ADVERTISEMENT

ಎಲ್ಲಿ ಮರೆಯಾದೆ ವಿಠ್ಠಲ...

ಎಲ್ಲೆಲ್ಲೂ ಕೃಷ್ಣಾಷ್ಟಮಿ ಸಡಗರ

ಅನಂತ ಜೋಶಿ
Published 26 ಆಗಸ್ಟ್ 2013, 19:59 IST
Last Updated 26 ಆಗಸ್ಟ್ 2013, 19:59 IST

ಎರಡನೆಯ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಕನಕಗಿರಿ ಪುಣ್ಯಕ್ಷೇತ್ರ ಎನಿಸಿದರೆ, 700 ದೇವಸ್ಥಾನಗಳು, ಅಷ್ಟೇ ಸಂಖ್ಯೆಯ ಬಾವಿಗಳು ಹಾಗೂ ಗೊಲ್ಲರ ಮನೆಗಳನ್ನು ಒಳಗೊಂಡ ಹಂಪಿ ಐತಿಹಾಸಿಕ ತಾಣ. ಇಂಥ ಅಪೂರ್ವ ಹಂಪಿಯಲ್ಲೊಂದು ಇತಿಹಾಸಕ್ಕೆ ಮೂಕಸಾಕ್ಷಿಯಾಗಿ ನಿಂತಿದೆ ಶ್ರೀಕೃಷ್ಣ ದೇಗುಲ...

ಇಲ್ಲಿರುವ ಪ್ರತಿಯೊಂದು ಶಿಲೆಗಳೂ ಮಾತಾಡುತ್ತವೆ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದಿರುವ ಈ ಕ್ಷೇತ್ರದಲ್ಲಿನ ಪ್ರತಿಯೊಂದು ಕಲ್ಲುಗಳೂ ಗತವೈಭವವನ್ನು ಸಾರಿ ಹೇಳುತ್ತವೆ...

ಹೌದು. ಇದುವೇ ಹಂಪಿ. ಭಾರತೀಯ ಕಲೆ, ಸಂಸ್ಕೃತಿ, ಧಾರ್ಮಿಕ ಪರಂಪರೆಯ ಪ್ರತೀಕ ಈ ಕ್ಷೇತ್ರ. ಐತಿಹಾಸಿಕ, ಪೌರಾಣಿಕ ಹಿರಿಮೆಯಿಂದಾಗಿಯೇ ಭಾರತದ ಬಯಲು ವಸ್ತು ಸಂಗ್ರಹಾಲಯವಾಗಿ ನೋಡಬಹುದಾದ ವಿಶ್ವದ ಏಕೈಕ ಪ್ರದೇಶವೂ ಇದು. ಕನ್ನಡ ನಾಡಿನ ಇಂಥ ಅಪೂರ್ವ ಐತಿಹಾಸಿಕ ತಾಣವಾಗಿರುವ ಹಂಪಿಯಲ್ಲೊಂದು ಇದ್ದೂ ಇಲ್ಲದಂತಿದೆ ಶ್ರೀ ಕೃಷ್ಣ ದೇಗುಲ.

