ADVERTISEMENT

ಹೃದಯದ ಪಿಸುಮಾತು...ಮನಸಿನ ಮಿಡಿತಕ್ಕೆ ಭಾಷೆ ಕೊಡಿ

ಹುಬ್ಬಳ್ಳಿ–ಧಾರವಾಡ ಮೆಟ್ರೊ

ಎಸ್.ರಶ್ಮಿ
Published 27 ಸೆಪ್ಟೆಂಬರ್ 2019, 19:45 IST
Last Updated 27 ಸೆಪ್ಟೆಂಬರ್ 2019, 19:45 IST
ಹೃದಯದ ಭಾಷ್ಯ
ಹೃದಯದ ಭಾಷ್ಯ   

ನಮ್ಮೆಲ್ಲ ಯೋಚನೆಗಳಿಗೆ ತಕ್ಕಂತೆ ತಾಳಬದ್ಧವಾಗಿ ಲಯಬದ್ಧವಾಗಿ ಬೆಂಬಲ ಸೂಚಿಸುವ ಏಕೈಕ ಅಂಗ ನಮ್ಮ ಹೃದಯ. ತುಟಿಮೇಲೆ ನಗು ತರಲು, ಹಣೆ ಗಂಟಿಕ್ಕಲು, ನರನಾಡಿಗಳಲ್ಲಿ ರಕ್ತ ಪ್ರವಹಿಸುವ ವೇಗವನ್ನು ನಿರ್ಧರಿಸಲು, ನಮ್ಮ ಭಾವಲೋಕ, ಜೀವಲೋಕ ಎರಡನ್ನೂ ಏಕತಾರಿಯಲ್ಲಿ ತಂದಿಡಲು ಹೃದಯ ನಿರಂತರವಾಗಿ ಮಿಡಿಯುತ್ತಲೇ ಇರುತ್ತದೆ.

ಹೇಳಲು ಹೃದಯದಲ್ಲಿ ಎರಡೇ ಕವಾಟಗಳು. ಆ ಎರಡೂ ಕವಾಟಗಳಲ್ಲಿ ನಾವು ಅಸಂಖ್ಯಾತ ಕಪಾಟುಗಳನ್ನು ಸೃಷ್ಟಿಸಿಕೊಂಡಿರುತ್ತೇವೆ. ಕೆಲವು ತುಟಿಯ ಮೇಲೆ ಮುಗುಳು ತಂದರೆ, ಇನ್ನೂ ಕೆಲವು ದೂಳು ಮುಸುಕಿ ಸುಮ್ಮನಿರುತ್ತವೆ. ಆದರೆ ಆಗಾಗ ದೂಳು ಕೊಡವಿಕೊಂಡರೆ ಮಾತ್ರ ಆಘಾತ ತಪ್ಪಿದ್ದಲ್ಲ.

ನಮ್ಮ ಎಡಗೈ ಮುಷ್ಟಿಯಷ್ಟೇ ಸಣ್ಣದಿರುವ ಹೃದಯ ಕ್ಷಿತಿಜದಷ್ಟು ವಿಸ್ತಾರವಾಗುವ ಗುಣ ಹೊಂದಿದೆ. ಎಲ್ಲರಿಗೂ ಹೃದಯವನ್ನು ಅಂಗೈಲಿ ಹಿಡಿದುಕೊಂಡು ಭಾಷೆ ಕೊಡುವ ನಾವು, ಅಂಗೈಗಾತ್ರದ ಈ ಹೃದಯಕ್ಕೆ ಈ ವರ್ಷ ಭಾಷೆ ಕೊಡಬೇಕಾಗಿದೆ. ಭಾಷೆ ಕೊಡಿ ಅಂತ ಅಂತರರಾಷ್ಟ್ರೀಯ ಹೃದಯ ಆರೋಗ್ಯ ದಿನಾಚರಣೆಯ ಘೋಷಣೆ ಹೇಳುತ್ತಿದೆ.

