ಹೆಣ್ಣುಮಕ್ಕಳ ಮೊರೆಯನ್ನು ಕೇಳುವ ದೇವಿ, ಮಣ್ಣಿನ ಗುಡಿ, ಕಂಚಿನ ಮುಖ, ಬೇರೆಲ್ಲೂ ಕಾಣಿಸದಂತಹ ಉತ್ತರಾಭಿಮುಖ ಪ್ರತಿಷ್ಠೆ, ವಿಶೇಷ ಶಕ್ತಿ. ಇದು ಮಂಡ್ಯದಿಂದ 12 ಕಿಮಿ ದೂರದ ಕೀಲಾರ ಗ್ರಾಮದ ಮಾರಮ್ಮನ ವಿಶೇಷ.
ಈ ಮಾರಿಗುಡಿ ದ್ರಾವಿಡ ಶೈಲಿಯಲ್ಲಿದೆ. ಕಂಚಿನಲ್ಲಿ ನಿರ್ಮಿಸಿದ ದೇವಿಯ ವಿಗ್ರಹ ಇರುವುದು ಇಲ್ಲಿ ಮಾತ್ರ. ಏಕೆಂದರೆ ಇತರ ಕಡೆಗಳಲ್ಲಿ ಮರದ ಅಥವಾ ಕಲ್ಲಿನ ಮಾರಮ್ಮನ ಮೂರ್ತಿಗೆ ಮುಖವಾಡ ತೊಡಿಸಿರುತ್ತಾರೆ ಎನ್ನುತ್ತಾರೆ ಹಿರಿಯರು.
ಸುಮಾರು 900 ವರ್ಷ ಇತಿಹಾಸವಿರುವ ಇಲ್ಲಿ ಮೊದಲು ಮಣ್ಣಿನ ಗುಡಿ ಇತ್ತು. ನಂತರ ಗೂಳಿ ಕೆಂಪೇಗೌಡರ ಆಶಯದಂತೆ ಪುನರ್ ನಿರ್ಮಿಸಲಾಯಿತು. ಮೊದಲು ಹೊನ್ನೆಮರದಿಂದ ದೇವರ ಮುಖ ಕೆತ್ತಿ ಪೂಜಿಸಲಾಗುತ್ತಿತ್ತು. ಆದರೆ ಕೆಂಪೇಗೌಡರ ಕನಸಿನಲ್ಲಿ ದೇವಿ ಕಾಣಿಸಿಕೊಂಡು ಕಂಚಿನ ಪ್ರತಿಮೆ ನಿರ್ಮಾಣ ಮಾಡುವಂತೆ ತಿಳಿಸಿದಳು ಎಂಬ ಪ್ರತೀತಿ.
`ಈರಮಕ್ಕಳ~ ಪೂಜೆ: ಬರಗಾಲದಿಂದಾಗಿ ಕೊಳ್ಳೇಗಾಲದಿಂದ ಕೀಲಾರಕ್ಕೆ ಬಂದವರನ್ನು ~ಮೇಲಿನ ಪಾಲು~, ಕನಕಪುರ ರಾಮಪುರ ಕಡೆಯಿಂದ ಬಂದವರನ್ನು `ಕೆಳಗಿನ ಪಾಲು~, ಇನ್ನಿತರ ಕಡೆಯಿಂದ ಬಂದವರನ್ನು `ಶೆಟ್ಟರ ಪಾಲು~ ಎಂದು ಕರೆಯುತ್ತಾರೆ. ಈ ಗುಡಿಯಲ್ಲಿ ಪೂಜೆ ಮಾಡುವವರು ಬೆಸ್ತ ಜನಾಂಗದವರು. ಅವರನ್ನು `ಈರ ಮಕ್ಕಳು~ ಎನ್ನುತ್ತಾರೆ. ಎಲ್ಲ ಸೇರಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಈ ಮಾರಮ್ಮನಿಗೆ ರಾಜ್ಯದ ವಿವಿಧೆಡೆಯಲ್ಲಿ ಭಕ್ತರಿದ್ದಾರೆ. `ನಮ್ಮ ಮಾರಮ್ಮ ಬಹಳ ಬೇಗ ಹೆಣ್ಣು ಮಕ್ಕಳಿಗೆ ಒಲಿಯುತ್ತಾಳೆ~ ಎಂದು ಹೇಳುತ್ತಾರೆ ಗ್ರಾಮದ ಹೊಂಬಾಳೆ ಗೌಡ.
ಬಂಡಿ-ಕೊಂಡ ಪೂಜೆ
ಇಲ್ಲಿನ ಮಾರಿಹಬ್ಬ ಬಹಳ ಪ್ರಸಿದ್ಧಿ ಪಡೆದಿದೆ. ಹಬ್ಬಕ್ಕೆ 9 ದಿನಗಳ ಮೊದಲೇ ವಾದ್ಯ-ತಮಟೆ ಸಹಿತ ಹೋಗಿ ಶಾಸ್ತ್ರದ ಕೊನೆ (ಉತ್ತರ ದಿಕ್ಕಿನಲ್ಲಿರುವ ಆಲದ ಮರದ ರೆಂಬೆ) ಕಡಿದು ತರುತ್ತಾರೆ.
ಇದರ ಬುಡಕ್ಕೆ ಹಾಲು-ಬೆಣ್ಣೆ ಹಾಕಿ ಮಾರಿಗುಡಿ ಮುಂದೆ ಪ್ರತಿಷ್ಠಾಪಿಸುತ್ತಾರೆ. ಆದರೆ ಊರಿನಲ್ಲಿ ಸೂತಕವಾದರೆ ಹೆರಿಗೆ, ಸಾವು, ಋತುಮತಿಯಾದರೆ ಬೇರೊಂದು ಕಂಬವನ್ನು ತಂದು ನಿಲ್ಲಿಸುವ ವಾಡಿಕೆಯಿದೆ.
ಹಬ್ಬದ ದಿನ ರಾತ್ರಿ ಗುಡಿಯ ಎದುರಲ್ಲಿ ಮೂರು ಅಡಿ ಉದ್ದ ಇಪ್ಪತ್ತು ಅಡಿ ಅಗಲದ ಕೊಂಡ (ಕೆಂಡ) ಹಾಕುತ್ತಾರೆ. ಎರಡು ದಿನದ ನಂತರ ಇದನ್ನು ಮುಚ್ಚುತ್ತಾರೆ. ಮುಚ್ಚುವ ವೇಳೆ ಪಾನಕವನ್ನು ನೀಡುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಮೊಸರನ್ನ ಮತ್ತು ಕಡಲೆ ಮತ್ತು ಸಕ್ಕರೆ ನೈವೇದ್ಯದ ಪೂಜೆ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.