ADVERTISEMENT

ಜೀವನ ಜ್ಯೋತಿಗೆ ಈ ಮಕ್ಕಳೆಂದರೆ ಪ್ರೀತಿ

ಸಿದ್ದಿಕ್ ನೀರಾಜೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಖಾಸಗಿ ಶಾಲೆ, ಶಿಕ್ಷಣ ಸಂಸ್ಥೆ ಎಂದರೆ ಅದೊಂದು ವ್ಯಾಪಾರಿ ಕೇಂದ್ರ ಎಂದು ಜನರ ತಲೆಯಲ್ಲಿ ಅಚ್ಚೊತ್ತಿ ಬಿಟ್ಟಿದೆ. ಹೆತ್ತವರ ಮತ್ತು ಸಂಸ್ಥೆ ನಡೆಸುವವರ ಪ್ರತಿಷ್ಠೆಗೆ ಅನುಗುಣವಾಗಿ ಅವು ವರ್ಷದಿಂದ ವರ್ಷಕ್ಕೆ ಹೈ ಫೈ ಆಗುತ್ತಲೇ ಇವೆ. ಹೀಗಾಗಿ ಅಲ್ಲಿ ಸೇವೆ ಎನ್ನುವುದು ನೆಪ ಮಾತ್ರ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಕಡಬ ಸಮೀಪದ ಮರ್ದಾಳ ಎಂಬಲ್ಲಿ ನಡೆಯುತ್ತಿರುವ ವಿಶೇಷ ಶಾಲೆ `ಜೀವನ ಜ್ಯೋತಿ~ ಬಗ್ಗೆ ಮಾತ್ರ ಇದೇ ಮಾತನ್ನು ಹೇಳುವಂತಿಲ್ಲ. ಸಮಾಜದಲ್ಲಿ ಎಲ್ಲರಿಂದಲೂ ಅಪಹಾಸ್ಯ, ತಿರಸ್ಕಾರಕ್ಕೆ ಒಳಗಾದ ಮಕ್ಕಳನ್ನು ಹುಡುಕಿ ತಂದು ಈ ಶಾಲೆಯಲ್ಲಿ ಪ್ರೀತಿ, ಮಮತೆ, ಮಮಕಾರವನ್ನು ಧಾರೆ ಎರೆದು ಶಿಕ್ಷಣ ನೀಡಲಾಗುತ್ತಿದೆ.

ಇಲ್ಲಿರುವ ಮಕ್ಕಳಲ್ಲಿ ಒಂದಲ್ಲ ಒಂದು ದೈಹಿಕ, ಮಾನಸಿಕ ಕೊರತೆ ಇದ್ದದ್ದೇ. ಬಹುತೇಕರು ಬುದ್ಧಿಮಾಂದ್ಯರು. ಕೆಲವು ಮಕ್ಕಳಿಗೆ ಕಣ್ಣು ಕಾಣಿಸುವುದಿಲ್ಲ. ಇನ್ನೊಂದಿಷ್ಟು ಮಕ್ಕಳಿಗೆ ಕಿವಿ ಕೇಳಿಸುವುದಿಲ್ಲ, ಮಾತನಾಡಿದರೆ ಏನೇನೂ ಅರ್ಥವಾಗುವುದಿಲ್ಲ. ಕೆಲವು ಮಕ್ಕಳದು ಅಸಹಜ ವರ್ತನೆ. 20 ವರ್ಷ ಕಳೆದರೂ 6 ವರ್ಷದವರಂತೆ ಕಾಣುವ ಕುಬ್ಜ ಮಕ್ಕಳೂ ಇಲ್ಲಿದ್ದಾರೆ. ಹೀಗೆ ಅದೃಷ್ಟವಂಚಿತ, ವಿಶೇಷ ಕಾಳಜಿ ಅಗತ್ಯವುಳ್ಳ ಮಕ್ಕಳಿಗಿದೆ ಈ ವಿಶೇಷ ಶಾಲೆ.

 

 ಎಲ್ಲವೂ ಉಚಿತ

ವಿಶೇಷ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಇಷ್ಟೆಲ್ಲಾ ನೀಡುತ್ತಾರೆ ಅಂದ ಮೇಲೆ ಇಲ್ಲಿ ಶುಲ್ಕ ಕೂಡಾ ಹೆಚ್ಚಾಗಿರಲೇಬೇಕು ಎಂದು ಅನಿಸಬಹುದು. ಆದರೆ ಇಲ್ಲಿ ಪೋಷಕರಿಂದ ಯಾವುದೇ ಶುಲ್ಕ ಪಡೆದುಕೊಳ್ಳುವುದಿಲ್ಲ.

