ADVERTISEMENT

ಕೇಳಿತೇ ಕೂಗು

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST
ಕೇಳಿತೇ ಕೂಗು
ಕೇಳಿತೇ ಕೂಗು   

ನಾನೊಂದು ನವಿಲು. ಮನುಷ್ಯರೆಲ್ಲ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಆದರೆ ನಮ್ಮ ಗೋಳು ಕೇಳುವವರ‌್ಯಾರು?


ಸೂರ್ಯಕಿರಣಗಳು ಹೆಜ್ಜೆ ಇಡುವ ಹೊತ್ತಿಗೆ ಆಹಾರವನ್ನು ಹುಡುಕಿಕೊಂಡು ಗುಳೆ ಹೊರಟ ನಮ್ಮವರಿಗೆ ಹೊಲದಲ್ಲಿ ಸಾವು ಕಾದಿದೆ ಎಂದು ತಿಳಿಯುವುದಾದರೂ ಹೇಗೆ? ನಮ್ಮ ಬಂಧು ಬಳಗ, ಸೋದರ ಸೋದರಿಯರನ್ನು ಕಳೆದುಕೊಂಡೆವಲ್ಲ. ಹಾಳು ಹೊಟ್ಟೆ ಹಸಿವಿನಿಂದ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿತಲ್ಲ.

ನೋಡಿ, ನನ್ನ ಮಕ್ಕಳು ಆಹಾರ ತಿಂದ ಕೂಡಲೇ ವಿಲಿವಿಲಿ ಒದ್ದಾಡುತ್ತ, `ಅಮ್ಮ ಯಾಕೋ ಹೊಟ್ಟೆ ನೋಯುತ್ತಿದೆ, ಕಣ್ಣುಗಳು ಮಂಜಾಗುತ್ತಿವೆ. ಹೊಟ್ಟೆಯಲ್ಲಿ ಬೆಂಕಿ ಇಟ್ಟಂಗಾಗುತ್ತಿದೆ,  ಗಂಟಲು ಒಣಗುತ್ತಿದೆ, ಸ್ವಲ್ಪ ನೀರು ಕುಡಿಸವ್ವ~ ಎಂದು ಗೋಗರೆಯುತ್ತ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರೆ ನನಗೆ ಏನಾಗಬೇಡ?  ಕಾಪಾಡಿ ಎಂದು ಅರಚಿಕೊಂಡರೂ ದಯೆ ತೋರುವ ಜನರಿಲ್ಲ.

ಮಾನವರೇ! ನಿಮಗೆ ನಾವು ಏನು ದ್ರೋಹ ಮಾಡಿದ್ದೇವೆ? ನಮ್ಮ ಜಾಗವನೆಲ್ಲಾ ಅತಿಕ್ರಮಣ ಮಾಡಿಕೊಂಡು ನಾವುಗಳು ವಲಸೆ ಹೋಗುವ ಪರಿಸ್ಥಿತಿ ತಂದವರಾರು? ನಾವು ಸಿಕ್ಕ ಸಿಕ್ಕ ಊರು, ಕೇರಿ, ಕೋಟೆಕೊತ್ತಲಗಳಲ್ಲಿ ಕದ್ದು ಮುಚ್ಚಿ ಬದುಕಬೇಕಾದ ದುಸ್ಥಿತಿ ಬಂದೊದಗಿದೆ. ಕಾಡನ್ನು ಕಡಿದು ಕಾಂಕ್ರೀಟ್ ಕಾಡನ್ನಾಗಿ ಪರಿವರ್ತಿಸಿರುವುದು ನೀವೇ. ನಮ್ಮ ಕಾಡಿನಿಂದ ನಮ್ಮನ್ನೇ ಹೊರಹಾಕಿ ತೊಂದರೆ ಕೊಡುವುದಲ್ಲದೆ, ನಮ್ಮನ್ನು ಬೇಟೆಯಾಡಿ ನಿರ್ವಂಶ ಮಾಡುತ್ತಿದ್ದೀರಲ್ಲ. ಯಾಕೆ?

ನಮ್ಮಿಂದ ರೈತರಿಗೆ ಸಹಾಯವಾಗುತ್ತಿದೆ ವಿನಃ ಅನ್ಯಾಯವಾಗುತ್ತಿಲ್ಲ.  ಹೊಲದಲ್ಲಿನ ಹುಳು-ಹುಪ್ಪಟೆಗಳನ್ನು ತಿಂದು ಅವುಗಳ ಸಂತತಿ ನಿಯಂತ್ರಿಸುತ್ತಿದ್ದೇವೆ. ಆದರೂ ಅದನ್ನು ಅರ್ಥ ಮಾಡಿಕೊಳ್ಳದೆ ನಮ್ಮನ್ನು ಕೊಲ್ಲುವುದು ಸರಿಯೇ?

ನಮ್ಮ ಅಂದಚೆಂದ ನೋಡಿ  ರಾಷ್ಟ್ರ ಪಕ್ಷಿ ಎಂದು ಬಿರುದು ನೀಡಿ ಕೊಲ್ಲುವುದು ಯಾವ ಸೀಮೆ ನ್ಯಾಯ?  ಕೆಲ ದಿನದ ಹಿಂದೆ ಹುಲಿಕಟ್ಟಿಯಲ್ಲಿ ವಿಷ ಹಾಕಿ 8 ನವಿಲುಗಳನ್ನು ಕೊಂದರು. ಕೆಲ ವರ್ಷಗಳ ಹಿಂದೆ ನೆಲ್ಲೂರ ಎಂಬ ಗ್ರಾಮದಲ್ಲೂ ರೈತರು ಹಾಕಿದ ವಿಷಮಿಶ್ರಿತ ಕಾಳು ಸೇವಿಸಿ 100ಕ್ಕೂ ಹೆಚ್ಚು ನವಿಲುಗಳು ಸತ್ತವು.

ಇದು ಹೀಗೇ ಮುಂದುವರಿದರೆ ಮನುಷ್ಯರ ಮುಂದಿನ ಪೀಳಿಗೆ ನಮ್ಮನ್ನು ಚಿತ್ರಗಳಲ್ಲಿ ಮಾತ್ರ ಕಾಣಬೇಕಾದೀತು. ನಮ್ಮನ್ನು ಬದುಕಲು ಬಿಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT