುದು ಒಳಿತು; ಸರಿಯಾಗಿ ಆಹಾರ ಸೇವಿಸಲು ಆರಂಭಿಸಿದ ಮೇಲೆ ಪುನಃ ಔಷಧ ಸೇವನೆ ಶುರು ಮಾಡಬಹುದು ಎಂದು ಸಲಹೆ ನೀಡಲಾಗಿದೆ.

ADVERTISEMENT

ಇನ್ನು ಕೊರೊನಾ ಸೋಂಕು ತಗಲಿದಾಗ, ವೈರಸ್‌ ಇನ್ಸುಲಿನ್‌ ಉತ್ಪಾದಿಸುವ ಪ್ಯಾಂಕ್ರಿಯಾಸ್‌ ಕೋಶಗಳನ್ನು ನಾಶ ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಧಿಕವಾಗಿ ರೋಗಿ ಸೇವಿಸುವ ಮಧುಮೇಹದ ಔಷಧದ ಡೋಸ್‌ ಕೂಡ ಜಾಸ್ತಿ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.