ADVERTISEMENT

ಹಸಿ ಹಾಲು ಕುಡಿದೊಡೆ....

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 20:04 IST
Last Updated 8 ಜುಲೈ 2018, 20:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಹಾರವಾಗಿಯೂ, ಪಥ್ಯವಾಗಿಯೂ ಹಾಲಿಗೆ ಪ್ರತಿನಿತ್ಯ ಸ್ಥಾನ ಇದ್ದೇ ಇರುತ್ತದೆ. ಹಾಲು ಹಸಿಯಾಗಿ ಕುಡಿಯಬೇಕೋ, ಕುದಿಸಿ ಕುಡಿಯಬೇಕೋ, ಒಮ್ಮೆ ಕುದಿಸಿದ ಹಾಲನ್ನು ಮತ್ತೆ ಮತ್ತೆ ಬಿಸಿ ಮಾಡೋದು ಸರಿನಾ... ಹೀಗೆ, ಹಾಲಿನ ಬಳಕೆ ಕುರಿತು ಒಂದಷ್ಟು ಗೊಂದಗಳು ಮತ್ತು ತಪ್ಪು ಕಲ್ಪನೆಗಳು ನಮ್ಮಲ್ಲಿವೆ.

ಹಸಿ ಹಾಲು ಒಳ್ಳೆಯದೇ?
ಹಸುವಿನ ಕೆಚ್ಚಲಿನಿಂದ ಪಾತ್ರೆಗೆ ಕರೆದ ಹಾಲು ಉಗುರು ಬೆಚ್ಚಗಿರುತ್ತದೆ. ಹಾಲು ಕರೆದಂತೆ ನೊರೆ ತುಂಬಿಕೊಳ್ಳುತ್ತಾ ಹೋಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕೆಲವರು, ವಿಶೇಷವಾಗಿ ಗಂಡು ಮಕ್ಕಳಿಗೆ ಈ ನೊರೆ ಹಾಲನ್ನು ಹಸಿಯಾಗಿಯೇ ಕುಡಿಯಲು ಕೊಡುವುದಿದೆ. ಜಟ್ಟಿಗಳು, ಕುಸ್ತಿಪಟುಗಳು ಗಿಂಡೆ ತುಂಬಾ ನೊರೆ ಹಾಲನ್ನು ಗಟಗಟನೆ ಕುಡಿಯುವ ಬಗ್ಗೆ ರೋಚಕ ಕತೆಗಳೇ ಇವೆ.

ಹಸಿ ಹಾಲು, ಕುದಿಸಿದ ಹಾಲಿಗಿಂತ ಹೆಚ್ಚು ರುಚಿಕರ ಎಂಬುದು ಕೆಲವರ ವಾದ. ಆದರೆ ಹಸಿ ಹಾಲಿನಲ್ಲಿ ಅಧಿಕ ಪ್ರಮಾಣದ ಬ್ಯಾಕ್ಟೀರಿಯಾಗಳು ಇರುತ್ತವೆ. ಆರೋಗ್ಯಕ್ಕೆಅಪಾಯಕಾರಿಯಾದ ಈ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗ ‘ಪಾಶ್ಚರೀಕರಣ’. ಆಹಾರದ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳು ಬರುವುದುಂಟು. ಅವುಗಳಲ್ಲಿ ಹಸಿ ಹಾಲು ಅತ್ಯಂತ ಅಪಾಯಕಾರಿ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಮಕ್ಕಳು, ವಯಸ್ಸಾದವರು, ಕಾಯಿಲೆಪೀಡಿತರು ಹಸಿ ಹಾಲನ್ನು ಸೇವಿಸಲೇಬಾರದು.

ADVERTISEMENT

ಪೌಷ್ಟಿಕಾಂಶ ನಾಶವಾಗುತ್ತವೆಯೇ?
|
ಹಾಲನ್ನು ಬ್ಯಾಕ್ಟೀರಿಯಾಮುಕ್ತಗೊಳಿಸುವ ಪಾಶ್ಚರೀಕರಣ ಪ್ರಕ್ರಿಯೆ ವೇಳೆ ಹಾಲಿನ ಪೌಷ್ಟಿಕಾಂಶಗಳು ನಾಶವಾಗುತ್ತವೆ ಎಂಬ ನಂಬಿಕೆ ಕೆಲವರಲ್ಲಿದೆ. ಈ ಪ್ರಕ್ರಿಯೆ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಆಹಾರ ರೂಪದಲ್ಲಿ ಸೇವಿಸಲು ಯೋಗ್ಯವಾಗಿಸುತ್ತದೆಎಂಬುದನ್ನು ಅಮೆರಿಕದ ರೋಗ ನಿಯಂತ್ರಣ ಮತ್ತು ನಿರೋಧಕ ಕೇಂದ್ರ ಸ್ಪಷ್ಟಪಡಿಸಿದೆ.

