ADVERTISEMENT

ಕೋವಿಡ್ ಟೆಸ್ಟ್ ಈಗ ಮತ್ತಷ್ಟು ಸುಲಭ: ಗಾರ್ಗ್ಲಿಂಗ್ ಮಾಡಿ, ಫಲಿತಾಂಶ ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 8:30 IST
Last Updated 21 ಮೇ 2021, 8:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಕೋವಿಡ್ ಪರೀಕ್ಷೆಯನ್ನು ಈಗ ಮತ್ತಷ್ಟು ಸುಲಭಗೊಳಿಸಲಾಗಿದೆ. ಕೆಮಿಕಲ್ ದ್ರಾವಣವನ್ನು ಬಾಯಿಯಲ್ಲಿ ಹಾಕಿಕೊಂಡುಗಾರ್ಗ್ಲಿಂಗ್ ಮಾಡುವ ಮೂಲಕ ಪ್ರಯೋಗಾಲಯ ಮಾದರಿ ಸಂಗ್ರಹಿಸಿ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿ ಫಲಿತಾಂಶ ಪಡೆಯುವ ಹೊಸಪದ್ಧತಿಯಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ರೀತಿಯ ಪರೀಕ್ಷಾ ಪದ್ಧತಿಯು ಜಗತ್ತಿನಲ್ಲೇ ಮೊದಲನೆಯದ್ದಾಗಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್)ಯ ಭಾಗವಾಗಿರುವ ನಾಗಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿಇಐಆರ್), ‘ಸಲೈನ್ ಗಾರ್ಗಲ್’ ಆರ್‌ಟಿ-ಪಿಸಿಆರ್‌ ಟೆಸ್ಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯಿಂದ ಅಧಿಕೃತ ಅನುಮೋದನೆ ಪಡೆದಿದೆ.

ಸಿಎಸ್‌ಐಆರ್-ಎನ್‌ಎಎಆರ್‌ನ ಪರಿಸರ ವೈರಣು ಶಾಸ್ತ್ರ ವಿಭಾಗವು ಈ ಹೊಸ ಸಂಶೋಧನೆ ಮಾಡಿದೆ.

ADVERTISEMENT

ಈ ಹೊಸ ತಂತ್ರದ ಅಡಿಯಲ್ಲಿ, ಅಸ್ತಿತ್ವದಲ್ಲಿರುವ ಮಾದರಿಗಳ ಪರೀಕ್ಷೆಯಂತೆ ಯಾವುದೇ ಆರ್‌ಎನ್‌ಎ ಹೊರತೆಗೆಯುವ ಅಗತ್ಯವಿಲ್ಲ.

ಆರ್‌ಟಿ-ಪಿಸಿಆರ್ ವಿಧಾನವು ಒಂದೇ ಆಗಿರುತ್ತದೆಯಾದರೂ, ಕೋವಿಡ್ ಶಂಕಿತ ರೋಗಿಯು ಪರೀಕ್ಷಾ ಫಲಿತಾಂಶವನ್ನು ವೇಗವಾಗಿ ಪಡೆಯಬಹುದು.

ಹಿರಿಯ ವಿಜ್ಞಾನಿ ಡಾ.ಕೃಷ್ಣ ಖೈರ್ನರ್ ಮತ್ತು ಅವರ ತಂಡ ಈ ಹೊಸ ಮಾದರಿಯ ಕೋವಿಡ್ ಟೆಸ್ಟ್ ಅಭಿವೃದ್ಧಿಪಡಿಸಿದೆ.

‘ಕಂಟೇನರ್‌ನಲ್ಲಿ ಸಲೈನ್‌(ಲವಣ)ಯುಕ್ತ ನೀರಿನ ದ್ರಾವಣವಿರುತ್ತದೆ. ನೀವು ಅದನ್ನು ನಿಮ್ಮ ಬಾಯಿಗೆ ಹಾಕಿಕೊಂಡು 15 ಸೆಕೆಂಡುಗಳ ಕಾಲಗಾರ್ಗ್ಲಿಂಗ್ ಮಾಡಬೇಕು. ಬಾಯಿಯಲ್ಲಿರುವ ಲವಣಯುಕ್ತ ದ್ರಾವಣವನ್ನು ಪೂರ್ತಿಯಾಗಿ ಅದೇ ಕಂಟೇನರ್‌ಗೆ ಹಾಕಬೇಕು’ ಬಳಿಕ, ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆ ಕಳುಹಿಸಬಹುದು’. ಎಂದು ಅವರು ಹೇಳಿದ್ದಾರೆ.

ಹೊಸ ಮಾದರಿಯ ಲವಣಯುಕ್ತ ದ್ರಾವಣದ ಮೂಲಕಗಾರ್ಗ್ಲಿಂಗ್ ಆರ್‌ಟಿ-ಪಿಸಿಆರ್ ಪರೀಕ್ಷೆಯ ಪ್ರಮುಖ ಫೀಚರ್‌ಗಳು ಮತ್ತು ಅನುಕೂಲಗಳ ಬಗ್ಗೆ ಮಾತನಾಡಿದ ಡಾ. ಖೈರ್ನರ್, ಇದರಲ್ಲಿ‘ನಾಸೊಫಾರಿಂಜಿಯಲ್ ಸ್ವ್ಯಾಬ್, ಒರೊಫಾರಿಂಜಿಯಲ್ ಸ್ವ್ಯಾಬ್ ಮತ್ತು ವೈರಲ್ ಟ್ರಾನ್ಸ್‌ಪೋರ್ಟ್ ಮಾಧ್ಯಮ ಅಗತ್ಯವಿಲ್ಲ.’ ಎಂದರು

ಈ ರೀತಿಯ ಮಾದರಿ ಸಂಗ್ರಹಕ್ಕಾಗಿ ನುರಿತ ಆರೋಗ್ಯ ಕಾರ್ಯಕರ್ತರ ಅಗತ್ಯವಿಲ್ಲ. ಈ ಪ್ರಕ್ರಿಯೆ ಸರಳವಾಗಿರುವ ಜೊತೆಗೆ ರೋಗಿಯ ಸ್ನೇಹಿಯಾಗಿದೆ. ಮಾದರಿ ಸಂಗ್ರಹಣೆಯ ಸಮಯದಲ್ಲಿ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ ಎಂದು ಅವರು ಹೇಳಿದರು, ಸ್ವಯಂ ಮಾದರಿ ಸಂಗ್ರಹವೂ ಸಾಧ್ಯವಿದೆ ಎಂದಿದ್ದಾರೆ.

‘ಇದರಿಂದ ವೇಗವಾಗಿ ಮಾದರಿ ಸಂಗ್ರಹಿಸಬಹುದು. ಮಾದರಿ ಸಂಗ್ರಹ ಕೇಂದ್ರಗಳಲ್ಲಿನ ವ್ಯಕ್ತಿಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡಬಹುದು. ಯಾವುದೇ ಆರ್‌ಎನ್‌ಎ ಹೊರತೆಗೆಯುವ ಕಿಟ್ ಅಗತ್ಯವಿಲ್ಲ. ಹೀಗಾಗಿ, ಇದು ಸಮಯ ಮತ್ತು ಹಣವನ್ನು ಉಳಿಸುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.