ADVERTISEMENT

ಏನಾದ್ರೂ ಕೇಳ್ಬೋದು: ಅತಿ ನಿದ್ದೆಗೆ ಕೊನೆಯೆಂದು?

ಸುನೀತಾ ರಾವ್
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST

ನನಗೆ 27 ವರ್ಷ. ಕಳೆದ ಎರಡು ತಿಂಗಳಿಂದ ನನಗೆ ವಿಪರೀತ ನಿದ್ದೆ ಕಾಡುತ್ತಿದೆ. ನಿದ್ದೆ ಮಾಡಿದಷ್ಟೂ ಸಾಲುತ್ತಿಲ್ಲ. ಆಫೀಸಿನಲ್ಲಿ ಕೆಲಸ ಮಾಡಲೂ ಆಗುತ್ತಿಲ್ಲ. ವಿಪರೀತ ಸುಸ್ತು ಕೂಡ. ಅಲ್ಲದೇ ಇತ್ತೀಚೆಗೆ ತುಂಬಾ ತಿನ್ನಬೇಕು ಎನ್ನಿಸುತ್ತದೆ. ಕೆಲವೊಮ್ಮೆ ತಲೆನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ಕಿರಿಕಿರಿ ಎನ್ನಿಸುತ್ತದೆ. ಇದು ಯಾವ ಸಮಸ್ಯೆ? ಇದಕ್ಕೆ ಪರಿಹಾರ ಏನು?

ಮನವಿ, ಬೆಂಗಳೂರು

ನೀವು ವೈದ್ಯರನ್ನು ಕಂಡು ಕೆಲವು ರಕ್ತಪರೀಕ್ಷೆಗಳನ್ನು ಮಾಡಿಸಬೇಕು. ಬಹುಶಃ ನಿಮಗೆ ಕೆಲವು ವಿಟಮಿನ್ ತೊಂದರೆಗಳು ಇರಬಹುದು ಅಥವಾ ನಿಮ್ಮ ರಕ್ತಪರಿಚಲನೆಯಲ್ಲಿ ವ್ಯತ್ಯಾಸವಾಗಿರಬಹುದು. ಹೀಗಾಗಿ ನೀವು ಒಳ್ಳೆಯ ಡಾಕ್ಟರ್‌ ಅನ್ನು ನೋಡುವುದು ಉತ್ತಮ.

ADVERTISEMENT

ನನಗೆ ಮದುವೆಯಾಗಿ 1 ವರ್ಷ ಆಯ್ತು. ಈ ಒಂದು ವರ್ಷದಲ್ಲಿ ನಾನು ಯಾವತ್ತೂ ಸಂತೋಷವಾಗಿರಲಿಲ್ಲ. ಬರೀ ಅತ್ತೆ–ಮಾವನ ಕಾಟ. ಆದರೂ ಹೇಗೋ ಹೊಂದಿಕೊಂಡು ಗಂಡನ ಮುಖ ನೋಡಿಕೊಂಡು ಸುಮ್ಮನೆ ಇದ್ದೆ. ಆದರೆ ಕಳೆದ 4 ತಿಂಗಳ ಹಿಂದೆ ನನಗೂ ನನ್ನ ಗಂಡನಿಗೂ ಇದೇ ವಿಷಯಕ್ಕೆ ಜಗಳ ಆಯ್ತು. ಈ ವಿಷಯ ನನ್ನ ಮನೆಯವರಿಗೆ ತಿಳಿದು ಅವರು ನನ್ನ ಗಂಡನಿಗೆ ಚೆನ್ನಾಗಿ ಬೈದರು. ಅದೇ ವಿಷಯವನ್ನು ದೊಡ್ಡದು ಮಾಡಿ ನನ್ನ ಗಂಡ ನನ್ನನ್ನು ತವರು ಮನೆಗೆ ಕಳುಹಿಸಿದರು. ಅಂದಿನಿಂದ ಇಂದಿನವರೆಗೂ ಒಂದು ಬಾರಿಯೂ ನನಗೆ ಕಾಲ್ ಮಾಡಲಿಲ್ಲ. ನಾನೇ ಕಾಲ್ ಮಾಡಿದರೆ ಬೇಕಾಬಿಟ್ಟಿ ಮಾತನಾಡುತ್ತಾರೆ. ಆದರೆ ನನಗೆ ನನ್ನ ಗಂಡ ಬೇಕು. ಅವರನ್ನು ಬಿಟ್ಟು ನನ್ನ ಜೀವನ ಯಾಕೆ ಹಾಳು ಮಾಡಿಕೊಳ್ಳಲಿ. ನನಗೆ ಸಲಹೆ ಕೊಡಿ.

