ADVERTISEMENT

ನೀವಿನ್ನೂ ಮಾಸ್ಕ್‌ ಬಿಟ್ಟಿಲ್ವಾ!

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 19:30 IST
Last Updated 13 ಜೂನ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅರೆರೆ! ಕೋವಿಡ್ ಮುಗಿದಿದೆ. ಕೋವಿಡ್ ಮುಗಿಯುವುದಕ್ಕೂ ಮೊದಲೇ ನಾವು ಮಾಸ್ಕ್ ಎಸೆದಾಯಿತು, ಇವ‍ರ್‍ಯಾಕೆ ನೀವು ಮಾಸ್ಕ್ ಹಾಕೋದು ಬಿಟ್ಟಿಲ್ವಲ್ಲಾ? – ಅಂತಿದ್ದಾರೆ ಎಂದು ಆಶ್ಚರ್ಯ ಆಗುತ್ತಿದೆಯೇ? ನಾನು ಕೇಳುತ್ತಿರುವ ‘ಮಾಸ್ಕ್‘ ಬಾಯಿಗೆ ವೈರಸ್ ಬರದಿರುವಂತೆ ತೊಡಿಸುವುದಲ್ಲ; ವ್ಯಕ್ತಿತ್ವಕ್ಕೆ ನಾವೆಲ್ಲರೂ ಆಗಾಗ ಹಾಕುವ ಮಾಸ್ಕ್ ಬಗ್ಗೆ! ಏನಿದು ವ್ಯಕ್ತಿತ್ವಕ್ಕೆ ಹಾಕುವ ಮಾಸ್ಕ್? ನಮಗೆಲ್ಲರಿಗೂ ಮುಖವಾಡಗಳಿವೆ! ಕಪಾಟು ತುಂಬಾ ಮುಖವಾಡಗಳು. ಪ್ರತಿ ಸನ್ನಿವೇಶಕ್ಕೆ, ಪ್ರತಿ ಒತ್ತಡಕ್ಕೆ, ಆಯಾ ಸಂದರ್ಭಕ್ಕೆ ಯಾವ ಮುಖವಾಡ ಧರಿಸಲಿ ಎಂಬ ಚಿಂತೆ! ಮಾಸ್ಕ್ ಉಸಿರುಗಟ್ಟಿಸುವಂತೆ ಈ ಮುಖವಾಡಗಳೂ ಉಸಿರುಗಟ್ಟಿಸಲು ಸಾಧ್ಯವಿದೆ.

