ADVERTISEMENT

ಗೋವುಗಳ ದಿನಚರಿಗೆ ಅಕ್ಷರದ ರೂಪ

ಜಯಪ್ರಕಾಶ ತಲವಾಟ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST
ದಿನಚರಿ ಪಟ್ಟಿಗಳ ನಡುವೆ ಗೋಪ್ರೇಮಿ
ದಿನಚರಿ ಪಟ್ಟಿಗಳ ನಡುವೆ ಗೋಪ್ರೇಮಿ   

ದಿನ ಬೆಳಗಾಗುತ್ತಿದ್ದಂತೆ ಮನೆಯ ಆವರಣದಲ್ಲಿ ಗೋವುಗಳ `ಅಂಬಾ' ಎಂಬ ಕೂಗು ಕೇಳುತ್ತಲೇ ಕೊಟ್ಟಿಗೆಗೆ ಬಂದು ಅವುಗಳಿಗೆ ಒಂದಿಷ್ಟು ಮೇವು ಹಾಕಿ ಮೈದಡವಿದ ಬಳಿಕವೇ ಬಹುತೇಕ ರೈತರ ದಿನಚರಿ ಆರಂಭ. ಇದು ಹಸುಗಳ ಮೇಲೆ ರೈತರು ಇಟ್ಟಿರುವ ಪ್ರೀತಿ ವಿಶ್ವಾಸದ ಪ್ರತೀಕ. ಸ್ವಂತ ಮಕ್ಕಳಂತೆಯೇ ಗೋವುಗಳ ಮೇಲೆ ಅವರಿಟ್ಟಿರುವ ಮಮತೆ, ಅವಿನಾಭಾವ ಸಂಬಂಧದ ಕುರುಹು ಕೂಡ.

ಹಲವರು ತಮ್ಮ ವೈಯಕ್ತಿಕ ಜೀವನದ ದಿನಚರಿಯನ್ನು ದಾಖಲಿಸುತ್ತಾರೆ. ಅದರಲ್ಲಿ ಅವರ ಮಕ್ಕಳ ಬಗ್ಗೆ ಬರೆಯುವುದೇ ಹೆಚ್ಚು. ಮಕ್ಕಳು ಹುಟ್ಟಿದಾಗಿನಿಂದ ಅವರು ಬೆಳೆಯುತ್ತಿರುವ ಬಗೆ, ವಿದ್ಯಾಭ್ಯಾಸ... ಇತ್ಯಾದಿ ಆ ದಿನಚರಿಯ ಭಾಗವೇ. ಆದರೆ ಗೋವುಗಳನ್ನೂ ತಮ್ಮ ಮಕ್ಕಳೆಂದು ನಂಬುವ, ಮಕ್ಕಳಂತೆಯೇ ಈ ಜಾನುವಾರುಗಳ ದಿನಚರಿಯನ್ನೂ ಅಕ್ಷರ ರೂಪದಲ್ಲಿ ಹಿಡಿದಿಡುತ್ತಾ ಬಂದರೆ ಹೇಗೆ...?

ಇಂಥದ್ದೊಂದು ಯೋಚನೆ ಹೊಳೆದದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸತ್ಯನಾರಾಯಣ ರಾವ್ ಅವರಿಗೆ.

ಈ ಭಾಗದ ಜನರಿಗೆ ಅವರು ಹಳೇಮನೆ ಸತ್ಯಣ್ಣ ಎಂದೇ ಪರಿಚಿತ. ಇಂಥದ್ದೊಂದು ಯೋಚನೆಯನ್ನು ಕೇವಲ ಯೋಚನೆಯಾಗಿರಿಸದೆಯೇ ಅದಕ್ಕೊಂದು ರೂಪವನ್ನೂ ನೀಡಿದ್ದಾರೆ ಅವರು. ತಮ್ಮ ಕೊಟ್ಟಿಗೆಯ ಜಾನುವಾರುಗಳನ್ನು ಪ್ರತ್ಯಕ್ಷ ದೇವರೆಂದು ತಿಳಿದು ಅವುಗಳೊಂದಿಗಿನ ಒಡನಾಟವನ್ನು ದಿನಚರಿ ರೂಪಕ್ಕಿಳಿಸಿದ್ದಾರೆ. ಇಂಥ ದಿನಚರಿಗೆ ಈಗ ಸುಮಾರು 46 ವರ್ಷ. ಅರ್ಥಾತ್ 1967ರಿಂದಲೂ ಈ ಹವ್ಯಾಸ ಅವರು ರೂಢಿಸಿಕೊಂಡು ಬಂದಿದ್ದಾರೆ. ಇಪ್ಪತ್ತಾರನೇ ವಯಸ್ಸಿನಲ್ಲಿ ಪ್ರಾರಂಭಿಸಿದ ಜಾನುವಾರು ದಿನಚರಿಯನ್ನು ಅವರು ಇಂದಿಗೂ ಬರೆಯುತ್ತಿದ್ದಾರೆ.

