ADVERTISEMENT

ಟೈಪಿಂಗ್ ತರಬೇತಿ ನಿರತ ವಿದ್ಯಾರ್ಥಿನಿಯರು

ಲಕ್ಷ್ಮಣ ಟಿ.ನಾಯ್ಕ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಶಾಲೆ ಆರಂಭವಾಗಿ ಅರ್ಧ ವರ್ಷವಾಯಿತು. ವಿದ್ಯಾರ್ಥಿಗಳು ಆಟ-ಪಾಠದ ಜತೆಗೆ ಪರೀಕ್ಷೆಗೂ ತಯಾರಾಗುತ್ತಿದ್ದಾರೆ. ಮುಂಜಾನೆ ಮಕ್ಕಳ ಸಾಲು ನೋಡುವುದೇ ಚೆಂದ. ಹಣ ಇದ್ದವರು ಆಟೊದಲ್ಲಿ ಹೋದರೆ, ಇಲ್ಲದವರು ನಡೆದುಕೊಂಡು ಇಲ್ಲವೇ ಸೈಕಲ್ ಸವಾರಿಯಲ್ಲಿ ಭವಿಷ್ಯದ ಕನಸಿನ ಸಾಕಾರಕ್ಕೆ ಮುಂದಡಿ ಇಡುತ್ತಿರುವುದು ನಿತ್ಯದ ದರ್ಶನ.

ಮನು ಎಂಬ ಪೋರಿಯೂ ಚೀಲ ತೆಗೆದುಕೊಂಡು ಬೆಳಿಗ್ಗೆ 6ಕ್ಕೇ ಹೊರಡುತ್ತಾಳೆ. ಕಾಲ್ನಡಿಗೆಯಲ್ಲೇ ಒಂದಿಷ್ಟು ದೂರ ಸಾಗುತ್ತಾಳೆ. ದೊಡ್ಡ ಚೀಲ ಬೇರೆ ಅದು. ಅದನ್ನು ಕೈಯಲ್ಲಿ ಸುತ್ತಿಕೊಂಡು ಹೊರಟಳು ಎಂದರೆ ಬರುವುದು ಸೂರ್ಯಾಸ್ಥವಾದ ಮೇಲೆಯೇ.

ಸೂರ್ಯೋದಯಕ್ಕೆ ಹೊರಟವಳು ಸೂರ್ಯಾಸ್ಥದ ತನಕ ಶಾಲೆಯಲ್ಲಿರುತ್ತಾಳಾ? ಎಂದು ಪ್ರಶ್ನಿಸಬೇಡಿ. ಪೋರಿ ಮನು ಶಾಲೆಗೆ ಹೋಗುವುದಿಲ್ಲ!. ಆಕೆ ಹೋಗುವುದು ಚಿಂದಿ ಆಯಲು.

ಬೆಳಿಗ್ಗೆ 6ಕ್ಕೇ ಹೋಗುವ ಆಕೆ ಊಟ, ತಿಂಡಿ, ನಿದ್ದೆ, ಕಲಿಕೆ ಎನ್ನದೇ ಬೀದಿ ಸುತ್ತಿ ಚಿಂದಿ ಆಯ್ದು ಅದನ್ನು ಒಂದೆಡೆ ಗುಡ್ಡೆ ಹಾಕುತ್ತಾಳೆ. ಸಂಜೆ ಜೋಪಡಿಯೊಳಕ್ಕೆ ಹೊಕ್ಕಳೆಂದರೆ ಅಡುಗೆ ಕೆಲಸ. ದಿನದ 24 ಗಂಟೆ ಅಲ್ಲಿಗೆ ಮುಗಿಯಿತು. ಮತ್ತೆ ಬೆಳಿಗ್ಗೆ ಆಕೆ.....

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಮಕ್ಕಳ ಹಾಗೂ ಪೋಷಕರ ಮನಪರಿವರ್ತನೆ ಆಗುತ್ತಿದೆ. ಚಿಂದಿ ಆಯಲು ಹೋಗುತ್ತಿದ್ದ ಮಕ್ಕಳು `ಮ್ಯಾಜಿಕ್ ಬಸ್' ಹತ್ತಿ ಶಾಲೆಯತ್ತ ಮುಖ ಮಾಡಿದ್ದಾರೆ. ಮಕ್ಕಳ ದೈಹಿಕ, ಮಾನಸಿಕ ಸದೃಢತೆಯನ್ನು ಮ್ಯಾಜಿಕ್ ಬಸ್ ತುಂಬುತ್ತಿದ್ದು, ಅದೇ ದೃಢತೆಯಿಂದ ಶಾಲೆಯ ಮೆಟ್ಟಿಲು ತುಳಿಯುತ್ತಿರುವುದು ಹೊಸ ಬೆಳವಣಿಗೆ.

ಏನಿದು ಮ್ಯಾಜಿಕ್ ಬಸ್?
ಇದು ಸ್ವಯಂಸೇವಾ ಸಂಸ್ಥೆಯ ಹೆಸರು. ಕೊಳೆಗೇರಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಸದೃಢತೆ ಹೆಚ್ಚಿಸುವಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ ಎರಡು ವರ್ಷಗಳಿಂದ ಮೈಸೂರಿನ 16 ಕೊಳೆಗೇರಿಯಲ್ಲಿರುವ ಮಕ್ಕಳ ಆಶಾಕಿರಣವಾಗಿದೆ. 1999ರಲ್ಲಿ ಮುಂಬೈನಲ್ಲಿ ಆರಂಭವಾದ ಲಾಭದಾಯಕವಲ್ಲದ ಸಂಸ್ಥೆ ಇದು. ಮಕ್ಕಳ ಸಾಮರ್ಥ್ಯ ಅರ್ಥಮಾಡಿಕೊಂಡು ಕ್ರೀಡೆಯನ್ನು ಮಾಧ್ಯಮವನ್ನಾಗಿಸಿಕೊಂಡು ಗುರಿ ತಲುಪಿಸುವಲ್ಲಿ ವಿಶೇಷ ಶ್ರಮವಹಿಸುತ್ತಿದೆ.

ಮುಂಜಾನೆ ಆರಕ್ಕೆ ಆರಂಭವಾಗುವ ಸ್ವಯಂಸೇವಕರ ಕೆಲಸ ಬೆಳಿಗ್ಗೆ 9 ಗಂಟೆ ತನಕವೂ ನಡೆಯುತ್ತದೆ. ಸಂಜೆ ಮತ್ತೆ 6ರಿಂದ 7 ಗಂಟೆಯ ತನಕ ಮಕ್ಕಳ ಸಾಮರ್ಥ್ಯವೃದ್ಧಿ ಕೆಲಸ ಸಾಂಗವಾಗಿ ನಡೆಯುತ್ತದೆ. ಸ್ವಯಂ ಸೇವಕರಾದ ಸಮುದಾಯ ಕ್ರೀಡಾ ತರಬೇತುದಾರರು ಬೆಳಿಗ್ಗೆ ಕೈಯಲ್ಲೊಂದು ಫುಟ್ಬಾಲ್ ಹಿಡಿದು ಮಕ್ಕಳನ್ನು ಶಾಲೆಯ ಸಮೀಪದಲ್ಲಿರುವ ಇಲ್ಲವೇ ಕೊಳೆಗೇರಿ ಸಮೀಪದಲ್ಲಿರುವ ಆಟದ ಮೈದಾನಕ್ಕೆ ಕರೆದೊಯ್ಯುತ್ತಾರೆ. ಒಂದು ತಂಡದಲ್ಲಿ ಕನಿಷ್ಠ 25ರಿಂದ 30 ಮಕ್ಕಳು ಸೇರುತ್ತಾರೆ.

ಮೊದಲು ವ್ಯಾಯಾಮ: ಮಕ್ಕಳನ್ನು ಮೊದಲು ವ್ಯಾಯಾಮ ಅಂದರೆ ರನ್ನಿಂಗ್, ಹೈಜಂಪ್, ಲಾಂಗ್‌ಜಂಪ್ ಮೂಲಕ ಅಣಿಗೊಳಿಸಲಾಗುತ್ತದೆ. ನಂತರ ಮುಖ್ಯಚಟುವಟಿಕೆ ಆರಂಭ. 40 ನಿಮಿಷ ಪುಟ್ಬಾಲ್ ಆಡಿದ ನಂತರ ಆಟ ಹಾಗೂ ಅದರ ವಿಧಾನ ಅವಲೋಕನ ಮಾಡಲಾಗುತ್ತದೆ. ಕಾರ್ಮಿಕ, ಶಿಕ್ಷಣ ಹಾಗೂ ಇತರೆ ಸರ್ಕಾರಿ ಇಲಾಖೆ ಸಹಾಯಹಸ್ತದಿಂದ ಮಕ್ಕಳನ್ನು ಹತ್ತಿರದ ಹಾಗೂ ಇಲ್ಲವೇ ವಸತಿ ಶಾಲೆಗೆ ಸೇರಿಸುವಲ್ಲಿ ಸಂಸ್ಥೆ ತಲ್ಲೆನವಾಗಿದೆ.

