ADVERTISEMENT

`ಕೋಡಿ ಈರಣ್ಣ' ಸಂಭ್ರಮ ನೋಡಣ್ಣ...

ಎಚ್.ಟಿ.ಚಂದ್ರಶೇಖರ್ ಹುಳಿಗೆರೆ / ಚಿತ್ರ: ಸೈಯದ್ ಅತಾವುಲ್ಲಾ
Published 11 ಫೆಬ್ರುವರಿ 2013, 19:59 IST
Last Updated 11 ಫೆಬ್ರುವರಿ 2013, 19:59 IST
ಮೆರವಣಿಗೆಯಲ್ಲಿ ಭಕ್ತರ ದಂಡು
ಮೆರವಣಿಗೆಯಲ್ಲಿ ಭಕ್ತರ ದಂಡು   

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹುಳಿಗೆರೆಯಲ್ಲಿ ಒಂದು ವಾರದಿಂದ ಜಾತ್ರಾ ಸಂಭ್ರಮ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದ ಜನರ ಆರಾಧ್ಯ ದೈವ ಕೋಡಿ ಈರಣ್ಣನ ದರ್ಶನಕ್ಕೆ ಭಕ್ತಾದಿಗಳ ಮಹಾಪೂರ. ಇದೇ 6ರಿಂದ ಆರಂಭಗೊಂಡಿರುವ ಜಾತ್ರಾ ವೈಭವ ಇದೇ 16ರ ಶನಿವಾರ ಕೊನೆಗೊಳ್ಳಲಿದೆ.

ಎಲ್ಲ ಜಾತ್ರಾ ಮಹೋತ್ಸವಗಳಂತೆ ಈ ಜಾತ್ರೆಗೂ ಐತಿಹಾಸಿಕ ಹಿನ್ನೆಲೆ ಉಂಟು. ಗೊಲ್ಲ ಜನಾಂಗದ ಈರಣ್ಣನ ಮೂಲ ಆಂಧ್ರ ಪ್ರದೇಶದ ಪೆನಕೊಂಡದ  ಗೋಪಾಲಕ. ಈರಣ್ಣನ ಮಹಿಮಾ ಶಕ್ತಿಯು ಮೊದಲು ಅನಾವರಣವಾಗಿದ್ದು ಪೆನುಕೊಂಡದಲ್ಲಿ.

ಗೋವಿನಿಂದ ತಯಾರಿಸಿದ ಮಾಂಸದೂಟವನ್ನು ಈರಣ್ಣನಿಗೆ ಬಡಿಸಿದಾಗ ಅದು ಮಲ್ಲಿಗೆಯ ಹೂವಾಗಿ ಪರಿವರ್ತನೆಯಾಗುತ್ತದೆ. ಈ ಶಕ್ತಿಯನ್ನು ದುರ್ಬಲಗೊಳಿಸಲು ಕೆಲವರು ಸಂಚು ರೂಪಿಸುತ್ತಾರೆ. ಪೆನಕೊಂಡದ ದೊರೆಯ ಮಗಳು ಈರಮಾಳಮ್ಮನನ್ನು ಈರಣ್ಣ ಪ್ರೀತಿಸುತ್ತಿದ್ದ ವಿಷಯವನ್ನು ರಾಜನಿಗೆ ತಿಳಿಸುತ್ತಾರೆ. ರಾಜ ಮತ್ತು ಈರಣ್ಣನ ನಡುವೆ ಕಾಳಗ ನಡೆದು ಈರಣ್ಣ ಪೆನುಕೊಂಡಗೆ ಬೆಂಕಿ ಹಚ್ಚಿ ತನ್ನ ಪ್ರೇಯಸಿಯ ಜತೆ ಈಚಲೊಡ್ಡಿಗೆ ಓಡಿ ಬಂದ. ನಂತರ ಅಲ್ಲಿಂದ ಹುಳಿಗೆರೆಯಲ್ಲಿ ನೆಲೆಯೂರಿದ.

ಲೌಕಿಕ ವ್ಯಕ್ತಿಯಾಗಿ ಕಾಣುವ ಈರಣ್ಣ ಹುಳಿಗೆರೆಗೆ ಅಶರೀರನಾಗಿ ಬಂದು ನಿಲ್ಲುತ್ತಾನೆ. ವ್ಯಾಪಾರಕ್ಕಾಗಿ ಈಚಲೊಡ್ಡಿಗೆ ಹೋದ ಮುತ್ತಿನ ಶೆಟ್ಟಿ ಅಡುಗೆ ಮಾಡಲು ಬಳಸಿದ ಕಲ್ಲುಗುಂಡು ಅಲ್ಲಿಂದ ಹುಳಿಗೆರೆಗೆ ಬಂದು ಬಸವನ ಜೋಳಿಗೆಯಲ್ಲಿ ಗೋಚರಿಸಿತ್ತು. ಇದರಿಂದ ದಿಗ್ಭ್ರಾಂತನಾದ ಶೆಟ್ಟಿಗೆ ಕೆರೆಯ ಏರಿ ಮಾರ್ಗವಾಗಿ ಬರುವ ಕೊರವಂಜಿ ಜೋಳಿಗೆ ಏರಿ ಬಂದ ಕಲ್ಲುಗುಂಡಿನ ಮಹಾತ್ಮೆಯನ್ನು ವಿವರಿಸುತ್ತಾಳೆ. ಶೆಟ್ಟಿ, ಕೊರವಂಜಿ ಅಣತಿಯಂತೆ ಪೌಳಿ ನಿರ್ಮಿಸಿ ಇದರ ಮಧ್ಯೆ ಕಲ್ಲುಗುಂಡನ್ನು ಪ್ರತಿಷ್ಠಾಪಿಸುವ ಸಂಕಲ್ಪ ಮಾಡುತ್ತಾನೆ. ಆ ವೇಳೆಗೆ ಪೆನಗೊಂಡದಿಂದ ಬಂದಿದ್ದ ಈರಣ್ಣನನ್ನು ಹಳ್ಳಿಯಲ್ಲಿ ಉಳಿಸಿಕೊಳ್ಳಲು ಜನರು ಸಂಶಯಿಸುತ್ತಾರೆ.

ಏಳಾಳುದ್ದದ ನೀರಿನಲ್ಲಿ ನಿಂತು ಹುಳಿಗೆರೆಯ ಎಲ್ಲಾ ಕೋಮಿನ ಮುಖಂಡರಿಗೂ ಭಾಷೆ ನೀಡುವ ಈರಣ್ಣ, `ನಿಮ್ಮಡನಿದ್ದು ನಿಮ್ಮ ರಕ್ಷಕನಾಗುತ್ತೇನೆ ಹೊರತು ತೊಡಕು ಮಾಡುವುದಿಲ್ಲ' ಎಂದು ಭರವಸೆ ನೀಡುತ್ತಾನೆ. ಇಲ್ಲಿಂದ ಮುಂದೆ ಈರಣ್ಣನಿಗೆ ಕೆರೆಯ ಕೋಡಿಯಲ್ಲಿ ಪೌಳಿ ನಿರ್ಮಿಸಿ ಶೆಟ್ಟಿಗೆ ದರ್ಶನ ನೀಡಿದ ಆ ಕಲ್ಲು ಗುಂಡನ್ನೇ ಈರಣ್ಣನ ಪ್ರತಿರೂಪವಾಗಿ ಪ್ರತಿಷ್ಠಾಪಿಸಿ ತಮ್ಮ ಆರಾಧ್ಯ ದೈವವೆಂದು ಇಲ್ಲಿನ ಜನರು ಪೂಜಿಸುತ್ತಾ ಬಂದಿದ್ದಾರೆ. ಇಲ್ಲಿಯೇ ಅಂತ್ಯ ಕಾಣುವ ಶೆಟ್ಟಿಯನ್ನು ಸಮಾಧಿ ಮಾಡಿದ್ದಾರೆ. ಶೆಟ್ಟಿಯ ಸಮಾಧಿಯ ಮೇಲೆ ಒಂದು ಬಸವಣ್ಣನ ಕಲ್ಲಿನ ಮೂರ್ತಿಯೂ ಉತ್ಪತ್ತಿಯಾಗಿದೆ.

ಸಾಮರಸ್ಯದ ಉತ್ಸವ
ಗೊಲ್ಲ ಸಮುದಾಯದ ಈರಣ್ಣ ಒಲಿದದ್ದು ಒಕ್ಕಲಿಗರಿಗೆ. ಆದರೂ ಇಲ್ಲಿ ಯಾವುದೇ ಭೇದಭಾವ ಇಲ್ಲದೆ ಎಲ್ಲ ಜಾತಿಯ ಜನರೂ ಈ ದೇವರ ಸೇವೆ ಮಾಡುತ್ತಾ ಬಂದಿದ್ದಾರೆ. ಛಲವಾದಿಗಳು ಅರೆವಾದ್ಯ ಸೇವೆ ಸಲ್ಲಿಸಿದರೆ, ಮಡಿವಾಳರು ಮಡಿಹಾಸು-ಪಂಜಿನ ಸೇವೆ, ಪಾಳೆಗಾರರು ತಳವಾರಿಕೆ ನಡೆಸುತ್ತಾರೆ. ಮಣೆಗಾರರ ಆರಾಧ್ಯ ದೈವ ಧಾರ್ಮಾದಪ್ಪನ ಉತ್ಸವ ಮತ್ತು ಮೆರವಣಿಗೆ ಈರಣ್ಣನ ಜೊತೆಯಲ್ಲೇ ನಡೆಯುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ಜಾತ್ರೆಯ ಸಂದರ್ಭದಲ್ಲಿ ಹುಳಿಗೆರೆಯಿಂದ ಆಂಧ್ರದ ಈಚಲಡ್ಡಿನವರೆಗೆ ನಡೆಯುತ್ತಿರುವ ಎತ್ತಿನ ಬಂಡಿ ಯಾತ್ರೆ ನೋಡಲು ಹಬ್ಬ. 9ರಿಂದಲೇ ಈ ಯಾತ್ರೆ ಆರಂಭಗೊಂಡಿದೆ. 5 ಎತ್ತಿನ ಗಾಡಿಯಲ್ಲಿ ಯಾತ್ರೆ ನಡೆಯುತ್ತಿದೆ.  ಇವು ಸುಮಾರು 150 ವರ್ಷಗಳ ಹಳೆಯದ್ದು ಎನ್ನುವುದು ವಿಶೇಷ.

ಬಂಡಿಯಾತ್ರೆಯ ಜೊತೆ ನೂರಾರು ಭಕ್ತರು ಪಾದಯಾತ್ರೆ ಮಾಡಿ ಈರಣ್ಣನ ಮೂಲ ಹಾಗೂ ಒಡನಾಡಿ ಈರಮಾಳಮ್ಮನ ಸನ್ನಿಧಿಯ ದರ್ಶನ ಮಾಡುತ್ತಾರೆ. ಈ ಯಾ ತ್ರೆ ಪ್ರತಿವರ್ಷವೂ ನಡೆಯುವುದಿಲ್ಲ. 150 ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ಇಂತಹ ಈಚಲಡ್ಡುಯಾತ್ರೆಯನ್ನು  ಈ ವರ್ಷ ಗ್ರಾಮದ ಹಿರಿಯ ಎಚ್.ಎಸ್.ತಿಮ್ಮಣ್ಣ ಆರಂಭಿಸಿದ್ದಾರೆ. ನಾಲ್ಕು ನೂರು ವರ್ಷಗಳಿಂದ ಈರಣ್ಣನನ್ನು ಗ್ರಾಮದಲ್ಲಿ ಪೂಜಿಸಲಾಗುತ್ತಿದೆ ಎಂದು ಈರಣ್ಣನ ಐತಿಹಾಸಿಕ ಮತ್ತು ಪೌರಾಣಿಕ ವಿಷಯಗಳನ್ನು ತಿಳಿಸುತ್ತಾರೆ ಇತಿಹಾಸಕಾರ ಡಾ. ನಂದೀಶ್ ಹಾಗೂ ಎಂ.ಎಚ್. ನಾಗರಾಜ್.

ಹೋಗುವ ಮಾರ್ಗ
ತುಮಕೂರಿನಿಂದ 65 ಕಿ.ಮೀ. ಶಿರಾದಿಂದ ಮೊದಲೂರು ಮತ್ತು ಬರಗೂರು ಮಾರ್ಗವಾಗಿ ಹುಳಿಗೆರೆಗೆ ಹೋಗಬೇಕು. ಶಿರಾದಿಂದ 15 ಕಿ.ಮೀ ದೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.