ಕುಟುಂಬದ ಸದಸ್ಯನೇ
ಗೋವುಗಳು ಕೂಡಾ ಕುಟುಂಬದ ಸದಸ್ಯರಿದ್ದಂತೆ ಎಂಬ ಭಾವನೆ ಸತ್ಯಣ್ಣ ಅವರದ್ದು. ದಿನಚರಿಯನ್ನು ಇನ್ನೂರು ಪುಟಗಳ ನೋಟ್ ಪುಸ್ತಕದಲ್ಲಿ ದಾಖಲಿಸುತ್ತಾ ಬಂದಿದ್ದಾರೆ. ಈವರೆಗೂ ತಮ್ಮ ಮನೆಯಲ್ಲಿ ಹುಟ್ಟಿದ, ಖರೀದಿಸಿದ, ಮಾರಾಟ ಮಾಡಿದ, ಮೃತಪಟ್ಟ ಜಾನುವಾರುಗಳ ಸಂಪೂರ್ಣ ಮಾಹಿತಿಯನ್ನು ಹದಿನೈದು ನೋಟ್ ಪುಸ್ತಕಗಳಲ್ಲಿ ಬರೆದಿಟ್ಟಿದ್ದಾರೆ. ಇವುಗಳ ಖರೀದಿ, ಮಾರಾಟದ ದರ, ಚಹರೆ, ಗುಣಲಕ್ಷಣ ಎಲ್ಲವುಗಳನ್ನೂ ದಾಖಲಿಸುತ್ತಾ ಬಂದಿದ್ದಾರೆ. ಈ ಮಾಹಿತಿಗಳ ಕಣಜ ಮೂರು ಸಾವಿರ ಪುಟಗಳಷ್ಟಾಗಿದೆ.

ದಿನಚರಿಯನ್ನು ಓದುತ್ತಿದ್ದಂತೆ ಮನುಷ್ಯ- ಪ್ರಾಣಿಗಳ ಮಧ್ಯೆ ಇಷ್ಟೊಂದು ಗಟ್ಟಿ ಸಂಬಂಧವಿರಲು ಸಾಧ್ಯವೇ, ಜಾನುವಾರುಗಳನ್ನು ಹೀಗೂ ನೋಡಬಹುದೇ ಎಂಬ ಪ್ರಶ್ನೆಗಳು ಮೂಡುವುದು ಸಹಜ.  

ಎಲ್ಲ ಜಾನುವಾರುಗಳು ಮೆಲುಕಾಡುವ, ಕಿವಿ ನಿಮಿರಿಸುವ, ಚಿಕ್ಕಪುಟ್ಟ ಕಾದಾಟ, ಮೇಯಲು ಹೊರಡುವಾಗ ಜಾನುವಾರುಗಳ ಮನಸ್ಥಿತಿ, ಹಸು ಗಬ್ಬವಾಗಿದ್ದು, ಕರು ಹಾಕುವಾಗ ಅವುಗಳ ಯಾತನೆ, ಹುಷಾರಿಲ್ಲದಾಗ, ಸಿಟ್ಟು ಬಂದಾಗ ಅವುಗಳ ವರ್ತನೆ, ಕರುಗಳ ಚೆನ್ನಾಟ, ಕರು ಮೃತಪಟ್ಟಾಗ ಹಸು ಪಡುವ ಸಂಕಟ, ಇವುಗಳೆಲ್ಲವನ್ನೂ ದಿನಚರಿಯಲ್ಲಿ ಸತ್ಯಣ್ಣ ದಾಖಲಿಸುತ್ತಾ ಬಂದಿದ್ದಾರೆ. ಹಾಲು ಕೊಡದೇ ಮೊಂಡಾಟ ಮಾಡಿದಾಗ ಹಸು ಎಮ್ಮೆಗಳಿಗೆ ಕೋಲಿನಿಂದ ಹೊಡೆದು ಆಮೇಲೆ ತಾವು ಪಶ್ಚಾತ್ತಾಪ ಪಟ್ಟಿರುವುದನ್ನೂ, ದೀಪಾವಳಿ ದಿನದಂದು ಗೋವುಗಳನ್ನು ಪೂಜಿಸಿ, ಅವುಗಳೊಂದಿಗೆ ಸಂಭ್ರಮ ಪಟ್ಟಿರುವುದನ್ನೂ ಬರಹ ರೂಪದಲ್ಲಿನ ಭಾವನೆಗಳನ್ನು ಓದಿದಾಗ ಕಾದಂಬರಿ ಓದುವಾಗಿನ ಕುತೂಹಲ ಅನಾವರಣಗೊಳ್ಳುತ್ತದೆ.