ನಮ್ಮ ಭಾವನೆಗಳಿಗೆ ವಿವಿಧ ಮುಖವಾಡಗಳನ್ನು ಹಾಕುವುದು ನಮಗೆ ಹೊಸತೇನೂ ಅಲ್ಲ. ನಮಗೆ ಯಾವ ವಿಷಯಕ್ಕೋ ಕೋಪ ಬಂದಿರುತ್ತದೆ. ಆದರೆ ನಗುತ್ತಾ ಅತಿಥಿಗಳನ್ನು ಸ್ವಾಗತಿಸುತ್ತೇವೆ. ಒಳಗೊಳಗೇ ದ್ವೇಷಿಸುತ್ತಲೇ, ಹೊರಗೆ ಗೌರವ ತೋರುತ್ತಾ ತಮಾಷೆ ಮಾಡುತ್ತೇವೆ. ಕೆಲವು ಉದ್ದೇಶಪೂರ್ವಕವಾಗಿ ನಾವು ಹಾಕಿಕೊಳ್ಳುವ ಮುಖವಾಡಗಳಾದರೆ, ಇನ್ನು ಕೆಲವು ನಮಗೆ ಗೊತ್ತಿರದೇ ನಾವು ಧರಿಸುವ ‘ಮಾಸ್ಕ್’ಗಳು. ಕೋವಿಡ್ ಬರದಿರಲೆಂದು ಮಾಸ್ಕ್ ಧರಿಸುವುದನ್ನು ರೂಢಿ ಮಾಡಿಕೊಂಡೆವಷ್ಟೆ. ಹಾಗೆಯೇ ಕೋವಿಡ್ ಮುಗಿದ ತಕ್ಷಣ ಮಾಸ್ಕ್ ಕಿತ್ತು ಹಾಕುವುದೂ ನಮಗೆ ಸುಲಭವೇ. ಆದರೆ ವ್ಯಕ್ತಿತ್ವಗಳಿಗೆ, ಭಾವನೆಗಳಿಗೆ ನಾವು ತೊಡಿಸುವ ಮುಖವಾಡಗಳದ್ದು ಇಷ್ಟು ಸುಲಭದ ಕಥೆಯಲ್ಲ! ಮನೋವೈಜ್ಞಾನಿಕವಾಗಿ ನಮ್ಮ ಸಹಜ ಹಾವಭಾವಗಳು, ಚಹರೆ, ಮಾತು, ಭಾವನೆಗಳನ್ನು ಸಂದರ್ಭಕ್ಕೆ ತಕ್ಕಂತೆ ಮರೆಮಾಡುವುದನ್ನು, ಬೇರೆಯೇ ಆಗಿಸುವುದನ್ನು ‘ಮಾಸ್ಕಿಂಗ್’ ಎಂದೇ ಗುರುತಿಸಲಾಗುತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ಇಂಥ ಮುಖವಾಡಗಳನ್ನು ಧರಿಸಿಯೇ ಧರಿಸುತ್ತೇವೆ. ಇದ್ದಕ್ಕಿದ್ದಂತೆ ಕೆಲವೊಮ್ಮೆ ಇಂಥ ಮುಖವಾಡ ಧರಿಸಿ ಪಕ್ಕದಲ್ಲಿದ್ದವರನ್ನು ’ಆ!’ ಎನ್ನುವಂತೆ ಮಾಡಿಬಿಡುತ್ತೇವೆ. ಆದರೆ ಮುಖವಾಡ ಹಾಕುವುದು ಏಕೆ? ಮಾಸ್ಕನ್ನು ಬಾಯಿ-ಮೂಗುಗಳನ್ನು ಮುಚ್ಚುವಂತೆ ಧರಿಸುವಾಗ ನಮ್ಮ ಉದ್ದೇಶ ಏನು? ವೈರಸ್ /ಧೂಳು ನಮಗೆ ತಗುಲಬಾರದು ಎಂಬುದು ಒಂದು ಕಾರಣವಾದರೆ, ನಮ್ಮ ಬಾಯಿಂದ ಬೇರೆಯವರಿಗೆ ರೋಗ ಹರಡಬಾರದು ಎಂಬುದು ಇನ್ನೊಂದು. ನಾಟಕದ ಮುಖವಾಡಗಳದ್ದು ಮತ್ತೊಂದು ಉದ್ದೇಶ. ವ್ಯಕ್ತಿಯ ನಿಜಚಹರೆಯನ್ನು ಮರೆಮಾಚಿ ನಾಟಕದ ಪಾತ್ರದ ವೇಷವನ್ನು ಸಾಧ್ಯ ಮಾಡುವುದು. ಸ್ವಾರಸ್ಯಕರ ಸಂಗತಿಯೆಂದರೆ ನಿಜಜೀವನದ ಮತ್ತು ನಾಟಕದ ಎರಡೂ ಉದ್ದೇಶಗಳನ್ನು ಏಕಕಾಲಕ್ಕೆ ಮನೋವೈಜ್ಞಾನಿಕವಾಗಿ ‘ಮಾಸ್ಕಿಂಗ್’ ಸಾಧ್ಯವಾಗಿಸಿಬಿಡುತ್ತದೆ.

