ADVERTISEMENT

ಜಲಯೋಧರಾದ ಮಠಾಧೀಶರು!

ಸ್ವರೂಪಾನಂದ ಎಂ.ಕೊಟ್ಟೂರು
Published 15 ಜೂನ್ 2015, 19:30 IST
Last Updated 15 ಜೂನ್ 2015, 19:30 IST

ಕಳೆದ ತಿಂಗಳ ಮಾತು. ಬಳ್ಳಾರಿ ಜಿಲ್ಲೆಯ ಧರ್ಮಾಪುರದ ಪುಷ್ಕರಣಿಯ ಮುಂದೆ ಜನ ಜಂಗುಳಿ. ಸಲಿಕೆ, ಗುದ್ದಲಿ, ಪಿಕಾಸಿ, ಪುಟ್ಟಿಗಳದ್ದೇ ಕಾರುಬಾರು. ಕೆರೆ ತುಂಬಿದ ಹೂಳನ್ನು ತೆಗೆಯುವ ಕೈಂಕರ್ಯದಲ್ಲಿ ಕೆಲವರು ನಿರತರಾಗಿದ್ದರೆ, ಅವರನ್ನು ಅಲ್ಲಿ ನೆರೆದವರು ಅಚ್ಚರಿಯಿಂದ ನೋಡುತ್ತಿದ್ದರು. ಇಷ್ಟೇ ಅಲ್ಲ, ಹೀಗೆ ನೋಡುತ್ತಾ ನಿಂತವರೂ ಕೊನೆಗೆ ಈ ಕೆಲಸಕ್ಕೆ ಕೈಜೋಡಿಸಿದರು!

ಈ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು ಯಾವುದೋ ಸ್ವಯಂಸೇವಾ ಸಂಸ್ಥೆಯ ಸದಸ್ಯರಲ್ಲ. ಬದಲಿಗೆ ಕಾವಿಧಾರಿಗಳು. ದೀಕ್ಷೆ ಕೊಡುವ ಕೈ ಅಂದು ಗುದ್ದಲಿ, ಪಿಕಾಸಿ ಹಿಡಿದಿತ್ತು. 85ಕ್ಕೂ ಅಧಿಕ ಮಠಾಧೀಶರು ಹೂಳೆತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರಿಂದ ಪ್ರೇರಣೆ ಪಡೆದ ಜನರು ಖುದ್ದಾಗಿ ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡರು. ಸ್ವಲ್ಪ ಅವಧಿಯಲ್ಲಿಯೇ ಕೆರೆ ಹೂಳಿನಿಂದ ಮುಕ್ತವಾಗಿ ಉಸಿರಾಡತೊಡಗಿತು.

ಮಠಾಧೀಶರ ಕೆಲಸವೆಂದರೆ ಪೂಜೆ-ಪುನಸ್ಕಾರ, ಪಾಠ-ಪ್ರವಚನ... ಇತ್ಯಾದಿಯಷ್ಟೇ ಅಲ್ಲ, ಬದಲಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರಿಸರವನ್ನು ಕಾಪಾಡುವುದು ಕೂಡ ಹೌದು ಎಂಬುದನ್ನು ಅಂದು ‘ಮಠಾಧೀಶರ ಧರ್ಮ ಪರಿಷತ್’ ತೋರಿಸಿಕೊಟ್ಟಿತು.

ಬೇರೆಯವರಿಗೆ ಉಪದೇಶ ಮಾಡಿ ಅವರಿಂದ ಕೆಲಸ ತೆಗೆಯುವುದಕ್ಕಿಂತ ಮೊದಲು ಖುದ್ದಾಗಿ ಸೇವಾ ಕಾಯಕಕ್ಕೆ ಅರ್ಪಿಸಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ಜನರು ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂಬುದು ಈ ಪರಿಷತ್ತಿನ ಸ್ವಾಮೀಜಿಗಳ ಧ್ಯೇಯ.

ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದು ಈ ಭಾಗದ ಕೆರೆಗಳಿಗೆ ನೀರು ತುಂಬಿಸುವಂತೆ ಜನರ ದಶಕಗಳ ನಿರಂತರ ಹೋರಾಟಕ್ಕೆ ಈ ಸ್ವಾಮೀಜಿಗಳು ಕೈಜೋಡಿದ್ದಾರೆ. ತುಂಗಭದ್ರ ಅಣೆಕಟ್ಟಿನ ಹೂಳು ತೆಗೆಯುವಂತೆ ಒತ್ತಾಯಿಸಿ ಹೊಸಪೇಟೆಯಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದಾರೆ. ಮಾಲ್ವಿ ಜಲಾಶಯಕ್ಕೆ ನೀರು ತುಂಬಿಸುವಂತೆ, ಹಬೋ ಹಳ್ಳಿ ವ್ಯಾಪ್ತಿಯ ಕೆಲವು ಹಳ್ಳಿಗಳಿಗೆ ತುಂಗಭದ್ರೆಯ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸಲು, ಕುದುರೆ ಕಾಲುವೆ, ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಜಾರಿಗಾಗಿ, ಕೂಡ್ಲಿಗಿ ತಾಲ್ಲೂಕಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ನೀರನ್ನು ಫ್ಲೋರೈಡ್ ಮುಕ್ತವಾಗಿಸಲು ನೂರಾರು ಹಳ್ಳಿಗಳಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸರ್ಕಾರದ ಗಮನಸೆಳೆದಿದ್ದಾರೆ. ಈ ಕಾರ್ಯಗಳಿಗೀಗ ಹೊಸ ಸೇರ್ಪಡೆ ಧರ್ಮಾಪುರದ ಕಲ್ಯಾಣಿಯ ಕಾಯಕಲ್ಪ. ‘ಯುವಾ ಬ್ರಿಗೇಡ್’ ವತಿಯಿಂದ ನಡೆದ 38 ಕಲ್ಯಾಣಿಗಳಿಗೆ ಕಾಯಕಲ್ಪ ಯೋಜನೆ ಅಡಿ ಧರ್ಮಾಪುರ ಕೆರೆ ಶುದ್ಧೀಕರಣಕ್ಕೆ ಸ್ವಾಮೀಜಿಗಳು ಕೈಜೋಡಿಸಿ ಹೊಸ ಭಾಷ್ಯ ಬರೆದಿದ್ದಾರೆ.

ಅಭಿನವ ಶ್ರೀ ಹಾಲಪ್ಪಜ್ಜ ಸ್ವಾಮಿಗಳು, ಸಂಡೂರಿನ ವಿರಕ್ತ ಮಠದ ಪ್ರಭು ಸ್ವಾಮಿಗಳು, ಕೊಟ್ಟೂರಿನ ಚಾನುಕೋಟಿ ಮಠದ ಸಿದ್ದಲಿಂಗ ಸ್ವಾಮಿಗಳು, ಮಹಲ್ ಮಠದ ಶಂಕರ ಸ್ವಾಮಿಗಳು, ನಂದಿಪುರದ ಮಹೇಶ್ವರ ಸ್ವಾಮಿಗಳು, ಯಶವಂತನಗರದ ಗಂಗಾಧರ ದೇವರು, ಬೆಣ್ಣೆಹಳ್ಳಿ ಸ್ವಾಮೀಜಿ... ಹೀಗೆ ವಿವಿಧ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಮಠಾಧೀಶರು ಇಲ್ಲಿ ಕೆಲಸ ನಿರ್ವಹಿಸಿದರು.  ಸ್ವಾಮೀಜಿಗಳು ಮುಂದೆ ಬಂದರೆ ಗ್ರಾಮಸ್ಥರ ಸ್ಪಂದನೆ ಎಷ್ಟರಮಟ್ಟಿಗೆ ಇರುತ್ತದೆ ಎಂಬುದಕ್ಕೆ ಇದೇ ಸಾಕ್ಷಿಯಾಯಿತು. ಏಕೆಂದರೆ ಹಲವು ದಿನಗಳ ಕಾಲ ಬ್ರಿಗೇಡ್ ಕಾರ್ಯಕರ್ತರು ಹಗಲಿರುಳು ಕೆಲಸದಲ್ಲಿ ತೊಡಗಿದ್ದರೂ ಸ್ಪಂದಿಸದ ಗ್ರಾಮಸ್ಥರು ಮಠಾಧೀಶರು ಬರುತ್ತಿದ್ದಂತೆಯೇ ತಂಡೋಪಾದಿಯಲ್ಲಿ ಪುಷ್ಕರಣಿಯತ್ತ ಬಂದು ಕೈಜೋಡಿಸಿದರು. ಕೆಲವು ಸಂಘ ಸಂಸ್ಥೆಗಳ ಸದಸ್ಯರೂ ಬಂದರು. ಪರಿಣಾಮ ಕಾಯಕಲ್ಪ ಕೆಲಸ ಶರವೇಗದಲ್ಲಿ ಸಾಗಿತು.