ಹಸುಗಳಿಗೆ ಉತ್ತಮ ವ್ಯವಸ್ಥೆ
ಜಾನುವಾರು ಸಾಕುವ ವಿಚಾರದಲ್ಲಿಯೂ ಇವರು ಇತರರಿಗೆ ಮಾದರಿಯಾಗಿದ್ದಾರೆ. ಜಾನುವಾರುಗಳಿಗೆ ಸ್ವಚ್ಛ ಗಾಳಿ, ಬೆಳಕು ಬರುವಂತೆ, ಗೋಮೂತ್ರ ಸುಲಭವಾಗಿ ಹೊರಕ್ಕೆ ಹರಿದು ಹೋಗುವಂತೆ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಗಾಯಗೊಂಡು ಕಾಯಿಲೆ ಬಿದ್ದ ಗೋವುಗಳಿಗೆ ತಾವೇ ನಾಟಿ ಔಷಧ ನೀಡುತ್ತಾರೆ. ಆ ಸಮಯದಲ್ಲಿನ ಪ್ರಾಣಿಗಳ ಮೂಕ ರೋದನ, ಯಾತನೆ ಇವೆಲ್ಲವೂ ಸಹಜವಾಗಿ ಬರವಣಿಗೆಯಲ್ಲಿ ಮೂಡಿ ಬಂದಿದೆ. ಅವುಗಳನ್ನು ಕುಟುಂಬದ ಸದಸ್ಯರನ್ನು ಆರೈಕೆ ಮಾಡಿದಂತೆ ಬಹು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಯಾವ ಕಾಯಿಲೆಗೆ, ಗಾಯಕ್ಕೆ ಯಾವ ರೀತಿಯ ಚಿಕಿತ್ಸೆ, ಯಾವ ಸೊಪ್ಪು, ಗಿಡಗಂಟಿ ಬಳಸಿ ಔಷಧಿ ಮಾಡಬೇಕೆಂಬುದನ್ನು ಬರೆದಿದ್ದಾರೆ.

ಸತ್ಯಣ್ಣ ಬಿಡುವಿನ ವೇಳೆಯಲ್ಲಿ ದಿನಚರಿ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಾರೆ. `ಚಿಕ್ಕವನಿದ್ದಾಗ ಮನೆಯಲ್ಲಿ ಹಸು ಎಮ್ಮೆ ಸಾಕುತ್ತಿದ್ದರು. ಜಾನುವಾರುಗಳನ್ನು ಕುತೂಹಲದಿಂದ ನೋಡುತ್ತಾ ನನಗೆ ಅನ್ನಿಸಿದ್ದನ್ನು ಬರೆಯುತ್ತಾ ಹೋದೆ. ಮನೆಯಲ್ಲಿ ಕುಟುಂಬ ದೊಡ್ಡದಿತ್ತು. ಕೊಟ್ಟಿಗೆಯಲ್ಲಿ ದನಕರುಗಳು ಸಾಕಷ್ಟು ಇದ್ದ ಕಾರಣ ಕರುಗಳಿಗೇ ಪ್ರತ್ಯೇಕ ಕೊಟ್ಟಿಗೆ. ಪ್ರತಿದಿನವೂ ಬೆಳಿಗ್ಗೆ ಕೊಟ್ಟಿಗೆಯಿಂದ ಮೇಯಲು ಹೊರಡುವಾಗ ಒಂದೇ ಕ್ರಮಾಂಕದಲ್ಲಿ ಬಾಗಿಲಿನಿಂದ ಹೊರಡುವುದನ್ನು, ಸಂಜೆ ಸಮಯಕ್ಕೆ ಸರಿಯಾಗಿ ಅದೇ ಕ್ರಮಾಂಕದಲ್ಲಿ ಕೊಟ್ಟಿಗೆಗೆ ಪ್ರವೇಶಿಸುವುದನ್ನು ನೋಡಿ ಖುಷಿ ಪಡುತ್ತಿದ್ದೆ. ಅವುಗಳ ಶಿಸ್ತು ನಮಗೂ ಪಾಠವಾಗುವಂತಿದೆ. ಸಮಯಕ್ಕೆ ಸರಿಯಾಗಿ ವಾಪಾಸಾಗದಿದ್ದರೆ, ಅಕಾಲದಲ್ಲಿ ವಾಪಾಸಾದರೆ ಅವುಗಳಿಗೆ ಏನೋ ಸಮಸ್ಯೆ ಕಾಡಿದೆ ಎಂದೇ ಅರ್ಥ' ಎನ್ನುತ್ತಾರೆ ಸತ್ಯಣ್ಣ.  

