ಎಳೆ ಮಗುವಿನಲ್ಲಿ ದಿನದಿಂದ ದಿನಕ್ಕೆ ಮನೋದೈಹಿಕ ಬೆಳವಣಿಗೆ ನಡೆಯುತ್ತಿರುತ್ತದೆ. ಹುಟ್ಟಿದ ಕೆಲವು ತಿಂಗಳ ನಂತರ ಶಿಶುವಿನ ಮೊದಲ ಹಾಲು ಹಲ್ಲು ಪುಟ್ಟ ದವಡೆಯಲ್ಲಿ ಸಣ್ಣ ರತ್ನದಂತೆ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ತಪ್ಪು ಮಾಹಿತಿ, ಮೂಢನಂಬಿಕೆ ಇದ್ದರೆ, ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ಸರಿಪಡಿಸಲಾಗದ ತೊಂದರೆ ಆಗಬಹುದು.
ಹಾಲು ಹಲ್ಲು (ಬಿದ್ದು ಹೋಗುವ) ಮತ್ತು ಶಾಶ್ವತ ಹಲ್ಲು ಎಂದು ಎರಡು ವಿಧಗಳಿವೆ. ಹಾಲು ಹಲ್ಲುಗಳಲ್ಲಿ ಮತ್ತೆ ಮೂರು ವಿಧಗಳಿವೆ. ಎಂಟು ಬಾಚಿ, ನಾಲ್ಕು ಕೋರೆ, ಎಂಟು ದವಡೆ ಹಲ್ಲುಗಳು.ಮೊಟ್ಟ ಮೊದಲು ಮೂಡುವುದು ಕೆಳದವಡೆಯ ಮಧ್ಯದ ಬಾಚಿ ಹಲ್ಲು 6–10 ತಿಂಗಳಲ್ಲಿ.
ಕಟ್ಟ ಕಡೆಗೆ ಮೇಲಿನ ಎರಡನೆಯ ದವಡೆ ಹಲ್ಲು 25–33 ತಿಂಗಳಲ್ಲಿ ಮೂಡುತ್ತವೆ. ಎರಡೂವರೆಯಿಂದ ಮೂರು ವರ್ಷಕ್ಕೆ ಒಟ್ಟು ಇಪ್ಪತ್ತು ಹಾಲು ಹಲ್ಲುಗಳು ಇರುತ್ತವೆ.
ಹಲ್ಲು ಮೂಡುವ ಸಮಯ ಅನುವಂಶಿಕ. ಅಪ್ಪ ಅಮ್ಮನಲ್ಲಿ ಬೇಗ ಕಾಣಿಸಿದ್ದರೆ ಮಕ್ಕಳಲ್ಲಿ ಕೂಡ ಬೇಗ ಕಾಣಿಸಬಹುದು. ಮೊದಲ ಹಲ್ಲು ಸರಾಸರಿ ಏಳನೇ ತಿಂಗಳಲ್ಲಿ ಮೂಡುತ್ತದೆ. ಆದರೆ ಇದು ಅತಿ ಬೇಗ ಅಂದರೆ ಮೂರನೇ ತಿಂಗಳಿಗೆ ಕಾಣಿಸಬಹುದು ಅಥವಾ ಒಂದು ವರ್ಷವಾಗಿದ್ದರೂ ಕಾಣದಿರಬಹುದು. ಇವೆರಡೂ ಸಹಜ.
ಆರಂಭಿಕ ಲಕ್ಷಣಗಳು
ಹಾಲು ಹಲ್ಲು ಬರುವ ಮುನ್ಸೂಚನೆ ಬಗ್ಗೆ ಪಾಲಕರಲ್ಲಿ ಗೊಂದಲವಿದೆ. ಅನೇಕ ತಾಯಂದಿರು ‘ಹಲ್ಲು ಬರುವ ಮುಂಚೆ ಬೇಧಿ, ಜ್ವರ, ಕಿರಿಕಿರಿಯಿಂದಾಗಿ ಮಗು ಸೋತು ಹೋಗುತ್ತದಂತೆ ,ಹೌದಾ ಡಾಕ್ಟರೇ?’ ಎಂದು ಆತಂಕದಿಂದ ಕೇಳುವ ಪ್ರಶ್ನೆ ಸಾಮಾನ್ಯ.