ಅದ್ಭುತ ಕಲಾಕೃತಿಗಳೊಂದಿಗೆ ಕಣ್ಮನ ಸೆಳೆಯಬೇಕಿದ್ದ ಈ ಪ್ರದೇಶ, ಯಾರ ಗಮನಕ್ಕೂ ಬಾರದೇ ನೇಪಥ್ಯಕ್ಕೆ ಸರಿಯುತ್ತಿದೆ. ಶ್ರೀಕೃಷ್ಣನ ಮೂಲ ವಿಗ್ರಹ ಚೆನ್ನೈನ ವಸ್ತುಸಂಗ್ರಹಾಲಯದಲ್ಲಿದ್ದು, ಹಂಪಿಯ ದೇಗುಲ ಮಾತ್ರ ನೀರವ ಮೌನ ಧರಿಸಿ ಕುಳಿತಿದೆ!
ವಿಜಯನಗರ ಅರಸರಲ್ಲಿಯೇ ಪ್ರಖ್ಯಾತನಾದ ರಾಜ ಶ್ರಿಕೃಷ್ಣದೇವರಾಯ. ಉದಯಗಿರಿಯನ್ನು ಜಯಿಸಿದ ಮೇಲೆ 1513ರಲ್ಲಿ ಅಲ್ಲಿಯ ಶ್ರೀಬಾಲಕೃಷ್ಣನನ್ನು ತಂದು ಹಂಪಿಯಲ್ಲಿ ಪ್ರತಿಷ್ಠಾಪಿಸಿದ. ಅದ್ಭುತ ಕಲಾಕೃತಿಗಳೊಂದಿಗೆ ಶ್ರೀಕೃಷ್ಣ ದೇವಾಲಯ ನಿರ್ಮಿಸುವ ಮೂಲಕ ವೈಷ್ಣವ ಧರ್ಮವನ್ನು ಪ್ರಬಲಗೊಳಿಸಿದ. ನವರತ್ನ ಖಚಿತವಾದ ನಾನಾ ಆಭರಣಗಳನ್ನು ಅರ್ಪಿಸಿ ಇಲ್ಲಿ ದಿನವೂ ಪೂಜಾ ಕೈಂಕರ್ಯಗಳು ನಡೆಯುವಂತೆ ಮಾಡಿದ ಎನ್ನುತ್ತದೆ ದಾಖಲೆ.

ಅಪೂರ್ವ ಕಲಾಕೃತಿ
ದೇಗುಲದ ಕಂಬದ ಮೇಲೆ ಕೃಷ್ಣನ ದಶಾವತಾರದ ವರ್ಣನೆಗಳಿವೆ. ದಶಾವತಾರಗಳಲ್ಲೇ ಒಂದಾಗಿರುವ ಕಲ್ಕಿಯ ಉಬ್ಬು ಶಿಲ್ಪ ಕಣ್ಮನ ಸೆಳೆಯುತ್ತದೆ. ಶ್ರಿ ಕೃಷ್ಣನ ಬಾಲ ಲೀಲೆಗಳಿರುವ ಕೆತ್ತನೆಗಳು, ದೇವಾಲಯದ ಹೊರಾಂಗಣದ ಸುತ್ತಲೂ ಆನೆ, ಕುದುರೆ, ಗುರಾಣಿ ಹಿಡಿದ ಯೋಧರ ಅದ್ಭುತ ಕಲಾಕೃತಿಗಳ ರಾಶಿಯೇ ಅಲ್ಲಿವೆ.

`ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ, ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಅರಸರು ನಿರ್ಮಿಸಿದ ಮಾದರಿಯ ಅನೇಕ ಶಾಸನಗಳು ಹಂಪಿಯ ಧಾರ್ಮಿಕ ಮಹತ್ವ ಸಾರುತ್ತ ಗಮನ ಸೆಳೆಯುತ್ತಿವೆ. ಹೀಗೆ ವಿಶೇಷ ಕಲಾಕೃತಿಯ ಮೂಲಕ ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯಬೇಕಿದ್ದ ಈ ದೇಗುಲ ನಿರ್ಲಕ್ಷ್ಯಕ್ಕೆ ಒಳಗಾಗಿ, ಜೀರ್ಣೋದ್ಧಾರ ಆಗದೇ ಇರುವುದು ದುರದೃಷ್ಟಕರ. ಚೆನ್ನೈನಲ್ಲಿರುವ ಮೂಲ ವಿಗ್ರಹವನ್ನು ಇಲ್ಲಿಯೇ ಪ್ರತಿಷ್ಠಾಪಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ' ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಸಹ ಪ್ರಾಧ್ಯಾಪಕ ಡಾ. ಚಲುವರಾಜ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT