ADVERTISEMENT

ಎಂಡೋ ಮುರುಟಿದ ಬದುಕು

ಸಿದ್ದಿಕ್ ನೀರಾಜೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಸುಮಾರು 3 ದಶಕಗಳ ಹಿಂದಿನ ಮಾತು. ಇವರೆಲ್ಲ ಆಗಿನ್ನೂ ಪುಟ್ಟ ಮಕ್ಕಳು. ತಮ್ಮ ಮನೆಯ ಮೇಲೆ, ಪಕ್ಕದ ಗುಡ್ಡದ ಬಳಿ ಹೆಲಿಕಾಪ್ಟರ್ ಹಾರಾಡುತ್ತಿದ್ದಾಗ ಮನೆಯ ಅಂಗಳದಲ್ಲಿ ನಿಂತು ನೋಡುವ ತವಕದಲ್ಲಿ ಕುಣಿದು ಕುಪ್ಪಳಿಸಿದ್ದರು. ಅದರ ಶಬ್ದ ಕೇಳಿ ಬಂದ ಕಡೆಗೆ ಓಡೋಡಿ ಬೆರಗುಗಣ್ಣಿನಿಂದ ನಿಂತು ನೋಡಿದ್ದರು.

ಮನೆಯೊಳಗೆ ಕುಳಿತು ಬೀಡಿ ಸುತ್ತುತ್ತಿದ್ದಾಗ ಶಬ್ದ ಕೇಳಿಸಿದೊಡನೆ `ಹೆಲಿಕಾಪ್ಟರ್ ಬಂತು~ ಎನ್ನುತ್ತಲೇ ಸೆರಗು ಸರಿ ಮಾಡಿಕೊಂಡು ಬಸಳೆ ಚಪ್ಪರದ ಅಡಿಯಲ್ಲಿ, ನೆರಳಿನಲ್ಲಿ ನಿಂತು ಇಣುಕಿ ನೋಡಿದ್ದರು ಎಷ್ಟೋ ಗರ್ಭಿಣಿ ತಾಯಂದಿರು.

ಅಂದು ಹೆಲಿಕಾಪ್ಟರ್‌ನ ಸದ್ದು, ನೋಟ ಕಿವಿ ಕಣ್ಣಿಗೆ ಸುಂದರ, ಇಂಪು ಎನಿಸಿತ್ತು. ಆದರೆ ಅದು ಎಂಥ ದುರಂತ ತಂದಿಡಬಹುದು ಎಂಬ ಕಲ್ಪನೆ ಎಳ್ಳಷ್ಟೂ ಇರಲಿಲ್ಲ.

ಹೆಲಿಕಾಪ್ಟರ್ ಬಂದದ್ದು ಮನರಂಜನೆ ಕೊಡಲಿಕ್ಕೆ ಅಲ್ಲ; ಗೇರು ಗಿಡಕ್ಕೆ ಅಮರಿಕೊಂಡಿದ್ದ ಕೀಟ ಬಾಧೆ ನಿಯಂತ್ರಣಕ್ಕಾಗಿ ಎಂಡೋಸಲ್ಫಾನ್ ಎಂಬ ಔಷಧಿ ಹೊಡೆಯಲು. ಆ ಔಷಧದಿಂದ ಕೀಟ ನಾಶವಾಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಅದು ಎಷ್ಟೋ ಮಕ್ಕಳ, ಕುಟುಂಬಗಳ ಬದುಕನ್ನೇ ಹೊಸಕಿ ಹಾಕಿತು.


ಆ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಜನಿಸಿದ ಮಕ್ಕಳು ವಯೋ ಸಹಜ ದೈಹಿಕ, ಮಾನಸಿಕ ಬೆಳವಣಿಗೆ ಇಲ್ಲದೆ, ಎದ್ದು ನಿಲ್ಲಲೂ ಆಗದೆ, ಕುಳಿತುಕೊಳ್ಳಲೂ ಸಾಧ್ಯವಾಗದೆ, ಚೀರಾಡುತ್ತಾ ಮನೆಯ ಮೂಲೆಯಲ್ಲಿ ಅಂಗಾತ ಬಿದ್ದುಕೊಂಡಿರುವ ಹೃದಯವಿದ್ರಾವಕ ನೋಟವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲ್ಲೂಕುಗಳ ಅನೇಕ ಹಳ್ಳಿಗಳಲ್ಲಿ ಈಗಲೂ ಕಾಣಬಹುದು. ಇದಕ್ಕೆಲ್ಲ ಕಾರಣ ಮಹಾ ಮಾರಿಯ ರೂಪ ತಳೆದ ಎಂಡೋಸಲ್ಫಾನ್. 

 ಕಿತ್ತು ತಿನ್ನುವ ಬಡತನ, ಇರುವ ಮೂರು ಮಕ್ಕಳಲ್ಲಿ ಮಡುಗಟ್ಟಿದ ರೋಗ ಬಾಧೆ, ಅಂಗಹೀನತೆ, ಬುದ್ಧಿಮಾಂದ್ಯತೆ, ನರಳಾಟ. ಈ ಅಸಹಾಯಕ ಜೀವಿಗಳ ಆರೈಕೆಯೊಂದಿಗೆ ಆರಂಭವಾಗುತ್ತದೆ ಪುತ್ತೂರು ತಾಲ್ಲೂಕು ಆಲಂಕಾರು ಗ್ರಾಮದ ಬುಡೇರಿಯಾದ ಸುನಂದ ಪೂಜಾರಿ ಮತ್ತು ರಾಜೀವ ದಂಪತಿ ದಿನಚರಿ. 

 ವಿದ್ಯಾ, ದಿನೇಶ, ದಿನಕರ ಎಂಬ ಈ ಮೂರು ಮಕ್ಕಳಿಗೆ ಎದ್ದು ನಿಲ್ಲಲು ತ್ರಾಣವಿಲ್ಲ. ನೆಲದಲ್ಲಿ ಹೊರಳಾಡುತ್ತಲೇ ಅತ್ತಿತ್ತ ಹೋಗುತ್ತಾರೆ. ಇವರ ಊಟ- ಉಪಚಾರ, ದೇಹಬಾಧೆಯಿಂದ ಹಿಡಿದು ಎಲ್ಲ ಕೆಲಸವನ್ನು ತಾಯಿ ಅಥವಾ ತಂದೆಯೇ ಮಾಡಬೇಕು. ಇದನ್ನು ಮುಗಿಸಿ ಕೂಲಿ ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ಹೊಟ್ಟೆಗೆ ಒದ್ದೆ ಬಟ್ಟೆಯೇ ಗತಿ.

ಪುತ್ತೂರು ತಾಲ್ಲೂಕು ಪೆರಾಬೆ ಗ್ರಾಮದ ಸುರುಳಿ ನಿವಾಸಿ ಪುತ್ತುಮೋನು ಮತ್ತು ಬೀಪಾತುಮ್ಮ ದಂಪತಿಗಳ ಕಷ್ಟ ಇನ್ನೊಂದು ರೀತಿಯದ್ದು. ಪುತ್ರ ಆಸಿಫ್‌ಗೆ ಈಗ ವಯಸ್ಸು 23. ಕಾಲಿನ ಸ್ವಾಧೀನ ಕಳೆದುಕೊಂಡು ನೆಲ ಹಿಡಿದಿದ್ದಾನೆ. ಪುಟ್ಟ ಮಗುವಿನಂತೆ ಅಂಗಾತ ಬಿದ್ದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾನೆ. ಪುತ್ತುಮೋನು ಕೂಲಿ ಕೆಲಸಕ್ಕೆ ಹೋದರಷ್ಟೇ ಈ ಕುಟುಂಬಕ್ಕೆ ಹೊಟ್ಟೆ ಬಟ್ಟೆ. ಆದರೆ ವಾರದಲ್ಲಿ 4 ದಿನ ಮಗನಿಗೆ ಔಷಧಿ ತರಲು ಆಸ್ಪತ್ರೆಗೆ ಹೋಗಬೇಕು. ಇನ್ನೆರಡು ದಿನದಲ್ಲಿ ಕೂಲಿ ಮಾಡಿ ಕುಟುಂಬವನ್ನು ಸಾಕಬೇಕು.