ಬಹುತೇಕ ಮಕ್ಕಳಲ್ಲಿ ರಾತ್ರೋರಾತ್ರಿ ಯಾವುದೇ ಮುನ್ಸೂಚನೆ,ಯಾವುದೇ ತೊಂದರೆ ಇಲ್ಲದೆ ಈ ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಆದರೆ ಕೆಲವು ಮಕ್ಕಳಲ್ಲಿ ಹಲ್ಲು ಮೂಡುವ 2–3 ತಿಂಗಳ ಮುಂಚೆ ಕೆಲವು ಮುನ್ಸೂಚನೆಗಳು ಇರುತ್ತವೆ.
ಜೊಲ್ಲು: ಬಹಳಷ್ಟು ಮಕ್ಕಳಲ್ಲಿ ಅತಿಯಾದ ಜೊಲ್ಲು ಬರುವುದು ಸಾಮಾನ್ಯ ಲಕ್ಷಣ. ಬಾಯಿಂದ ಬರುವ ಲಾಲಾರಸವು ತ್ವಚೆಯ ಮೇಲೆ ಬಿದ್ದು, ಗಲ್ಲ ಮತ್ತು ತುಟಿ ಕೆಂಪಗಾಗಬಹುದು ಅಥವಾ ಸುಕ್ಕುಗೊಳ್ಳಬಹುದು. ಇದನ್ನು ತಡೆಯಲು ಜೊಲ್ಲನ್ನು ಆಗಾಗ ಶುದ್ಧ ಬಟ್ಟೆಯಿಂದ ಒರೆಸಿರಿ. ಚರ್ಮಕ್ಕೆ ಬೇಬಿ ಕ್ರೀಮ್ ಲೇಪಿಸಿರಿ.
ಕಚ್ಚುವಿಕೆ: ಎದೆ ಹಾಲು ಕುಡಿಯುವಾಗ ಅಮ್ಮನ ಸ್ತನದ ತೊಟ್ಟು ಕಚ್ಚುವುದು, ತನ್ನದೇ ಅಥವಾ ಬೇರೆಯವರ ಬೆರಳನ್ನು ಕಚ್ಚುವುದು ಸಾಮಾನ್ಯ. ವಸಡುಗಳ ಊತದ ಉಪಶಮನಕ್ಕಾಗಿ ಮಗು ಹೀಗೆ ಮಾಡುತ್ತದೆ.
ಆಹಾರ ನಿರಾಕರಣೆ: ವಸಡಿನ ನೋವಿನಿಂದಾಗಿ ಕೆಲವು ಶಿಶುಗಳು ಕಡಿಮೆ ತಿನ್ನಬಹುದು ಅಥವಾ ಹೊಸದಾಗಿ ಆರಂಭಿಸಿದ ಅಥವಾ ಇಷ್ಟವಾದ ಆಹಾರ ನಿರಾಕರಿಸಬಹುದು.
ಬೇಧಿ: ಇದಕ್ಕೂ ಹಲ್ಲು ಮೂಡುವುದಕ್ಕೂ ಸಂಬಂಧವಿಲ್ಲ. ಜೊಲ್ಲು ನುಂಗುವುದು, ಅಶುಚಿ ವಸ್ತುಗಳನ್ನು ಕಚ್ಚಲು ಕೊಡುವುದು, ಸ್ವಚ್ಛವಲ್ಲದ ಕೈಯಿಂದ ವಸಡು ಮುಟ್ಟುವುದು, ಕೈಗೆ ಸಿಕ್ಕಿದ ಎಲ್ಲವನ್ನೂ ಮಗು ಬಾಯಿಯಲ್ಲಿ ಇಟ್ಟುಕೊಳ್ಳುವುದು ಬೇಧಿಗೆ ಕಾರಣ.
ಹಲ್ಲು ಬರುವಾಗ ಕಾಕತಾಳೀಯವಾಗಿ ಜ್ವರ, ಕೆಮ್ಮು, ಕಿರಿ ಕಿರಿ ಇದ್ದರೆ ಇತರ ಸೋಂಕು ರೋಗದ ಲಕ್ಷಣವಾಗಿರಬಹುದು. ಕಿವಿ ಎಳೆದು ಕೊಳ್ಳುವುದು, ಕೆನ್ನೆ ಉಜ್ಜಿಕೊಳ್ಳುವುದು, ಈ ಮುಂಚೆ ತೊಂದರೆ ಇಲ್ಲದೆ ನಿದ್ರೆ ಮಾಡುವ ಮಗು ಒಮ್ಮೆಲೇ ನಿದ್ರೆ ಮಧ್ಯದಲ್ಲಿ ಎಚ್ಚರಗೊಳ್ಳುವುದು ಸಾಮಾನ್ಯ. ಕಿವಿಯ ಸೋಂಕಿನಲ್ಲೂ ಇಂತಹ ಲಕ್ಷಣಗಳು ಸಾಧ್ಯವೆಂದು ನೆನಪಿರಲಿ.
ಉಪಶಮನ ಹೇಗೆ?
ಹಲ್ಲು ಬರುವ ಮುನ್ಸೂಚನೆಗಳು ಇರುವಾಗ ಮನೆಯ ಚಿಕಿತ್ಸೆ ಕೊಡಿ. ಮಗು ಕಿರಿ ಕಿರಿ ಮಾಡುತ್ತಿದ್ದರೆ ನಿಮ್ಮ ಶುದ್ಧ ಬೆರಳಿನಿಂದ ವಸಡನ್ನು ಮೃದುವಾಗಿ ಉಜ್ಜಿರಿ.
ತಂಪಾದ ಆದರೆ ಸುರಕ್ಷಿತ ವಸ್ತುವನ್ನು ಕಚ್ಚಲು ಕೊಡಿ.ಇದಕ್ಕಾಗಿ ಶೈತ್ಯೀಕರಿಸಿದ ಬಾಳೆ ಹಣ್ಣು, ಗಜ್ಜರಿ ತುಂಡು ಸೂಕ್ತ. ಬಾಯಿಯಲ್ಲಿ ಇಡಬಹುದಾದ ಟೀಥಿಂಗ್ ಆಟಿಕೆ ಈಗ ಲಭ್ಯ. ಇವುಗಳನ್ನು ಬಳಸುವ ಮುಂಚೆ ಹಾಗೂ ನಂತರ ಸ್ವಚ್ಛಗೊಳಿಸಿ. ಇವು ಗಂಟಲಲ್ಲಿ ಸಿಕ್ಕಿಕೊಳ್ಳದಂತೆ ಮುಂಜಾಗ್ರತೆ ಇರಲಿ. ಮಗು ಕುಳಿತಿರುವಾಗ ಮತ್ತು ನಿಮ್ಮ ಮೇಲ್ವಿಚಾರಣೆಯಲ್ಲಿ ಬಳಸಿ. ಮನೆ ಉಪಚಾರ ಫಲಕಾರಿ ಆಗದಿದ್ದರೆ ’ಪ್ಯಾರಾಸಿಟಮಾಲ್’ ಎಂಬ ಅತ್ಯಂತ ಸುರಕ್ಷಿತವಾದ ನೋವು ನಿವಾರಕ ಔಷಧಿ ಕೊಡಿ. ಪ್ರಮಾಣ ಪ್ರತಿ ಕೆಜಿ ತೂಕಕ್ಕೆ 15 ಮಿಲಿ ಗ್ರಾಂ, ಪ್ರತಿ ಆರು ಗಂಟೆಗೊಮ್ಮೆ. ವಸಡುಗಳಿಗೆ ಲೇಪಿಸಲು ಈಗ ದ್ರವ ಮತ್ತು ಕ್ರೀಮ್ ಲಭ್ಯ.
ಹುಟ್ಟುವಾಗಲೇ ಹಲ್ಲು
ಜನಿಸಿದ ಮೂರು ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಕೆಳ ದವಡೆಯಲ್ಲಿ ಒಂದು ಹಲ್ಲು ಇರುತ್ತದೆ. ಇದರಿಂದ ಮಗುವಿಗೆ ಯಾವ ಅಪಾಯವಿಲ್ಲ.
**
ಹಲ್ಲುಜ್ಜುವುದು ಯಾವಾಗ?
