ADVERTISEMENT

ಕ್ಷೇಮ ಕುಶಲ: ಚರ್ಮಕ್ಕೆ ಅಂಟೀತು ಫಂಗಸ್ ರೋಗ!

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 23:30 IST
Last Updated 16 ಜೂನ್ 2025, 23:30 IST
   

ಚರ್ಮವನ್ನು ಬಾಧಿಸುವ ಅನೇಕ ರೋಗಗಳಲ್ಲಿ ಫಂಗಸ್ ರೋಗಗಳು ಬಹಳ ಸಾಮಾನ್ಯ. ‘ಫಂಗಸ್’ ಎಂದರೆ ಶಿಲೀಂಧ್ರ. ಶಿಲೀಂಧ್ರಗಳು ಯೀಸ್ಟ್, ಅಣಬೆ, ಮೊದಲಾದ ಜೀವಿಗಳು. ಫಂಗಸ್‌ಗಳು ನೋಡಲು ಸಸ್ಯಗಳಂತಿದ್ದರೂ ಅವು ಸಸ್ಯಗಳಲ್ಲ. ಅವು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲಾಗದೇ, ಸತ್ತಿರುವ ಸಾವಯವ ಪದಾರ್ಥಗಳನ್ನು ಆಶ್ರಯಿಸಿ, ಅವುಗಳಿಂದ ಆಹಾರವನ್ನು ತೆಗೆದುಕೊಳ್ಳುತ್ತವೆ. ಎಲ್ಲ ಫಂಗಸ್‌ಗಳಿಗೂ ಒದ್ದೆ ಮತ್ತು ಬೆಚ್ಚಗಿನ ವಾತಾವರಣ ಬೇಕಾಗುತ್ತದೆ.

ಫಂಗಸ್ ರೋಗಗಳು ಮೂರು ಬಗೆಯಲ್ಲಾಗುತ್ತವೆ. ಚರ್ಮದ ಮೇಲ್ಮೈಯಲ್ಲಿ ಕಾಣಿಸಿಕೊಳ್ಳುವಂಥವು. ಚರ್ಮದ ಕೆಳಭಾಗದಲ್ಲಿ ಆಗುವಂಥವು, ದೇಹದ ಒಳಭಾಗದಲ್ಲಿ ಬರುವಂಥವು. ಮೊದಲನೆಯದು ಬಹಳ ಸಾಮಾನ್ಯವಾದುದಾದರೆ, ಎರಡನೆಯ ಹಾಗೂ ಮೂರನೆಯದು ಬಹಳ ಅಪರೂಪ.  ಚರ್ಮದ ಮೇಲ್ಮೈಯಲ್ಲಿ ಆಗುವ ಸಾಮಾನ್ಯ ಫಂಗಸ್ ರೋಗಗಳ ಪರಿಚಯವನ್ನು ಇಲ್ಲಿ ಮಾಡಿಕೊಳ್ಳೋಣ.

ಸಿಬ್ಬು:

ADVERTISEMENT

ಸಿಬ್ಬು ಅಥವಾ ‘ಪಿಟಿರಿಯಾಸಿಸ್ ವರ್ಸಿಕೊಲರ್’ (Pytiriasis versicolor) ಬಹಳ ಸಾಮಾನ್ಯವಾದ ಒಂದು ಫಂಗಸ್ ಚರ್ಮರೋಗ. ಇದಕ್ಕೆ ಕಾರಣವಾಗುವ ಫಂಗಸ್, ಮೆಲಸೀಜಿಯ ಫರ್ಫರ್; ಇದು ನಮ್ಮೆಲ್ಲರ ಚರ್ಮದಲ್ಲೇ ವಾಸಿಸುವ ಒಂದು ನಿರುಪದ್ರವಿ ಜೀವಿ. ಆದರೆ ಅದಕ್ಕೆ ಅವಕಾಶ ದೊರೆತಾಗ ಅದು ಹೆಚ್ಚಾಗಿ ಬೆಳೆದು ಈ ತೊಂದರೆಯನ್ನು ಉಂಟುಮಾಡುತ್ತದೆ. ಚರ್ಮದ ಮೇಲೆ ಬಿಳಿಯ ಸಣ್ಣ ಕಲೆಗಳಾಗುತ್ತವೆ; ಸಾಮಾನ್ಯವಾಗಿ ತುರಿಸುವುದಿಲ್ಲ. ಈ ಕಲೆಗಳ‌ ಮೇಲೆ ತೆಳುವಾದ ಬಿಳಿಯ ಪದರಗಳಿದ್ದು, ಕೆರೆದಾಗ ಹೆಚ್ಚು ಉದುರುತ್ತವೆ. ಬೆವರುವುದು, ಮಳೆಯಲ್ಲಿ ನೆನೆಯುವುದು, ಒದ್ದೆಬಟ್ಟೆಯನ್ನು ಧರಿಸುವುದು, ಮೊದಲಾದವುಗಳಿಂದ ಫಂಗಸ್ ಹೆಚ್ಚಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಾಗಿ ಎದೆ, ತೋಳು, ಬೆನ್ನುಗಳಲ್ಲಿ ಕಂಡುಬರುತ್ತದೆ.