ಕಲ್ಯಾಣಿ ತುಂಬ ಬೆಳೆದಿದ್ದ ಗಿಡಗಂಟೆಗಳನ್ನು ಎಲ್ಲರು ಸೇರಿ ಕಡಿದಿದ್ದಲ್ಲದೇ, ಹೂಳನ್ನು ಹೊರ ಹಾಕಿದರು. ಜನರು ಸೇರಿದರೂ ತಮ್ಮ ಕೆಲಸ ಮುಗಿಯಿತು ಎಂದು ಭಾವಿಸದ ಸ್ವಾಮೀಜಿಗಳು ಮಾರನೆಯ ದಿನವೂ ಕೆಲಸದಲ್ಲಿ ಮುಂದುವರಿದ ಪರಿಣಾಮ, ನಿರೀಕ್ಷೆ ಮೀರಿ ಜನರು ಸ್ಪಂದಿಸಿದರು. ಫಲವಾಗಿ 25/25 ಮೀಟರ್‌ ಸುತ್ತಳತೆ, 70 ಮೀಟರ್‌ ಆಳದ ಕಲ್ಯಾಣಿ ಕಸ ಮುಕ್ತವಾಗಿದ್ದಲ್ಲದೇ, ತಳಭಾಗದಲ್ಲಿ ಹಸಿ ಕಾಣಿಸಿ, ಜೀವಸೆಲೆ ಇರುವ ಮುನ್ಸೂಚನೆ ನೀಡಿತು!

ಈಗ ಕಲ್ಯಾಣಿಯ ಪಕ್ಕದಲ್ಲಿಯೇ ಹರಿಯುವ ನಾರಿಹಳ್ಳದಿಂದ ನೀರನ್ನು ಪೈಪ್‌ಲೈನ್ ಮೂಲಕ ಕಲ್ಯಾಣಿಯನ್ನು ತುಂಬಿಸುವ ಯೋಚನೆಯನ್ನು ಮಠಾಧೀಶರು ಮಾಡಿದ್ದಾರೆ. ಹೀಗೆ ಪುಷ್ಕರಣಿಯಲ್ಲಿ ನೀರು ಶೇಖರಣೆಯಾದ ನಂತರ ನೀರು ಸಂಪರ್ಕ ಕಲ್ಪಿಸುವ ಮಹತ್ತರ ಯೋಜನೆಯನ್ನು ಮಠಾಧೀಶರು ಮತ್ತು ಬ್ರಿಗೇಡ್ ಹಮ್ಮಿಕೊಂಡಿದೆ.

ಕಲ್ಯಾಣಿಯ ಪಕ್ಕದಲ್ಲಿ ಶಿವನ ಗುಡಿ ಇದೆ. ಶಿವನ ಹೆಸರಿನಲ್ಲಿ ದೀಪೋತ್ಸವ ಮಾಡಿದ್ದಾರೆ. ಜನರು ಪುಷ್ಕರಣಿಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡರೆ ಕಲ್ಯಾಣಿಯನ್ನು ಪೂಜ್ಯ ಭಾವನೆಯಲ್ಲಿ ಕಾಣುತ್ತಾರೆ. ಆಗ ಪುಷ್ಕರಣಿಗೆ ನೀಡಿದ ಕಾಯಕಲ್ಪ ಸಾರ್ಥಕ ಪಡೆಯುತ್ತದೆ ಎಂಬುವುದು ಇದರ ಉದ್ದೇಶ!

ಅದೇನೇ ಇರಲಿ, ಜಲಕ್ಕಾಗಿ ಇಡೀ ಜೀವ ಸಂಕುಲ ಪರಿತಪಿಸುತ್ತಿರುವ ವೇಳೆ, ಜಲ ಸಂರಕ್ಷಣೆ ಮತ್ತು ಪೂರೈಕೆಗಾಗಿ ಜಲಯೋಧರಂತೆ ಕೆಲಸ ಮಾಡುವ ಈ ಮಠಾಧೀಶರ ಸತ್ಕಾರ್ಯ ಶ್ಲಾಘನೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.