ಮನೆಯ ದನಕರುಗಳು ಮೇಯಲು ಹೊರಟರೆ ರಸ್ತೆಯುದ್ದಕ್ಕೂ ಊರ ದನಕರುಗಳೆಲ್ಲಾ ಹೊರಟಿವೆಯೇನೋ ಎನ್ನುವಂತಹ ದೃಶ್ಯ ನಿರ್ಮಾಣವಾಗುತ್ತಿತ್ತು.

ಇಂದು ಹೈನುಗಾರಿಕೆ ಉದ್ಯಮವಾಗಿ ಬೆಳೆದಿದೆ. `ಕೊಟ್ಟಿಗೆ ತುಂಬಾ ಹಸು ಇರಲಿ, ಮನೆ ತುಂಬಾ ಮಕ್ಕಳಿರಲಿ' ಇದು ಹಳೆಯ ನಾಣ್ಣುಡಿ. ಬದಲಾಗುತ್ತಿರುವ ಜೀವನ ಕ್ರಮದಲ್ಲಿ, ಮನೆ, ಕೊಟ್ಟಿಗೆ ಎರಡೂ ಬಣ ಬಣ ಎನ್ನುತ್ತಿವೆ. ಕೆಲವು ಹಳ್ಳಿಗಳ ಎಷ್ಟೋ ಮನೆಗಳ ಕೊಟ್ಟಿಗೆಗಳು ಸ್ಕೂಟರ್, ಕಾರುಗಳನ್ನು ನಿಲ್ಲಿಸುವ ಶೆಡ್ ಆಗಿವೆ.

ಸತ್ಯಣ್ಣ ಕೇವಲ ಜಾನುವಾರುಗಳ ದಿನಚರಿ ಬರೆಯುತ್ತಿಲ್ಲ. ತಮ್ಮ ಪುತ್ರರಿಬ್ಬರೂ ಮತ್ತು ಮೊಮ್ಮಕ್ಕಳಿಬ್ಬರ ಕುರಿತು ಪ್ರತ್ಯೇಕವಾಗಿ ನೋಟ್ ಪುಸ್ತಕದಲ್ಲಿ ಪಂಚಾಂಗದಲ್ಲಿನ ನಿರ್ದಿಷ್ಟ ದಿನವನ್ನಾಧರಿಸಿ ಬರೆಯುವ ಹವ್ಯಾಸವನ್ನಿಟ್ಟುಕೊಂಡಿದ್ದಾರೆ. ಅವರು ಹುಟ್ಟಿದ ದಿನದಿಂದಲೂ ಅವರ ಚಟುವಟಿಕೆಗಳನ್ನು ಅಭ್ಯಸಿಸುತ್ತಾ ಬರಹ ರೂಪದಲ್ಲಿಟ್ಟಿದ್ದು ಕುತೂಹಲ ಮೂಡಿಸುತ್ತದೆ.

ಸತ್ಯಣ್ಣರ ಡೈರಿ ಎಂದರೆ ಕೇವಲ ದಿನಚರಿಯನ್ನು ಗುರುತುಹಾಕಿಕೊಳ್ಳುವ, ಮರೆತಿರುವುದನ್ನು ನೆನಪಿಸುವ ಪುಸ್ತಕವಲ್ಲ. ಅದೊಂದು ಮಾರ್ಗದರ್ಶಕ ಕೈಪಿಡಿ. ಮಾನವೀಯ ಅಂತಃಕರಣವನ್ನೂ, ಮನುಷ್ಯ, ಮೂಕಪ್ರಾಣಿಗಳ ನಡುವಿನ ಸಂಬಂಧವನ್ನೂ ಗಟ್ಟಿಗೊಳಿಸುವ ಪಾರಾಯಣ ಪುಸ್ತಕ. ಸಂಪರ್ಕಕ್ಕೆ- 9008400336.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.