ADVERTISEMENT

ಆರೋಗ್ಯವಂತ ಹೃದಯಕ್ಕಾಗಿ ಒಂದಷ್ಟು ಬದ್ಧತೆ ಉಳಿಸಿಕೊಳ್ಳಿ. ನಿಮ್ಮೆಲ್ಲ ಬಾಂಧವ್ಯಗಳಿಗೂ ಬದ್ಧರಾಗಲು ಸಹಾಯ ಮಾಡುವ ಪುಟ್ಟ ಹೃದಯಕ್ಕೆ ಇಂದಿನಿಂದಲೇ ಬದ್ಧರಾಗಿ. ದಿನನಿತ್ಯವೂ ಬೀಸುನಡಿಗೆ ಮಾಡಿ. ನಲ್ವತ್ತರ ಪ್ರಾಯವಾಗಿದ್ದರೆ ಹೃದಯದ ಪಿಸುಮಾತನ್ನು ಕೇಳಿಸಿಕೊಳ್ಳಿ. ಆಗಾಗ ಸುಸ್ತಾದಂತೆ ಅನಿಸಿದರೆ, ಹೃದಯದ ಮಿಡಿತಗಳಲ್ಲಿ ಏರಿಳಿತಗಳಿದ್ದರೆ, ಹೆಚ್ಚು ನಡೆದಾಗ ಉಬ್ಬಸ ಬರುತ್ತಿದ್ದರೆ ನಿಮ್ಮ ತೂಕವನ್ನೊಮ್ಮೆ ನೋಡಿಬಿಡಿ.

ಜೀವನದ ಭಾರವನ್ನೆಲ್ಲ ಹೃದಯಕ್ಕೆ ವರ್ಗಾಯಿಸಿ, ನಿರಾಳರಾಗುವ ನಾವು, ದೇಹದ ತೂಕವನ್ನು ಹೃದಯಕ್ಕೆ ವರ್ಗಾಯಿಸುವಂತಾಗಬಾರದು. ದೇಹಕ್ಕೆ ರಕ್ತ ಸರಬರಾಜು ಮಾಡಲು ಅದು ಎಡತಾಕಬೇಕಾಗುತ್ತದೆ. ಹೃದಯಕ್ಕೂ ಸಕಾರಾತ್ಮಕ ಚಿಂತನೆಗೂ ಅತಿ ಸಮೀಪದ ಬಾಂಧವ್ಯವಿದೆ. ಖುಷಿಯಾಗಿರುವ ಯೋಚನೆಗಳು ನಿಮ್ಮಲ್ಲಿದ್ದಾಗ ನರನಾಡಿಗಳಲ್ಲಿ ರಕ್ತ ಶಾಂತ ಸರೋವರದಂತೆ ಪ್ರವಹಿಸುತ್ತದೆ. ನಕಾರಾತ್ಮಕ ಯೋಚನೆಗಳಿದ್ದಲ್ಲಿ, ದ್ವೇಷ, ರೋಷ, ಉದ್ವೇಗಗಳು ಬಂದಾಗ ಸಮುದ್ರದಲೆಗಳಂತೆ ಏರಿಳಿತ ಕಂಡುಬರುತ್ತದೆ. ರಕ್ತದ ಏರೊತ್ತಡಕ್ಕೂ, ಇಳಿತಕ್ಕೂಕಾರಣಗಳಾಗುತ್ತವೆ.

ಸಕಾರಾತ್ಮಕ ಚಿಂತನೆಗಳಂತೆಯೇ ಸಾತ್ವಿಕ ಆಹಾರವೂ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಕರಿದ ಆಹಾರಗಳಿಗಿಂತಲೂ ತಾಜಾ ತರಕಾರಿಗಳೆಂದರೆ ನಿಮ್ಮ ಪುಟ್ಟ ಹೃದಯ ಹೂವರಳಿದಂತೆ ಅರಳುತ್ತದೆ. ಪ್ರತಿ ಊಟದಲ್ಲಿಯೂ ಒಂದು ಹಿಡಿಯಷ್ಟಾದರೂ ತಾಜಾ ತರಕಾರಿ, ಮೊಳಕೆ ಕಾಳುಗಳಿರುವಂತೆ ನೋಡಿಕೊಳ್ಳಬೇಕು.

ಇಷ್ಟಕ್ಕೂ ಹದಿಹರೆಯದಲ್ಲಿ, ಮದುವೆಯಾದ ನಂತರ ನಿಮ್ಮ ಸಂಗಾತಿಯೊಂದಿಗೆ ಹೃದಯವನ್ನು ಬದಲಿಸಿಕೊಂಡಿದ್ದರೆ ಅದನ್ನು ಸುರಕ್ಷಿತವಾಗಿ, ನಿಮ್ಮೆದೆಗೂಡಿನಲ್ಲಿರಿಸಿಕೊಳ್ಳಲೂ ಭಾಷೆ ಕೊಡಬೇಕಲ್ಲವೆ? ನಾಳೆ ವಿಶ್ವ ಹೃದಯ ದಿನ. ನಿಮ್ಮಷ್ಟಕ್ಕೆ ನೀವು, ನಿಮ್ಮ ಹೃದಯಕ್ಕೆ ನೀವು ಭಾಷೆ ಕೊಡಿ, ಆರೋಗ್ಯದ ಸುರಕ್ಷೆ ನೀಡುವ ಭಾಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.