ಇದೇ ತಾಲ್ಲೂಕು ಪೆರಾಬೆ ಗ್ರಾಮದ ಮನವಳಿಕೆ ನಿವಾಸಿ ಚಂದ್ರಾವತಿ ಅವರ ಪುತ್ರ ಶಶಾಂಕನಿಗೆ 22 ವರ್ಷ. ಅಂಗಹೀನನಾಗಿ ಮನೆಯೊಳಗೆ ಮುದುಡಿಕೊಂಡು ಬಿದ್ದಿರುತ್ತಾನೆ.
 
ಮಗನ ಈ ಪರಿಯ ನರಕಯಾತನೆ ನೋಡಿ ನೊಂದು ಅರಗಿಸಿಕೊಳ್ಳಲಾಗದ ತಂದೆ ಜಯಾನಂದ 12 ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಅಂಗನವಾಡಿ ಕಾರ‌್ಯಕರ್ತೆಯಾಗಿ ದುಡಿಯುವ ಚಂದ್ರಾವತಿ `ನನ್ನ ಕಷ್ಟ ದೇವರಿಗೆ ಪ್ರೀತಿ~ ಎನ್ನುತ್ತಲೇ ಮಗನ ಆರೈಕೆ ಮಾಡಿಕೊಂಡು ಕಿರಿಯ ಮಗನ ವಿದ್ಯಾಭ್ಯಾಸಕ್ಕಾಗಿ ಪರಿತಪಿಸುತ್ತಿದ್ದಾರೆ. ಅವರಷ್ಟೇ ಅಲ್ಲ, ಸಾವಿರಾರು ಜೀವಗಳು ಈ ರೀತಿ ನರಕಯಾತನೆ ಅನುಭವಿಸುತ್ತಿವೆ
ಎಂಡೋಸಲ್ಫಾನ್‌ನಿಂದ.

ಸಹಸ್ರಾರು ಸಂತ್ರಸ್ತರು
1978 ರಿಂದ 2001ರ ತನಕ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲ್ಲೂಕು ವ್ಯಾಪ್ತಿಯ 92 ಗ್ರಾಮಗಳ ಸುತ್ತಮುತ್ತ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ತನ್ನ ಸ್ವಾಧೀನದ ಗೇರು ತೋಟಗಳಿಗೆ ತಗುಲಿದ್ದ ಕೀಟ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ಎಂಡೋಸಲ್ಫಾನನ್ನು ಹೆಲಿಕಾಪ್ಟರ್ ಮೂಲಕ ಸಿಂಪರಣೆ ಮಾಡಿಸಿತ್ತು. ಅದರ ದುಷ್ಪರಿಣಾಮ ಜನತೆಯ ಬದುಕು, ಜೀವನವನ್ನು ಕಿತ್ತುಕೊಂಡು ಕತ್ತಲೆಯ ಕೂಪಕ್ಕೆ ನೂಕಿದೆ. 

 ಪುತ್ತೂರು ತಾಲ್ಲೂಕಿನ ಆಲಂಕಾರು, ಪೆರಾಬೆ, ರಾಮಕುಂಜ, ಹಳೆನೇರೆಂಕಿ, ಕೊಯಿಲ, ಮರ್ಧಾಳ, ಪಾಲ್ತಾಡು, ಪಾಣಾಜೆ ಮತ್ತಿತರ ಗ್ರಾಮಗಳು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲ್ಲೂಕಿನ ಹಲವಾರು ಹಳ್ಳಿಗಳಲ್ಲಿ ಎಂಡೋಸಲ್ಫಾನ್‌ನ ದುಷ್ಪರಿಣಾಮದಿಂದಾಗಿ ಸಾವಿರಾರು ಮನೆಗಳಲ್ಲಿ ಅಂಗವೈಕಲ್ಯತೆ, ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ, ವಿಪರೀತ ಬೆಳವಣಿಗೆ, ಕುಬ್ಜತೆ, ದೃಷ್ಟಿಹೀನತೆ, ಸ್ತ್ರೀರೋಗ, ಬಂಜೆತನ, ಸ್ತನ ಕ್ಯಾನ್ಸರ್ ಹೀಗೆ ಹಲವು ಬಗೆಯ ರೋಗಬಾಧೆಗಳು ಆವರಿಸಿಕೊಂಡಿವೆ. ಜನಿಸಿದ ಮಕ್ಕಳೆಲ್ಲ ಜೀವಚ್ಛವವಾಗಿವೆ.

6 ವರ್ಷದ ಹಿಂದೆ `ಪ್ರಜಾವಾಣಿ~ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ, ಪಟ್ರಮೆ, ನಿಡ್ಲೆ ಪ್ರದೇಶದಲ್ಲಿರುವ ಸಂತ್ರಸ್ತರ ಬಗ್ಗೆ ಸಮಗ್ರ ವರದಿ ಮಾಡಿತ್ತು. ಜತೆಗೆ ಅಲ್ಲಿನ ಹೋರಾಟ ಸಮಿತಿಯ ಪರಿಶ್ರಮ, ಸಚಿವೆ ಶೋಭಾ ಕರಂದ್ಲಾಜೆ ಅವರ ಕಾಳಜಿಯಿಂದ 2 ವರ್ಷದ ಹಿಂದೆ 255 ಮಂದಿಗೆ ತಲಾ 50 ಸಾವಿರದಂತೆ ಪರಿಹಾರ ನೀಡಲಾಯಿತು, ಸಂತ್ರಸ್ತರಿಗಾಗಿ ತಾತ್ಕಾಲಿಕ ಪುನರ್ವಸತಿ ಕೇಂದ್ರವೂ ಆರಂಭವಾಯಿತು.
ಆದರೆ ಪುತ್ತೂರು ಮತ್ತು ಸುಳ್ಯ ತಾಲ್ಲೂಕಿನ ಸಂತ್ರಸ್ತರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. 

ಕೇರಳ ಮಾದರಿ
ಇಂಥದ್ದೇ ಅನಾಹುತ ನೆರೆಯ ಕೇರಳದ ಕಾಸರಗೋಡು ಜಿಲ್ಲೆಯ ಪಡ್ರೆ, ಬೆಳ್ಳೂರು, ಕಾರಡ್ಕ ಮೊದಲಾದ ಹಲವಾರು ಗ್ರಾಮಗಳ ವ್ಯಾಪ್ತಿಯಲ್ಲಿ ನಡೆದು ನೂರಾರು ಕುಟುಂಬಗಳು ತೊಂದರೆಗೀಡಾಗಿದ್ದವು. ಆ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಕೇರಳದ ಅಂದಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ 2006ರಲ್ಲಿ ಸಂತ್ರಸ್ತರ ಮನೆಗಳಿಗೆ ಖುದ್ದು ಭೇಟಿ ನೀಡಿ ಪ್ರತೀ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ ನೀಡಿದ್ದರು. ಅಲ್ಲದೆ ಈ ಕುಟುಂಬಗಳಿಗೆ ನೆರವಾಗುವ ಕಾರ್ಯಕ್ರಮ ಕೈಗೊಳ್ಳಲು ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ವಿಶೇಷ ಅನುದಾನ ಮಂಜೂರು ಮಾಡಿದ್ದರು.

 ಇದೀಗ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಸರ್ಕಾರ ಎಂಡೋ ಪೀಡೆಯಿಂದ ಮೃತ ಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ, ಸಂತ್ರಸ್ತ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಮತ್ತು 2 ಸಾವಿರ ರೂಪಾಯಿ ಮಾಸಿಕ ವೇತನ, ಉಚಿತ ಪಡಿತರ ವ್ಯವಸ್ಥೆ, ಉಚಿತ ವೈದ್ಯಕೀಯ ಔಷಧೋಪಚಾರ ಒದಗಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ಎಂಡೋ ಪೀಡಿತರಿಗೆ ಪರಿಹಾರ ವಿತರಣೆ ಮಾಡಬೇಕು ಎಂಬುದು ಸಂತ್ರಸ್ತರ ಮನವಿ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.