ಬೆರಳೆಣಿಕೆಯಷ್ಟು ಅನುಕೂಲವಂತ ಪೋಷಕರು ಸ್ವಪ್ರೇರಣೆಯಿಂದ ನೀಡಿದ ಹಣ ಮತ್ತು ದಾನಿಗಳ ದೇಣಿಗೆಯಿಂದ ಶಾಲೆ ನಡೆಸಲಾಗುತ್ತಿದೆ.

`ಫಾದರ್ ಸಕಾರಿಯ ಹಾಗೂ ಅವರ ಸಿಬ್ಬಂದಿಗಳ ತಾಳ್ಮೆ, ಸೇವಾ ಮನೋಭಾವದಿಂದ ನಮ್ಮ ಮಕ್ಕಳಿಗೆ ಏನು, ಎತ್ತ ಎಂಬುದು ಸ್ವಲ್ಪ ಅರಿವಾಗುತ್ತಿದೆ.

ಕೇವಲ 4 ವರ್ಷಗಳಲ್ಲಿ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ~ ಎನ್ನುತ್ತಾರೆ ನಂದಿತಾ ನಾಯಕ್ ಎಂಬ ವಿದ್ಯಾರ್ಥಿನಿಯ ತಂದೆ ದಾಮೋದರ್ ನಾಯಕ್ ಮತ್ತು ಕೆವಿನ್ ಸೋನ್ಸ್‌ನ ತಾಯಿ ಶೆರ‌್ಲಿ ಮೆಲ್ವಿನ್. ಇವರಿಬ್ಬರ ಮಾತು ಈ ಶಾಲೆಯ ಮಕ್ಕಳ, ಪೋಷಕರ ಕೃತಜ್ಞತಾ ಭಾವವನ್ನು ಪ್ರತಿನಿಧಿಸುತ್ತದೆ.

ADVERTISEMENT

ಮನೆಯವರಿಗೆ ಹಾಗೂ ಶಿಕ್ಷಕರಿಗೆ ಭಾರವಾಗಿರೋ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಗಳು ಬಹಳ ವಿರಳ. ಏಕೆಂದರೆ ಇಲ್ಲಿ ಕಲಿಸುವವರಿಗೆ ತಾಳ್ಮೆ ಹಾಗೂ ಸಹನೆಯ ಜತೆ ಸೇವಾ ಮನೋಭಾವ ಕೂಡಾ ಬೇಕು. ಅವನ್ನು ಈ ಶಾಲೆಯಲ್ಲಿ ಧಾರಾಳವಾಗಿ ಕಾಣಬಹುದಾಗಿದೆ.

ಗ್ರಾಮಾಂತರ ಪ್ರದೇಶಗಳ ಮತ್ತು ತೀರಾ ಬಡ ಕುಟುಂಬಗಳ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಇದರಿಂದ ಆಗುತ್ತಿರುವ ಅನುಕೂಲ ಎಣೆ ಇಲ್ಲದ್ದು. ಏಕೆಂದರೆ ನಿತ್ಯ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಬಡ ಕುಟುಂಬಗಳಿಗಂತೂ ಇಂಥ ಮಕ್ಕಳನ್ನು ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಅಂಥವರ ಪಾಲಿಗೆ ಆಶಾಕಿರಣವಾಗಿ ಬೆಳೆದಿದೆ.
4 ವರ್ಷದ ಹಿಂದೆ ಆರಂಭಗೊಂಡ ಈ ಶಾಲೆಯಲ್ಲಿ ಈಗ 68 ಮಕ್ಕಳಿದ್ದಾರೆ.

ಮನೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದ ಬಡ ಪೋಷಕರ ಮನವೊಲಿಸಿ ಈ ಮಕ್ಕಳನ್ನು ಇಲ್ಲಿಗೆ ಕರೆ ತರಲು ಶ್ರಮಪಟ್ಟವರು ಶಾಲೆಯ ಕನಸುಗಾರ ಫಾದರ್ ಸಕಾರಿಯಾ. 2007ರಲ್ಲಿ ಅವರು ಈ ಶಾಲೆ ಸ್ಥಾಪಿಸಿದರು. ಕಡಬ, ನೆಲ್ಯಾಡಿ, ನೂಜಿಬಾಳ್ತಿಲ, ಕೊಂಬಾರು, ಕೋಡಿಂಬಾಳ ಮುಂತಾದ ಗ್ರಾಮಗಳಲ್ಲಿ ಸುತ್ತಾಡಿ ಮಾಹಿತಿ ಪಡೆದುಕೊಂಡು ಇಂಥ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿಕೊಂಡಿದ್ದಾರೆ.

`ಎಂಡೋಸಲ್ಫಾನ್ ದುಷ್ಪರಿಣಾಮ ಮತ್ತು ಆನುವಂಶಿಕ ಸಮಸ್ಯೆಯಿಂದ ಅಂಗವೈಕಲ್ಯತೆ ಹಾಗೂ ಬುದ್ಧಿಮಾಂದ್ಯತೆ ಇರುವ ಮಕ್ಕಳನ್ನು ನೋಡಿದ್ದೆ. ಇಂಥ ಮಕ್ಕಳನ್ನು ಪೋಷಕರು ಕೊಠಡಿಯಲ್ಲಿ ಕೂಡಿ ಹಾಕುತ್ತಿದುದನ್ನೂ ಗಮನಿಸಿದ್ದೆ. ತಂದೆ ತಾಯಂದಿರಿಗೆ ಹೊರೆಯಾದ ಮಕ್ಕಳಿಗೆ ಆಸರೆಯಾಗುವ ಭರವಸೆ ನೀಡಿ ಇಲ್ಲಿಗೆ ಕರೆತಂದು ಉತ್ತಮ ಶಿಕ್ಷಕರ ಮೂಲಕ ಅವರನ್ನು ತಿದ್ದುವ ಕೆಲಸಕ್ಕೆ ಕೈ ಹಾಕಿದ್ದೇನೆ~ ಎನ್ನುತ್ತಾರೆ ಸಕಾರಿಯಾ.

ಈ ಶಾಲೆಯ ಬಹುತೇಕ ಮಕ್ಕಳನ್ನು ನಿತ್ಯ ಕರೆತಂದು ಮತ್ತೆ ಮನೆಗೆ ವಾಪಸ್ ಕರೆದೊಯ್ಯುವುದೂ ಅನೇಕ ಪೋಷಕರಿಗೆ ಕಷ್ಟ. ಅದಕ್ಕಾಗಿ ಶಾಲೆ ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಇದರಲ್ಲೇ ಬೆಳಿಗ್ಗೆ ಕರೆತಂದು ಸಂಜೆ ಮನೆ ತಲುಪಿಸಲಾಗುತ್ತದೆ.

ಇನ್ನು ಶಾಲೆಯಲ್ಲಿ ಮಕ್ಕಳಿಗೆ ಒಂದಿಷ್ಟು ಯೋಗಾಭ್ಯಾಸ, ಅವರವರ ಅರಿವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಬಣ್ಣ, ಅಕ್ಷರ, ಲೆಕ್ಕ ಮೊದಲಾದ ಮೂಲ ಶಿಕ್ಷಣ ಕಲಿಸಲಾಗುತ್ತದೆ. ಆಟದ ಜತೆಯಲ್ಲಿ ನೃತ್ಯ ತರಬೇತಿಯೂ ಇದೆ.

ಮಧ್ಯಾಹ್ನ ಬಿಸಿ ಊಟ ನೀಡುತ್ತಾರೆ. ಅಗತ್ಯ ಇರುವ ಮಕ್ಕಳಿಗೆ ಫಿಸಿಯೊಥೆರಪಿ, ದೈಹಿಕ ಕ್ಷಮತೆ ಹೆಚ್ಚಿಸುವ ಒಂದಿಷ್ಟು ದೈಹಿಕ ವ್ಯಾಯಾಮ, ಸ್ವಾವಲಂಬಿಯಾಗಲು ಪುಸ್ತಕ ಬೈಂಡಿಂಗ್, ಸರ ಪೋಣಿಸುವುದು ಇತ್ಯಾದಿ ತರಬೇತಿ ಕೊಡಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.