ಹುಳುಕಡ್ಡಿ:

ಹುಳುಕಡ್ಡಿ ಅಥವಾ ಗಜಕರ್ಣ ಕೂಡ ಬಹಳ ಸಾಮಾನ್ಯವಾದ ಫಂಗಸ್ ರೋಗ. ಇದು ‘ಡರ್ಮಟೋಫೈಟ್’ (Dermatophytes)ಗಳೆಂಬ ಫಂಗಸ್‌ಗಳಿಂದ ಉಂಟಾಗುತ್ತದೆ. ಇವು ಇತರ ರೋಗಗ್ರಸ್ತ ಜನರಿಂದ, ಪ್ರಾಣಿಗಳಿಂದ, ಹಾಗೂ ಮಣ್ಣಿನಿಂದ ಹರಡುತ್ತವೆ. ಇವುಗಳಲ್ಲಿ ಹಲವಾರು ಪ್ರಭೇದಗಳಿದ್ದು ಅವು ಚರ್ಮ, ಉಗುರು, ಮತ್ತು ಕೂದಲುಗಳನ್ನು ಬಾಧಿಸುತ್ತವೆ. ಇವುಗಳನ್ನು ‘ಟೀನಿಯ’ (Tinea) ರೋಗಗಳೆಂದು ಕರೆಯುತ್ತಾರೆ. ಇವು ಉಂಟಾಗುವ ದೇಹದ ಸ್ಥಳಕ್ಕೆ ಅನುಸಾರವಾಗಿ ಹೆಸರಿಸಲಾಗುತ್ತದೆ. ತೊಡೆಸಂದುಗಳಲ್ಲಾದರೆ ‘ಟೀನಿಯ ಕ್ರೂರಿಸ್’, ದೇಹದ ಮೇಲಾದರೆ ‘ಟೀನಿಯ ಕಾರ್ಪೋರಿಸ್’, ಮುಖದಲ್ಲಾದರೆ ‘ಟೀನಿಯ ಫೇಷಿಯೈ’, ಗಡ್ಡದ ಜಾಗದಲ್ಲಾದರೆ ‘ಟೀನಿಯ ಬಾರ್ಬೆ’, ಕೈಯಲ್ಲಾದರೆ ‘ಟೀನಿಯ ಮ್ಯಾನಮ್’, ಕಾಲಲ್ಲಾದರೆ ‘ಟೀನಿಯ ಪೀಡಿಸ್’, ತಲೆಯಲ್ಲಾದರೆ ‘ಟೀನಿಯ ಕ್ಯಾಪಿಟಿಸ್’, ಹಾಗೂ ಉಗುರಿನಲ್ಲಾರೆ ‘ಟೀನಿಯ ಅಂಗ್ವಂ’. ಇವು ಕೆಂಪಾದ ಮಚ್ಚೆಗಳಾಗಿ ಮಧ್ಯದಲ್ಲಿ ಖಾಲಿಯಿರುತ್ತಾ ತುದಿಯಲ್ಲಿ ಬಿಳಿಯ ಪದರಗಳೊಂದಿಗೆ ಹರಡುತ್ತಾ ಹೋಗುತ್ತವೆ. ಇದಕ್ಕೆ ಕಾರಣವೆಂದರೆ ಚರ್ಮವು ಫಂಗಸ್ ಅನ್ನು ಓಡಿಸಿದಷ್ಟೂ ಅದು ತುದಿಯಿಂದ ಹರಡುತ್ತಾ ಹೋಗುತ್ತದೆ. ಹೀಗೆ ಉಂಗುರದಂತೆ ಕಾಣುವುದರಿಂದ ಇದನ್ನು ‘ರಿಂಗ್ ವರ್ಮ್’, ಹುಳುಕಡ್ಡಿ, ಗಜಕರ್ಣ ಎಂದೆಲ್ಲಾ ಕರೆಯುತ್ತಾರೆ. ಈ ಮಚ್ಚೆಗಳು ಬಹಳ ತುರಿಸುತ್ತವೆ. ಇವನ್ನು ಮುಟ್ಟಿ ಬೇರೆ ಕಡೆ ಮುಟ್ಟಿದರೆ ಅಲ್ಲಿಗೂ ಅಂಟುತ್ತವೆ. ಹೆಚ್ಚು ಕೆರೆದಷ್ಟೂ ಇವು ಕಪ್ಪಾಗುತ್ತವೆ. ಒದ್ದೆ ಮತ್ತು ಬೆಚ್ಚಗಿನ ವಾತಾವರಣ – ಇವು ಅಂಟಲು ಕಾರಣಗಳು.

ಕ್ಯಾಂಡಿಡಾ ರೋಗಗಳು:

‘ಕ್ಯಾಂಡಿಡಾ ಆಲ್ಬಿಕನ್ಸ್’ ಎಂಬ ಯೀಸ್ಟ್ ಜಾತಿಯ ಫಂಗಸ್ ಕೂಡ ನಮ್ಮ ಚರ್ಮದಲ್ಲಿ ವಾಸಿಸುವ ಒಂದು ಜೀವಿ; ಇದಕ್ಕೆ ಅವಕಾಶ ದೊರೆತಾಗ ರೋಗವನ್ನು ಉಂಟುಮಾಡುತ್ತದೆ. ಕ್ಯಾಂಡಿಡಾ ರೋಗಗಳು ಹಲವು ಬಗೆಗಳು. ‘ಇಂಟರ್ ಟ್ರೈಗೋ’ (Intertrigo) ಎಂಬುದು ಒಂದು ಬಗೆ. ಇದು ಚರ್ಮ ಚರ್ಮದೊಂದಿಗೆ ಸಂಯೋಗ ಹೊಂದುವ ಸ್ಥಳಗಳಲ್ಲಿ ಆಗುತ್ತದೆ. ಸಾಮಾನ್ಯವಾಗಿ ಇದು ತೊಡೆಸಂದುಗಳು ಹಾಗೂ ಕೊನೆಯ ಎರಡು ಕಾಲ್ಬೆರಳುಗಳ ಸಂದಿಯಲ್ಲಾಗುತ್ತದೆ. ತೊಡೆಸಂದುಗಳಲ್ಲಿ ತುರಿಸುವ, ಒದ್ದೆಯಾದ ಕೆಂಪು ಕಲೆಗಳಾದರೆ, ಕಾಲ್ಬೆರಳುಗಳ ಸಂದಿಯಲ್ಲಿ ಬಿಳಿಯ ಒದ್ದೆಯಾದ ಕಲೆಗಳಾಗುತ್ತವೆ. ಸಣ್ಣ ಶಿಶುಗಳಲ್ಲಿ ಶುದ್ಧವಲ್ಲದ ಶೀಶೆಯಲ್ಲಿ ಹಾಲು ಕುಡಿಸುವುದರಿಂದ ಬಾಯಲ್ಲಿ ಕೆಂಪು ಕಲೆಗಳ ಕ್ಯಾಂಡಿಡಿಯಾಸಿಸ್ ರೋಗವಾಗುತ್ತದೆ. ಇದನ್ನು ‘ಓರಲ್ ಥ್ರಶ್’ ಎನ್ನುತ್ತಾರೆ. ಅಂತೆಯೇ ಬಾಯಿಯ ಶುದ್ಧತೆ ಮಾಡಿಕೊಳ್ಳಲಾಗದ ರೋಗಗ್ರಸ್ತರಲ್ಲಿ ಹಾಗೂ ಏಡ್ಸ್ ರೋಗಿಗಳಲ್ಲಿ ಬಾಯಿಯಲ್ಲಿ ಕ್ಯಾಂಡಿಡಿಯಾಸಿಸ್ ಆಗುತ್ತದೆ. ಕ್ಯಾಂಡಿಡಿಯಾಸಿಸ್ ಜನನಾಂಗಗಳಲ್ಲೂ ಆಗುತ್ತದೆ. ಸಂಭೋಗ ಮಾಡುವಾಗ ಒದ್ದೆಯಾಗುವುದರಿಂದ ಸಹಜವಾಗಿಯೇ ಇರುವ ಕ್ಯಾಂಡಿಡಾ ಫಂಗಸ್ ಬೆಳೆದು ರೋಗವುಂಟುಮಾಡಬಹುದು. ಪುರುಷರಲ್ಲಿ ಶಿಶ್ನದ ಮೇಲೆ ಕೆಂಪು ಕಲೆಗಳು, ಬಿಳಿಯ ಪದರಗಳು, ಹಾಗೂ ತುದಿಗಳಲ್ಲಿ ಬಿರುಕುಗಳಾಗಿ ತುರಿಸುತ್ತವೆ. ಕೆಲವೊಮ್ಮೆ ಮುಂದೊಗಲು ಅಂಟಿಕೊಂಡು ಹಿಂದೆ ಸರಿಸಲು ಕಷ್ಟವಾಗಬಹುದು. ಸ್ತ್ರೀಯರಲ್ಲಿ ಯೋನಿಯಲ್ಲಿ ಬಿಳಿಯ ಕಲೆಗಳು, ಯೋನಿ ಕೆಂಪಾಗಿ ತುರಿಸುವುದು, ಬಿಳಿಯ ಸ್ರಾವವಾಗುವುದು – ಇವೆಲ್ಲಾ ಆಗಬಹುದು.

ಚಿಕಿತ್ಸೆ:

ಫಂಗಸ್ ರೋಗಗಳಿಗೆ ಈಗ ಒಳ್ಳೆಯ ಚಿಕಿತ್ಸೆ ಇದೆ. ಕೀಟೋಕೋನಜೋಲ್, ಲುಲಿಕೋನಜೋಲ್, ಟರ್ಬಿನಫಿನ್, ಮೊದಲಾದ ಫಂಗಸ್ ನಿರೋಧಕ ಮುಲಾಮುಗಳೂ; ಫ್ಲುಕೋನಜೋಲ್, ಇಟ್ರಕೋನಜೋಲ್ ಮೊದಲಾದ ಮಾತ್ರೆಗಳೂ ಇವೆ. ಇವುಗಳನ್ನು ಚರ್ಮರೋಗತಜ್ಞರ ಸಲಹಾನುಸಾರ ಬಳಸಬೇಕು; ಸ್ವಯಂ ಚಿಕಿತ್ಸೆಯನ್ನು ಮಾಡಿಕೊಳ್ಳಬಾರದು. ಕೆಲವರು ಬೇಗನೆ ವೈದ್ಯರಿಗೆ ತೋರಿಸದೇ ರೋಗವು ಹೆಚ್ಚಿದ ನಂತರ ತೋರಿಸುತ್ತಾರೆ. ಆಗ ಇದು ವಾಸಿಯಾಗಲು ಬಹಳ ನಿಧಾನವಾಗಬಹುದು.ಕೆಲವೊಮ್ಮೆ ಫಂಗಸ್ ಕಾಯಿಲೆಗಳು ಕೆಲವು ಒಳ್ಳೆಯ ಔಷಧಗಳಿಗೆ ಕೂಡ ಬೇಗನೆ ವಾಸಿಯಾಗದಿರಬಹುದು. ಇದಕ್ಕೆ ಕಾರಣ, ಅವರಲ್ಲಿರುವ ಫಂಗಸ್ ಔಷಧಕ್ಕೆ ವಿರೋಧವೊಡ್ಡುವ ಶಕ್ತಿ ಬೆಳೆಸಿಕೊಂಡಿರುತ್ತದೆ. ಆಗ ರೋಗಿಗಳು ಧೃತಿಗೆಡದೆ ಪುನಃ ಚರ್ಮವೈದ್ಯರಿಗೆ ತೋರಿಸಿ ಬೇರೆ ಔಷಧಗಳ ಚಿಕಿತ್ಸೆಯನ್ನು ಪಡೆಯಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.