ರೈತರಿಂದ ಪಡೆದ ಹಾಲು ಆರೋಗ್ಯಕರ!
ಪಕ್ಕದ ಮನೆ ಅಥವಾ ತಮ್ಮದೇ ಊರಿನ ಪರಿಚಯಸ್ಥ ರೈತರ ಮನೆಯಿಂದ ಖರೀದಿಸಿದ ಹಾಲು ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ ಎಂದೂ ಬಹುತೇಕ ಜನ ನಂಬಿದ್ದಾರೆ. ಆದರೆ ಈಗ ಹುಲ್ಲುಗಾವಲುಗಳು ಕಣ್ಮರೆಯಾಗುತ್ತಿರುವ ಕಾರಣ ಹಸುಗಳಿಗೆ ಸೂಕ್ತವಾದ ಮೇವು ಸಿಗುತ್ತಿಲ್ಲ. ಹಾಗಾಗಿ ಅವುರಸ್ತೆಗಳಲ್ಲಿ ಅಲೆದಾಡುತ್ತವೆ. ತ್ಯಾಜ್ಯದ ರಾಶಿ, ಪ್ಲಾಸ್ಟಿಕ್‌ ಮತ್ತಿತರ ಅನಾರೋಗ್ಯಕರ ಆಹಾರವನ್ನು ಸೇವಿಸುತ್ತವೆ. ಇದರಿಂದಾಗಿ ಹಾಲು ಕಲುಷಿತಗೊಳ್ಳುತ್ತದೆ. ಪರಿಚಯಸ್ಥರ ಮನೆಯ, ಡೈರಿಯ ಹಾಲು ಸುರಕ್ಷಿತವೇ, ಆರೋಗ್ಯಕರವೇ ಎಂದು ನೀವೇ ನಿರ್ಧರಿಸಿ.

ಸಾವಯವ ಹಾಲು ಸುರಕ್ಷಿತ
ಹಾಗಿದ್ದರೆ,ಸಾವಯವ ಆಹಾರವನ್ನೇ ಸೇವಿಸಿದ ಹಸುಗಳ ಹಾಲು ಸೇವಿಸುವುದು ಸುರಕ್ಷಿತ ಅಲ್ಲವೇ ಎಂಬ ಪ್ರಶ್ನೆ ಕಾಡುವುದು ಸಹಜ. ಉತ್ತಮ ಗುಣಮಟ್ಟದ ಪಶುಪಾಲನಾ ಕ್ರಮಗಳನ್ನು ಅನುಸರಿಸಿದರೂ ಪಾಶ್ಚರೀಕರಣಗೊಳ್ಳದ ಸಾವಯವ ಹಾಲೂ ಸೇವನೆಗೆ ಸುರಕ್ಷಿತವಲ್ಲ.

ಬೊಜ್ಜು ಬರುತ್ತದೆ!
‘ನಾನು ಹಾಲು ಕುಡಿಯೋದಿಲ್ಲಪ್ಪಾ. ಬೊಜ್ಜು ಬರುತ್ತದೆ’ ಎಂದು ಕೆಲವರು ದೂರುವುದುಂಟು. ಕೊಬ್ಬು ಮತ್ತು ಬೊಜ್ಜು ಹೃದಯ ಸಂಬಂಧಿ ಸಮಸ್ಯೆ ಹಾಗೂ ಮಧುಮೇಹಕ್ಕೆನಾಂದಿಯಾಗುತ್ತದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಕೊಬ್ಬಿನಂಶವಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಹಾಲು ಕೂಡಾ ಸೇರಿದೆ. ಹಾಗಾಗಿ, ಭವಿಷ್ಯದ ದಿನಗಳನ್ನು ಸುರಕ್ಷಿತವಾಗಿಸಿಕೊಳ್ಳುವ ನೆಪದಲ್ಲಿ ‘ಕೊಬ್ಬು ರಹಿತ ಹಾಲು’ ಈಗ ಪಥ್ಯಾಹಾರಿಗಳ ಆಯ್ಕೆಯಾಗಿದೆ.

