ADVERTISEMENT

ವಿಶ್ವ ಥಲಸ್ಸೇಮಿಯಾ ದಿನ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:00 IST
Last Updated 7 ಮೇ 2019, 20:00 IST
thalassemia
thalassemia   

ಆನುವಂಶಿಕವಾಗಿ ಹರಡುವ, ಅಸ್ಥಿಮಜ್ಜೆ ಸಂಬಂಧಿರಕ್ತದ ಕಾಯಿಲೆಯೇ ಥಲಸ್ಸೇಮಿಯಾ. ಭಾರತದಲ್ಲಿ ಪ್ರತಿವರ್ಷ ಅಂದಾಜು 10,000 ಮಕ್ಕಳು ಥಲಸ್ಸೇಮಿಯಾ ಸಮಸ್ಯೆಯೊಂದಿಗೆ ಜನಿಸುತ್ತಾರೆ. ದೋಷಪೂರಿತ ವಂಶವಾಹಿಗಳ ಕಾರಣದಿಂದಾಗಿ ಪೋಷಕರ ಮೂಲಕ ಮಕ್ಕಳಿಗೆ ಇದು ವರ್ಗಾವಣೆಯಾಗುತ್ತದೆ. ಗರ್ಭಾವಸ್ಥೆಯ ಹಂತದಲ್ಲಿ ಭ್ರೂಣದಲ್ಲೇ ಈ ಬಗೆಯ ಅಸಹಜ ಬೆಳವಣಿಗೆ ಉಂಟಾಗುವ ಸಾಧ್ಯತೆಯಿರುತ್ತದೆ. ಆದರೆ ಮಗುವಿನ ಆರೋಗ್ಯದಲ್ಲಿ ತೊಂದರೆ ಇದೆ ಎಂಬ ಬಗ್ಗೆ ಪೋಷಕರಿಗೆ ಅಷ್ಟಾಗಿ ಅರಿವು ಇರುವುದಿಲ್ಲ.ಥಲಸ್ಸೇಮಿಯಾ ಸಮಸ್ಯೆ ಹೊಂದಿರುವ ಮಗುವಿಗೆ ರಕ್ತದ ವರ್ಗಾವಣೆಯನ್ನು ನಿರಂತರವಾಗಿ ಮಾಡಿಸುತ್ತಿರಬೇಕು. ಈ ಹಿಮೋಗ್ಲೋಬಿನ್ ಕಾಯಿಲೆ ಗುಣಪಡಿಸಲು ಇರುವ ಏಕೈಕ ಮಾರ್ಗವೆಂದರೆ ಸೂಕ್ತ ದಾನಿಗಳ ಮೂಲಕ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಮಾತ್ರ.

ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳಿಂದ, ಯಾವ ದಂಪತಿಗೆ ವಂಶವಾಹಿ ಮೂಲಕ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ ಎಂದು ಪತ್ತೆಹಚ್ಚಬಹುದು. ಅಂತಹವರು ಪ್ರೀ ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ (ಪಿಜಿಡಿ) ತಪಾಸಣೆ ಮಾಡಿಸಿಕೊಂಡರೆ ದೋಷಪೂರಿತ ವಂಶವಾಹಿಗಳು ಮಗುವಿಗೆ ತಲುಪುವ ಅಪಾಯವನ್ನು ತಗ್ಗಿಸಬಹುದು.

ಸಹಜವಾಗಿ ಬೆಳೆಯದ ಭ್ರೂಣವು ಗರ್ಭಪಾತಕ್ಕೆ, ಗರ್ಭಾವಸ್ಥೆಯಲ್ಲೇ ಭ್ರೂಣದ ಸಾವಿಗೆ ಕಾರಣವಾಗಬಹುದು. ಭ್ರೂಣದ ಆರೋಗ್ಯವನ್ನು ಪಿಜಿಡಿ ಮೂಲಕ ಪರೀಕ್ಷಿಸಿ ಉತ್ಪಾದಿತ ಗ್ಯಾಮಿಟ್‍ಗಳನ್ನು ಐವಿಎಫ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇದು ಆರೋಗ್ಯಕರ ಗರ್ಭಾವಸ್ಥೆಗೆ ಸಹಾಯಕವಾಗುತ್ತದೆ.

ADVERTISEMENT

ಹ್ಯುಮನ್ ಲ್ಯುಕೋಸೈಟ್ ಆ್ಯಂಟಿಜೆನ್ (ಎಚ್‍ಎಲ್‍ಎ) ವಿಧಾನವನ್ನು (ಅಸ್ಥಿಮಜ್ಜೆ ದಾನಿಗಳ ಜತೆ ಹೊಂದಾಣಿಕೆ ಮಾಡುವ ವ್ಯವಸ್ಥೆ) ಪಿಜಿಡಿ ನೆರವಿನೊಂದಿಗೆ ಪರೀಕ್ಷೆ ಮಾಡಿಸಿದರೆ ಕಾಯಿಲೆರಹಿತ ಗರ್ಭಧಾರಣೆ ಸಾಧ್ಯ. ಹೆಮಟೊಪೊಯೆಟಿಕ್ ಸ್ಟೆಮ್ ಸೆಲ್ ಕಸಿ (ಎಚ್‍ಎಸ್‍ಸಿಟಿ) ಅನ್ನು ಹೊಂದಾಣಿಕೆಯಾಗದ ದಾನಿಗಳಿಂದ ಮಾಡಿದ ಕಸಿಗೆ ಹೋಲಿಸಿದಾಗ ಬದುಕುವ ಸಾಧ್ಯತೆ ಹೆಚ್ಚು ಇರುತ್ತದೆ. ಹೀಗಾಗಿ ಐವಿಎಫ್‍ಗೆ ಪಿಜಿಡಿ-ಎಚ್‍ಎಲ್‍ಎ ವಿಧಾನವೇ ಸೂಕ್ತ ಆಯ್ಕೆ ಎನಿಸಿದೆ. ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಈ ವಿಧಾನ ನೆರವಾಗುತ್ತದೆ.

(ಮಾಹಿತಿ:ಡಾ. ಮನೀಷ್ ಬ್ಯಾಂಕರ್, ವೈದ್ಯಕೀಯ ನಿರ್ದೇಶಕರು, ನೋವಾ ಐವಿಎಫ್ ಫರ್ಟಿಲಿಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.