ಕೊಳೆಗೇರಿ ಮಕ್ಕಳ ಅಭಿವೃದ್ಧಿ
ಮೈಸೂರಿನಲ್ಲಿ ಇದಕ್ಕಾಗಿಯೇ ಮ್ಯಾಜಿಕ್ ಬಸ್ ಸಂಸ್ಥೆ ಕ್ರೀಡಾತರಬೇತುದಾರ, ಸಮುದಾಯ ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದು, ಅವರ ಮೂಲಕ ಕೊಳೆಗೇರಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಿದೆ. ಮ್ಯಾಜಿಕ್ ಸಂಸ್ಥೆ ಫುಟ್ಬಾಲ್ ಮೂಲಕ ಮಕ್ಕಳಿಗೆ ಆಟವಾಡುವ ಹಕ್ಕು ಉತ್ತೇಜಿಸಿದ್ದು, ಲಿಂಗ ಸಮಾನತೆಗೆ ವಿಶೇಷ ಆಸ್ಥೆ ವಹಿಸಿದೆ. ದೇಶದಾದ್ಯಂತ 1.50 ಲಕ್ಷ ಮಕ್ಕಳನ್ನು ಶಾಲೆಗೆ ಸೇರಿಸಿರುವ ಸಂಸ್ಥೆಯು ಶೇ 42ರಷ್ಟು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬುನಾದಿಯಾಗಿದೆ. 2010ರಲ್ಲಿ ಅದರ ಸಾಧನೆ ಶೇ 82ರಷ್ಟಾಗಿದ್ದು, 2012ರಲ್ಲಿ ಅದು ಶೇ 85ರಷ್ಟು ಕೊಳೆಗೇರಿ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. 2014ಕ್ಕೆ ದೇಶದ ಒಂದು ಕೋಟಿ ಮಕ್ಕಳನ್ನು ಕೊಳೆಗೇರಿ ಬಿಡಿಸಿ ಶಾಲೆ ಮೆಟ್ಟಿಲು ಹತ್ತಿಸುವ ಗುರಿ ಅದರದು.

ಎರಡು ವರ್ಷಗಳಿಂದ ಮೈಸೂರಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ 7ರಿಂದ 15 ವರ್ಷದ 162 ಮಕ್ಕಳನ್ನು ವಿವಿಧ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ ಸಾಕಷ್ಟು ಮಕ್ಕಳಿದ್ದು ಕ್ರೀಡೆ ಮೂಲಕ ಅರಿವು ಮೂಡಿಸಲಾಗುತ್ತಿದೆ. ಪೋಷಕರೊಂದಿಗೆ ಸಂವಾದ ನಡೆಸುತ್ತಿದೆ. ಕ್ರಮೇಣ ಬದಲಾವಣೆ ಆಗಬಹುದು ಎಂಬ ಆಶಾಭಾವನೆ ಇಟ್ಟುಕೊಂಡಿದೆ.

ಮೈಸೂರಿನ ವಿಜಯನಗರದಲ್ಲಿರುವ ಕೊಡವ ಸಮಾಜದ ಎದುರು ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ಜೆ.ಪಿ ನಗರ 3ನೇ ಹಂತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇಲ್ಭಾಗ ಕಚೇರಿ ತೆರೆದಿದೆ. ಇಂತಹ ಮಕ್ಕಳು ಕಂಡರೆ ಕರೆಮಾಡಬಹುದು. ಬೆಳವಣಿಗೆಗೆ ನಿಮ್ಮ ಸಹಾಯವೂ ಬೇಕು! ಹೆಚ್ಚಿನ ಮಾಹಿತಿಗೆ: ಡಿಡಿಡಿ.ಞಜಜ್ಚಿಚ್ಠಿಜ್ಞಿಜಿ.ಟ್ಟಜ, 080-26581225/ 0821-2519998
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.