ಆದರೆ ವಾಸ್ತವ ಗೊತ್ತೇ? ಕೊಬ್ಬು ರಹಿತ ಹಾಲಿನಲ್ಲಿ ನಿರ್ಲಕ್ಷಿಸಬಹುದಾದಷ್ಟು ಅಲ್ಪ ಪ್ರಮಾಣದ ಕೊಬ್ಬು ಮತ್ತು 80 ಕ್ಯಾಲೊರಿ ಇದ್ದರೆ, ಸಾಮಾನ್ಯ ಹಾಲಿನಲ್ಲಿ 8 ಗ್ರಾಂ ಕೊಬ್ಬು ಮತ್ತು 150 ಕ್ಯಾಲೊರಿ ಇರುತ್ತದೆ. ಆದರೆ ಈ ಎರಡರಲ್ಲಿ ಯಾವ ಹಾಲನ್ನು ಸೇವಿಸಿದರೂ ಹೃದಯ ಸಂಬಂಧಿ ಸಮಸ್ಯೆ ಹಾಗೂ ಮಧುಮೇಹ ಕಾಡುವ ಪ್ರಮಾಣದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ.ಸಾಮಾನ್ಯ ಹಾಲು ಕುಡಿದರೆ ನಮಗಾಗುವಹೊಟ್ಟೆ ತುಂಬಿದ ಹಾಗೂ ಸಂತೃಪ್ತ ಭಾವ ಕೊಬ್ಬು ರಹಿತ ಹಾಲು ಕುಡಿದಾಗ ನಮಗಾಗುವುದಿಲ್ಲ. ಅದಕ್ಕಾಗಿ ಕೆಲವರು ತಮ್ಮ ಆಹಾರದಲ್ಲಿ ರಿಫೈನ್ಡ್‌ ಸಕ್ಕರೆ ಬಳಸುತ್ತಾರೆ.

ಟೆಟ್ರಾ ಪ್ಯಾಕ್‌ನ ಹಾಲಿನ ಬಗ್ಗೆ...
ಉನ್ನತ ಪ್ರಮಾಣದ ಉಷ್ಣತೆ ಹಾಯಿಸಿ ಸ್ಟರ್ಲೈಸ್‌ ಪ್ರಕ್ರಿಯೆಗೆ ಒಳಪಡಿಸಿದ ಹಾಲನ್ನು ‘ಯು.ಎಚ್.ಟಿ. ಪ್ರೊಸೆಸ್ಡ್‌’ ಹಾಲು ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಹಾರ ರಕ್ಷಣಾ ಸಾಮಗ್ರಿಗಳನ್ನು ಹಾಲಿಗೆ ಸೇರಿಸಲಾಗುವುದಿಲ್ಲ. ಆದರೆ, ಯುಎಚ್‌ಟಿ ಪ್ರಕ್ರಿಯೆಯಲ್ಲಿ ಆಹಾರ ಸಂರಕ್ಷಕಗಳನ್ನು ಹಾಲಿಗೆ ಸೇರಿಸಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ವಾಸ್ತವವಾಗಿ, ಟೆಟ್ರಾ ಪ್ಯಾಕ್‌ಗಳಲ್ಲಿ ಲಭ್ಯವಾಗುವ ಈ ಬಗೆಯ ಹಾಲು ತನ್ನೆಲ್ಲಾ ಪೋಷಕಾಂಶಗಳನ್ನು ಉಳಿಸಿಕೊಂಡಿರುತ್ತದೆ. ಸಾಮಾನ್ಯ ಕೊಠಡಿ ವಾತಾವರಣದಲ್ಲಿ ಶೇಖರಿಸಿಟ್ಟುಕೊಳ್ಳಬಹುದಾದ ಹಾಲು ಇದು. ಎಲ್ಲಕ್ಕಿಂತ ಮುಖ್ಯವಾಗಿ, ಈ ಹಾಲನ್ನು ಬಿಸಿ ಮಾಡುವ ಇಲ್ಲವೇ ಕುದಿಸುವ ಪ್ರಮೇಯವೂ ಇರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.