ADVERTISEMENT

ನೀವೇ ಸ್ವಲ್ಪ ಯೋಚಿಸಿ ನೋಡಿ. ಹಿಂದಿನ ಬಾರಿ ನೀವು ಮುಖವಾಡ ಹಾಕಿದ್ದು ಯಾವಾಗ? ‘ಪಾರ್ಟಿಫೇಸ್’ ಎಂಬ ಮಾಸ್ಕ್ ಪಾರ್ಟಿಗೆ ಹೋಗುವಾಗ ಹಾಕಿದ್ದಿರಿ ತಾನೇ? ‘ಪಾರ್ಟಿಫೇಸ್‘ ಮಾಸ್ಕನ್ನು ನಾವು ಒಳಗೆ ಎಷ್ಟೋ ಕಷ್ಟಪಡುತ್ತಿದ್ದರೂ ಹೊರಗೆ ‘ನಾವು ಸಂತೃಪ್ತರು’ ಎಂಬುದನ್ನು ತೋರಿಸಲು ಉಪಯೋಗಿಸುತ್ತೇವೆ. ಇದರಿಂದ ನಾವು ಸಾಧಿಸಲು ಇಷ್ಟಪಡುವುದೇನು? ಬೇರೆಯವರ ಟೀಕೆ-ಕುಹಕಗಳಿಗೆ ನಾವು ಗುರಿಯಾಗಬಾರದು; ಒಳಗಿರುವ ಕಷ್ಟ-ಸಂಕಟಗಳು ಇತರರಿಗೆ ಕಾಣಬಾರದು. ಕೆಲವೊಮ್ಮೆ ಇತರರಿಗೆ ನೋವುಂಟುಮಾಡಬಾರದು ಎಂಬ ಉದ್ದೇಶವೂ ಇರಬಹುದು. ಅಥವಾ ಆತ್ಮವಿಶ್ವಾಸದ ಕೊರತೆಯಿರುವ ವ್ಯಕ್ತಿ, ಈ ಕೊರತೆಯನ್ನು ಮುಚ್ಚಿಕೊಳ್ಳಲು ಬಹುದರ್ಪದ ವ್ಯಕ್ತಿಯಂತೆ, ಎಲ್ಲರನ್ನೂ ನಿಯಂತ್ರಿಸುವವನಂತೆ ನಡೆದುಕೊಳ್ಳಬಹುದು. ಮಕ್ಕಳೂ ‘ಮಾಸ್ಕ್‘ ಧರಿಸುತ್ತಾರೆ! ಮಕ್ಕಳನ್ನು ಸುಲಭವಾಗಿ ತಿಳಿಯಬಲ್ಲ ಅಮ್ಮನಿಗೆ ಮಕ್ಕಳು ಇಂಥ ‘ಮುಖವಾಡ’ ಹಾಕಿಕೊಂಡರೆ ಅದರ ಹಿಂದೆ ‘ಇಂಥದ್ದೇ‘ ಸಮಸ್ಯೆ ಎಂದೂ ಕಂಡುಹಿಡಿಯಲಾದೀತು. ಅಂದರೆ ಮಗು ‘ನನಗೆ ಯಾಕೋ ತುಂಬಾ ಸುಸ್ತು’ ಎಂದರೆ ‘ಇವತ್ತು ಶಾಲೆಯಲ್ಲಿ ಏನೋ ಆಗಿದೆ/ ಆಟದ ಗುಂಪಿನಲ್ಲಿ ಮಗುವಿಗೆ ಬೇಸರವಾಗುವಂಥದ್ದು ಏನೋ ನಡೆದಿದೆ’ ಎಂಬ ತೀರ್ಮಾನಕ್ಕೆ ಬರುವಂತೆ ಮುಖವಾಡ ಮಕ್ಕಳ ಮನಸ್ಸನ್ನು ಅರಿಯುವ ಸಾಧನವೂ ಆಗಬಹುದು.