ಹೆಸರು, ಊರು ಬೇಡ

ನಿಮ್ಮ ಹಾಗೂ ನಿಮ್ಮ ಮನೆಯವರ ನಡುವೆ ಸಂವಹನದ ಕೊರತೆಯಿದೆ ಎಂಬುದು ನನಗೆ ಅರ್ಥವಾಗುತ್ತದೆ. ಯಾವುದೇ ಸಂಬಂಧವಾಗಲಿ ಸಂವಹನ ಎಂಬುದೇ ಜೀವಾಳ. ಯಾವುದೇ ವ್ಯಕ್ತಿಯ ಜೊತೆಗಿನ ಸಂಬಂಧದಲ್ಲಿ ಆರೋಗ್ಯಕರ ಸಂವಹನ ಇಲ್ಲದಿದ್ದರೆ ಆ ಸಂಬಂಧ ನಮಗೆ ಉಸಿರುಗಟ್ಟಿಸುತ್ತದೆ. ನಮ್ಮ ತಂದೆ–ತಾಯಿ ಹಾಗೂ ಅಕ್ಕ–ತಮ್ಮ ಹೀಗೆ ನಾವು ಜೀವನದಲ್ಲಿ ಭೇಟಿ ಮಾಡುವ ಪ್ರತಿ ವ್ಯಕ್ತಿಗಳಲ್ಲೂ ಭಿನ್ನತೆ ಇರುತ್ತದೆ. ಅಂತಹದರಲ್ಲಿ ಅತ್ತೆ–ಮಾವಂದಿರ ಜೊತೆ ಭಿನ್ನಾಭಿಪ್ರಾಯ ಮೂಡುವುದು ಸಾಮಾನ್ಯ. ನಿಮ್ಮ ಪೋಷಕರಿಗೆ ಗಂಡನ ಮನೆಯವರನ್ನು ಭೇಟಿ ಮಾಡಿ ಒಳ್ಳೆಯ ರೀತಿ ಕುಳಿತು ಮಾತನಾಡುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದನ್ನು ತಿಳಿಸಿ. ಈ ವಿಷಯವನ್ನು ತುಂಬಾ ದಿನಗಳವರೆಗೆ ಎಳೆಯುವುದು ಒಳ್ಳೆಯದಲ್ಲ. ಮದುವೆ ಎನ್ನುವುದು ಪ್ರತಿ ಗಂಡ–ಹೆಂಡತಿಯ ಜೀವನದಲ್ಲಿ ಕೆಲವೊಂದು ಬದಲಾವಣೆಯನ್ನು ತರುತ್ತದೆ. ಇದು ತುಂಬಾ ದೊಡ್ಡ ಜವಾಬ್ದಾರಿ, ಇದನ್ನು ಪ್ರೌಢತೆಯಿಂದ ನಿಭಾಯಿಸಬೇಕು. ಸಮಯ ಕಳೆದಂತೆ ಸಂಬಂಧ ತುಂಬಾ ಸುಂದರವಾಗಿ ಬೆಳೆಯುತ್ತದೆ. ಸಣ್ಣ ಪುಟ್ಟ ಹೊಂದಾಣಿಕೆ ಹಾಗೂ ಸಂಧಾನದಿಂದ ಮದುವೆಯ ಜೀವನ ಸುಂದರವಾಗುತ್ತದೆ. ಹಿರಿಯರು ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಿ. ಖಂಡಿತ ನೀವು ನಿಮ್ಮ ಗಂಡನ ಮನೆಗೆ ಮರಳುತ್ತೀರಿ ಹಾಗೂ ಎಲ್ಲವೂ ಒಳ್ಳೆಯದಾಗುತ್ತದೆ.

ನಾನು ಅತಿಯಾಗಿ ತಂಬಾಕು ತಿನ್ನುತ್ತೇನೆ. ತಂಬಾಕಿನ ಕಾರಣದಿಂದ ಒಮ್ಮೆ ಗಂಟಲು ನೋವು ಕಾಣಿಸಿಕೊಂಡು ಒಂದು ವಾರ ಆಸ್ಪತ್ರೆಯಲ್ಲಿದ್ದೆ. ಡಾಕ್ಟರ್ ತಂಬಾಕು ತಿನ್ನುವುದನ್ನು ಬಿಡಬೇಕು ಎಂದು ತಾಕೀತು ಮಾಡಿದ್ದಾರೆ. ತಿನ್ನುವುದನ್ನು ಬಿಡಬೇಕು ಎಂದುಕೊಂಡರೂ ಆಗುತ್ತಿಲ್ಲ. ಈ ಚಟವನ್ನು ಬಿಡುವುದು ಹೇಗೆ? ಸಲಹೆ ನೀಡಿ.

ಹುಸೇನಿ, ರಾಯಚೂರು

ನೀವು ತಂಬಾಕಿನ ಚಟಕ್ಕೆ ಅಂಟಿಕೊಂಡಿರುವ ಬಗ್ಗೆ ನಿಮಗೆ ಅರಿವಿದೆ. ಹೀಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಸುಲಭವಾಗುತ್ತದೆ. ಈ ಚಟವನ್ನು ಬಿಡಬೇಕು ಎಂಬ ಹಂಬಲ ನಿಮ್ಮ ಮನಸ್ಸಿನಲ್ಲಿದೆ. ತಂಬಾಕು ತಿನ್ನುವುದನ್ನು ನಿಲ್ಲಿಸಲು ಇದೇ ಮೊದಲ ಹೆಜ್ಜೆ. ಅನೇಕ ಡಿಅಡಿಕ್ಷನ್ ಕೇಂದ್ರಗಳಿವೆ. ನೀವು ಅಲ್ಲಿಗೆ ಭೇಟಿ ನೀಡಬಹುದು. ಅವರು ನಿಮಗೆ ಚಟವನ್ನು ಬಿಡುವ ಮಾರ್ಗವನ್ನು ವಿವರಿಸುತ್ತಾರೆ. ಅದರ ಜೊತೆಗೆ ಒಳ್ಳೆಯ ಆಪ್ತಸಮಾಲೋಚಕರನ್ನು ಭೇಟಿ ಮಾಡಿ. ಆಗ ಖಂಡಿತ ನೀವು ಈ ಚಟದಿಂದ ಹೊರ ಬರಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.