ಯಾವ ಬ್ರಷ್ ಉತ್ತಮ, ಯಾವಾಗ ಇದನ್ನು ಬಳಸಬೇಕು, ಬ್ರಷ್‌ನಿಂದ ಎಳೆ ಹಲ್ಲುಗಳಿಗೆ ನೋವಾಗುತ್ತದೆಯೇ, ಪೇಸ್ಟ್ ನುಂಗಿದರೆ.. ಎಂಬ ಪ್ರಶ್ನೆಗಳು ಹೊಸ ತಾಯಿಯಲ್ಲಿ ಸಾಮಾನ್ಯ.
ಹಾಲು ಹಲ್ಲು ಬಂದಾಯ್ತ, ಇವು ಬಿದ್ದು ಹೋಗಿ ಶಾಶ್ವತ ಹಲ್ಲು ತಾವಾಗಿಯೇ ಬರುತ್ತವೆ, ಕಾಳಜಿ ಏಕೆ ಎಂಬ ಉದಾಸೀನ ಬೇಡ. ಶಾತ್ವತ ಹಲ್ಲು ಸರಿ ಸಮಯಕ್ಕೆ ಮೂಡಲು, ಉತ್ತಮ ಉಚ್ಚಾರಣೆಗೆ, ಮುಖದ ಅಂದಕ್ಕೆ ಅವಶ್ಯ. ಹಲ್ಲು ಹುಳುಕು, ಅಂಕು ಡೊಂಕು, ಒಂದರ ಹಿಂದೆ ಒಂದು ಹಲ್ಲು, ವಕ್ರ ದಂತ ಆಗಬಹುದು. ಇವನ್ನು ತಡೆಯಲುಹಲ್ಲುಗಳ ಕಾಳಜಿ ಮಗು ಜನಿಸಿದ ದಿನದಿಂದಲೇ ಆರಂಭಿಸಿ. ಎದೆ ಉಣಿಸಿದ ನಂತರ ವಸಡನ್ನು ಶುದ್ಧ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಮೊದಲ ಹಾಲು ಹಲ್ಲು ಮೂಡಿದ ನಂತರ ಹಲ್ಲುಜ್ಜಲು ಆರಂಭಿಸಿ. ಇದಕ್ಕಾಗಿ ಸಾಫ್ಟ್ ಬ್ರಷ್ ಬಳಸಿ. ಪ್ರತಿ 3–4 ತಿಂಗಳಿಗೊಮ್ಮೆ ಇದನ್ನು ಬದಲಿಸಿರಿ. ಎಂಟು ವರ್ಷದವರೆಗೆ ಹೆತ್ತವರ ಮೇಲ್ವಿಚಾರಣೆಯಲ್ಲಿ ಹಲ್ಲುಜ್ಜಬೇಕು.
ಈಗ ಸಸ್ಯಜನ್ಯ-ಹರ್ಬಲ್ ಪೆಸ್ಟ್ ಲಭ್ಯ. ಅಕಸ್ಮಾತ್ತಾಗಿ ನುಂಗಿದರೆ ಅಪಾಯವಿಲ್ಲ. ಆರು ತಿಂಗಳಿಗೊಮ್ಮೆ ದಂತ ವೈದ್ಯರಿಂದ ತಪಾಸಣೆ ಮಾಡಿಸಿರಿ. ಮೊದಲ ಆರು ತಿಂಗಳು ಕೇವಲ ಎದೆ ಹಾಲು ಉಣಿಸಿರಿ. ಬಾಟಲ್ ಹಾಲು ಬೇಡ. ಇದರಿಂದ ಹುಳುಕು ಹಲ್ಲು, ಮುಂಚಾಚುವಿಕೆ ಆಗಬಹುದು. ಹಲ್ಲಿಗೆ ಅಂಟಿಕೊಳ್ಳುವ ಪಾಸ್ತಾ ,ಚಾಕೊಲೇಟ್, ಬಿಸ್ಕತ್ತು, ಹಣ್ಣು ಸೇವನೆ ನಂತರ ಬಾಯಿಯನ್ನು 2–3 ಬಾರಿ ಮುಕ್ಕಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.