ನಾವು ‘ಮುಖವಾಡ‘ ಹಾಕಿಕೊಳ್ಳುವುದು ಹೇಗೆ ನಮಗೆ ಆ ಕ್ಷಣದ ಒತ್ತಡದಿಂದ ರಕ್ಷಣೆ ನೀಡಬಹುದೋ, ಹಾಗೆಯೇ ಇತರರ ಮುಖವಾಡವೂ! ಒಂದೊಮ್ಮೆ ಆತ್ಮೀಯರು ಮುಖವಾಡ ಧರಿಸಿದಂತೆ ನಡೆದುಕೊಳ್ಳುತ್ತಿದ್ದಾರೆ; ಆದರೆ ನಿಮಗೆ ಮುಖವಾಡದ ಹಿಂದೆ ಏನಿದೆ ಎಂಬುದು ಗೊತ್ತು ಎಂದುಕೊಳ್ಳಿ. ಆಗ ನೀವು ಏನು ಮಾಡಬೇಕು ಎಂದು ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅಂದರೆ ಒಂದೊಮ್ಮೆ ಕೌಟುಂಬಿಕ ಹಿಂಸೆ/ ಮೋಸದಂತಹ ಸನ್ನಿವೇಶಗಳಲ್ಲಿ ಇಂತಹ ‘ಮಾಸ್ಕ್’ ಅಪಾಯಕಾರಿ. ಆಗ ಅದನ್ನು ನಾವು ಮುಖಗವಸು ಧರಿಸಿದ ಕಳ್ಳನನ್ನು ಎದುರಿಸಬೇಕಾದ ರೀತಿ ಕಲ್ಪಿಸಿಕೊಳ್ಳಬೇಕು. ಅಪಾಯ ಗ್ರಹಿಸಿ ಪಾರಾಗುವತ್ತ ಯೋಚನೆಗೆ ತೊಡಗಬೇಕು. ಮತ್ತೊಂದೆಡೆ, ವ್ಯಕ್ತಿಗೆ ಅಪಾರವಾದ ನೋವಿದೆ, ನೋವನ್ನು ಮರೆಮಾಚಲು, ಸಂತೋಷದ ಮೇಲ್ಪದರ ಧರಿಸಿದ್ದಾನೆ. ನಿಮಗೆ ‘ನೋವು’ ಏನೆಂಬುದು ಅಕಸ್ಮಾತ್ ಅರಿವಿದ್ದರೂ, ಆತನ ಮುಖವಾಡವನ್ನು ಗೌರವಿಸಬೇಕು. ಕೆದಕಿ, ಕೆದಕಿ ಹೇಗಾದರೂ ಮಾಡಿ ಮುಖವಾಡವನ್ನು ಎಳೆಯಲು ತೊಡಗಬಾರದು. ನೀವು ಅವರ ಹಿತೈಷಿಗಳೇ ಹೌದಾದರೆ, ನಿಧಾನವಾಗಿ ಅವರೊಬ್ಬರ ಬಳಿ ಸದುದ್ದೇಶವನ್ನು ಸ್ಪಷ್ಪಪಡಿಸಿ ಮುಖವಾಡ ತೆಗೆದು, ಮನಸ್ಸಿನ ನಿಜ ಭಾವನೆಗಳನ್ನು ಹಂಚಿಕೊಳ್ಳಲು ಅವರಿಗೆ ಪ್ರೇರಣೆ ನೀಡಬೇಕು.

ಸಂಬಂಧಗಳಲ್ಲಿ ನಿಕಟತೆ, ನೇರ ನಡವಳಿಕೆ ಇದ್ದಷ್ಟೂ ಮುಖವಾಡದ ಅಗತ್ಯ ಬೀಳದು. ಸಂಬಂಧಗಳಲ್ಲಿ ಮನೆಯ ಪರಿಸರದಲ್ಲಿಯೂ ಮತ್ತೆ ಮತ್ತೆ ‘ಮಾಸ್ಕ್’ ಧರಿಸಬೇಕಾಗಿ ಬಂದರೆ, ಎಲ್ಲೋ ಏನೋ ಸರಿಯಿಲ್ಲ ಎಂದೇ! ‘ಮುಖವಾಡಗಳು’ -‘ಮಾಸ್ಕ್’ ಎಂಬ ಶೆಲ್ ಸಿಲ್ವರ್‍ಸ್ಟೀನ್ ಬರೆದ ಇಂಗ್ಲಿಷ್ ಕವಿತೆಯ ಸಾಲುಗಳ ಭಾವ ಹೀಗಿದೆ:

ಅವಳಿಗಿದ್ದದ್ದು ನೀಲಿಚರ್ಮ
ಅವನಿಗೂ ಇದ್ದದ್ದು ಅದೇ!
ಅವನು ಅದನ್ನು ಮುಚ್ಚಿಟ್ಟಿದ್ದ
ಅವಳೂ ಮಾಡಿದ್ದು ಅದೇ!
ಹುಡುಕಿದರು ಹುಡುಕಿದರು
ನೀಲಿಗಾಗಿ
ಇಡೀ ಜೀವನಪೂರ್ತಿ
ಇಬ್ಬರೂ ಅಕ್ಕಪಕ್ಕ ಸರಿದು ಹೋದರೂ
ಗೊತ್ತಾಗಲೇ ಇಲ್ಲ ಕೊನೆಗೂ!

ಕೋವಿಡ್‌ನ ಮಾಸ್ಕ್ ತೆಗೆದಂತೆ, ಮನಸ್ಸಿನ ಮುಖವಾಡಗಳನ್ನೂ ತೆಗೆದು ಹಾಕೋಣ. ನಮಗಾಗಿ ಬದುಕುವುದನ್ನು, ಪ್ರಾಮಾಣಿಕವಾಗಿ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಕಲಿಯೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.